ರಾಮು ಪುಣೆಯಿಂದ ಬರುವಾಗಲೇ ಅಸಮಾಧಾನದ ಹೊರೆಯನ್ನು ಹೊತ್ತೇ ಬಂದ. ತಾನು ಇಲ್ಲದಿರುವಾಗ ಲಗ್ನ ಮಾಡಿದುದು ಅವನ ಗೌರವಕ್ಕೆ ಕುಂದು ಬಂದಂತಾಗಿತ್ತು. ಲಗ್ನ ಮಾಡಿದುದನ್ನಾದರೂ ಮರೆಯುತ್ತಿದ್ದ: ಆದರೆ ವೆಂಕಟೇಶನಿಗೆ ಶಾಂತನನ್ನು ಕೊಟ್ಟು ಲಗ್ನಮಾಡುವುದೆಂದರೆ ಅವನ ತಾಳ್ಮೆ ಮುಗಿದೇ ಹೋಗುತ್ತಿತ್ತು. ಈಗಂತೂ ವೆಂಕಟೇಶ ಮನೆ ಅಳಿಯನಾಗಿಬಿಟ್ಟಿದ್ದ. ಮೊದಲಿನ ಹಾಗೆ ಆಳು ರಂಗನಿಂದ ಮೊದಲುಗೊಂಡು ರಾಯರವರೆಗೆ ಯಾರೂ ಅಧಿಕಾರ ಮಾಡುವಹಾಗಿರಲಿಲ್ಲ. ವೆಂಕಟೇಶನಿಗೆ ಎಲ್ಲದರಲ್ಲಿಯೂ ಅಗ್ರಸ್ಥಾನ. ಇದನ್ನು ಕಂಡಮೇಲಂತೂ ರಾಮು ಕಿಡಿಕಿಡಿಯಾಗಿಬಿಟ್ಟ. ಯಾವನಿಂದ ತಾನು ಬೂಟ್ಸಿಗೆ ಬಣ್ಣಹಾಕಿಸುತ್ತಿದ್ದನೋ ಅವನನ್ನೇ ‘ಭಾವ’ ಎಂದು ಕರೆಯಬೇಕಲ್ಲಾ ಎಂದು ಬಹಳ ಹೀನಾಯಪಟ್ಟುಕೊಳ್ಳುತ್ತಿದ್ದನು. ಕೆಲಸ ಮಿಂಚಿಬಿಟ್ಟಿತ್ತು. ರಾಮು ಹಾಲಿನಲ್ಲಿ ಬಿದ್ದ ಹುಳದಂತೆ ಮಿಲಗುಟ್ಟುತ್ತಿದ್ದನು.
ಮದುವೆಯಲ್ಲಿ ಲಕ್ಷ್ಮಣ ಹಾಡಿದ್ದು; ಎಲ್ಲರೂ ಅವನನ್ನು ಪ್ರಶಂಸಿಸಿದ್ದು; ಶಾಮಣ್ಣನವರು ಅವನಿಗೆ ತಂಬೂರಿ ಓದಿಸಿದ್ದು ಎಲ್ಲವನ್ನೂ ಕೂಲಂಕಷವಾಗಿ ಕೇಳಿದನು. ತಾನು ಮದುವೆಗೆ ಬಾರದೆ ನಿಂತಿದ್ದು ಬಹಳ ಅನುಚಿತವಾಯಿತೆಂದು ನೊಂದುಕೊಂಡು ತನ್ನನ್ನೇ ಬೆದುಕೊಂಡನು. ತಾನು ಮೊದಲನೆಯ ವರ್ಷದ ಎ.ಎ.ಬಿ ಮುಗಿಸಿ ಬಂದಿದ್ದಾನೆ. ಎಂ. ಎ., ಪರೀಕ್ಷೆಗೆ ಕಾಲಾವಧಿ (ಗಿeತಿಡಿ) ತುಂಬಿ ಬಂದಿದ್ದಾನೆ. ಮುಂದಿನ ವರ್ಷ ಮುಗಿಯುತ್ತಲೂ ಎಂ.ಎ., ಎ.ಎ.ಬಿ. ಆಗುತ್ತಾನೆ. ತನಗಿಲ್ಲದ ಪುರಸ್ಕಾರ ಈ ವೆಂಕಟೇಶ, ಲಕ್ಷ್ಮಣ ಇವರುಗಳಿಗೆ ಮನೆಯಲ್ಲಿ ದೊರೆಯುತ್ತಿದೆಯಲ್ಲಾ ಎಂದು ಕೊರಗುತ್ತಲೇ “ಇರಲಿ ಕಾಲ ಬಂದೇ ಬರುತ್ತದೆ. ಅತ್ತೆಗೊಂದು ಕಾಲ ಎಂದು ಸಮಧಾನಪಟ್ಟುಕೊಂಡನು. ಆದರೆ ತನ್ನ ಅಸಮಾಧಾನವನ್ನು ನೂರೊಂದು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದನು. ಎಲೆ ಹಾಕಿ ಬಡಿಸಿ ಎಲ್ಲರೂ ಪರಿಷೇಚನೆ ಮಾಡಬೇಕು, ಆ ಹೊತ್ತಿಗೆ ಸರಿಯಾಗಿ ‘ಮುರಿತುಕೊಂಡು’ ತನ್ನ ಕೋಣೆಯಲ್ಲಿ ಕೂಡುತ್ತಿದ್ದನು. ತನ್ನನ್ನು ಯಾರೂ ಊಟಕ್ಕೆ ಕರೆಯಲಿಲ್ಲವೆಂದು ಕೋಪ. ಬಡಿಸಿದ ಅನ್ನ ಆರಿತಂಗಳಾಗುತ್ತಿತ್ತು. ರಾಯರೇ ಎದ್ದು ಹೋಗಿ ಮಗನನ್ನು ಉಪಚರಿಸಿ ಕರೆತಂದು ಎಲೆಯ ಮುಂದೆ ಕೋಡಿಸಬೇಕಾಗುತ್ತಿತ್ತು.
ಸ್ವಲ್ಪ ಬಡಿಸಿದರೆ “ಅರೆಹೊಟ್ಟೆ ಹಾಕಿ ಸಾಯಿಸುತ್ತೀರೇನು?”
