ಕಂಡ ಕಣ್ಣಿನಲ್ಲಿ

ನಡೆಯುತ್ತಿದ್ದೆ
ಕಂಡೆ
ಮೈತುಂಬ ಪೇರಲ ಅರಳಿದ
ಹಸಿರು ಚಿಗುರುಗಿಡ
ಹಿಂದೆಯೇ-ಹೊಳೆಯುವ ಬೇಗಡೆ ಹುಡುಗಿ
ತಂಪು ಪ್ರಾಯ ಮತ್ತೆ
ರೆಪ್ಪೆ ಚಿಪ್ಪಿನಲ್ಲಿ ಒದ್ದಾಡುವ ತಳಮಳದ ಹುಳು-ಕಣ್ಣು.
ಚಂದದ ಮೈಯ ಹರೆಯದ ವ್ಯಾಖ್ಯೆಯ
ಅಂದದ ಪೂರ್‍ಣವಿರಾಮ.

ಕೋರೆ ಕಾಡಿಗೆ
ಛಿದ್ರದಲ್ಲಿ ಹೊಳೆವ ನೀರು ನರ ಗುಡ್ಡೆ
ರಕ್ತನಾಳ ಸೂಕ್ಷ್ಮದಾಳ ಜೀವ ಒಸರಿ
ಒದ್ದೆ ತಟಪಟ ಪುಟಿವ ಮೀನುರೆಪ್ಪೆ
ಹಗಲು ಕಾವುಗಳ ಪ್ರತಿಫಲನ
ದೃಶ್ಯನೋವಿನ ಸ್ಪರ್‍ಶ ಅನುಭವದ
ಲಕ್ಷ ಕಿರಣದ ಬಿಸಿ ಚುಂಬನ
ರೆಕ್ಕೆ ಸಾಲದೆ ಮುಗ್ಗರಿಸುವ ನಿಮಿಷಗಳ
ವಿಷಪೂರಿತ ಬಿಸಿಲುಗಳ
ರಾಮಾಯಣದಲ್ಲಿ ಬಿಟ್ಟ ಈಟಿ ಮೊನೆ ಬಾಣಗಳು
ಇಂದಿಗೆ ಬಂದು ತಲ್ಪುವ ಆಮಿಷಗಳ
ನೆನೆ ನೆನೆದು ಹದ ಹದಿ ಬಂದ ಜೀವ ಸಾಕ್ಷಿ
ಕಿತ್ತು ಬರಬಾರದೆ ಇದು ಹೊರಗೆ
ನನ್ನ ಕೈಗೆ
ಇಲ್ಲಿ ಹಾಯಾಗಿ ಪೆಟ್ರೋಲುರಿದು ಅಲ್ಲೆಲ್ಲೋ
ಜ್ವಾಲಾಮುಖಿ ಸಿಡಿದು ಎಲ್ಲೋ ಗದ್ದುಗೆಯುರುಳಿ
ಮತ್ತೆ ಪೃಥ್ವಿ ಸಂದ ಸತತ ಮೂರ್‍ಖ ಪ್ರದಕ್ಷಿಣೆ
ಹಗಲು ರಾತ್ರಿ ಪಕ್ಷ ಪಂಗಡ ಭೂತ
ಬಲಿ ಪೀಠದಾವಾಹನೆ
ಈ ಕಣ್ಣಿಗೆ ಕಾಣುವದಿಲ್ಲವೆ
ಭಿನ್ನ ಸೀಳುವ ದಾರಿ ಜಲಪಾತವಾಗುತ್ತ
ಸತ್ತ ಕಣ್ಣುಗಳೇ ಪುನಃ ಸಾಯುತ್ತ
ತಂತಿಯ ಮೇಲೆ ಹುಟ್ಟು ಸಾವು ಸರ್‍ಕಸ್‌ ನಡೆಸುತ್ತ
ತಮಾಷೆ ನಡೆದ ಡೊಂಬರಾಟಕ್ಕೆ
ನಾಬಡಿದ ಪೊಳ್ಳು ಡೋಲಿನ ಶಬ್ದ
ಈ ಕಣ್ಣುಗಳಲ್ಲಿ ನುಡಿಯುವದಿಲ್ಲವೆ
ಹಾಗಾದರೆ ಇದು ಇದ್ದಿದ್ದೇಕೆ?

ರಾಜ ರಸ್ತೆಗೆ ಬಂದೆ
ನಾನಿರಲಿಲ್ಲ!
ಇದ್ದಿರಬಹುದು ಅಲ್ಲೇ ಆ ಮೃದು ಹುಡುಗಿಯ ಕಣ್ಣಲ್ಲೇ
-ರಾತ್ರೆ ರೆಪ್ಪೆಗಳಡಿಗೆ ಹಗಲು
ಕನಸುಗಳ ತುರಿಸುತ್ತ ಶರ್ಟುಗಳ ಜತೆ
ವೋಟುಗಳ ಜತೆ ಕೆಮಿಸ್ಟ್ರಿಯ ಜತೆ ಮತ್ತೆ ಹಸಿ ಹಸಿ
ಭತ್ತದ ಬೀಜಗಳ ಜತೆ ಕಣ್ಣು ಮುಚ್ಚಾಲೆಯಾಡುತ್ತ
ಮತ್ತು ಮೆತ್ತಗೆ ಕೇವಲ ಕಣ್ಣೀ
ಆಗುತ್ತ…..
*****