ಶ್ರೀರಾಮನವಮಿಯ ದಿವಸ ರಾಮಾನಾಮೃತವೆ
ಪಾನಕ, ಪನಿವಾರ,ಕೋಸಂಬರಿ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ;
ವೃಕ್ಷಮಧ್ಯಕ್ಕೆ ಬಂದುರಿವ ಶಬರಿ.
ಕಾಮ ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ-
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು;
ಮಣ್ಣೊಡೆದು ಹಸರು ಹೂ ಹುಲ್ಲು ಮುಳ್ಳು.
ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ;
ಅಶ್ವತ್ಥದ ವಿವರ್ತ ನಿತ್ಯಘಟನೆ; || ೧೦ ||
ಗುಮ್ಮಟಗಿರಿಯ ನೆತ್ತಿಯಲಿ ಕಲ್ಲರಳಿದ್ದು
ಕಾರ್ಯಕಾರಣದೊಂದಪೂರ್ವ ನಟನೆ.
ನೆಲಕ್ಕಂಟಿ ಬಿದ್ದ ಆಕಶಯಾನದ ಕನಸು
ಜೆಟ್‌ವಿಮಾನವೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ.
ವೇದೋಪನಿಷದಗಳ ಭೂತಕನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯ್ ಕೂರ್ಮವರಾಹಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ: || ೨೦ ||
ಕೌಸಲ್ಯೆ ದಶರತರ ಪುತ್ರಕಾಮೇಷ್ಠಿ ಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟ ನಿಂತ ಘಟನೆ:
ಬೆಳ್ಳಂಬೆಳಕಿನಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಲೆವ ರಾಜಹಂಸ;
ಅಂತರಂಗದ ಸುರುಳಿ ಬಿಚ್ಚಿ ಸರ್ಚ್‌ಲೈಟಿನಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ.
ಸಂಕಲ್ಪ ಬಲದ ಜಾಗರಣೆ; ಕತ್ತಲಿನೆಡೆಗೆ
ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ; ||೩೦ ||
ಮಣ್ಣಿನುಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ
ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ.
ವಿಜೃಂಭಿಸಿತು ರಾಮಬಾಣ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ:
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ; ಕೋದಂಡ ದಂಡವೂ ಹೀಗೆ ದಂಡ;
ಆಥವಾ ಚಕ್ರಾರಪಂಕ್ತಿ ; ಚಕಮಕಿ ಕಲ್ಲ ನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ. || ೪೦ ||
ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?
*****