ಎನ್ನುತ್ತಿದ್ದನು. ನಾಲ್ಕು ಅಗಳು ಹೆಚ್ಚು ಬಿದ್ದಿತೆಂದರೆ “ಬಿಸಿಲು ಮಾರೀಗೆ ಬಡಿಸಿದಹಾಗೆ ಬಡಿಸುತ್ತೀರಲ್ಲಾ” ಎನ್ನುತ್ತಿದ್ದನು. ಮದ್ಯಾನ್ಹದ ಫಲಾಹಾರಕ್ಕೆ ಉಪ್ಪಿಟ್ಟು ಮಾಡಿದರೆ ಸಜ್ಜಿಗೆಯನ್ನೇತಕ್ಕೆ ಮಾಡಲಿಲ್ಲಎಂದು ರೇಗುತ್ತಿದ್ದನು. ಸಜ್ಜಿಗೆಯನ್ನು ಮಾಡಿದರೆ ಉಪ್ಪಿಟ್ಟನ್ನೇತಕ್ಕೆ ಮಾಡಲಿಲ್ಲ ಎಂದು ರೇಗುತ್ತಿದ್ದನು. ರಾಮುವಿನ ಕ್ಷಣಚಿತ್ತಕ್ಕೆ ಹೊಂದಿಕೊಂಡು ಹೋಗುವುದು ಅವನ ತಾಯಿಗೇ ಸಾಧ್ಯವಾಗುತ್ತಿರಲಿಲ್ಲ. ಮೀನಾಕ್ಷಮ್ಮನವರು ರಾಮುವಿಗೋಸ್ಕರ ಅವಲತ್ತುಕೊಂಡು ಹಣ್ಣಾಗಿ ಹೋಗಿದ್ದರು. ಕೊನೆಗೆ ಹಾಸಿಗೆ ಹಿಡಿದೇ ಮಲಗಿಬಿಟ್ಟರು. ಡಾಕ್ಟರು ಪರೀಕ್ಷೆ ಮಾಡಿ “ಹೃದ್ರೋಗ, ಉಲ್ಬಣಾವಸ್ಥೆಗೆ ಬರುತ್ತಾ ಇದೆ. ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು” ಎಂದು ಹೇಳಿ ಹೋದರು. ಲಕ್ಷ್ಮಣನ ತಲೆಯ ಮೇಲೆ ಆಕಾಶವೇ ಕಳಚಿಬಿದ್ದಂತಾಯಿತು. ಡಾಕ್ಟರ ಅಭಿಪ್ರಾಯವನ್ನು ಕೇಳಿದ ರಾಯರು ಮರಣದಂಡನೆಯನ್ನು ಕೇಳಿದ ಕೆದಿಯಂತಾದರು. ಮೀನಾಕ್ಷಮ್ಮನವರೇ ಎಲ್ಲರಿಗೂ ಸಮಾಧಾನ ಹೇಳಿದರು. ರಾಯರನ್ನು ಉದ್ದೇಶಿಸಿ
“ಬೇಗ ರಾಮುಗೂ ಲಚ್ಚಿಗೂ ಮದುವೆ ಮಾಡಿಬಿಡೀಂದ್ರೆ. ಮಾಘದಲ್ಲಿಯೋ ಶ್ರಾವಣದಲ್ಲಿಯೋ ಲಗ್ನಗಳಿವೆ. ನನ್ನ ಕಣ್ಣು ಮುಂದೆ ಅದೊಂದು ಆಗಿಹೋಗಲಿ.” “ನಿನಗೆ ಸ್ವಲ್ಪ ಹುಷಾರಾಗಲಿ ಮೀನಾ. ಖಂಡಿತವಾಗಿಯೂ ಮಾಡೋಣ. ನೀನೇ ಮಲಗಿದ್ದರೆ ಎದ್ದು ಓಡಿಯಾಡುವವರು ಯಾರು?” “ನನಗೇನು ಆಗಿದೇಂದ್ರೆ. ಈ ಡಾಕ್ಟರುಗಳು ಹೆದರಿಸುತ್ತಾರೆ. ನೀವು ಹೆದರುತ್ತೀರಿ . ಲಗ್ನವೊಂದು ನಿಸ್ಚಯಿಸಿ ನೋಡುವಿರಂತೆ ನನಗೆ ಖಾಹಿಲೆ ಇರುತ್ತದೆಯೋ ಓಡುತ್ತದೆಯೋ ಅನ್ನುವುದನ್ನು ” ಎನ್ನುತ್ತಿದ್ದರು. ಶಾಂತನಿಗೆ ಗಂಡು ನೋಡಿದ ಹುರುಪಿಗಿಂತಲೂ ನೂರ್ಮಡಿಯಾದ ಹುರುಪಿನಿಂದ ಹೆಣ್ಣು ಹುಡುಕಲು ತೊಡಗಿದರು. ರಾಯರ ಮಕ್ಕಳಿಗೆ ಹೆಣ್ಣು ಕೊಡಲು ಹತ್ತಾರು ಜನ ಮೊದಲೇ ಮುಂದೆ ಬಂದಿದ್ದರು. ಅವರು ಕೊಟ್ಟಿದ್ದ ಜಾತಕಗಳು ರಾಯರ ಸಂದೂಕದಲ್ಲಿ ಭದ್ರವಾಗಿದ್ದವು.
ರಾಯರ ಮನೆಯಲ್ಲಿ ಪ್ರತಿ ದಿವಸವೂ ಹೆಣ್ಣಿನ ಮಾತೇ. ದಿನವೂ ಒಬ್ಬಬ್ಬರೂ ಹೆಣ್ಣುಗಳನ್ನು ಕರೆತಂದು ತೋರಿಸುತ್ತಿದ್ದರು. ರಾಮು ಏನಾದರೂ ಒಂದು ಕೊರತೆ ಕಂಡು ಒಲ್ಲೆ ಎನ್ನುತ್ತಿದ್ದನು. ಒಂದಕ್ಕೆ ಮುಖ ಕಪ್ಪು ಮಗದೊಂದು ದೊಂಬರ ಗಣೆಯಿದ್ದ ಹಾಗೆ ಇದೆ ಎಂದು ತಿರಸ್ಕರಿಸುತ್ತಿದ್ದನು. ಸಾವಿತ್ರಮ್ಮನವರು ಬೇಸತ್ತರು.
“ನೀನು ಹೀಗೆ ಮಾಡುತ್ತಾ ಇರು ರಾಮು. ಕೊನೆಗೆ ನಿನಗೆ ಯಾವ ಹೆಣ್ಣೂ ಸಿಕ್ಕುವುದಿಲ್ಲ, ಮದುವೆನೂ ಆಗುವುದಿಲ್ಲ. ”
“ಆಗದಿದ್ದರೆ ಚಿಂತೆಯೇ ಇಲ್ಲ ಬಿಡಮ್ಮ. ಹೆಣ್ಣುಗಳಿಗೇನು ಈಕಾಲದಲ್ಲಿ. ನಾಯಿ ಕೊಡೆಗಳು ಇದ್ದ ಹಾಗಿವೆ.”
