ಅಮೃತ ಶಿಲೆಯಲ್ಲ

ಅಮೃತಶಿಲೆಯಲ್ಲ, ಅರಸರಟ್ಟಹಾಸದ ಸ್ವರ್‍ಣ-
ಸ್ಮಾರಕವಲ್ಲ- ಈ ಕವನ ಭವನದ ಎದುರು;
ದಿನ ದಿನಕೆ ಮಾಸಿ ಬುರುಸುಗಟ್ಟುವದು ಕಲ್ಲಿನ
ಪ್ರತಿಮೆ; ನುಡಿಯೊಳಗೂ ಮತ್ತಿನಿತು ಹೊಳೆದು ಹೊಡಕರಿಸಿ
ನಿಲ್ಲುವ ನೀನು; ಕಾಳಗದಲೆಲ್ಲ ವಿಗ್ರಹ ಹಾಳು.
ಗಲಭೆಯಲಿ ಭಾರಿ ಕಟ್ಟಡವೆನಿತೊ ಬುಡಮೇಲು.
ರಣಚಂಡಿ ಕತ್ತಿ ಕಡಿಯದು, ಯುದ್ಧ ಸುಡಲರಿದು
ನಿನ್ನ ನೆನಪಿನ ಕವನ ಜೀವಂತ ದಾಖಲೆಯು.
ಮೃತ್ಯುವನು, ಮಹಾವಿಸ್ಮೃತಿಯನೂ ದಾಟಿರುವೆ,
ನಿನ್ನ ಸ್ತುತಿಗಿಂಬುಂಟು ಇನ್ನೂ, ಮುಂದಿನೆಲ್ಲ
ತಲೆಮಾರುಗಳ ಜನದ ಕಣ್ಣಿನಲಿ, ಜಗವೆಲ್ಲ
ಜೀರ್‍ಣವಾಗುತ ಕೊನೆಯ ಗತಿಯ ಮುಟ್ಟುವವರೆಗು.
ಮತ್ತುದಿಸಿ ದೇವನೆಡೆ ಕೊನೆಯ ತೀರ್‍ಪಿನವರೆಗು
ಇಲ್ಲಿ ಬದುಕಿರುವೆ. ಪ್ರಣಯಿಗಳ ಕಣ್ಣ ಬೆಳಕು.
*****
ಷೇಕ್ಸ್‍ಪಿಯರನ ಸಾನೆಟ್ ನಂ. ೫