ರಾಮಚಂದ್ರ ಲೊವg ಸೆಕೆಂಡರಿ ಪರೀಕ್ಷೆಯಲ್ಲಿ ನಿರೀಕ್ಷಿಸಿದ್ದಂತೆ ತೇರ್ಗಡೆಯಾದ. ಜತೆಗೆ ರ್‍ಯಾಂಕೂ ಬಂದಿತ್ತು. ಅವನ ವಿದ್ಯಾಭ್ಯಾಸ ಮುಂದೆ ಹೊಸಹಳ್ಳಿಯಲ್ಲಿ ಸಾಗುವಂತಿರಲಿಲ್ಲ. ತುಮಕೂರಿಗೋ ಬೆಂಗಳೂರಿಗೋ ಹೋಗಬೇಕಾಗಿತ್ತು. ಅರಿಯದ ಹುಡುಗ ಒಬ್ಬನನ್ನೇ ಬೆಂಗಳೂರಿನಂತಹ ಮಹಾಪಟ್ಟಣಕ್ಕೆ ಕಳುಹಿಸುವುದು ಹೇಗೆ ಎಂಬ ಯೋಚನೆ ಹುಟ್ಟಿತು. ಅವನಿಗೋಸ್ಕರವೇ ಬೆಂಗಳೂರಿನಲ್ಲಿ ಒಂದು ಮನೆ ಮಾಡಿ ಸಂಸಾರವನ್ನು ಹೂಡುವುದೆಂದು ಯೋಚಿಸಿದರು. ಸಾವಿತ್ರಮ್ಮ ಮಗನನ್ನು ಬಿಟ್ಟಿರಲು ಒಪ್ಪಲಿಲ್ಲ. ರಾಯರು ಸಾವಿತ್ರಮ್ಮನನ್ನು ಬಿಟ್ಟಿರಲು ಸಾಧ್ಯವೇ ಆಗುತ್ತಿರಲಿಲ್ಲ. ಶಾಂತಾ ಮದುವೆಯಾಗುವ ಹುಡುಗಿ. ಅವಳಿಗಷ್ಟು ಸಂಗೀತ, ಸಾಹಿತ್ಯ ಕಲಿಸಬೇಕಾಗಿತ್ತು. ಸದ್ಯಕ್ಕೆ ಗೋಪಾಲಿ ಯೋಚನೆ ಇರಲಿಲ್ಲ.
ಈ ಯೋಚನೆಗಳನ್ನು ಮೀರಿಸುವಂತಹ ಯೋಜನೆಯು ಹುಟ್ಟಿಕೊಂಡಿತು. ಗೌರಮ್ಮನವರು ಹಾಸಿಗೆ ಹಿಡಿದು ಮಲಗಿಬಿಟ್ಟರು. ಬಚ್ಚಲು ಮನೆಯಿಂದ ಬರುವಾಗ ಕಾಲು ಜಾರಿ ಬಿದ್ದುದೇ ನೆವವಾಗಿ ನಿತ್ಯ ಜ್ವರ ಬರುವುದಕ್ಕಾರಂಭಿಸಿತು. ಡಾಕ್ಟರು ಬಂದದ್ದೇ ಮಲೇರಿಯಾ ಎಂದು ನಿರ್ಣಯಿಸಿ ಎರಡು ಇಂಜಕ್ಷ ಚುಚ್ಚಿದರು. ಮುದುಕಿಯಲ್ಲಿದ್ದ ಅಲ್ಪ ಸ್ವಲ್ಪ ತ್ರಾಣ ತೀರ ಕಡಿಮೆಯಾಯಿತು. ಪುಟ್ಟು ಪಂಡಿತರು ನಾಡಿ ನೋಡಿ ಮುಖ ಸಿಂಡರಿಸಿ ತಲೆದೂಗಿದರು. “ವಯಸ್ಸಾಯಿತು, ನಂಗೇನೋ ಅನುಮಾನ, ಬೇಕಾದರೆ ಪ್ರಯತ್ನ ಮಾಡುತ್ತೇನೆ” ಎಂದು ಧೆರ್ಯ ಹೇಳಿ ಕುಪ್ಪಿ ಮಾತ್ರೆಯನ್ನು ತೇದು ಕುಡಿಸುವುದಕಾರಂಭಿಸಿದರು. ಜೀವ ಹಾಗೂ ಹೀಗೂ ಎಂಟು-ಹತ್ತು ದಿವಸ ತುಯ್ಯಿತು. ಒಂದು ಮಂಗಳವಾರ. ಕೇವಲ ಕೃಶವಾದ ದನಿಯಲ್ಲಿ ಎಲ್ಲರನ್ನೂ ನೋಡಬಯಸಿದರು. ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಎಲ್ಲರನ್ನೂ ಕಣ್ತುಂಬ ನೋಡಿ ‘ಗಂಗೆ’ ಎಂದರು. ಮಡಿಯಲ್ಲಿದ್ದ ಮಿನಾಕ್ಷಮ್ಮ ಗಂಗೆಯ ಥಾಲಿಯನ್ನು ಒಡೆದು ಬಂದು ಉದ್ಧರಣೆ ಗಂಗೋದಕವನ್ನು ಕುಡಿಸಿದರು. ಅರ್ಧ ಬಾಯಿಂದ ಹೊಗೆ ಬಂದುಬಿಟ್ಟಿತು. ಕುತ್ತಿಗೆ ಬಲವಾಗಿ ಹಾಗೆ ವಾಲಿತು. ರಾಯರು ಹೊದಿಕೆಯಿಂದ ತಾಯಿಯಮುಖವನ್ನು ಮುಚ್ಚಿದರು. ಮುಂದಿನ ಕೆಲಸ ಕಾರ್ಯಗಳನ್ನು ತಡಮಾಡುವಹಾಗಿರಲಿಲ್ಲ. ಸುಬ್ಬಾಭಟ್ಟರು ಪಂಚಾಂಗ ತೆಗೆದು ನೋಡಿ ರಾಯರ ಹತ್ತಿರ ಮೆಲ್ಲನೆ
“ಒಂದು ಮಾತು ರಾಯರೇ.”
“ಏನು ಉಪಾದ್ರೇ?”
“ದೊಡ್ಡ ಅಮ್ಮನವರು ತೀರಿಕೊಂಡ ವಾರ ನಕ್ಷತ್ರವು ಚೆನ್ನಾಗಿಲ್ಲ ಧನಿಷ್ಠಾಪಂಚಕ, ಶಾಂತಿಯಾಗಬೇಕು. ಐದು ತಿಂಗಳು ಬಿಟ್ಟಿರಬೇಕು.”
“ಆಗಲಿ-ಇನ್ನೇನು ಮಾಡುವುದು” ಎಂದು ರಾಯರು ತಲೆಯಮೇಲೆ ಕೆಹೊತ್ತು ಕುಳಿತರು.
ತತ್ಕಾಲಕ್ಕೆ ನಾಗಣ್ಣಶೆಟ್ಟಿ ಛತ್ರದಲ್ಲಿ ವಾಸಕ್ಕೆ ಏರ್ಪಾಟು ಮಾಡಿ ಮನೆ ವ್ಯವಸ್ಥೆ ಮಾಡಿ ಬರುವಂತೆ ಶಾಮಣ್ಣನವರನ್ನು ಬೆಂಗಳೂರಿಗೆ ಕಳುಹಿಸಿದರು.