“ಇಷ್ಟು ಸಣ್ಣ ಮಾತುಗಳನ್ನು ಆಡಬಾರದಪ್ಪ. ಶಾಂತನ್ನ ಮದುವೆ ನಿಸ್ಚಯಿಸುವಾಗ ನಮ್ಮನ್ನೂ ಯಾರಾದರೂ ಹೀಗೆ ಹಿಯಾಳಿಸಿದ್ರೆ”
“ಹೋಗ್ಲಿ ಬಿಡಮ್ಮ”
“ಬಿಡೋ ಮಾತಲ್ಲ. ಸಾಯಂಕಾಲಕ್ಕೆ ಚಿಕ್ಕಮಗಳೂರು ಹಿರಣ್ಣನಪ್ಪನವರು ಮಗಳನ್ನು ಕರೆದು ಕೊಂಡು ಬರುತ್ತಾರೆ. ಎಲ್ಲೂ ಹೋಗಬೇಡ ನೋಡಿದವರೆಲ್ಲಾ ಹೆಣ್ಣು ಚೆನ್ನಾಗಿದೆ ಎಂದು ಹೇಳುತ್ತಾರೆ ಒಪ್ಪಿಕೊಂಡು ಬಿಡು. ಅವರು ತುಂಬಾ ಅನುಕೂಲಸ್ಥರು ಲಕ್ಷಾಂತರ ರೂಪಾಯಿ ಸ್ಥಿತಿಯಿದೆ. ಬಾರೀ ಕಾಫಿ ಪ್ಲಾಂಟg, ಯೋಚನೆ ಮಾಡಪ್ಪ.’ ರಾಮು ಯೋಚನೆ ಮಾಡಿಯೇ ಇದ್ದ ನಿರ್ಧಾರವನ್ನು ಯೋಚಿಸಿಕೊಂಡಿದ್ದ, ಹಿರಣ್ಣನಪ್ಪನವರ ಶ್ರೀಮಂತಿಕೆಯ ವಿಚಾರ ಬಹಳ ಕೇಳಿದ್ದ. ಮಲೆನಾಡಿನ ಕಾಫಿ ವ್ಯವಸಾಯಗಾರರ ಪರವಾಗಿ ಹಿರಣ್ಣನಪ್ಪನವರು ನ್ಯಾಯವಿದಾಯಕ ಸಭೆಯ ಸದಸ್ಯರಾಗಿ ಬರುತ್ತಿದ್ದರು. ಸರ್ಕಾರದಲ್ಲಿಯೂ ಅವರ ವಿಚಾರ ತುಂಬಾ ಗೌರವವಿತ್ತು. ದೊಡ್ಡ ದೊಡ್ಡ ಅಧಿಕಾರಿಗಳು ಚಿಕ್ಕಮಗಳೂರಿಗೆ ಹೋದಾಗಲೆಲ್ಲಾ ಅವರ ಆಥಿತ್ಯವನ್ನು ಹಿರಣ್ಣಪ್ಪನವರೇ ನೋಡಿಕೊಳ್ಳುತ್ತಿದ್ದರು. ಅವರಿಗೆ ಸರಕಾರ, ಸಾಹುಕಾರ ಎರಡೂ ವರ್ಗದಲ್ಲಿಯೂ ಬೇಕಾದಷ್ಟು ಜನ ಸ್ನೇಹಿತರಿದ್ದರು.
ರಾಯರಿಗೆ ಸ್ವಲ್ಪ ಯೋಚನೆಗಿಟ್ಟುಕೊಂಡಿತು. ದೊಡ್ಡವರು ತಾವೇ ಸಂಬಂದ ಬೆಳೆಸಬೇಕೆಂದು ಬಂದಿರುವಾಗ ರಾಮು ‘ಯದ್ವಾ ತದ್ವಾ’ ಹೇಳಿ ಕಳುಹಿಸಿಬಿಟ್ಟರೇನು ಮಾಡುವುದು? ತಮ್ಮ ದರ್ಪವನ್ನು ತೋರಿ, ಮಗನಿಗೆ ಇಚ್ಚೆಯಿಲ್ಲದಿದ್ದರೂ ಅವನಿಗೆ ಬೇಡದ ಹೆಣ್ಣನ್ನು ಕಟ್ಟುವುದಕ್ಕೆ ರಾಯರಿಗೆ ಮನಸ್ಸಿಲ್ಲ. ತಾವೂ ಹಿರಣ್ಣನಪ್ಪನವರ ಮಗಳನ್ನು ನೋಡಿರಲಿಲ್ಲ.
ರಾಮು ಏನು ಹೇಳಬಹುದೆಂಬುದನ್ನೇ ಊಹಿಸಲು ಸಾಧ್ಯವಾಗಿರಲಿಲ್ಲ. ಶಾಮಣ್ಣನವರನ್ನು ಕರೆದು
“ಹಿರಣ್ಣಪ್ಪನವರ ಮಗಳನ್ನು ನೀನು ನೋಡಿದ್ದೀಯಾ ಶಾಮಿ” ಎಂದು ಕೇಳಿದರು.
“ಹಿಂದೆ ನೋಡಿದ್ದದ್ದು ಸ್ವಾಮಿ. ಮೂರು ನಾಲಕ್ಕು ವರ್ಷವಾಗಿರಬಹುದು”
“ಏನು ಹೇಗಿದೆ”
“ಇದೆ ಅಷ್ಟೆ. ಗುಂಡಗೆ ಚೆಂಡಿದ್ದ ಹಾಗಿದೆ. ಎರಡು ಕೆನ್ನೆಯೂ ಎರಡು ಕಿತ್ತಲೆ ಹಣ್ಣು, ಸಣ್ಣ ಹಣೆ, ಕಿವಿಗಳೆರಡೂ ಆ ಮುಖಕ್ಕೆ ದೊಡ್ಡದಾಗಿ ಕಾಣುತ್ತವೆ. ಏನೋ ಒಂದು ರೀತಿ ಗುಜ್ಜಾನೆ ಮರಿ ಇದ್ದ ಹಾಗಿದೆ. ಮುಖ್ಯ ದೊಡ್ಡವರ ಮನೆ ಹೆಣ್ಣು. ತುಂಬಾ ಒಡವೆ ಹಾಕಿದರೆ ಐಬೆಲ್ಲ ಮುಚ್ಚಿ ಹೋಗುತ್ತದೆ”
“ಇದನ್ನು ರಾಮು ಒಪ್ಪುತ್ತಾನೆಯೋ?”
“ಆ ಸಂಶಯ ತಮಗೇಕೆ ಸ್ವಾಮಿ! ಈ ಸಂಬಂದವನ್ನು ರಾಮು ಖಂಡಿತ ಒಪ್ಪೇ ಒಪ್ಪಿಕೊಳ್ಳುತ್ತಾನೆ.”
“ಇದೇನೋ ಶಾಮಿ. ಎಂತೆಂಥಾ ಹೆಣ್ಣ್ಮಗಳೋ ಬಂದು ಹೋದವು. ಇವುಗಳಲ್ಲೆಲ್ಲಾ ಒಂದಲ್ಲ ಒಂದು ಕುಂದು ತೆಗೆಯುತ್ತಿದ್ದ ಇನ್ನು ಇದಕ್ಕೆ ಒಪ್ಪುತ್ತಾನೆಯೇ?”
