ಸಂಧ್ಯಾ ರಾಗ – ೩

ರಾಯರ ಮನೆಯ ಮದುವೆಯೆಂದರೇ ಸಾಕಾಗಿತ್ತು. ಜೊತೆಗೆ ರಾಯರ ಮದುವೆ. ವಿಜೃಂಭಣೆಯಿಂದಲೇ ನಡೆಯಿತು. ಅಂತಹ ಊರ ಸಂತರ್ಪಣೆ ಹೊಸಹಳ್ಳಿಯಲ್ಲಿ ಆಗೇ ಇರಲಿಲ್ಲವೆಂದು ಎಲ್ಲರೂ ಹಾಡಿ ಹೊಗಳಿದರು. ವೆದೀಕರಿಗೆ ಕೂಡ ತೃಪ್ತಿಯನ್ನುಂಟುಮಾಡುವ ರೀತಿಯಲ್ಲಿ ಮದುವೆ ಮುಗಿಯಿತು. ಹೆಣ್ಣು ದೂರದ್ದಲ್ಲ; ಮನೆಯದಂತಲೇ ಹೇಳಬೇಕು. ಮೀನಾಕ್ಷಮ್ಮ ತಮ್ಮ ಸೋದರತ್ತೆಯ ತಮ್ಮನ ಮಗಳನ್ನೇ ಗೊತ್ತು ಮಾಡಿದ್ದರು. ಮೀನಾಕ್ಷಮ್ಮನವರ ಸೋದರಮಾವ ಕಳಲೆ ಕೃಷ್ಣಪ್ಪನೇ ಸಾವಿತ್ರಿಯನ್ನು ಸಾಕಿ ಸಲಹಿದ್ದನು. ಸಾವಿತ್ರಿಗೆ ಚಿಕ್ಕವಯಸ್ಸಿನಲ್ಲಿಯೇ ತಂದೆ-ತಾಯಿಗಳು ತೀರಿ ಹೋದುದರಿಂದ ಕೃಷ್ಣಪ್ಪ ಭಾವಮೆದುನನ ಮಗಳನ್ನು ತನ್ನ ಮಗಳೆಂದೇ ಭಾವಿಸಿ ಸಾಕಿ ಸಲಹಿ ವಿದ್ಯಾಬುದ್ದಿ ಕಲಿಸಿದ್ದನು. ಕೃಷ್ಣಪ್ಪ ಹೆಚ್ಚು ಸ್ಥಿತಿವಂತನಲ್ಲದಿದ್ದರೂ ಅನುಕೂಲವಾಗಿದ್ದನು. ಇದ್ದ ಸ್ವಲ್ಪ ಭೂಮಿಯ ಜೊತೆಗೆ, ನಾಲ್ಕು ಗ್ರಾಮಗಳ ಶಾನುಭೋಗಿಕೆಯೂ ಇತ್ತು. ವರ್ಷಾಕಾಲಕ್ಕೆ ಸಾಕಾಗುವಷ್ಟು ದವಸ, ಪೋಟಿಗೆ ಹಣ ಬರುತ್ತಿದ್ದವು. ತನಗೂ ಮಕ್ಕಳಿರಲಿಲ್ಲ.ಸಾವಿತ್ರಿಯನ್ನೇ ಸ್ವಂತ ಮಗಳಿಗಿಂತಲೂ ಹೆಚ್ಚಾಗಿ ಭಾವಿಸಿ ಪ್ರೀತಿಸುತ್ತಿದ್ದನು. ಸಾವಿತ್ರಿಗೆ ಹದಿನಾರು ವಯಸ್ಸು ತುಂಬಿದ್ದರೂ ಕೃಷ್ಣಪ್ಪನಿಗೆ ಯೋಗ್ಯ ವರನು ಸಿಕ್ಕಲಿಲ್ಲ. ಕನ್ಯೆ ಬೆಳೆದುನಿಂತಮೇಲಂತೂ ಹಳ್ಳಿಗಾಡಿನಲ್ಲಿ ಮದುವೆ ಮಾಡುವುದು ತೀರ ಅಸಾಧ್ಯವಾಗಿತ್ತು. ಹಳ್ಳಿಯ ಹುಡುಗಿಯೆಂದು ಪೇಟೆಯ ಹುಡುಗರು ಮಾಡಿಕೊಳ್ಳಲೊಪ್ಪುತ್ತಿರಲಿಲ್ಲ. ಗಂಡಿಗೆ ಅಲೆದೂ ಅಲೆದೂ ಸಾಕಾಗಿತ್ತು. ಹೆಣ್ಣು ನೋಡಲು ಬರುವವರಿಗೆ ರೆಲು ಚಾರ್ಜು, ಬಸ್ಸು ಚಾರ್ಜುಗಳನ್ನಿತ್ತು ಕೃಷ್ಣಪ್ಪನ ಭಂಡಾರ ಬರಿದಾಗಿತ್ತು. ಇವುಗಳಿಗೆ ಕಳಶವಿಟ್ಟಂತೆ ಹೆಣ್ಣು ನೋಡಬಂದ ಭಾವೀ ಬೀಗರ ಮತ್ತು ಅಳಿಯನ ಆತಿಥ್ಯ ಮಾಡಿ ಮಾಡಿ ಕೃಷ್ಣಪ್ಪ ಬೇಸತ್ತಿದ್ದನು. ಹೆಣ್ಣು ಹೆತ್ತ ತಾಯ್ತಂದೆಗಳನ್ನು ಸುಲಿದು ಬಾಳುವ ಯಾವದಾಯುಷ್ಯದ ಅಳಿಯಂದಿರ ಕೆಗೂ ಸಿಕ್ಕಿ ಕೃಷ್ಣಪ್ಪ ನೊಂದಿದ್ದನು. ತನ್ನೆಲ್ಲಾ ಆತಿಥ್ಯವನ್ನೂ ಅನುಭವಿಸಿ ಕೊನೆಗೆ ಇಲ್ಲದ ಸಲ್ಲದ ಆಕ್ಷೇಪಣೆಯನ್ನು ತೆಗೆದು ಸಣ್ಣ ಮಾತುಗಳನ್ನಾಡುತ್ತಿದ್ದ ಜನರ ಪರಿಚಯ ಕೃಷ್ಣಪ್ಪನಿಗೆ ಸಾಕಷ್ಟು ಆಗಿತ್ತು. ಕೊನೆಗೊಂದು ದಿವಸ ರೇಗಿ “ಮದುವೆಯಾಗದೇ ಇದ್ದರೆ ಅಷ್ಟೇ ಹೋಯಿತು. ಇರೋ ಒಬ್ಬ ಮಗಳನ್ನ ಗಂಡು ಮಗಾಂತ ಭಾವಿಸಿ ಸಾಕ್ತೇನೆ” ಎಂದು ನಿರ್ದರಿಸಿ ಬಿಟ್ಟಿದ್ದನು. ಸಾವಿತ್ರಿಯನ್ನೇ ಮೀನಾಕ್ಷಮ್ಮನವರು ಆರಿಸುವುದಕ್ಕೆ ಅವಳ ವಯಸ್ಸೂ ಒಂದು ಕಾರಣ. ರಾಯರಿಗೆ ೧೦-೧೨ ವಯಸ್ಸಿನ ಪಾಪಚ್ಚಿಯನ್ನು ತಂದು ಕಟ್ಟುವುದರಲ್ಲಿ ಅರ್ಥವಿಲ್ಲವೆಂದು ಅವರು ಮನಗಂಡಿದ್ದರು. ಜೊತೆಗೆ ಸಾವಿತ್ರಿಯ ಭವಿಷ್ಯತ್ತಿನ ಯೋಚನೆ. ತಮ್ಮ ತೌರುಮನೆಯ ಕಡೆ ಹೆಣ್ಣು. ಅನ್ಯಾಯವಾಗುವುದಲ್ಲಾ ಎಂಬ ಚಿಂತೆ. ಸಾವಿತ್ರಿ ಜಾಣೆಯಾಗಿಯೂ ಇದ್ದಳು, ಲಕ್ಷಣವಾಗಿಯೂ ಇದ್ದಳು. ಹೇಳಿಕೊಳ್ಳುವ ರೂಪವಲ್ಲದಿದ್ದರೂ ಗರತಿಯ ಲಕ್ಷಣಗಳಿಂದ ಕೂಡಿ ಚಂದೊಳ್ಳಿ ಹೆಣ್ಣು ಎನಿಸಿಕೊಂಡಿದ್ದಳು. ಮದುವೆಯಾದ ಒಂದು ತಿಂಗಳೊಳಗಾಗಿ ನಿಷೇಕಪ್ರಸ್ತದ ಶಾಸ್ತವನ್ನೂ ಮುಗಿಸಿಬಿಟ್ಟರು. ಸಾವಿತ್ರಿಯು ಗಂಡನ ಮನೆಗೆ ಬಂದು ಸೇರಿದಳು. ಮೊದಮೊದಲು ಅವಳಿಗೆ ಎಲ್ಲವೂ ಹೊಸದುಹೊಸದಾಗಿ ಕಾಣುತ್ತಿದ್ದಿತು. ರಾಯರ ದೇಗುಲದಂತಹ ಮನೆ ಅದರ ವೆಭವ, ರಾಶಿ ರಾಶಿ ಅಡಕಿದ್ದ ದವಸ ಧಾನ್ಯಗಳನ್ನು ಕಂಡು ದಿಗ್ಭ್ರಮೆ ಹಿಡಿದಂತಾಗಿತ್ತು. ಮೀನಾಕ್ಷಮ್ಮನವರು ತಂಗಿಗೆ ಎಲ್ಲಾ ವಿಷಯಗಳನ್ನು ತಿಳಿಸಿ, ಕಲಿಯಬೇಕಾದುದನ್ನು ಕಲಿಸಲಾರಂಭಿಸಿದರು. ಮುಖ್ಯವಾಗಿ ರಾಯರ ಸ್ವಭಾವ, ಅವರ ಅಭಿರುಚಿ, ಅವರ ಆಕಾಂಕ್ಷೆ, ಅವರ ದೇಹಗುಣಗಳ ಪರಿಚಯ ಮಾಡಿಕೊಟ್ಟು ಗಂಡನ ಸೇವೆಯನ್ನು ಹೇಗೆ ಸಲ್ಲಿಸಬೇಕೆಂದು ಕೂಲಂಕುಷವಾಗಿ ತಿಳಿಸುತ್ತಿದ್ದರು.
ಒಂದು ದಿವಸ ಮೀನಾಕ್ಷಮ್ಮನವರು ಸಾವಿತ್ರಮ್ಮನಿಗೆ ಜಡೆ ಹೆಣೆಯುತ್ತ ಕುಳಿತಿದ್ದಳು. ಹೆಣಿಗೆಯೂ ಮುಗಿಯುತ್ತ ಬಂದಿತ್ತು ಆಗ ಮೀನಾಕ್ಷಮ್ಮ.
“ಸಾವಿತ್ರಮ್ಮ, ತೌರು ದೂರಾಯಿತೂಂತ ಯಾವದಕ್ಕೂ ಸಂಕೋಚಪಟ್ಟು ಕೊಳ್ಳಬೇಡಮ್ಮಾ, ಬೇಕಾದ್ದು ಕೇಳು. ಆಸೆಯಾದ ತಿಂಡಿ ಹೇಳು ಮಾಡಿಕೊಡುತ್ತೇನೆ. ಯಾವದಕ್ಕೂ ಇಲ್ಲಾಂತ ಕರಗಬೇಡಪ್ಪಾ.”