ಕರ್ಮಾಂತರದ ಕೆಲಸವೆಲ್ಲಾ ಮುಗಿಯಿತು. ಊರಿಗೆ ವೆಕುಂಠ ಸಮಾರಾಧನೆಯೂ ಆಯಿತು. ರಾಯರು ಮಾರನೆಯ ದಿವಸ ರೆತರನ್ನೆಲ್ಲಾ ಕರೆಸಿ ಜಮೀನಿನ ಸಾಗುವಳಿ ವಿಚಾರ ಮಾತುಕತೆ ನಡೆಸಿ ಒಳ್ಳೆಯ ದಿವಸ ನೋಡಿ ಬೆಂಗಳೂರಿಗೆ ಪ್ರಯಾಣಾ ಬೆಳೆಸಿದರು. ಊರಿಗೆ ಊರೇ ಗೋಳಿಟ್ಟಿತು. ಹೊಸಹಳ್ಳಿ ವೆಧವ್ಯದ ಕಳೆಯನ್ನು ಹೊತ್ತು ನಿಂತಿತು. ರಾಯರ ಆಶ್ರಿತರ ದುಃಖಕ್ಕಂತೂ ಮಿತಿಯೇ ಇಲ್ಲ. ಮೀನಾಕ್ಷಮ್ಮನವರಂತೂ ಯಾರಿಗೆ ಎಷ್ಟು ಹೇಳಿದರೂ ತೀರದು. ಊರಿನ ಹೆಣ್ಣುಮಕ್ಕಳು ಇಂದು ತಮ್ಮ ಲಕ್ಷ್ಮಿ ಹೊರಟುಹೋಗುತ್ತಾಳೆಂದು ಭಾವಿಸಿದರು. ಎಲ್ಲರ ಹಣೆಗೂ ತಮ್ಮ ಕೆಯಿಂದ ಕುಂಕುಮವಿಟ್ಟು ಮೀನಾಕ್ಷಮ್ಮನವರು ಸೋತರು. ರಾಯರ ಜಮೀನನ್ನು ಸಾಗುವಳಿ ಮಾಡುತ್ತಿದ್ದವರಲ್ಲಿ ೩೦-೪೦ ಆಳು ಮನೆಯವರು ಹೊಲೆಯರಾಗಿದ್ದರು. ರಾಯರು ಅವರನ್ನು ಒಂದೇ ರೀತಿಯಾದ ವಿಶ್ವಾಸದಿಂದ ಕಾಪಾಡಿಕೊಂಡು ಬಂದರು. ಅವರ ತಂಡವೂ ಬಂದು ಒಂದು ಕಡೆ ಗುಂಪುಕಟ್ಟಿ ನಿಂತಿತು. ಮೀನಾಕ್ಷಮ್ಮನವರು ಹೇಳಿಬರಲು ಅತ್ತ ಹೋದರು. ಹೊಲೆಯ ರೆತರು ಮಕ್ಕಳುಮರಿಯಾದಿಯಾಗಿ ಅಡ್ಡ ನಮಸ್ಕಾರ ಹಾಕಿ “ಬಾಯಿ ತುಂಬ ಹರಸು ನಮ್ಮವ್ವಾ!” ಎಂದರು. ಮುದುಕ ಮರಿಗುಡ್ಡ ನಡುಗುತ್ತಲೇ ಸ್ವಲ್ಪ ಮುಂದೆ ಬಂದು ಕೆಜೋಡಿಸಿ
“ಬೇಗ ನಮ್ಮೂರಿಗೆ ಬಂದು ಬಿಡು ಮೀನವ್ವಾ. ನಿನ್ನ ಬಡ ಮಕ್ಕಳ್ನ ತಬ್ಲಿಮಾಡಿ ಓಗ್ಬಿಡ್ಬೇಡ”.