“ಲೋಕವೇ ಹಾಗೆ ಸ್ವಾಮಿ. ಬಹಳ ‘ಕುಸಿಬಿಷ್ಟಿ’ ಯಾರು ಮಾಡುತ್ತಿರುತ್ತಾರೆ ಅವರು ಒಪ್ಪೋದು ಇಂತಹ, ಹೆಣ್ಣುಗಳನ್ನೇ ನಾನು ಏನು ಹೇಳಿದೆಯೆಂದು ಸಂಜೆಗೆ ನೀವೇ ನೋಡಿ.”
ಶಾಮಣ್ಣನವರ ಊಹೆ ನಿಜವಾಯಿತು. ರಾಮು ಹಿರಣ್ಣನಪ್ಪನವರ ಮಗಳನ್ನು ಒಪ್ಪಿದ. ಮದುವೆ ವೆಶಾಖಕ್ಕೆಂದು ನಿರ್ಣಯವಾಗಿಹೋಯಿತು. ಲಗ್ನ ಪತ್ರಿಕೆಯನ್ನು ಬರೆಯಿಸಿ ಅಚ್ಚಿಗೆ ಕೊಟ್ಟು ಮುಂದಿನ ವ್ಯವಸ್ತೆಗಳನ್ನು ನೋಡಿಕೊಳ್ಳುವುದಕ್ಕಾಗಿ ಹಿರಣ್ಣಪ್ಪನವರು ಊರಿಗೆ ಪ್ರಯಾಣ ಬೆಳಸಿದರು.
ಅಂತೂ ಆ ವರ್ಷ ರಾಯರ ಮನೆಯಲ್ಲಿ ಎಲ್ಲರಿಗೂ ಗುರುಬಲ ಪ್ರಬಲಿಸಿತೆಂದು ಕಾಣುತ್ತದೆ. ರಾಮು ಮದುವೆ ಸಂದರ್ಭದಲ್ಲಿ ಲಕ್ಶ್ಮಣನ ಮದುವೆಯೂ ನಿಶ್ಚಯವಾಯಿತು.
ವೆಂಕಟಸುಬ್ಬಯ್ಯನವರು ಬೆಂಗಳೂರು ಒಂದು ಬ್ಯಾಂಕಿನಲ್ಲಿ ಖಜಾಂಚಿ (ಜಛಿxಟಟಿeತಿ ) ಆಗಿದ್ದರು. ಅವರಿಗೂ ಹಿರಣ್ಣಪ್ಪನವರಿಗೂ ಹತ್ತಿರದ ಸಂಬಂಧ. ಹಿರಣ್ಣಪ್ಪನವರ ಮನೆಯ ಲಗ್ನಕ್ಕೆ ಬಂದಿದ್ದಾಗ ತಮ್ಮ ಮಗಳ ವಿಷಯವನ್ನೂ ಪ್ರಸ್ತಾಪ ಮಾಡಿದರು. ಹುಡುಗಿಯೂ ಲಗ್ನಕ್ಕೆ ಬಂದಿತ್ತು. ಎಲ್ಲರೂ ನೋಡಿದರು. ಹಾಡೂ ಹಸೆ ಹೇಳಿಸಿದರು. ಮೀನಾಕ್ಷಮ್ಮ ಹುಡುಗಿಯನ್ನು ಹತ್ತಿರ ಕೂಡಿಸಿಕೊಂಡು ಮಾತನಾಡಿಸಿ ನೋಡಿದರು.
“ನಿನ್ನ ಹೆಸರೇನಮ್ಮ.”
“ಜಯಲಕ್ಷ್ಮಿ.”
“ಸ್ಕೂಲಿಗೆ ಹೋಗುತ್ತಾ ಇದ್ದೀಯಾ?”
“ಹೋಗುತ್ತಾ ಇದ್ದೇನಮ್ಮ. ಹೋದ ವರ್ಷ ಲೋವರಿ ಸೆಕೆಂಡರಿ ಪರೀಕ್ಷೆಗೆ ಕಟ್ಟಿದ್ದೆ. ಪಾಸಾಯಿತು. ಈ ವರ್ಷ ನಾಲ್ಕನೆಯ ಫಾರಂನಲ್ಲಿ ಓದುತ್ತಾ ಇದ್ದೇನೆ.”
“ನಿಮ್ಮಪ್ಪ ಅಮ್ಮಾ ನಿನಗೆ ಮದುವೆ ಮಾಡಬೇಕೆಂದಿದ್ದಾರೆ. ನಿನ್ನ ಇಚ್ಚೆ ಹೇಗಿದೆ.?”
ಹುಡುಗಿ ನಾಚಿಕೆಯಿಂದ ತಲೆಬಾಗಿದಳು.
“ನಮ್ಮ ಹುಡುಗನನ್ನು ನೋಡಿದ್ದೀಯಾ ಜಯಮ್ಮಾ?”
“ಇ.. ಲ್ಲ.. ” ಎಂದಳು.
ಮೀನಾಕ್ಷಮ್ಮನವರು ಮಗನನ್ನು ಕರೆದು ಹತ್ತಿರ ಕೂಡಿಸಿಕೊಂಡರು.
“ನೋಡು ಜಯಾ. ಇವನೇ ಲಕ್ಷ್ಮಣ – ನನ್ನ ಮಗ. ನಮ್ಮ ರಾಮು ಹಾಗೆ ಜಾಣನಲ್ಲ. ಶುದ್ಧ ದಡ್ಡ. ಸ್ಕೂಲಿಗೆ ಹೋಗುವುದನ್ನು ಬಿಟ್ಟು ಬಿಟ್ಟು ಸಂಗೀತ ಕಲಿಯೋದಕ್ಕೆ ಆರಂಭಿಸಿದ್ದಾನೆ. ಯೋಚನೆ ಮಾಡು ನೀನು ಓದಿದ ಹುಡುಗಿ – ಇಂತಹ ದಡ್ಡನ್ನ ಮದುವೆಯಾಗುತ್ತೀಯೋ ಹೇಗೆ
“ಏನಮ್ಮಾ ,ಹೊರಗಿನವರ ಎದುರಿಗೆಲ್ಲಾ ನನ್ನ ದಡ್ಡ- ದಡ್ಡ ಎಂದು ಅವಮಾನ ಮಾಡುತ್ತೀ”
ಎಂದು ಲಕ್ಷ್ಮಣ ನಗುನಗುತ್ತಾ ತಾಯಿಯನ್ನು ಪ್ರಶ್ನಿಸಿದ.
“ಹೌದಪ್ಪಾ. ನೀನು ಬಹಳ ಪರೀಕ್ಷೆ ಮಾಡಿದ್ದೀ. ತುಂಬ ಜಾಣ ಎಂದು ಸುಳ್ಳು ಹೇಳಲೇ, ಜಯಮ್ಮಾ? ಪರೀಕ್ಷೆಗಳನ್ನು ಮಾಡಿ ಜಾಣರಾಗಬಹುದು. ಆದರೆ ದಡ್ಡನಾಗಿ ನಮ್ಮ ಲಚ್ಚಿ ಹಾಗೆ ಹಾಡೋದು ಬಹಳ ಕಷ್ಟ. ತಂಬೂರಿ ಹಿಡಿದು ಅವನು ಹಾಡುವುದಕ್ಕೆ ಕುಳಿತರೆ ಸಾಕ್ಷಾv ಶಾರದಮ್ಮನವರನ್ನು ಕಂಡ ಹಾಗೆ ಆಗುತ್ತೆ.”
