ರಾಮು ಎ. ಎ. ಬಿ. ಪರೀಕ್ಷೆಯನ್ನು ಮುಗಿಸಿಕೊಂಡು ಬಂದ ಕೂಡಲೆ ಮುಂದೇನು ಮಾಡುವುದು ಎಂದು ವಿಚಾರ ಆರಂಭವಾಯಿತು. ಸ್ವಂತ ವಕೀಲಿಯನ್ನು ಆರಂಭಿಸುವುದಕ್ಕೆ ಮುಂಚೆ ಯಾರಾದರೂ ತಿಳಿದ ವಕೀಲರ ಕಛೇರಿಯಲ್ಲಿ ನಾಲ್ಕು ದಿವಸ ಇದ್ದರೆ ಕೆಲಸ ಚೆನ್ನಾಗಿ ಬರುತ್ತದೆ ಎಂದು ಸುಂದರರಾಯರು ಅಭಿಪ್ರಾಯಪಟ್ಟರು. ವಕೀಲಿ ವೃತ್ತಿಯ ಲಾಟರಿ ಜೀವನದ ಬದಲು ಯಾವುದಾದರೂ ಕೆಲಸ ಸಿಕ್ಕಿದರೆ ಒಳ್ಳೆಯದೆಂದು ರಾಮುವಿನ ಅಭಿಪ್ರಾಯ.
“ಕಂಡವರ ಮನೆಯ ಬಾಗಿಲಿಗೆ ಹೋಗಿ ನನ್ನ ಮಗನಿಗೆ ಒಂದು ಕೆಲಸ ಕೊಡಿ ಎಂದು ನಾನು ಕೇಳಲಾರೆನಪ್ಪಾ.”
ಎಂದು ರಾಯರು ಖಂಡಿತವಾಗಿ ನುಡಿದುಬಿಟ್ಟಿದ್ದರು. ಸುಂದರರಾಯರ ನಿರ್ಣಯವೇ ಕೊನೆಯದಾಯಿತು. ರಾಮು ಚೆನ್ನಪಟ್ಟಣದ ಮಲ್ಲಿಕಾರ್ಜುನಯ್ಯನವರ ಆಫೀಸಿಗೆ ಹೋಗಬೇಕೆಂದು ವ್ಯವಸ್ಥೆಯಾಯಿತು.
ಮಲ್ಲಿಕಾರ್ಜುನಯ್ಯನವರ ಕಛೇರಿ ಬಹಳ ಹಳೆಯ ಕಛೇರಿ. ವೃತ್ತಿಯಲ್ಲಿ ಅವರಿಗೆ ಬೇಕಾದಷ್ಟು ಅನುಭವವಿತ್ತು. ಕ್ರಿಮಿನ, ಸಿವಿ ಎರಡೂ ಬಗೆಯ ಕೇಸುಗಳು ಬರುತ್ತಿದ್ದುದರಿಂದ ರಾಮುವಿನ ಶಿಕ್ಷಣ ಸಾಂಗವಾಗಿ ನೆರವೇರಬಹುದೆಂದು ಸುಂದರರಾಯರು ಭಾವಿಸಿದರು.
ಬೆಳಿಗ್ಗೆ ಮನೆಬಿಟ್ಟು ಹೋದರೆ ಕೋರ್ಟು ಮುಗಿಸಿಕೊಂಡು ಮನೆಗೆ ಹಿಂದಿರುಗುವ ಹೊತ್ತಿಗೆ ಸಂಜೆಯಾಗುತ್ತಿತ್ತು. ಮತ್ತೆ ಲಾಯರ ಕಛೇರಿಗೆ ಹೋಗಬೇಕಾಗಿತ್ತು. ಒಂದೊಂದು ದಿವಸ ಅನ್ನ ಕಾಣುವುದೂ ಕಷ್ಟವಾಗುತ್ತಿತ್ತು. ಕೆಲವು ದಿವಸಗಳು ಹೋಟೆಲಿನಲ್ಲಿ ಉಂಡು ಕೋರ್ಟಿಗೆ ಹೋಗುತ್ತಿದ್ದನು.