“ನೀವಿರುವಾಗ ನನಗೆ ಯಾತರ ಕೊರತೆ ಅಕ್ಕಾ. ನೀವೇ ನನ್ನ ತಂದೆ ತಾಯಿ ಬಂಧು ಬಳಗ ಆಗಿದ್ದೀರಿ. ಎಲ್ಲೊ ಕಸವಾಗಿ ಬಿದ್ದಿದ್ದವಳನ್ನು ತಂದು ಪಕ್ಕದಲ್ಲಿ ಕೂಡಿಸಿಕೊಂಡಿರಿ. ತಂಗಿ ಎಂದು ಕರೆದಿರಿ, ಮಗಳು ಎಂದು ಭಾವಿಸಿದಿರಿ. ಆದರೆ ಒಂದು ಮಾತು ಅಕ್ಕಾ ನೀವು ನನ್ನ ಸಾವಿತ್ರಮ್ಮ ಎಂತಾ ಏಕೆ ಕರೆಯುತ್ತೀರಿ.”
“ಇನ್ನೇನೆಂದು ಕರೆಯಲಮ್ಮಾ?”
“ಸಾತೂನ್ನಿ-ಸಾತಿ ಅನ್ನಿ-ಬೇಕಾದ್ದನ್ನಿ.”
“ಹಾಗೇ ಆಗಲಿ ಸಾತೂ, ಈಗ ಸಮಾಧಾನವಾಯಿತೋ?”
ಎಂದು ಅರೆಕ್ಷಣ ದಿಟ್ಟಿಸಿ ನೋಡಿ ಅವಳ ಕಿವಿಯಲ್ಲಿದ್ದ ಕೆಂಪಿನೋಲೆಯನ್ನು ತೆಗೆದು ಅದರ ಬದಲು ತಮ್ಮ ಕಿವಿಯಲ್ಲಿದ್ದ ವಜ್ರದೋಲೆಯನ್ನು ಹಾಕಿ, ಅವಳ ಮುಖವನ್ನು ದಿಟ್ಟಿಸಿ ನೋಡಿ “ಈಗ ಸಾವಿತ್ರಿನೂ ಸಾವಿತ್ರಿ ಹಾಗೇ ಕಾಣ್ತೀಕಣೇ ತಾಯಿ. ಕಿವಿ ಎನೋ ಬೇಕೂ ಅಂತಿತ್ತು ಈಗ ಒಳ್ಳೆ ಚೆಂದಾಯಿತು ಎಂದು ಹರಸಿದರು.
ಸಾವಿತ್ರಿಯ ಕಣ್ಣುಗಳಲ್ಲಿ ನೀರೂರಿತು. ಎದ್ದು ಅಕ್ಕನಿಗೆ ನಮಸ್ಕಾರ ಮಾಡಿದಳು.
“ಇದೇನು ಮಾಡಿದಿರಿ ಅಕ್ಕಾ, ನಿಮ್ಮ ಕಿವೀದು …”
“ಏನು ಚಿಂತೆಯಿಲ್ಲ ಸಾತೂ. ನಾನು ಹಾಕಿಕೊಂಡರೇನು ನೀನು ಹಾಕಿಕೊಂಡರೇನು?”
ಎಂದು ಸಮಾಧಾನ ಹೇಳಿ ಆ ಮಾತನ್ನು ಬೇರೆಯ ಮಾತಿಗೆ ತಿರುಗಿಸಿಬಿಟ್ಟರು. ರಾಯರೂ ಆ ಹೊತ್ತಿಗೆ ಮನೆಗೆ ಬರಲು ಅವರಿಗೆ ಫಲಾಹಾರವನ್ನು ಅಣಿಮಾಡಲು ಇಬ್ಬರೂ ಅಡಿಗೆ ಮನೆಗೆ ತೆರಳಿದರು.