“ನನು ಕೇಳಬಹುದೆ?”
ಎಂದು ಜಯಮ್ಮ ಕೇಳಿದಳು. ಲಕ್ಷ್ಮಣ ಮೆಲ್ಲನೆ ಏಳಲಿಕ್ಕೆ ಹೊರಟ. ತಾಯಿ ಅವನ ಕೆಹಿಡಿದು ಕುಳ್ಳಿರಿಸಿದರು.
“ನಿನಗೇನಾದರೂ ಸಂಗೀತ ಪಾಠವಾಗಿದೆಯೇನೆ ತಾಯಿ?”
“ಆಗಿದೆಯಮ್ಮ. ಸ್ವಲ್ಪ ವೀಣೆ ಹೇಳಿಸಿದ್ದಾರೆ.”
“ವೀಣೆ ಪಾಠವೇ? ನಾನು ಕೇಳಬಹುದೇ.”
ಎಂದು ಲಕ್ಷ್ಮಣ ಪ್ರಶ್ನಿಸಿದ. ಮೀನಾಕ್ಷಮ್ಮನವರು ಅಣಕಿಸುವ ಧ್ವನಿಯಲ್ಲಿ
“ಕೇಳಬಹುದು. ನೀನು ಮಾತ್ರ ಯಾರೆದುರಿಗೂ ಹಾಡಬೇಡ. ಮಿಕ್ಕವರೆಲ್ಲಾ ನಿನ್ನ ಮುಂದೆ ಹಾಡಬೇಕು. ಜಯಮ್ಮ ಹಾಡುತ್ತೇನೆಂದರೂ ನಾನೇ ಬೇಡವೆನ್ನುತ್ತೇನೆ.”
“ನಿನಗೆ ನನ್ನ ಕಂಡರೆ ಯಾವಾಗಲೂ ಅಷ್ಟಷ್ಟೇ ಕಣಮ್ಮ. ಬೇಗ ಬೇರೆಯವರ ಕಡೆ ಸೇರಿಕೊಳ್ಳುತ್ತೀ.”
“ಹೌದು ಲಚ್ಚಿ ಏತಕ್ಕೆ ಗೊತ್ತೆ? ನೀನೂ ಕೇಳೆ ತಾಯಿ ಜಯಮ್ಮ. ಲಚ್ಚಿ ನಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗನೇ ಅಲ್ಲ. ನಮ್ಮೂರಿನಲ್ಲಿ ಕ್ಷಾಮ ಬಂದಾಗ ಯಾರೋ ಬಡದಂಪತಿಗಳು ಒಂದು ಮಗು ತಂದರು, ‘ಅಯ್ಯೋ’ ಅಂದುಕೊಂಡು ಒಂದು ಮೊರ ರಾಗಿ ಕಟ್ಟು ಕೊಂಡುಕೊಂಡೆ. ನಮ್ಮ ಮಗನೆಂದೇ ಭಾವಿಸಿ ಸಾಕಿ ಸಲಹಿ ಇಷ್ಟು ದೊಡ್ಡವನನ್ನಾಗಿ ಮಾಡಿದೆವು.”
ಎಂದು ಹೇಳಿ ಕಿಲಕಿಲನೆ ನಕ್ಕರು. ಲಚ್ಚಿಗೂ ಹಿಡಿಸಲಾರದಷ್ಟು ನಗು ಬಂದಿತು. ಜಯಮ್ಮ ಮುಖವನ್ನು ಮುಚ್ಚಿಕೊಂಡು ನಗುತ್ತಿದ್ದಳು. ಲಕ್ಷ್ಮಣ ಮೆಲ್ಲನೆ ತಾಯಿಯ ಕಿವಿಯಲ್ಲಿ
“ವೀಣೆ ತರ ಹೇಳಮ್ಮ.”
“ಹೇಳುತ್ತೇನೆ. ನೀನು ಒಂದು ಕೀರ್ತನೆ ಹಾಡುವ ಹಾಗಿದ್ದರೆ.”
“ಇಲ್ಲಿ ಬೇಡಮ್ಮ. ಇಲ್ಲೇತಕ್ಕೆ ನನ್ನ ಮಾನ ಪರೀಕ್ಷೆ!”
“ಪರೀಕ್ಷೇಲಿ ನೀನು: ಸೋಲುವುದಿಲ್ಲ ಎಂದು ಗೊತ್ತು ಅದಕ್ಕೋಸ್ಕರ. ಇಷ್ಟೊಂದು ನನ್ನ ಕೆಯ್ಯಲ್ಲೇ ಉಪಚಾರ ಹೇಳಿಸಿಕೊಳ್ಳುತ್ತೀಯಲ್ಲೋ ಲಚ್ಚಿ…”
“ಆಗಲಮ್ಮ… ನಿನ್ನ ಇಷ್ಟ.”
ಎಂದು ಒಪ್ಪಿದನು. ಜಯಮ್ಮ ವೀಣೆಯನ್ನು ತಂದು ಮೂರು ನಾಲ್ಕು ಕೀರ್ತನೆ ನುಡಿಸಿ ತೋರಿಸಿದಳು. ಅವಳು ‘ಬ್ರೋಚೇವಾ ರೆವರುವಾ, ರಘುವರಾ’ ಕೀರ್ತನೆ ಹೇಳುವಾಗ ಲಕ್ಷ್ಮಣನ ಕಣ್ಣಿನಲ್ಲಿ ನೀರು ಮಿಡಿಯಿತು. ಆ ಮಾತುಗಳು ತನಗಾಗಿಯೇ ನಿರ್ಮಿತವಾಗಿದ್ದವೋ ಎಂದು ಯೋಚಿಸಿದನು. ಜಯಮ್ಮನ ಹಾಡುಗಾರಿಕೆ ಮುಗಿಯಲು ಮೀನಾಕ್ಷಮ್ಮನವರು ವೀಣೆಯನ್ನು ಲಕ್ಷ್ಮಣನ ಕೆಗಿತ್ತರು. ಲಕ್ಷ್ಮಣ ಅದನ್ನು ಶೃತಿಮಾಡಿ, ತಂಬೂರಿಯನ್ನಾಗಿ ಉಪಯೋಗಿಸಿಕೊಂಡು ‘ನಂಬಿ ಕೆಟ್ಟವರಿಲ್ಲ ಶ್ರೀಹರಿಯ’ ಎನ್ನುವ ದೇವರ ನಾಮವನ್ನು ಹಾಡಿದನು. ಮೀನಾಕ್ಷಮ್ಮನವರು ಅಲ್ಲಿಗೇ ಸುಮ್ಮನಾಗಲಿಲ್ಲ.
“ಲಕ್ಷಣವಾಗಿ ರಾಗ ಹಾಡಿ ಯಾವದಾದರೂ ಕೀರ್ತನೆ ಹಾಡಪ್ಪಾ.”
ಎಂದರು. ಮಧ್ಯಮಾವತಿ ರಾಗವನ್ನು ಹಾಡಿ ‘ಅಲಕಲಲ್ಲ’ ಕೀರ್ತನೆಯನ್ನು ಹಾಡಿ ಮುಗಿಸಿದನು. ಹಾಡು ಮುಗಿಯುವ ಹೊತ್ತಿಗೆ ಅರ್ಧ ಮದುವೆಯ ಮನೆಯೇ ಕೋಣೆಯ ತುಂಬ ತುಂಬಿತ್ತು. ಲಕ್ಷ್ಮಣ ಸುತ್ತಲೂ ನೋಡಿ ನಾಚಿದನು. ಹಿರಣ್ಣಪ್ಪನವರು ಕಾಣಿಸಿಕೊಂಡರು.
“ಹಾಗೇ ಸ್ವಲ್ಪ ಅಠಾಣಾನೂ ಅಂದರೆ…”
ಅರೆಮನಸ್ಸಿನಿಂದ ಶೃತಿಯನ್ನು ಮೀಟುತ್ತಾ ‘ಅನುಪಮ ಗುಣಾಂಬುದಿ’ ಕೀರ್ತನೆಯನ್ನು ಹಾಡಿ ಮುಗಿಸಿದನು. ಎಲ್ಲರೂ ‘ಭಲೆ ಭಲೆ’ಯೆಂದರು. ಹಿರಣ್ಣಪ್ಪನವರು “ಸಂಗೀತವೆಂದರೆ ಇದು ಕಣಪ್ಪಾ ಎಲ್ಲಾರೂ ಹಾಡುತ್ತಾರೆ” ಎಂದರು.
ಗುಂಪು ಚೆದರಿದ ಮೇಲೆ ಜಯಮ್ಮನನ್ನು ಒಳಕ್ಕೆ ಕಳುಹಿಸಿ ಕೊಟ್ಟು ಮೀನಾಕ್ಷಮ್ಮನವರು
“ಲಚ್ಚಿ. ಹೆಣ್ಣು ಒಪ್ಪಿಗೆಯೇನಪ್ಪ?”ಎಂದರು.
“ನಿನಗೆ ಒಪ್ಪಿಗೆಯಾದರೆ ಆಯಿತಮ್ಮ. ನನ್ನೇನು ಕೇಳುತ್ತೀ.”
“ಚಿನ್ನದಂತಹ ಹುಡುಗಿ. ಎಷ್ಟು ವಿನಯ. ಎಷ್ಟು ಗಂಭೀರ ಸ್ವಲ್ಪವೂ ಕೊಂಕಿಲ್ಲ ಪ್ರತಿಷ್ಠೆಯಿಲ್ಲ. ನನಗಂತೂ ತುಂಬ ಒಪ್ಪು.”
“ಹಾಗಾದರೂ ನನಗೂ ….”
“ಅವರಿಗೆ ತಿಳಿಸುತ್ತೇನೆ.”
ಎಂದು ಎದ್ದರು. ಲಚ್ಚಿಯೂ ಎದ್ದು
“ಅಮ್ಮ… ಅಮ್ಮ…” ಎಂದನು.
“ಏನು ಮಗೂ?”
“ಆಗ… ರಾಗಿಕೊಟ್ಟು ನನ್ನನ್ನು ತೆಗೆದುಕೊಂಡೆ ಎಂದು ಹೇಳಿದೆಯಲ್ಲಾ. ಅದು ನಿಜವೇ?”
ಮೀನಾಕ್ಷಮ್ಮನವರು ನಕ್ಕು ಮಗನ ಗಲ್ಲಗಳನ್ನು ನೇವರಿಸಿದರು. ಹುಡುಗಿ ನಾಚುತ್ತಾಯಿತ್ತು. ಸ್ವಲ್ಪ ಸಲಿಗೆ ಬರಲಿಯೆಂದು ತಮಾಷೆಗಂದೆ. ಎಷ್ಟು ವಯಸ್ಸಾದರೂ ನೀನು ಶುದ್ಧ ಮಗು ಕಣೋ ಲಚ್ಚಿ.”
“ಹೌದಮ್ಮ. ನಿನ್ನ ಮುಂದೆ ಯಾವಾಗಲೂ ಮಗುವಾಗಿರೋದೇ ನನಗೊಂದು ಹೆಮ್ಮೆ” ಎಂದನು.
ಮದುವೆಯ ವಿಷಯ ಮೊದಲು ಪ್ರಸ್ತಾಪ ಮಾಡಿದ ವೆಂಕಟಸುಬ್ಬಯ್ಯನವರು ಮತ್ತೆ ಆ ಮಾತೇ ಎತ್ತಿರಲಿಲ್ಲ. ಲಕ್ಷ್ಮಣನ ಹಾಡುಗಾರಿಕೆ ಕೇಳಿದ ಮೇಲೆ ಹಿರಣ್ಣಪ್ಪನವರು ಈ ಸಂಬಂಧವನ್ನು ಹೇಗಾದರೂ ಮಾಡಿಸಬೇಕೆಂದು ಉತ್ಸುಕರಾದರು.
“ಏನು ವೆಂಕಟಸುಬ್ಬೂ. ಮದುವೆ ಮಾತು ಅಲ್ಲಿಗೇ ನಿಲ್ಲಿಸಿದೆ ರಾಯರ ಹತ್ತಿರ ಪ್ರಸ್ತಾಪ ಮಾಡಲೇನು?”
“ತಡೀರಿ ಮಾವಯ್ಯ. ಅವಳನ್ನು ಇನ್ನೊಂದು ಸಲ ಕೇಳಿ ಬಿಟ್ಟು ನಿಶ್ಚಯಿಸೋಣ.”
“ಅನುಮಾನವೇನು? ಸಂದೇಹಗಳೇನಾದರೂ ಇದ್ದರೆ ಬೇಗ ನಿವೃತ್ತಿಯಾಗಿ ಹೋಗಲಿ.”
“ಎಲ್ಲಾ ಸರಿಯಾಗಿದೆ.”
“ಹಾಗಾದರೆ…”
“ಹುಡುಗ ಹೆಚ್ಚು ಓದಿದೋನಲ್ಲ ಎನ್ನುವದೊಂದು ಕೊರತೆ. ಮಗಳನ್ನು ಎಂ.ಎ. ಪಾಸುಮಾಡಿದವನಿಗೆ ಕೊಡಬೇಕು ಎನ್ನೋದು ಅವಳ ಬಹಳ ದಿವಸದ ಆಸೆಯಾಗಿತ್ತು.”
“ಅಯ್ಯೋ ಹುಚ್ಚ. ನಿನ್ನ ಒಣ ಎಂ.ಎ. ಕಟ್ಕೊಂಡೇನು ಮಣ್ಣು ಹೊಯ್ದುಕೊಳ್ಳೋದೇನಯ್ಯಾ. ಆ ಹುಡುಗ ಪಿ.ಎZ.ಡಿ. ಮಾಡಿದ್ದಾನೆ. ನಿನ್ನೆ ಹಾಡಿದ – ನೀನು ಕೇಳಬೇಕಾಗಿತ್ತು. ಜಯಾನೂ ಕೇಳಿದಳಲ್ಲಾ ಅವಳು ಏನನ್ನುತ್ತಾಳೆ?”
“ಅವಳು ಅನ್ನುವುದೇ ನನ್ನ ಪ್ರಾಣಕ್ಕೆ ಬಂದಿದೆ,. “ಇವರನ್ನಲ್ಲದೆ ನಾನು ಯಾರನ್ನೂ ಮದುವೆಯಾಗುವುದೇ ಇಲ್ಲ” ಎಂದು ಹೇಳುತ್ತಾಳೆ. ಮಗೂ – ಪಾಪ ಅದಕ್ಕೇನು ಗೊತ್ತಾಗತ್ತೆ?”
“ಈ ವಿಷಯಗಳಲ್ಲಿ ಮಕ್ಕಳಿಗೆ ತಿಳಿಯುವಷ್ಟು ನನಗೂ ನಿನಗೂ ತಿಳಿದರೆ ಸಾಕಾಗಿದೆ. ನೋಡು, ಜಯ ಜಾಣೆ. ಏನಾದರೂ ಹೆಚ್ಚು ಕಡಿಮೆಬಂದರೂ ಸರಿಹೊಂದಿಸಿಕೊಂಡು ಹೋಗೋ ಯೋಗ್ಯತೆ ಅವಳಿಗಿದೆ. ನಾನು ತಿಳಿದ ರೀತಿಯಲ್ಲಿ ಹುಡುಗನೂ ಜಯನನ್ನು ಒಪ್ಪಿದ ಹಾಗೆ ಕಾಣುತ್ತದೆ. ಎಲ್ಲಕ್ಕೂ ದೊಡ್ಡ ವಿಷಯವೆಂದರೆ ಜಯನಿಗೆ ಮೀನಾಕ್ಷಮ್ಮನವರಂತಹ ಅತ್ತೆ ಸಿಗುವುದು. ಅದಕ್ಕಿಂತ ಹೆಚ್ಚಿನ ಪುಣ್ಯ, ವಿದ್ಯಾಭ್ಯಾಸ ಬೇರೆ ಬೇಕೇನಯ್ಯಾ. ನಮ್ಮ ಮನೇ ಮದುವೆಯಲ್ಲೇ ನೋಡುತ್ತಾ ಇದ್ದೀಯಲ್ಲಾ. ಮಹಾ ತಾಯಿ ಹೇಗೆ ನಡೆದುಕೊಳ್ಳುತ್ತಿದ್ದಾರೆನ್ನುವುದು. ಇಂತಹ ಬೀಗರು ನೂರು ಜನವಾದರೂ ಸುಧಾರಿಸಬಹುದಪ್ಪಾ. ನನ್ನ ಮಾತು ಕೇಳು – ಈ ಮದುವೆಯನ್ನು ನಿಶ್ಚಯಿಸಿ ಭಾದ್ರಪದದಲ್ಲಿ ಲಗ್ನವಿದೆ, ಮಂಗಳಕಾರ್ಯ ಮುಗಿಸಿಬಿಡು.”
ಹಿರಣ್ಯಪ್ಪನವರ ಮಾತು ತೆಗೆದು ಹಾಕುವ ಹಾಗಿರಲಿಲ್ಲ. ಮನೆಯಲ್ಲಿ ಮಾತ್ರವಲ್ಲದೆ ಕುಲದಲ್ಲಿಯೇ ಅವರ ಸ್ಥಾನ ದೊಡ್ಡದಾಗಿತ್ತು. ವೆಂಕಟಸುಬ್ಬಯ್ಯ ದೊಡ್ಡ ಮನಸ್ಸು ಮಾಡಿ ‘ಆಗಲಿ’ ಎಂದು ಒಪ್ಪಿದರು.
ರಾಮು ರೇಗಾಟ ಹಾರಾಟವನ್ನು ಮದುವೆಯ ಮನೆಯಲ್ಲಿಯೂ ಬಿಡಲಿಲ್ಲ. ಕಾಫಿ ಬರುವುದು ಹೊತ್ತಾಯಿತೆಂದು ಒಂದು ದಿವಸ ರೇಗಿದ್ದ. ಔಪಾಸನೆ ಮಾಡುವಾಗ ತುಪ್ಪದ ಹೊಗೆ ಕಣ್ಣುಮೂಗಿಗೆಲ್ಲಾ ಸುತ್ತಿಕೊಂಡಿತೆಂದು ರೇಗಿದ್ದ. ಇನ್ನೊಂದು ದಿವಸ ತನ್ನ ಹೆಂಡತಿ ಪದ್ಮಾನೆ ಮಧ್ಯಾನ್ಹದ ಕಾಫಿ ತರಲಿ ಎಂದು ಹೇಳಿ ಕಳುಹಿಸಿದ್ದ. ಹಳ್ಳಿಗಾಡು ಹುಡುಗಿ. ಜತೆಗೆ ಕೇವಲ ಸನಾತನ ವಾತಾವರಣದಲ್ಲಿಯೇ ಬೆಳೆದಿದ್ದವಳು. ಅವಳು ಒಪ್ಪಲಿಲ್ಲ. ಮನೆಯವರೆಲ್ಲಾ ಪಂಚಾಯತಿ ಮಾಡಿದ ಮೇಲೆ ಕಾಫಿ ತಿಂಡಿಯನ್ನು ತೆಗೆದುಕೊಂಡು ಹೋಗಿ ಗಂಡನ ಕೋಣೆಯ ಬಾಗಿಲು ಬಳಿ ಇಟ್ಟು ಓಡಿ ಬಂದುಬಿಟ್ಟಳು. ರಾಮು ರೇಗಿಕೊಂಡು ಕಾಲಿನಲ್ಲಿ ತಿಂಡಿ ಕಾಫಿಯನ್ನು ಒದೆದುಬಿಟ್ಟ. ತೊಟ್ಟಿಯಲ್ಲಿದ್ದ ಹಿರಣ್ಣಯ್ಯನವರ ಮನೆಯ ಹೊಸ ಜಮಖಾನಕ್ಕೆ ಕಾಫಿಯ ಅಭಿಷೇಕವಾಯಿತು.
