ಒಡಲ ನರಕದ ಭಾಂಡ ಕುದಿಸಿ ಭಟ್ಟಿಯ ತೆಗೆದ
ಮೋಹಿನಿಯ ಕಣ್ಣೀರ ಗುಟುಕನೆಷ್ಟೋ ಕುಡಿದೆ.
ಭರವಸೆಗೆ ಅಂಜಿಕೆಯ, ಶಂಕೆಗಾಸೆಯ ಸವರಿ
ಕಳಕೊಂಡೆ ಗೆದ್ದೆನೆನ್ನುತ ಕೈಗೆ ಬಂದುದನು.
ನಾ ಸುದೈವಿಯು ಎಂದು ಹಿಗ್ಗಿ ಹಾರೈಸಿರಲು
ಯಾವ ಅಪರಾಧಕೀ ಶಿಕ್ಷೆ? ಎಂಥ ಹತಭಾಗ್ಯ!
ಇರುವ ಕಣ್ಣನು ಕಿತ್ತು ಹತ್ತಿಸಿದಂತೆ ಮತ್ತೆ
ಈ ಜ್ವರದ ಸನ್ನಿಪಾತದ ಹುಚ್ಚು ದಿಗ್ಭ್ರಮಣೆ.
ಅನಿಷ್ಟದುಪಚಾರ ಈಗ ಹೊಳೆಯಿತು ಸ್ಪಷ್ಟ.
ಕೇಡಿನಿಂದೊಳಿತು ಮತ್ತಿನಿತು ಲೇಸೆನಿಸುವದು.
ಮುರಿದ ಒಲವಿನ ಮನೆಯ ಬಿಚ್ಚಿ ಕಟ್ಟಲು ಹೊಸತು
ಮೊದಲಿಗಿಂತಲು ಚೆಂದ, ಗಟ್ಟಿ, ಗೌರವ ಘನತೆ
ಆಕ್ಷೇಪಣೆಯ ಹೊತ್ತು ಮರಳಿದೆನು ಸಾಕಷ್ಟು,
ಕಾಯಿಲೆಯ ನಷ್ಟಕೊದಗಿದ ಲಾಭ ಮೂರುಪಟ್ಟು.
*****
ಷೇಕ್ಸ್‍ಪಿಯರನ ಸಾನೆಟ್ ನಂ.೧೧೯
