ಸುಲ್ತಾನನ ಎದರು ಗ್ರೀಕ್ ಮತ್ತು ಚೈನಾದ ಕಲಾವಿದರಿಗೆ ಜಗಳ
ಇಬ್ಬರಿಗೂ ನಾವೇ ಶ್ರೇಷ್ಠ ಚಿತ್ರಕಾರರು ಎಂಬ ಹಮ್ಮು
ಜಗಳ ಪರಿಹರಿಸಲು ಸುಲ್ತಾನ ಎರಡೂ ಗುಂಪಿಗೆ
ಎರಡು ಮನೆ ಕೊಟ್ಟು ಬಣ್ಣ ಬಳಿಯಿರಿ ಎಂದು ಹೇಳಿದ
ಚೈನಾದ ಕಲಾವಿದರು ಎಲ್ಲ ರೀತಿಯ ಬಣ್ಣ ತರಿಸಿದರು
ತಮ್ಮ ಮನೆಗೆ ತುಂಬ ವಿಸ್ತಾರವಾಗಿ ಬಣ್ಣ ಹಚ್ಚಿದರು
ಮನೆ ವರ್‍ಣಾಲಂಕಾರದಿಂದ ಮಿಂಚಿತು
ಗ್ರೀಕರು ಯಾವ ಬಣ್ಣವನ್ನೂ ತರಿಸಲಿಲ್ಲ
ತಮ್ಮ ಮನೆಯ ಗೋಡೆಗಳನ್ನು ಉಜ್ಜಿದರು
ಎಲ್ಲ ಕಸಕೊಳೆ ತೊಳೆದರು
ಮನೆ ಶುಭ್ರವಾಯಿತು
ಸ್ವರ್‍ಗದ ಹಾಗೆ ಹೊಳೆಯಿತು
ಸುಲ್ತಾನ ಎರಡೂ ಮನೆಗಳ ಪರೀಕ್ಷೆಗೆ ಬಂದ
ಚೈನಾದವರ ವರ್‍ಣಾಲಂಕಾರ ನೋಡಿ ಮೆಚ್ಚಿದ
ಗ್ರೀಕರ ಮನೆ ನೋಡಿ ಸುಲ್ತಾನ ಹುಚ್ಚಾಗಿಬಿಟ್ಟ
ಚೈನಾದವರ ಮನೆಯ
ವರ್‍ಣವೈವಿಧ್ಯ
ಗ್ರೀಕರ ಮನೆಯೊಳಗೆ
ಅನಂತ ವೈವಿಧ್ಯಲಯ ನೆರಳು ಛಾಯೆಗಳೊಂದಿಗೆ ಪ್ರತಿ ಫಲಿಸುತ್ತಿತ್ತು
*****