ರಾಯರು ಕೆಕಾಲು ತೊಳೆದುಕೊಂಡು ತೊಟ್ಟಿಯಲ್ಲಿ ಕುಳಿತರು. ಸಾವಿತ್ರಿಯೇ ತಿಂಡಿ-ತಟ್ಟೆಯನ್ನು ತಂದಿಟ್ಟು ಹೊರಟು ಹೊದಳು. ಎರಡನೆಯ ಸಲ ಅವಳೇ ಕಾಫಿಯನ್ನೂ ತಂದಿಟ್ಟಳು. “ಮೀನನ್ನ ಕರೆ” ಎಂದು ರಾಯರು ಹೇಳಿದರು.
ರಾಯರು ಕಾಫಿ ಪಾತ್ರೆಯನ್ನು ಕೆಯಲ್ಲಿ ಹಿಡಿದು ಮೀನಾಕ್ಷಮ್ಮನವರನ್ನು ದಿಟ್ಟಿಸಿ ನೋಡಿದರು. ಮೀನಾಕ್ಷಮ್ಮ ಸ್ವಲ್ಪ ಗಾಬರಿಯಾದರು.
“ಯಾಕೇಂದ್ರೆ ಹೀಗೆ ನೋಡುತ್ತೀರಿ?”
“ಯಾಕೂ ಇಲ್ಲ. ನಿನ್ನ ಕಿವಿ ನೋಡಿದೆ, ಅವಳ ಕಿವಿಯೂ ನೋಡಿದೆ, ಅಷ್ಟೇ!”
“ನಂದೇನು? ಹುಡುಗಿ ಅವಳು ಇಟ್ಟುಕೊಳ್ಳಲಿ ಎಂದು ತೆಗೆದಿಟ್ಟೆ, ನಂಗೆ ಆ ವಜ್ರದ ಓಲೆಗಿಂತ ಇದೇ ಹೆಚ್ಚು ಒಪ್ಪುತ್ತೆ ನೋಡಿ.”
ರಾಯರು ಮೀನಾಕ್ಷಮ್ಮನವರ ಕೆಹಿಡಿದು ಹತ್ತಿರ ಕುಳ್ಳಿರಿಸಿಕೊಂಡರು. ಗದ್ಗದಗೊಂಡಿದ್ದ ದನಿಯಿಂದ
“ಮೀನಾ. ಹೀಗೆ ಮಾಡಬೇಡ ಅವಳಿಗೆ ಬೇಕಾದರೆ ಒಂದು ಜೊತೆ ವಜ್ರದ ಓಲೆ ತರೋಣ. ನಿನ್ನದು ಯಾವದು ಹೆಚ್ಚುಕಡಿಮೆ ಮಾಡಬೇಡ. ಅದು ನನ್ನ ಪ್ರಾರ್ಥನೆ. ಇಷ್ಟು ನಡೆಸಿಕೊಡುತ್ತಿಯೋ ಇಲ್ಲವೋ?”
ಮೀನಾಕ್ಷಮ್ಮನವರು ತಲೆ ತಗ್ಗಿಸಿದರು. ಕಣ್ಣಿಗೆ ಆಶ್ರಯ ಕೊಟ್ಟಿದ್ದ ಮೊಣಕಾಲು ನೆನೆಯಿತು. ಗಂಡನ ಮುಖವನ್ನೊಮ್ಮೆ ನೋಡಿ ‘ಕ್ಷಮಿಸಿ’ ಎಂದರು. ಮಾತು ಮೂಕವಾಯಿತು. ಆದರೆ ಹೃದಯದ ಸಂದೇಶ ಹೃದಯಕ್ಕೆ ಮುಟ್ಟಿತು.
*****
ಮುಂದುವರೆಯುವುದು