ಕಛೇರಿಗೆ ರಾಮು ಬಂದುದು ಮಲ್ಲಿಕಾರ್ಜುನಯ್ಯನವರಿಗೆ ಅನುಕೂಲವಾಯಿತು. ತಮ್ಮ ಕೆಲಸವನ್ನು ಕ್ರಮೇಣ ಅವನ ಮೇಲೆ ಒರಗಿಸಿ ತಾವು ಮನೆ ಸೇರಿಬಿಡುತ್ತಿದ್ದರು. ಎದುರು ಕಡೆಯ ವಕೀಲರು ರಾಮುವನ್ನು ಜಜ್ಜುತ್ತಿದ್ದರೂ ಮಲ್ಲಿಕಾರ್ಜುನಯ್ಯನವರು ಮನೆಬಿಟ್ಟು ಬರುತ್ತಿರಲಿಲ್ಲ. ರಾಮುವಿಗೆ ಸ್ವತಂತ್ರ ಕಛೇರಿಯ ಅನುಕೂಲಗಳೆಲ್ಲ ದೊರೆತಂತಾದವು. ಅದರೆ ವರಮಾನ ಮಾತ್ರ ಶೂನ್ಯವಾಗಿತ್ತು. ಕಕ್ಷಿಗಾರರು ಕೃಪೆಯಿಟ್ಟು ತಿಂಡಿಖರ್ಚಿಗೆಂದು ಕೊಡುತ್ತಿದ್ದ ಒಂದೆರಡು ರೂಪಾಯಿಗಳಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.
ದುಡಿತ ತನ್ನದು, ಆದಾಯ ಮಲ್ಲಿಕಾರ್ಜುನಯ್ಯನವರದು ಎಂದು ರಾಮು ಕೊರಗುತ್ತಿದ್ದನು. ತನ್ನ ಅಸಂತುಷ್ಟಿಯನ್ನು ಸೂಚಿಸಿದರೂ ಮಲ್ಲಿಕಾರ್ಜುನಯ್ಯನವರು ಸುಮ್ಮನಿದ್ದುದನ್ನು ನೋಡಿ ಅವರ ಮೇಲೆ ಕಿಡಿಕಿಡಿಯಾಗಿದ್ದನು. ಮಲ್ಲಿಕಾರ್ಜುನಯ್ಯನವರು ಎಲ್ಲವನ್ನೂ ಕಾಣುತ್ತಿದ್ದರೂ ಕಂಡು ಕಾಣದಂತೆ ಇದ್ದುಬಿಡುತ್ತಿದ್ದರು.
ವಕೀಲರ ಕಛೇರಿ ಉಂಟುಮಾಡುತ್ತಿದ್ದ ಅಸಂತುಷ್ಟಿಯ ಪ್ರದರ್ಶನವನ್ನು ರಾಮು ಮನೆಯಲ್ಲಿ ಮಡುತ್ತಿದ್ದ. ಮನೆಗೆ ಬಂದೊಡನೆಯೇ ಒಮ್ಮೆಲೇ ‘ಧೂಮಕೇತು’ ವಾಗಿಬಿಡುತ್ತಿದ್ದನು. ರಾಮುವಿಗೆ ಕೋಪಬಂದಿದೆಯೆಂದು ಇತರರು ಅರಿಯುವುದರೊಳಗಾಗಿ ಅವನ ಕೋಪ ನೆತ್ತಿಯವರೆಗೂ ಏರಿಬಿಡುತ್ತಿತ್ತು. ರಾಯರು ಎಷ್ಟೋ ಸಲ ಮಗನಿಗೆ ವಿವೇಕ ಹೇಳಿದರು.
“ವಯಸ್ಸು ಆದಷ್ಟು ದಿವಸವೂ ಹೀಗೆ ಇದ್ದರೆ ಹೇಗೋ ರಾಮು? ನಿಧಾನ ಕಲಿತುಕೊಳ್ಳಪ್ಪಾ. ಈ ರೇಗಾಟ ಹಾರಾಟ ಕಡಿಮೆಮಾಡು. ತಾಳಿದವನು ಬಾಳಿಯಾನು ಎನ್ನುವುದನ್ನು ಜ್ಞಾಪಕದಲ್ಲಿಟ್ಟುಕೊಂಡಿರು.”
ಎಂದು ಹೇಳಿ ಹೇಳಿ ಬೇಸತ್ತಿದ್ದರು. ಅವಕಾಶ ಸಿಕ್ಕಿದಾಗಲೆಲ್ಲಾ ಸಾವಿತ್ರಮ್ಮನವರೂ ಅದೇ ಮಾತನ್ನೇ ಹೇಳುತ್ತಿದ್ದರು.
“ಅಕ್ಕನ ದೇಹಸ್ಥಿತಿ ನಿನಗೆ ಗೊತ್ತಿಲ್ಲವೇ ರಾಮು? ಸ್ವಲ್ಪ ಗಲಭೆಯಾದರೂ ಅವರ ಎದೆ ಹೊಡೆದುಕೊಳ್ಳುವುದಕ್ಕೆ ಅರಂಭಿಸುತ್ತದೆ. ಅದಕ್ಕೆ ಅವಕಾಶ ಕೊಡಬೇಡ- ಪ್ರಾಣಕ್ಕೆ ಅಪಾಯ ಎಂದು ಡಾಕ್ಟರು ಒತ್ತಿಯೊತ್ತಿ ಹೇಳುತ್ತಾ ಇದ್ದಾರೆ.”
ಎಂದು ಎಚ್ಚರಿಸುತ್ತಿದ್ದರು. ರಾಮುವೂ ಒಪ್ಪಿಕ್ಷಣಕಾಲ ತಣ್ಣಗಾಗುತ್ತಿದ್ದನು. ಮರುಕ್ಷಣವೇ ಯಾವುದೋ ಕಾರಣಕ್ಕೆ- ಕಾರಣವಲ್ಲದ ಕಾರಣವೇ ಹೆಚ್ಚು- ಜ್ವಾಲಾಮುಖಿಯು ಅಗ್ನಿಕಣಗಳನ್ನು ಹೊರಚೆಲ್ಲಲು ಆರಂಭಿಸುತ್ತಿತ್ತು.
ಮೀನಾಕ್ಷಮ್ಮನವರು ದಿನದಿನಕ್ಕೆ ಕ್ಷಯಿಸುತ್ತ ಬಂದರು. ಸ್ಥಳ,ಹವ ಬದಲಾಯಿಸಿದ ಹೊರತು ಗುಣಮುಖವಾಗುವುದು ಕಷ್ಟ ಎಂದು ಡಾಕ್ಟರು ಹೇಳಿದರು. ತಮ್ಮ ದೇಹಸ್ಥಿತಿ ಮೀನಾಕ್ಷಮ್ಮನವರಿಗೂ ಗೊತ್ತಾಯಿತು. ಬಿಟ್ಟುಹೋಗಿದ್ದ ಲಲಿತಾಸಹಸ್ರನಾಮ, ಅನ್ನಪೂರ್ಣಾ ಅಷ್ಟೋತ್ತರ, ಕುಂಕುಮಾರ್ಚನೆಗಳನ್ನು ಅಂದಿನಿಂದಲೇ ಆರಂಭಿಸಿಬಿಟ್ಟರು.
“ಆಯಾಸವಾಗತ್ತೆ, ಬೇಡ. ಇವುಗಳನ್ನೆಲ್ಲಾ ಕೆಲವು ದಿವಸ ಬಿಟ್ಟು ಮಾಡಿದರೆ ಆಗುವುದಿಲ್ಲವೇ?”
ಎಂದು ರಾಯರು ಹೇಳಿನೋಡಿದರು. ಮೀನಾಕ್ಷಮ್ಮನವರ ಕಿವಿಯ ಮೇಲೆ ಆ ಮಾತುಗಳು ಬೀಳಲಿಲ್ಲ.
ಅದೇ ವರ್ಷ. ಪದ್ಮಾ, ಜಯಾ ಇಬ್ಬರೂ ಅತ್ತೆಯ ಮನೆಯನ್ನು ಸೇರಿದರು. ಮೀನಾಕ್ಷಮ್ಮನವರ ಮುಖ ನಾಲ್ಕು ದಿವಸ ಗೆಲುವಾಯಿತು.
“ನನ್ನ ಮಕ್ಕಳು ಹೆಂಡತಿಯರನ್ನು ಇಟ್ಟುಕೊಂಡು ಬಾಳಿಸುವುದನ್ನು ನೋಡಬೇಕೆಂದಿದ್ದೆ. ನನ್ನ ಇಷ್ಟಾರ್ಥ ಪೂರೆಸಿತು”
ಎಂದು ಹೇಳುತ್ತಿದ್ದರು.
ಹವ ಬದಲಾಯಿಸುವುದು ತುಂಬ ಅಗತ್ಯವೆಂದು ಡಾಕ್ಟರು ಒತ್ತಾಯಪಡಿಸತೊಡಗಿದರು. ಮೀನಾಕ್ಷಮ್ಮನವರು ಯೋಚಿಸಿ
“ಆಗಲಿ . ಹಾಗಾದರೆ ನಾಲ್ಕು ದಿವಸ ಹಳ್ಳಿಗೆ ಹೋಗಿ ಬರುತ್ತೇನೆ. ನನ್ನ ಸೊಸೆಯರನ್ನು ಕರೆದುಕೊಂಡು ಹೋಗಿ ನಮ್ಮ -ಅಲ್ಲ-ಅವರ ಹಳ್ಳಿ ತೋರಿಸಿಕೊಂಡು ಬರುತ್ತೇನೆ”
ಎಂದು ಹೇಳಿದರು. ರಾಯರು ಹಳ್ಳಿಗೆ ಕಾಗದ ಬರೆದರು.
ಗೌರತ್ತೆ ತೀರಿಕೊಂಡ ಮೇಲೆ ದನಿಷ್ಠಾಪಂಚಕವೆಂದು ಐದು ತಿಂಗಳು ಹಳ್ಳಿಯ ಮನೆ ಬಾಗಿಲು ಹಾಕಬೇಕಾಗಿತ್ತು. ಐದು ತಿಂಗಳು ತುಂಬುವ ಹೊತ್ತಿಗೆ ರಾಯರು ಸಂಸಾರ ಸಮೇತರಾಗಿ ಬೆಂಗಳೂರಿಗೆ ಬಂದು ಬಿಟ್ಟಿದ್ದರು. ಮನೆಯ ಬೀಗದ ಕೆಯನ್ನು ಶಾಮಭಟ್ಟರ ವಶಕ್ಕೆ ಕೊಟ್ಟಿದ್ದರು. ದನಿಷ್ಠಾಪಂಚಕದ ಅವಧಿ ಮುಗಿಯಲು ಭಟ್ಟರು ಮನೆಯನ್ನು ತೊಳೆಯಿಸಿ, ಶುದ್ಧಪುಣ್ಯಾಹ ಮಾಡಿಸಿದ್ದರು.
ಊರಿನ ಟಪಾಲು ಆಫೀಸಿನವರು ಸರಿಯಾದ ಕಟ್ಟಡವನ್ನು ಹುಡುಕುತ್ತಿದ್ದರು. ರಾಯರ ಅಪ್ಪಣೆಯನ್ನು ಪಡೆದು ಬೀದಿಯ ಕಡೆಗಿದ್ದ ಎರಡು ಕೋಣೆಗಳನ್ನು ಹತ್ತು ರೂಪಾಯಿ ಬಾಡಿಗೆಗೆ ಅವರಿಗೆ ಕೊಟ್ಟಿದ್ದರು. ಮಿಕ್ಕ ಮನೆ ಅವರ ವಶದಲ್ಲಿಯೇ ಇತ್ತು. ಭಟ್ಟರೂ ಅವರ ಪರಿವಾರದವರೂ ಬಂದು ಅಲ್ಲಿಯೇ ಕುಳಿತುಕೊಳ್ಳುವುದು, ಮಲಗಿಕೊಳ್ಳುವುದು ಮಾಡುತ್ತಿದ್ದರು.
ರಾಯರ ಕಾಗದ ಬರುತ್ತಲೂ ಭಟ್ಟರು ಮನೆಯನ್ನು ಚೆನ್ನಾಗಿ ಸಾರಿಸಿಸಿ, ಸುಣ್ಣ ಹೊಡೆಸಿ ಸಂಸಾರಕ್ಕೆ ಅಣಿಮಾಡಿಟ್ಟರು. ಮೀನಾಕ್ಷಮ್ಮನವರು ಹಳ್ಳಿಗೆ ಬರುವ ಸುದ್ದಿ ಕೇಳಿ ಜನ ಹಿಗ್ಗಿಹೋಯಿತು. ರಂಗೇಗೌಡನೇ ನಿಂತುಕೊಂಡು ರಾಯರ ಮನೆ ಬೀದಿಗೆ ನೀರು ಹಾಕಿಸಿ. ಬೀದಿಯಲ್ಲಿ ಬಿದ್ದಿದ್ದ ಎಂಜಲು ಹಾಳೆಗಳನ್ನೆಲ್ಲಾ ತೆಗೆದುಹಾಕಿಸಿ, ರಾಯರ ಮನೆಗೆ ಬಾಳೆಯ ಕಂಬ, ಮಾವಿನೆಲೆ ತೋರಣ ಕಟ್ಟಿಸಿ, ಭಟ್ಟರ ಮನೆಯವರಿಗೆ ಹೇಳಿ ಮನೆ ಮುಂದೆ ಅಲಂಕಾರವಾಗಿ ರಂಗವಲ್ಲಿಯನ್ನು ಇಡಿಸಿ ಮೀನಾಕ್ಷಮ್ಮನವರ ಸ್ವಾಗತದ ಸಿದ್ಧತೆಯನ್ನು ಮಾಡಿದನು.
ಹೊಲೆಯರ ಹಟ್ಟಿ ಮರಿಗೌಡ ಸುಮ್ಮನಿರಲಿಲ್ಲ. ಊರಿನ ಬಾಗಿಲಿಗೇ ಬಾಳೆಯ ಕಂಬ, ಮಾವಿನಸೊಪ್ಪಿನ ಅಲಂಕಾರ ಮಾಡಿಸಿ ನಾಲ್ಕು ಮೆಲಿನಿಂದ ‘ಕೊಂಬಿನ ಮರ್‍ವಾದೆ’ ಇಡಿಸಿಬಿಟ್ಟಿದ್ದ. “ಕೊಂಬಿನ ಮರ್‍ವಾದೆ ಅಮಲ್ದಾರ್ರು ಮೊದಲಾದ ಆಫೀಸರುಗಳಿಗೆ ಮಾತ್ರವೇ ಅಲ್ವೇನ್ಲಾ ಮರಿಯಾ?”
ಎಂದು ಯಾರೋ ಕೇಳಿದ್ದಕ್ಕೆ
“ನಮ್ಮಮ್ಮಾವ್ರು ಆಫೀಸರುಗಳ ಆಫೀಸರು ಬುದ್ದೀ. ನಮ್ಮೂರ ಲಸ್ಮಿ. ಅವರಿಗಿಂತ ಎಚ್ಚು ನಮ್ಕೆ ಯಾರವರೇ!”
ಎಂದು ಉತ್ತರ ಹೇಳಿದ್ದ.
ಮೀನಾಕ್ಷಮ್ಮನವರು ಸೊಸೆಯರಿಬ್ಬರನ್ನೂ ಕರೆದುಕೊಂಡು ಹೊರಟಿದ್ದರು. ಅವರ ಜತೆ ಯಾರು ಹೋಗುವುದು ಎಂದು ಜಿಜ್ಞಾಸೆ ಹೊರಟಿತ್ತು. ಅಕ್ಕನ ಜತೆ ಹೋಗುವುದಕ್ಕೆ ಸಾವಿತ್ರಮ್ಮನೂ ಸಿದ್ಧವಾಗಿದ್ದಳು. ಶಾಂತಾ, ವೆಂಕಟೇಶ, ಲಕ್ಷ್ಮಣ, ಶಾಮಣ್ಣೋರು ಎಲ್ಲರೂ ಸಿದ್ಧರಾಗಿದ್ದರು. ಸಧ್ಯಕ್ಕೆ ಲಕ್ಷ್ಮಣ ಒಬ್ಬ ಹೋಗಲಿ, ಇಲ್ಲಿನ ಕೆಲಸ ನೋಡಿಕೊಂಡು ನಾಲ್ಕು ದಿವಸ ಬಿಟ್ಟು ಶಾಮಣ್ಣ ಹೋಗಲಿ ಎಂದು ರಾಯರು ಹೇಳಿದ್ದರು. ಪಾಯಿಸದ ಅಡಿಗೆ ಮಾಡಿ ಸಾವಿತ್ರಮ್ಮ ಅಕ್ಕನಿಗೆ ಬಡಿಸಿದ್ದಳು. ಮೀನಾಕ್ಷಮ್ಮ ಊಟ ಮಾಡುತ್ತಿರುವಾಗ
“ಬೇಗ ಬಂದು ಬಿಡಿ ಅಕ್ಕಾ. ನಿಮ್ಮನ್ನ ಬಿಟ್ಟು ಹೆಚ್ಚು ದಿವಸ ಇರಲಾರೆ.”
ಎಂದು ಸಾವಿತ್ರಮ್ಮ ಬಿಕ್ಕಳಿಸಿ ಅಳುತ್ತ ಹೇಳಿದ್ದರು. ಊಟ ಮುಗಿಸಿ ಕೆತೊಳೆಯುವ ಹೊತ್ತಿಗೆ ಬಸ್ಸು ಬಂದು ಬಾಗಿಲಿನಲ್ಲಿ ನಿಂತಿತು. ಸಾಮಾನುಗಳನ್ನು ಮೇಲೆ ಹಾಕಿ ಲಕ್ಷ್ಮಣ ಪದ್ಮಾ – ಜಯರೊಂದಿಗೆ ಕುಳಿತನು. ಮೀನಾಕ್ಷಮ್ಮ ಒಳಗೆ ಹೋಗಿ ರಾಯರ ಎರಡು ಕಾಲುಗಳನ್ನೂ ಮುಟ್ಟಿ ನಮಸ್ಕರಿಸಿ ಬಂದರು.
“ಆರೋಗ್ಯ ಚನ್ನಾಗಿ ನೋಡಿಕೋ ಮೀನಾ, ನಾನೂ ಇಷ್ಟರಲ್ಲಿಯೇ ಬಂದು ಬಿಡುತ್ತೇನೆ.”
ಎಂದು ಹೇಳಿದನು. ಸಾವಿತ್ರಮ್ಮ ಅಕ್ಕನಿಗೆ ಹಣೆಗಿಟ್ಟು, ಫಲ ತಾಂಬೂಲ ಕೊಟ್ಟಳು. ಹಾಗೇ ಮೀನಾಕ್ಷಮ್ಮನವರ ಎರಡು ಕಾಲುಗಳನ್ನೂ ಮುಟ್ಟಿ ನಮಸ್ಕಾರ ಮಾಡಿದಳು. ಶಾಂತಾ, ವೆಂಕಟೇಶನೂ ನಮಸ್ಕರಿಸಿದರು. ಮೀನಾಕ್ಷಮ್ಮ ಮಗಳಿಗೂ ತಂಗಿಗೂ ಹಣೆಗಿಟ್ಟು ‘ಹೋಗಿಬಿಟ್ಟು ಬರುತ್ತೇನೆ’ ಎಂದು ಹೇಳಿ ಬಸ್ಸು ಹತ್ತಿ ಕುಳಿತರು.
ಊರಿಗೆ ಮೂರು ನಾಲ್ಕು ಮೆಲು ದೂರವಿರುವಾಗಲೇ ಕೊಂಬು ಕಹಳೆ ಕೇಳಿ ಬಂತು. ಅದೇನು ಶಬ್ದ ಎಂದು ಪದ್ಮಾ ಕೇಳಿದಳು.
“ಯಾರೋ ಆಫೀಸರು ಬರುತ್ತಾರೆ ಎಂದು ಕಾಣುತ್ತದೆ. ಕೊಂಬು ಊದಿಸುತ್ತಿದ್ದಾರೆ.”
ಎಂದು ಮೀನಾಕ್ಷಮ್ಮನವರು ಉತ್ತರ ಕೊಟ್ಟಿದ್ದರು. ಊರ ಬಾಗಿಲಿನಲ್ಲಿ ಬಸ್ಸು ಬಂದು ನಿಂತಿತು. ನೆರೆದಿದ್ದ ಜನತಂಡವನ್ನು ನೋಡಿ ಮೀನಾಕ್ಷಮ್ಮನವರು ಬೆರಗಾದರು. ಮರಿಗುಡ್ಡ ಮೀನಾಕ್ಷಮ್ಮನವರನ್ನು ಗುರುತಿಸಿ
“ಅಡ್ಡೆ ಬಿದ್ದೆ ಕಾಣಮ್ಮಣ್ಣೀ!”
ಎಂದು ಕೂಗಿದ. ಅವನ ಪರಿವಾರವೂ ನಿಂತಲ್ಲಿಯೇ ಅಡ್ಡಬಿದ್ದರು.
“ಎಂಗಿದ್ದೀರವ್ವಾ?”
“ಚೆಂದಾಕಿದ್ದೇನೋ ಮರಿಯಾ. ನೀವೆಲ್ಲಾ ಕ್ಷೇಮವೇಪ್ಪಾ?”
“ಊನ್ರಮ್ಮಣ್ಣೀ – ನಿಮ್ದಯದಿಂದ!”
ಎಂದು ಹೇಳಿದ. ಈ ಎಲ್ಲ ಮರ್ಯಾದೆ, ತಳಿರುತೋರಣ ತಮಗಾಗಿಯೇ ಎಂದು ಮೀನಾಕ್ಷಮ್ಮನವರರಿತರು. ಬಸ್ಸು ಅಲ್ಲಿಂದ ರಾಯರ ಮನೆಯಮುಂದೆ ಬಂದು ನಿಂತಿತು. ಅಲ್ಲಿ ಒಂದು ಗುಂಪು ನೆರೆದಿತ್ತು. ರಂಗೇಗೌಡ, ಅವನ ಪರಿವಾರ ಮೀನಾಕ್ಷಮ್ಮನವರಿಗೆ ಅಡ್ಡಬಿದ್ದರು. ಭಟ್ಟರು ಮನೆಯ ಬಾಗಿಲಲ್ಲಿ ಮಣೆ ಹಾಕಿಸಿ ಒಂದು ತಂಬಿಗೆ ನೀರು ಇಡಿಸಿದ್ದರು. ಭಟ್ಟರ ಮಗಳು, ಸೊಸೆ ಮೀನಾಕ್ಷ್ಮಮ್ಮನವರ ಕಾಲು ತೊಳೆದು ಆರತಿ ಎತ್ತಿದರು. ಭಟ್ಟರೇ ಈಡುಗಾಯಿ ಹಾಕಿದರು. ಒಳಗೆ ಎಲ್ಲರಿಗೂ ಕಾಫಿ, ಉಪ್ಪಿಟ್ಟು, ಬಾಳೆಯಹಣ್ಣು, ಎಳೆನೀರಿನ ಏರ್ಪಾಟು ಆಗಿತ್ತು. ಉಪಾಹಾರವನ್ನು ಮಾಡುತ್ತಾ ಮೀನಾಕ್ಷಮ್ಮನವರು
“ಏನು ಭಟ್ಟರೇ. ಬಹಳ ಮರ್ಯಾದೆಯಾಗಿಬಿಡ್ತಲ್ಲ!”
