ಸಂಧ್ಯಾ ರಾಗ – ೧೧

ಲಗ್ನವೂ ನಿಷ್ಕರ್ಷೆಯಾಯಿತು. ಸಾಧ್ಯವಾದರೆ ನಾಲ್ಕು ದಿವಸದ ಮಟ್ಟಿಗೆ ಬಂದು ಹೋಗು ಎಂದು ರಾಯರು ಮಗನಿಗೆ ಪುಣೆಗೆ ಪತ್ರಬರೆದರು. “ನಾಲ್ಕು ದಿವಸವೆಂದರೆ ಹೋಗುವುದು ಬರುವುದು ಸೇರಿ ಎಂಟು ಹತ್ತು ದಿವಸಗಳು ಹೋಗಿಬಿಡುತ್ತವೆ. ನಾನು ಈಗ ಬರುವುದಿಕ್ಕಾಗುವುದಿಲ್ಲ” ಎಂದು ರಾಮು ಉತ್ತರ ಬರೆದು ಕೊನೆಯಲ್ಲಿ “ಈ ಸಂಬಂಧದ ವಿಚಾರವಾಗಿ ನನ್ನನ್ನೂ ಒಂದು ಮಾತು ಕೇಳಿದ್ದರೆ ಚೆನ್ನಾಗಿತ್ತು” ಎಂದು ಬರೆದಿದ್ದ. ರಾಯರು ಸಾವಿತ್ರಮ್ಮನಿಗೆ ಕಾಗದ ತೋರಿಸಿ “ನಮ್ಮ ಮಕ್ಕಳು ಕಷ್ಟ ಸುಖಕ್ಕೆ ಆಗುತ್ತಾರೆ ಎಂದು ಬಯಸುತ್ತೇವೆ. ಅವರು ನಮ್ಮ ಮೇಲೆ ” ಕೋಗಿ ಭರ್‍ತಿ ಮಾಡುತ್ತಾರೆ” ಎಂದು ನೊಂದು ನುಡಿದಿದ್ದರು. ಲಕ್ಷ್ಮಣನ ಸಂತೋಷಕ್ಕಂತೂ ಪಾರವೇ ಇಲ್ಲ. ಮದುವೆಯಾಗಿ ಶಾಂತಾ ಯಾರದೋ ಮನೆಗೆ ಹೊರಟು ಹೋಗುತ್ತಾಳಲ್ಲಾ ಎಂದು ಎಷ್ಟೋ ಬಾರಿ ಯೋಚಿಸಿದ್ದನು. ಈಗ ಅದು ತಪ್ಪಿದ ಹಾಗಾಯಿತು. ಅಲ್ಲದೆ ಅವಳು ಕೆಹಿಡಿಯುತ್ತಿದ್ದುದು ತನ್ನ ವಿಶ್ವಾಸಪಾತ್ರನಾದ ಗೆಳೆಯ ವೆಂಕಟೇಶನ ಕೆಯ್ಯನ್ನೇ. ಗೋಪಾಲಿಯ ಉತ್ಸಾಹಕ್ಕಂತೂ ಕೊನೆಯೇ ಇಲ್ಲ. ವೆಂಕಟೇಶನ ಹೆಸರು ಹೇಳಿದೊಡನೆಯೇ ಶಾಂತಾ ಪ್ರಕಟಿಸುತ್ತಿದ್ದ ನಾಚಿಕೆಯನ್ನು ಅಣಕಿಸಿ ವಿನೋದ ಮಾಡುವುದರಲ್ಲಿ ಗೋಪಾಲಿ ಅಗ್ರಗಾಮಿಯಾಗಿದ್ದನು. ಮೀನಾಕ್ಷಮ್ಮನವರು ಒಂದು ಸಲ “ರಾಮೂನೂ ಇದ್ದಿದ್ದರೆ ಚೆನ್ನಾಗಿತ್ತು, ಅವನಿಲ್ಲದಿರುವುದು ಮನೆ ಬಿಕೋ ಎನ್ನುತ್ತದೆ” ಎಂದು ಹೇಳಿದಾಗ ಗೋಪಾಲಿ “ಅವನು ಇಲ್ಲದೆ ಇರುವುದೇ ಒಳ್ಳೆಯದಾಯಿತು ಸುಮ್ಮನಿರು ದೊಡ್ಡಮ್ಮ. ಸಂತೋಷ ಸಮಯದಲ್ಲಿ ಅವನದು ಏನಾದರೂ ರಾಮಾಯಣ ಇದ್ದೇ ಇರುತ್ತಿತ್ತು. ಯಾರ ಕಣ್ಣಿನಲ್ಲಿಯಾದರೂ ನೀರು ತರಿಸದೇ ಇದ್ದರೆ ಅವನಿಗೆ ಸಮಾಧಾನವೇ ಆಗುತ್ತಿರುವುದಿಲ್ಲ.” ಎಂದು ಖಂಡಿತವಾಗಿ ನುಡಿದುಬಿಟ್ಟಿದ್ದನು. ಮದುವೆ ವಿಜೃಂಭಣೆಯಿಂದ ನೆರವೇರಿತು. ಗಂಡಿನ ಕಡೆಯವರು ಬಹಳ ಜನವಿರಲಿಲ್ಲ. ಅವರು ಬಡವರೆಂದು ರಾಯರು ತಾತ್ಸಾರ ಮಾಡಲಿಲ್ಲ. ಶ್ರೀಮಂತ ಬೀಗರು ಸಿಕ್ಕಿದ್ದರೆ ಎಷ್ಟು ಔದಾರ್ಯದಿಂದ ವಿಧಿಯಿಲ್ಲದೆ ವರ್ತಿಸುತ್ತಿದ್ದರೋ ಅಷ್ಟೇ ಔದಾರ್ಯದಿಂದ ಮನಃಪೂರ್ವಕವಾಗಿ ವರ್ತಿಸಿದರು. ಎಂಟು ದಿವಸವೂ ಒಂದೇ ಸಮನಾಗಿ ಉತ್ಸವ ನಡೆಯಿತು. ಊಟ ಉಪಚಾರ, ತಿಂಡಿ ತೀರ್ಥ ಯಾವದರಲ್ಲೂ ಕೊರತೆಯಿರಲಿಲ್ಲ. ಸುಂದರರಾಯರು ಭೀಮರಾಯರು ಕೆಲಸಗಳನ್ನು ಹಂಚಿಕೊಂಡು ಮನೆಯವರಿಗಿಂತಲೂ ಉತ್ಸಾಹದಿಂದ ದುಡಿದರು. ಧಾರೆ ಚಪ್ಪರದಲ್ಲಿಯೇ ಅದೇ ಸಂಜೆ ಲಕ್ಷ್ಮಣನ ಸಂಗೀತ ಕಛೇರಿ ಏರ್ಪಾಡಾಗಿತ್ತು. ಊರಿನ ದೊಡ್ಡ ಮನುಷ್ಯರು, ಮಹಿಳೆಯರು ಬಂದು ನೆರೆದಿದ್ದರು. ಸುಂದರರಾಯರೂ ಭೀಮರಾಯರೂ ಕರಿಯ ನಿಲುವಂಗಿಗಳನ್ನು ಧರಿಸಿ, ಸ್ವಾಗತಿಸಿದ್ದ ಅತಿಥಿಗಳನ್ನು ಮರ್ಯಾದೆಯಿಂದ ಬರಮಾಡಿಕೊಳ್ಳುತ್ತಿದ್ದರು. ಲಕ್ಷ್ಮಣನ ಸಹಪಾಠಿಗಳೇ ಪಕ್ಕವಾದ್ಯಗಳಿಗೆ ಕುಳಿತಿದ್ದರು. ಅನಂತಾಚಾರ್ಯರ ಶಿಷ್ಯರಲ್ಲಿ ಪುಟ್ಟಯ್ಯಾ ಪಿಟೀಲಿಗೂ ರಂಗಪ್ಪ ಮೃದಂಗಕ್ಕೂ ಹೆಸರಾಗಿದ್ದರು. ಲಕ್ಷ್ಮಣನ ಕಛೇರಿಗೆ ನುಡಿಸುವ ಅವಕಾಶ ಸಿಕ್ಕಿತಲ್ಲಾ ಎಂದು ಸಂತೋಷದಿಂದ ಒಪ್ಪಿದರು. ಭೆರವಿ ವರ್ಣವಾಯಿತು. ಒಂದೆರಡು ಸಣ್ಣ ಕೀರ್ತನೆಗಳಾದವು. ಅತಿಥಿಗಳು ತಾಂಬೂಲವನ್ನು ತೆಗೆದುಕೊಂಡು, ಬಂದ ಎರಡೂ ಮೂರು ನಿಮಿಷಗಳಲ್ಲಿ ಹೊರಟು ಹೋಗುವುದು ಪದ್ಧತಿಯಾದರೂ ಒಬ್ಬರೂ ಸ್ಥಳ ಬಿಡುವ ಸಂಭವವೇ ಕಾಣಬರಲಿಲ್ಲ. ಕೀರ್ತನೆಗಳನ್ನು ಹಾಡುವಾಗಲೇ ಹರಿಕಾಂಭೋದಿ ಖರಹರಪ್ರಿಯ ಎರಡು ರಾಗಗಳನ್ನೂ ಲಕ್ಷ್ಮಣಹಾಡಿ ತೋರಿಸಿದ್ದನು. ವಿಸ್ತಾರವಾದ ರಾಗಾಲಾಪನೆಗೆ ತೋಡಿಯನ್ನು ಎತ್ತಿಕೊಂಡನು. ಒಂದನೆಯ ಕಾಲ ಮುಗಿಯುವ ಹೊತ್ತಿಗೆ ರಾತ್ರಿ ೯ ಗಂಟೆಯ ದೀಪ ಮಿನುಗಿತು. ಎರಡನೆಯ ಮೂರನೆಯ ಕಾಲಗಳನ್ನು ಅಷ್ಟು ವಿಸ್ತಾರ ಮಾಡದೆ ಹಾಡಿ ಮುಗಿಸಿದನು. ಬಂದಿದ್ದ ಅತಿಥಿಗಳಿಗೆ ಗಾಯಕ ರಾಯರ ಎರಡನೆಯ ಮಗನೆಂದು ತಿಳಿದಮೇಲಂತೂ ಅವರ ಆಶ್ಚರ್ಯ ಹೇಳತೀರದು. ಉರುಟಣೆ ಔಪಾಸನೆಗಳಿಗೆ ಹೊತ್ತಾಗುವುದೆಂದು ಪುರೋಹಿತರು ಚಡಬಡಿಸಿದರು. ಒಂದೆರಡು ದೇವರ ನಾಮಗಳನ್ನು ಹಾಡಿ ಲಕ್ಷ್ಮಣ ಕಛೇರಿಯನ್ನು ಮುಗಿಸಿದನು. ಕಛೇರಿ ಮುಗಿದ ಮೇಲೆ ಸುಂದರರಾಯರು ಗಂಧ, ಹಾರ, ತಾಂಬೂಲಗಳನ್ನು ಮೂವರು ವಿದ್ವಾಂಸರಿಗೂ ಅರ್ಪಿಸಿದರು. ಲಕ್ಷ್ಮಣನಿಗೆ ತಾವೇ ಹಾರಹಾಕುತ್ತಾ “ಲಕ್ಷ್ಮಣಾ, ಏನು ಅಮೋಘವಾಗಿ ಹಾಡಿದೆಯಪ್ಪಾ. ಸಾಕ್ಷಾv ವಿದ್ಯಾಭಿಮಾನಿ ದೇವತೆಯೇ ನಿನ್ನಲ್ಲಿ ಬಂದು ನೆಲಸಿದ್ದಾಳೆ. ದೇವರು ನಿನಗೆ ಇನ್ನೂ ವಿದ್ಯಾ, ಆಯುಸ್ಸು, ಸಂಪತ್ತು ಎಲ್ಲಾ ಕೊಟ್ಟು ಕಾಪಾಡಲಪ್ಪಾ” ಎಂದು ಹರಸಿದರು. ಶಾಮಣ್ಣನವರು ಬುರುಕಿಹಾಕಿದ ಒಂದು ತಂಬೂರಿಯನ್ನು ಸುಂದರರಾಯರ ಕೆಗೆ ಕೊಟ್ಟರು. ಸುಂದರರಾಯರು ಬುರುಕಿ ತೆಗೆದು ತಂಬೂರಿಗೆ ಅರಿಶಿನ ಕುಂಕುಮ ಹಚ್ಚಿ ಹೂವು ಸುತ್ತಿ “ಇದಕ್ಕೆ ನಿನಗಿಂತಲೂ ಹೆಚ್ಚು ಹಕ್ಕುದಾರರು ಯಾರೂ ಇಲ್ಲ ಲಕ್ಷ್ಮಣ. ಇದು ದೊಡ್ಡ ವಿದ್ವಾಂಸರಿಂದ ಸೇವೆ ಸ್ವೀಕರಿಸಿದೆ. ಈಗ ತನ್ನ ಯೋಗ್ಯತೆಗೆ ಸರಿಯಾದ ಹಸ್ತ ಸೇರುತ್ತಾ ಇದೆ, ತೆಗೆದುಕೋ.” ಎಂದು ಕೊಟ್ಟರು. ಲಕ್ಷ್ಮಣ ಅದನ್ನು ಕಣ್ಣಿಗೆ ಒತ್ತಿಕೊಂಡು ತನ್ನ ತೀರ್ಥರೂಪರಿಗೂ ಮಾತೃಶ್ರೀಗಳಿಗೂ ನಮಸ್ಕಾರ ಮಾಡಿ ಬಂದು ಸುಂದರರಾಯರಿಗೂ ಶಾಮಣ್ಣನವರಿಗೂ ಭೀಮರಾಯರಿಗೂ ನಮಸ್ಕರಿಸಿದನು. ಎಲ್ಲರೂ ತರುಣ ಗಾಯಕನನ್ನು ಮನದಣಿಯ ಆಶೀರ್ವದಿಸಿದರು ವೆಂಕಟೇಶ ಪ್ರೇಮದಿಂದ ಭಾವನನ್ನು ಬಿಗಿದಪ್ಪಿದನು. ಅವನ ಹೃದಯದಲ್ಲಿ ಬಹಳ ಮಾತಿತ್ತು; ಬಾಯಲ್ಲಿ ಒಂದೂ ಹೊರಡದಾಯಿತು. ಶಾಂತಾ ಕತ್ತೆತ್ತಿ ಅಣ್ಣನನ್ನು ನೋಡಿದಳು. ಲಕ್ಷ್ಮಣ ಮೆಲ್ಲನೆ ತಂಗಿಯ ಗಲ್ಲವನ್ನು ನೇವರಿಸಿದಾಗ ಅವನ ಕೆ ತುಸು ನೆನೆಯಿತು. ಬೀಗರ ಔತಣವೂ ಮುಗಿಯಿತು. ಅಂದೇ ರಾಯರು ಎಲ್ಲರಿಗೂ ಉಡುಗೊರೆಗಳನ್ನು ಹಂಚಿದರು. ಸುಂದರರಾಯರೂ ಭೀಮರಾಯರೂ ಉಡುಗೊರೆಗಳನ್ನು ಸ್ವೀಕರಿಸುವುದಕ್ಕೆ ಗಲಭೆ ಮಾಡಿದರು. ರಾಯರ ಮಾತೂ ನಡೆಯದಾಯಿತು. ಮೀನಾಕ್ಷಮ್ಮನವರೆ ಬಂದು ಉಪಚಾರ ಹೇಳಿ “ಬಂಧುಬಳಗಕ್ಕಿಂತಲೂ ಹೆಚ್ಚಿನ ಬಂಧುಬಳಗಾಪ್ಪ ನೀವು. ನೀವು ತೆಗೆದುಕೊಂಡರೆ ವಧೂವರರಿಗೆ ಶ್ರೇಯಸ್ಸು. ದಯೆಯಿಟ್ಟು ತೆಗೆದುಕೊಳ್ಳಬೇಕು.” ಎಂದು ನುಡಿದರು. ನಿರ್ವಾಹವಿಲ್ಲದೆ ಉಡುಗೊರೆಗಳನ್ನು ಗೊಣಗುಟ್ಟುತ್ತಾ ಸ್ವೀಕರಿಸಿ “ಹೀಗೆಲ್ಲಾ ನೀವು ಮಾಡುವ ಹಾಗಿದ್ದರೆ ರಾಮೂ ಮದುವೇಗೆ ಲಚ್ಚೀ ಮದುವೇಗೆ ನಾವು ಬರುವುದೇ ಇಲ್ಲಮ್ಮಾ!” ಎಂದು ಭೀಮರಾಯರು ಸೂಚಿಸಿದರು. ಬೀಗರ ಕಡೆ ಚಿಳ್ಳೆ ಪಿಳ್ಳೆ ಮೊದಲುಗೊಂಡು ಎಲ್ಲರಿಗೂ ಬಾಯಿತುಂಬ ಕೊಂಡಾಡಿ, ವಧೂವರರನ್ನು ಮನದಣಿಯ ಹರಸಿದರು. ಬೀಗರು ನಂಜುಂಡಯ್ಯನವರು ಅವರ ಹೆಂಡತಿ ಭಾಗೀರತಮ್ಮ ಎಲ್ಲಾ ವಿಚಾರದಲ್ಲಿ ಒಮ್ಮತಿ ಸಮ್ಮತಿಯಿಂದಲೇ ನಡೆದುಕೊಂಡರು. ಡೊಡ್ಡವರ ಮನೆಯವರು ಹುಡುಗನ ಮೇಲಿನ ವಿಶ್ವಾಸದಿಂದ ತಮ್ಮಂತಹ ಬಡವರೆಂದು ತುಚ್ಚವಾಗಿ ಕಾಣದೆ ಮದುವೆ ಅದ್ದೂರಿಯಲ್ಲಿ ಯಾವುದನ್ನೂ ‘ಖೋತಾ’ಮಾಡದೆ ರಾಯರು ಎಲ್ಲವನ್ನು ಸಾಂಗವಾಗಿ ನೆರವೇರಿಸಿದುದು ಅವರ ವಿಚಾರದಲ್ಲಿ ಗೌರವವನ್ನು ಹೆಚ್ಚಿಸಿತು. ಆದರೆ ಬೀಗರ ಕಡೆಯವರೆಲ್ಲಾ ನಂಜುಂಡಯ್ಯ ಭಾಗೀರತಮ್ಮನೇ ಆಗಿರಲಿಲ್ಲ. ಬೀಗರ ಅಕ್ಕ ಒಬ್ಬರು ಮದುವೆಗೆ ದಯಮಾಡಿಸಿದ್ದರು. ಅವರಿಗೂ ಅವರ ಇಬ್ಬರು ರತಿಕುಮಾರಿಯರಿಗೂ ಯಾರೆಷ್ಟು ಉಪಚಾರ ಮಾಡಿದರೂ ಸಾಲದು. ಬೆಳಗಾಗ- ಮುಖಕ್ಕೆ ಗಂಡಿನವರ ಮನೆಗೆ ಬಿಸಿನೀರು ತೆಗೆದುಕೊಂಡು ಹೋದಾಗ ಉಪ್ಪಿಟ್ಟು ಬಾಳೆಹಣ್ಣು ಕಾಫಿ ಆಗುತ್ತಿತ್ತು. ಮದುವೆ ಮನೆಗೆ ಇವರು ಬಂದಾಗಲೆಲ್ಲಾ ಏನಾದರೂ ತಿಂಡಿತೀರ್ಥ ಆಗುತ್ತಿತ್ತು. ಮಧ್ಯಾನ್ಹ ರಾತ್ರಿ ಪುಷ್ಕಳವಾದ ರಸಕವಳ. ಇಷ್ಟಾದರೂ “ಅರೆಹೊಟ್ಟೆ ಹಾಕಿ ನಮ್ಮನ್ನು ಸಾಯಿಸಿದರು. ಎಂಥಾ ಮದುವೆ ಮಾಡಾಟ ಇದು, ಬರೀ ದೊಡ್ಡಸ್ತಿಕೇಲೇ ಎಲ್ಲಾ ಪೂರೆಸಿತು.” ಎಂದು ಅವರು ಆಡದೆ ಬಿಡಲಿಲ್ಲ. ಬೀಗಿತ್ತಿ ಮರ್ಯಾದಸ್ತೆ, ಕಷ್ಟ ಸುಖಗಳನ್ನು ಕಂಡವರು. ಅವರು ಎಷ್ಟೇ ಸುಳುಸೂಕ್ಷ್ಮದಲ್ಲಿ ಹೇಳಿದರೂ ಪುಟ್ಟೆಂಕಮ್ಮನೂ ಆಕೆಯ ಹೆಣ್ಣುಮಕ್ಕಳೂ ಹೆಣ್ಣಿನ ಕಡೆಯವರನ್ನೂ ಮದುವೆ ಎರ್ಪಾಟನ್ನೂ ಆಡಿಕೊಳ್ಳದೆ ಬಿಡುತ್ತಿರಲಿಲ್ಲ. ಪುಟ್ಟೆಂಕಮ್ಮನಿಗೆ ತನ್ನ ಮತ್ತು ತನ್ನ ಮಕ್ಕಳ ಸಮಾನ ಹಾಡು ಹೇಳುವವರು ಯಾರೂ ಇಲ್ಲ ಎನ್ನುವ ಜಂಬ ಬೇರೆ. ಹಸೆಗೆ ಕರೆದದ್ದು, ಆರತಿ ಎತ್ತಿದ್ದು ಎಣ್ಣೆಶಾಸ್ತ ಮಾಡಿದ್ದು, ಹೂ ಮುಡಿಸಿದ್ದು, ಗಂಧ ಬಳಿದದ್ದು, ಕುಂಕುಮ ಇಟ್ಟದ್ದು – ಇವುಗಳ ಸಂಬಂಧವಾದ ಹಾಡುಗಳಲ್ಲದೆ ಬೀಗರನ್ನು ಅಲ್ಲಗಳೆಯುವ ಹಾಡುಗಳಂತೂ ನೂರಾರು ಬರುತ್ತಿದ್ದವು. ಹೆಣ್ಣಿನವರ ಕಡೆ ಅವರ ಕೂಡ ಪೈಪೋಟಿಗೆ ನಿಲ್ಲುವವರು ಯಾರೂ ಇರಲಿಲ್ಲ. ಶಾಂತನಿಗೂ ಅಂತಹ ಹಾಡುಗಳು ಬರುತ್ತಿರಲಿಲ್ಲ. ಲಕ್ಷ್ಮಣನ ಕಛೇರಿಯಾಗುವ ತನಕ ಇದ್ದ ಪುಟ್ಟೆಂಕಮ್ಮನ ಜಂಬ ಮಾರನೆಯ ದಿವಸದಿಂದ ಇದ್ದಕ್ಕಿದ್ದ ಹಾಗೇ ನಂದಿಹೋಯಿತು. ಬೀಗರ ಕಡೆಯವರು ತಮಗೂ ತಮ್ಮ ಮಕ್ಕಳಿಗೂ ದೊಡ್ಡ ಅಂಚಿನ ಧರ್ಮಾವರ, ಅರಳೇಪೇಟೆಯ ಸೀರೆಗಳನ್ನು ಓದಿಸಿದ ಮೇಲಂತೂ ರಾಯರ ಮನೆಯವರನ್ನು ಎಲ್ಲರಿಗಿಂತಲೂ ಹೆಚ್ಚಾಗಿ ಹೊಗಳುವುದು ಆರಂಭವಾಗಿಬಿಟ್ಟಿತು. ಮೀನಾಕ್ಷಮ್ಮನವರ ಹೆಗಲಮೇಲಿನಿಂದ ದೊಡ್ಡ ಭಾರವನ್ನಿಳುಹಿದಂತಾಯಿತು. ಮದುವೆಯಾಗುತ್ತಲೂ ಅವರ ಮೆಯಲ್ಲಿ ಸ್ವಲ್ಪ ಅಲಸಿಕೆ ತೋರಿ, ಬಿಡದೆ ದಿನವೂ ಜ್ವರ ಬರುವುದಕ್ಕಾರಂಭವಾಯಿತು. ಡಾಕ್ಟರು ಪರೀಕ್ಷೆಮಾಡಿ ಇಫ್ಲುಯಂಜಾ, ಭಯಪಡಬೇಕಾದ ಕಾರಣವಿಲ್ಲವೆಂದು ಧೆರ್‍ಯಹೇಳಿ ಔಷಧವನ್ನಿತ್ತು ಹೋದರು. ಒಂದೆರಡು ಇಜಕ್ಷಗಳೂ ಆದವು. ಜ್ವರ ಬರುವುದು ನಿಂತಿತು. ಮೀನಾಕ್ಷಮ್ಮನವರು ಎದ್ದು ಓಡಾಡುವಂತಾದರೂ ಒಮ್ಮೊಮ್ಮೆ ಇದ್ದಕಿದ್ದಹಾಗೆ ಎದೆನೋವು ಬಂದುಬಿಡುತ್ತಿತ್ತು. “ಅವರಿಗೆ ತುಂಬ ವಿಶ್ರಾಂತಿ ಬೇಕು. ಮನಸ್ಸಿಗೆ ಉದ್ವೇಗವಾಗದಂತೆ ನೋಡಿಕೊಳ್ಳಿ” ಎಂದು ಡಾಕ್ಟರು ಎಚ್ಚರವಿತ್ತರು. ಮದುವೆಯ ಮನೆಯ ಪರಿಣಾಮ ಎಲ್ಲರಮೇಲೂ ತನ್ನ ವರ್ಚಸ್ಸನ್ನು ಬೀರಿತು. ಸ್ವಲ್ಪಸ್ವಲ್ಪ ಜ್ವರ, ಅಜೀರ್ಣ, ಸೀತ ಮೊದಲಾದ ಚಿಲ್ಲರೆ ಕಾಹಿಲೆಗಳು ಎಲ್ಲರನ್ನೂ ಕಾಡಿಸಿದವು. ಉಚಿತ ಔಷಧ ಅನುಪಾನ ದೊರೆತು ಎಲ್ಲರೂ ಎಂದಿನಂತೆ ಎದ್ದು ಓಡಿಯಾಡಲಾರಂಭಿಸಿದರು. ಶಾಮಣ್ಣನವರು ಒಂದು ಕೊಡ ಮೆಣಸು, ಜೀರಿಗೆ, ಹಿಪ್ಪಲಿ ಕಷಾಯ ಕಾಸಿ, ಆಳುಕಾಳುಗಳಿಗೆಲ್ಲಾ ಹುಯಿದು, ತಾವು ಸ್ವಲ್ಪ ಕುಡಿಯುತ್ತಿದ್ದರು. ಚಳಿಜ್ವರ ಅವರ ‘ತ್ರಿಫಲ’ಕ್ಕೆ ಹೆದರಿ ಅವರ ಬಳಿ ಸುಳಿಯಲು ಅಂಜುತ್ತಿದ್ದವು. ರಾಯರೂ ಮೆ ಕೊಡವಿಕೊಂಡೆದ್ದು ತಮ್ಮ ನಿತ್ಯನುಷ್ಠಾನ, ದಿನಚರ್ಯೆಗಳನ್ನಾರಂಭಿಸಿದರು.
*****
ಮುಂದುವರೆಯುವುದು