ಎಂದು ನಡುಗುತ್ತಾ ನುಡಿದನು. ಮೀನಾಕ್ಷಮ್ಮನವರ ಬಾಯಲ್ಲಿ ಮಾತೇ ನಿಂತು ಹೋಯಿತು. ಕಂಬನಿ ತೆರೆತೆರೆಯಾಗಿ ಕಣ್ಣು ಮುಂದೆ ನಿಂತು ಕಣ್ಣು ಕಾಣದಂತೆ ಮಾಡಿತು. ರಾಯರು ಕರುಣಾರ್ದ್ರದೃಷ್ಟಿಯಿಂದ ಎಲ್ಲರನ್ನೂ ನೋಡಿ ಬಸ್ಸು ಹತ್ತಿ ಕುಳಿತರು. ರಾಯರು ಎಲ್ಲರಿಗೂ ಕೆಮುಗಿದು ಹೊರಟರು. ಬಸ್ಸು ಕಣ್ಣನೋಟದಿಂದ ಮರೆಯಾಗುವವರೆಗೂ ಒಬ್ಬರೂ ಆ ಸ್ಥಳದಿಂದ ಕದಲಲಿಲ್ಲ. ಬಸ್ಸು ಬೆಂಗಳೂರಿಗೆ ಸಮೀಪವಾಗುತ್ತಿದ್ದಂತೆ ರಾಯರ ಮನಸ್ಸು ಭಾರವಾಗುತ್ತಿತ್ತು. ತಮ್ಮ ಸುತ್ತಲಿನ ನೋಟವನ್ನು ಕಣ್ತುಂಬ ನೋಡುತ್ತ ಬಂದರು. ಆ ಭೂಮಿಯ ಪ್ರತಿಯೊಂದು ಭಾಗವೂ ರಾಯರಿಗೆ ಗೊತ್ತಿತ್ತು, ಪ್ರಿಯವಾಗಿತ್ತು. ಅವರ ಜೀವನದ ಬಹುಭಾಗವನ್ನು ತಾಯಿ ವಸುಂಧರೆಯ ಸೇವೆಯಲ್ಲಿ ಕಳೆದಿದ್ದರು. ತಾವು ಹುಡುಗರಾಗಿದ್ದಾಗ ಹಾಕಿದ ತೆಂಗಿನ ಮರಗಳು ಆಕಾಶದೆತ್ತರಕ್ಕೆ ಬೆಳೆದು ಸಮೃಧ್ದಿಯಾಗಿ ಫಲಗಳನ್ನು ನೀಡಿದ್ದವು. ಹೊಸಹಳ್ಳಿಯಿಂದ ದೂರವಾಗುವುದೆಂದರೆ ರಾಯರಿಗೆ ತಮ್ಮ ನಿಜವಾದ ಬಾಳಿನಿಂದ ದೂರವಾದಂತೆಯೆ. “ಬೆಂಗಳೂರಿನ ಕೃತಕಜೀವನವೆಲ್ಲಿ, ನನ್ನ ಹೊಸಹಳ್ಳಿಯ ಆರಾಮ ಧಾಮವೆಲ್ಲಿ” ಎಂದುಕೊಳ್ಳುವರು. ತಮಗೆ ಅತ್ಯಂತ ಪ್ರಿಯವಾದ ಮತ್ತೊಂದು ವಸ್ತುವನ್ನೂ ರಾಯರು ಹೊಸಹಳ್ಳಿಯಲ್ಲಿ ಬಿಟ್ಟು ಹೋಗುತ್ತಿದ್ದರು. ತಮ್ಮ ತಾಯಿ; ಆದರೆ ವಿಧಿಯಿಲ್ಲ. ತಾಯಿ ಬದುಕಿದ್ದರೆ ಅವರೂ “ಹೋಗಿ ಬಾಪ್ಪ. ಹುಡುಗ ಮುಂದಕ್ಕೆ ಬಂದರೆ ಅದೇ ದೊಡ್ಡ ಶ್ರೇಯಸ್ಸು” ಎಂದು ಹೇಳಿಯೇ ಹೇಳುತ್ತಿದ್ದರು ಎಂಬ ಧೆರ್ಯ ರಾಯರಿಗಿತ್ತು. ಲಕ್ಷ್ಮಣನ ಮನಸ್ಸೂ ಅಷ್ಟೇ ಭಾರವಾಗಿತ್ತು. ಬಸ್ಸು ಹನುಮಂತರಾಯನ ದೇವಸ್ಥಾನಕ್ಕೆ ಬರುವುದೇ ತಡ, ಗೊಳೋಎಂದು ಅಳಲು ಮೊದಲಿಟ್ಟನು. ಅಲ್ಲಿ ತನಗೆ ಹಿಂದೆ ಆದ ಅನುಭವದ ನೆನಪು ಸ್ವಷ್ಟವಾಗಿ ಮೂಡಿತು. ಆದರೆ ಅವನ ದುಃಖದೊಂದಿಗೆ ಒಂದು ಸಮಧಾನವೂ ಸೇರಿತ್ತು. ಬೆಂಗಳೂರು ದೊಡ್ಡಪಟ್ಟಣ. ದೊಡ್ಡ ದೊಡ್ಡ ವಿದ್ವಾಂಸರು ಇರುವ ಊರು. ತಾನು ಸಂಗೀತ ಕಲಿಯಲು ಅವಕಾಶ ಸಿಕ್ಕುತ್ತದೆಂಬ ಆಸೆ. ಇದರ ಮರೆಯಲ್ಲಿ ತನ್ನ ಪ್ರಿಯ ಹೊಸಹಳ್ಳಿಯನ್ನು ಮರೆಯಲು ಸಿದ್ದನಾದ. ಹೊಸಹಳ್ಳಿಯನ್ನು ಬಿಡುವುದಕ್ಕೆ ಸ್ವಲ್ಪವೂ ಚಿಂಸದಿದ್ದವನು ರಾಮುವೊಬ್ಬನೇ. ಅವನಿಗೆ ಹಳ್ಳಿಯ ಜೀವನ ಬೇಸರಾಗಿತ್ತು. ಅವನ ಶಾಲೆಯ ಹುಡುಗರು, ಇತರ ಗೆಳೆಯರು ಎಲ್ಲಾ ರೀತಿಯಲ್ಲಿಯೂ ತನಗಿಂತ ಕೀಳು ಎಂಬ ಭಾವನೆಯು ಅವನ ಮನಸ್ಸಿನಲ್ಲಿ ಬೆಳೆದಿತ್ತು. ತಾನು ರಾಯರ ಮಗ-ಈ ಹಳ್ಳಿ ಮಕ್ಕಳ ಕೂಡೆ ಸಲಿಗೆಯಿಂದ ವರ್ತಿಸುವುದೇ; ಬೆಂಗಳೂರಿನಲ್ಲಿ ದೊಡ್ಡ ಮನುಷ್ಯರ ಮಕ್ಕಳ ಸ್ನೇಹ ಕಾದಿರುವಾಗ ಎಂದುಕೊಂಡು ಸ್ವಲ್ಪ ಬಿಗಿಯಿಂದಲೇ ಇರಲಾರಂಭಿಸಿದ್ದನು. ಲೋವg ಸೆಕೆಂಡರಿ ಪರೀಕ್ಷೆಯ ಫಲಿತಾಂಶ ಬಂದುದೇ ತಡ, ಅವನನ್ನು ಇತರರು ಮಾತನಾಡಿಸುವುದೇ ಕಷ್ಟವಾಗಿತ್ತು. ಇಷ್ಟ ಬಂದರೆ ಉತ್ತರಕೊಡುತ್ತಿದ್ದ, ಇಲ್ಲದಿದ್ದರೆ ಸುಮ್ಮನಾಗುತ್ತಿದ್ದ. ಹೊರಗಿನವರಿಗೆ ಮಾತ್ರವೇ ಅಲ್ಲ, ಲಕ್ಷ್ಮಣನಿಗೂ ಈ ಅನುಭವವು ಅನೇಕ ಸಲ ಆಗಿತ್ತು.
*****
ಮುಂದುವರೆಯುವುದು
ಸಂಧ್ಯಾ ರಾಗ – ೬