“ನಾನೇನು ಮಾಡಲಮ್ಮ. ಎಲ್ಲಾ ನಿನ್ನ ತಪ್ಪು. ಊರಿನವರ ಹೃದಯ ಕಮಲದಲ್ಲಿ ನೆಲೆಸಿರುವ ಲಕ್ಷ್ಮೀ ನೀನು.”
“ನಾನು ಪುಣ್ಯವಂತೆ ಭಟ್ಟರೇ. ಭಾಗ್ಯಶಾಲಿ.”
“ಸಂದೇಹವೇನಮ್ಮ – ಸಂದೇಹವೇನು!”
ಎಂದು ಭಟ್ಟರು ಹೂಗುಟ್ಟಿದ್ದರು.
ಪದ್ಮನಿಗಿಂತಲೂ ಜಯನಿಗೆ ಹಳ್ಳಿಯ ವ್ಯವಹಾರವೆಲ್ಲಾ ಬಹಳ ಹೊಸಹೊಸದಾಗಿ ಕಂಡಿತು. ಅವಳು ಹುಟ್ಟಿದ್ದು ಬೆಳೆದದ್ದು ಎಲ್ಲಾ ಪಟ್ಟಣವೇ ಆಗಿತ್ತು. ಹೊಸ ಹಳ್ಳಿಯ ಮುಗ್ಧ ಜನರು ಮೀನಾಕ್ಷಮ್ಮನವರ ವಿಚಾರದಲ್ಲಿ ಇಟ್ಟಿದ್ದ ಮಾತೃಪ್ರೇಮ ಅವಳನ್ನು ಆಶ್ಚರ್ಯಗೊಳಿಸಿತ್ತು. ಹಳ್ಳೀಯಜೀವನದಲ್ಲಿ ಬೇರೆ ಬೇರೆ ಸಂಸಾರಗಳೇ ಇಲ್ಲ. ಬೇರೆಬೇರೆ ಮನೆಗಳೇ ಇಲ್ಲ. ಒಂದಕ್ಕೊಂದು ಹೆಣೆಕೊಂಡಿದ್ದುದನ್ನು ಕಂಡುಕೊಂಡಳು. ಹಾರುವ ಶಾಮಭಟ್ಟರಿಲ್ಲದೆ ರಂಗೇಗೌಡ ಪೆರು ನೆಡುವ ಹಾಗಿರಲಿಲ್ಲ ; ರಂಗೇಗೌಡ ಪೆರು ನೆಟ್ಟ ಹೊರತೂ ಭಟ್ಟರೂ ಕೂಳು ಕಾಣುವ ಹಾಗಿರಲಿಲ್ಲ. ಆದರೆ ಈ ಅನ್ಯೋನ್ಯತೆಗೆ ಸ್ವಲ್ಪ ಭಂಗ ಬಂದಿತೆಂದರೆ ಕುರುಕ್ಷೇತ್ರ – ರಣಭೂಮಿಯೇ ಆಗುತ್ತಿತ್ತು.
ಜಯನ ಮನಸ್ಸಿನ ಮೇಲೆ ಹಳ್ಳಿ ಎಷ್ಟು ಪರಿಣಾಮವನ್ನುಂಟು ಮಾಡಿತೋ ಪದ್ಮನ ಮನಸ್ಸಿನ ಮೇಲೆ ಅಷ್ಟು ಪರಿಣಾಮವನ್ನುಂಟು ಮಾಡಲಿಲ್ಲ. ಅವಳಿಗೆ ಮಲೆನಾಡಿನ ಹಳ್ಳಿಗಳ ಸಾಕಷ್ಟು ಪರಿಚಯವಿತ್ತು. ಮಲೆನಾಡಿನ ಆದ್ಯಂತವಿಲ್ಲದ ಮಳೆ ಜಿಗಣೆಗಳ ಕಾಟ, ಕಾಫಿ ಗಿಡಕ್ಕೆ ಹುಳು ಹತ್ತಿತೆಂಬ ಚಿಂತೆಗಳೆಲ್ಲವನ್ನೂ ಬೇಕಾದಷ್ಟು ಅನುಭವಿಸಿದ್ದಳು. ಹಣಕಾಸಿನ ವಿಚಾರ ಬಂದಾಗ ಹಳ್ಳಿಗರು ಎಷ್ಟು ಸತ್ಯಪ್ರಿಯತೆಯನ್ನೂ ನ್ಯಾಯತತ್ಪರತೆಯನ್ನೂ ತೋರುತ್ತಿದ್ದರೆಂಬುದನ್ನು ಬಲ್ಲವಳಾಗಿದ್ದಳು.
