ಒಂದಲ್ಲಾ ಒಂದೂರಿನಲ್ಲಿ ಒಂದು ದಿನ-
ಎಲ್ಲರೂ ಸತ್ತು ಬಿದ್ದರು
ಬಡಿತ ನಿಂತ ಹೃದಯಗಳ ಮೇಲೆ
ಹದ್ದು ಹಾರಾಡಿದವು
ಕಾಕಾ ಕಾಗೆ ಕೂಗಿದವು
ಮಳೆ ವ್ಯರ್‍ಥ ಸುರಿದು
ಹೆಣಗಳ ಮೀಯಿಸಿತು
ಇರುವೆಗಳು ಜಂಬೂ ಸವಾರಿ ಹೊರಟವು
ಇರಲೂ-ಯಾರಿರದೆ
ಹೊರಲೂ-ಯಾರಿರದೆ
ಹೆರಲೂ-ಯಾರಿರದೆ
ನಿಧಾನ ಗೋಡೆ ಕುಸಿದು ಕ್ರಮೇಣ ಮಾಡು ಇಳಿದು
ಎಲ್ಲ ಹೂತು
ಎದ್ದಿತು-ದಟ್ಟ ಪೊದೆ ನಾಯಿ ಕೊಡೆ
ಕಾಡು.
ಹೀಗೆ ಊರಿಗೆ ಊರೇ ಸ್ಮಶಾನ
ವಾದದ್ದು ಕಂಡು
ಊರ ಹೊರಗಿನ ಮಾಜೀ ಖರೇ ಸ್ಮಶಾನದಲ್ಲಿ
ಪ್ರೇತಗಳು
ಚಪ್ಪಾಳೆ ತಟ್ಟಿ ಕುಣಿದಾಡಿದವು
*****