ಹಾಸ್ಯಕ್ಕೂ ರಾಮುವಿಗೂ ಬದ್ಧ ದ್ವೇಷ. ಹಿರಣ್ಣಯ್ಯನವರ ಪುರೋಹಿತರು ಶಾಮಭಟ್ಟರು ಹಾಸ್ಯಪ್ರಿಯರು. ಅವರ ಹಾಸ್ಯ ನಾಲ್ಕು ತಲೆಮಾರು ಹಿಂದಿನದಾದರೂ ಅದನ್ನು ನಿಷ್ಕಲ್ಮಷ ರೀತಿಯಲ್ಲಿ ಹೇಳುವುದು ಭಟ್ಟರ ವೆಶಿಷ್ಟ್ಯವಾಗಿತ್ತು. ಮೊದಲನೆಯ ದಿವಸವೇ ರಾಮು ಭಟ್ಟರಿಗೆ ಚುರುಕು ಮುಟ್ಟಿಸಿದ್ದ. ಸಲಿಗೆಯಿಂದ ಭಟ್ಟರು ರಾಮುವನ್ನು ಏಕವಚನದಲ್ಲಿ ಸಂಬೋಧಿಸಿದ್ದರು.
“ನೀನೂ ತಾನೂ ಬಿಟ್ಟುಬಿಡಿ ಭಟ್ಟರೆ. ನೀವು ಏಕವಚನ ಉಪಯೋಗಿಸಿದರೆ ನಾನೂ ಉಪಯೋಗಿಸಬೇಕಾದೀತು.”
ಎಂದು ಹೇಳಲು ಭಟ್ಟರು ಅವಾಕ್ಕಾದರು. ರಾಮುವೆಲ್ಲಿ ‘ನೀನೂ ತಾನೂ’ ಉಪಯೋಗಿಸಿಬಿಡುವನೋ ಎಂದು ಹೆದರಿ “ಅಳಿಯ ದೇವರು ದಯಮಾಡಿಸಬೇಕು. ಕೂತುಕೊಳ್ಳೋಣವಾಗಬೇಕು – ನಿಂತುಕೊಳ್ಳುವ ಕೃಪೆಮಾಡಬೇಕು” ಎಂದು ಅತಿ ಮರ್‍ಯಾದೆಯನ್ನು ಆರಂಭಿಸಿಬಿಟ್ಟಿದ್ದರು. ರಾಮು ಒಳಗೇ ಕುದಿಯುತ್ತಿದ್ದರೂ ವಿಧಿಯಿಲ್ಲದೆ ಸುಮ್ಮನಿರಬೇಕಾಗಿತ್ತು.
ಉರುಟಣೆ ಮಾಡಿಸುವಾಗ ಭಟ್ಟರ ಹಾಸ್ಯಪ್ರಿಯತೆ ಪೂರ್ಣ ಕಳೆಯನ್ನು ಪಡೆಯುತ್ತಿತ್ತು. ಪದ್ಮನಿಗೆ ಉರುಟಣೆ ಹೇಳಿಕೊಡುತ್ತಾ
“ಅತ್ತೆಯ ಮಗನೆ – ಕೋತಿಯ ಮರಿಯೆ
ಮಾವನ ಮಗನೆ – ಮಲ್ಲಿಗೆಯ ಅರಳೆ
ಎನ್ನ ಮನದನ್ನ – ನಮ್ಮ ಮನೆ ತಂಗಳನ್ನ
ರಾಮಚಂದ್ರ ಅಗಸರೇ ನಿಮ್ಮ ಬಾಳೆಯ ಕಂಬದಂತಹ ಕಾಲುಗಳಿಗೆ ಅರಿಶಿನ ಹಚ್ಚುತ್ತೇನೆ!”
ಎಂದು ಒಂದೊಂದು ಹಾಸ್ಯೋಕ್ತಿಗಳನ್ನು ಸೇರಿಸುತ್ತಿದ್ದರು. ಮೊದಲನೆಯ ದಿವಸ ಎಲ್ಲವನ್ನೂ ಕೇಳಿಕೊಂಡು ಸುಮ್ಮನಿದ್ದ. ಎರಡನೆಯ ದಿವಸ ಭಟ್ಟರು “ಅತ್ತಯೆ ಮಗನೇ ಕೋತಿಯ ಮರಿಯೆ!” ಎಂದು ಹೇಳಿಕೊಟ್ಟ ಕೂಡಲೆ, ಎದುರಿಗಿದ್ದ ಕನ್ನಡಿಗಳಶದ ಕನ್ನಡಿಯನ್ನು ಭಟ್ಟರ ಮುಖಕ್ಕೆ ತೋರಿ
“ಇದು – ನನಗಿಂತ ನಿಮಗೇ ಹೆಚ್ಚು ಒಪ್ಪುತ್ತೆ ಭಟ್ಟರೆ.”
ಎಂದು ಅವರ ಮುಖ ಮುರಿದು ಬಿಟ್ಟನು. ಅಂದಿನಿಂದ ಬೀಗರ ಹಾಡುಗಳ ಹೊಡೆದಾಟ, ಪಿಟ್ಟಿಹಿಟ್ಟಿನ ಪೆಟ್ಟಾಟ, ಹಪ್ಪಳದ ಹುಡಿಯಾಟಗಳೆಲ್ಲಾ ನಿಂತೇ ಹೋದುವು. ಬೀಗರ ಕಡೆಯವರೆಲ್ಲಾ ತುಂಬ ಅಸಮಾಧಾನಪಟ್ಟುಕೊಂಡರು. ಸಾವಿತ್ರಮ್ಮ ಮಗನ ಚರ್ಯೆಗೆ ಬೇಸರಪಟ್ಟುಕೊಂಡು “ಓದಿದರೆ ಬಂತೇ ಭಾಗ್ಯ, ಗುಣ ಇರಬೇಕು” ಎಂದು ಕಣ್ಣಲ್ಲಿ ನೀರು ಹಾಕಿಕೊಂಡರು.
ಮದುವೆಯೇನೋ ಮುಗಿಯಿತು. ಯಾರಿಗೂ ಸಮಾಧಾನವಾಗಲಿಲ್ಲ. ಹಿರಣ್ಯಯ್ಯನವರಿಗೆ ಖರ್ಚು ಮಿಗಲಿಲ್ಲ. ಆದರೆ ಅತಿಥಿಗಳು ಸಂತೋಷಪಡಲಿಲ್ಲ. ಎಲ್ಲರ ಬಾಯಲ್ಲೂ ರಾಮುವಿನ ಕಟುಮಾತುಗಳೇ. ಕಟುಬಾಯಿ ಕಾವೇರಮ್ಮನವರು ಅಂದೇ ಬಿಟ್ಟರು “ಸರಿಹೋಯಿತು ಬಿಡಿ. ಕಂತೆಗೆ ತಕ್ಕ ಬೊಂತೆ. ಹೆಣ್ಣಿನ ರೂಪ, ಗಂಡಿನ ಗುಣ ಎರಡಕ್ಕೂ ಚೆನ್ನಾಗಿ ಕೂಡುತ್ತೆ” ಎಂದು.
*****
ಮುಂದುವರೆಯುವುದು
