ನನ್ನ ನುಡಿ

ಹಲವು ಹೂಗಳ ಸುಗಂಧವ ತರುವ ಹರಿಕಾರ,
ಎಲೆಲೆ ಮಂದಾನಿಲನೆ, ನಿನಗೆ ಸೌರಭಸಾರ
ದೊರೆಕೊಳ್ಳಲಿಲ್ಲ; ಹಲವಾರು ನಕ್ಷತ್ರಗಳ
ಸೆರೆಹಿಡಿದು ತಂದು ಕೋಡುವ ದೀಪ್ತಕಾಸಾರ,
ನಿನಗಿಲ್ಲ, ನಿನಗಿಲ್ಲ, ಬಾಳ ಬೆಳಗುವ ದೀಪ;
ಹಲವು ಬಣ್ಣವ ತಳೆದು ಮೆರೆವ ಸಂಧ್ಯಾಮೇಘ,
ನಿನಗಿಲ್ಲ, ನಿನಗಿಲ್ಲವಣ್ಣ, ಮೀಸಲು ಬಣ್ಣ!

ಚಂದ್ರಸೂರ್ಯರ ನೆರವಿನಿಂದೆ ಬೆಳಗುವಳೀ ವ-
ಸುಂಧರೆಗದೆಂದು ಬಹುದೋ ಸ್ವಯಂದೀಪಕತೆ!
ಅವರಿವರ ನುಡಿಗಳನು ಕದ್ದು ಮರುನುಡಿಗೊಡುವ
ದೆಸೆಗಳೇ, ನಿಮಗೆಂದು ಬಹುದು ಮೀಸಲು ನಿನದ?
ಅನ್ಯರೊರೆದುದನೆ, ಬರೆದುದನೆ ಬರೆಬರೆದು
ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಗೆ ಬರುವನಕ ನನ್ನ ಬಾಳಿದು ನರಕ.

೧೯೪೧ (ಸಂಕಲನ: ಭಾವತರಂಗ)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