ರಂಗೇಗೌಡನ ತಮ್ಮ ಕರೀಗೌಡ ಆಲೇ ಕಟ್ಟಿಸಿದ್ದ. “ಅಮ್ಮಾವರುಗಳೆಲ್ಲಾ ಅಪರೂಪಕ್ಕೆ ಬಂದವ್ರೆ, ಮರ್‍ವಾದೆ ಮಾಡ್ಬೇಕು” ಎಂದು ತನ್ನ ಆಲೆಮನೆಗೆ ಬರಮಾಡಿಕೊಂಡು ಕಬ್ಬಿನಹಾಲು, ಬಿಸಿಬೆಲ್ಲ, ಬಿಸಿಬೆಲ್ಲದ ಕೊಪ್ಪರಿಗೆಯಲ್ಲಿ ಬೆಂದ ಕೊಬ್ಬರಿಗಳ ಸಮಾರಾಧನೆ ಮಾಡಿದ್ದನು. ಏಲಕ್ಕಿ, ನಿಂಬೇಹಣ್ಣು ಬೆರೆತ ಕಬ್ಬಿನಹಾಲನ್ನು ಒಬ್ಬೊಬ್ಬರು ನಾಲ್ಕೆದು ಬಟ್ಟಲಷ್ಟು ಗಿಟ್ಟಿಸಿದ್ದರು.
ಮೀನಾಕ್ಷಮ್ಮನವರು ಸೊಸೆಯರನ್ನು ನೋಡಿ “ಈಗ ಜತೇಲಿ ಅವರು ಇರಬೇಕಾಗಿತ್ತು. ನಿಮ್ಮ ಕೆಯಲ್ಲೆಲ್ಲಾ ಕಬ್ಬು ಕೊಟ್ಟು ಸಿಗಿಸೇ ಸಿಗಿಸುತ್ತಿದ್ದರು.”
ಸೊಸೆಯಂದಿರಿಗೆ ಜಮೀನು, ತೋಟಗಳ ಪರಿಚಯವನ್ನೆಲ್ಲಾ ಮಾಡಿಕೊಟ್ಟರು. ಜಮೀನನ್ನು ಸಾಗುವಳಿ ಮಾಡುತ್ತಿದ್ದ ರೆತರ ಗುರುತನ್ನೂ ಮಾಡಿಕೊಟ್ಟು – ಅವರಿಗೆ
“ಬೆದಾ, ಕೆಂಪಾ, ರಂಗಪ್ಪಾ, ಇವರೇ ನಿಮ್ಮ ಅಮ್ಮಾವರುಗಳು. ನನ್ನ ಸಾವಿತ್ರಮ್ಮನ್ನು ಹೇಗೆ ಮರ್ಯಾದೆಯಿಂದ ನಡೆಸಿಕೊಂಡು ಬಂದಿರಿ. ಹಾಗೆ ಮುಂದೆಯೂ ನಮ್ಮ ಜಯಮ್ಮ ಪದ್ಮಮ್ಮನ್ನ ನಡೆಸಿಕೊಂಡು ಬರಬೇಕಪ್ಪಾ.”
“ಅಪ್ಪಣೆ ತಾಯೀ.”
ದಿನವೂ ಯಾರದರೂ ಆತಿಥ್ಯವಾಗುತ್ತಲೇ ಇತ್ತು. ಹಳ್ಳಿಗಾಡಿನ ಆತಿಥ್ಯ. ಲಾಡು ಚಿರೋಟಿಗಳನ್ನು ಮಾಡದಿದ್ದರೂ, ಮಾಡುತ್ತಿದ್ದ ರಾಗಿ ರೊಟ್ಟಿ, ತೊಗರಿನುಚ್ಚಿನ ಉಂಡೆ, ಒತ್ತು ಶಾಮಿಗೆಗಳಲ್ಲಿ ತಮ್ಮ ವಿಶ್ವಾಸದಿಂದ ಲಾಡು ಚಿರೋಟಿಗಳಿಗಿಂತ ಹೆಚ್ಚಿನ ರುಚಿಯನ್ನು ತರುತ್ತಿದ್ದರು. ಪದ್ಮ ರಾಗಿಪದಾರ್ಥಗಳನ್ನು ಮುಟ್ಟುತ್ತಿರಲಿಲ್ಲ. ಭಟ್ಟರ ಮಗಳು ತಾನೇ ಖುದ್ದಾಗಿ ರೊಟ್ಟಿಮಾಡಿ, ಬಾಳೇ ಹಣ್ಣಿನ ಸೀಕರಣೆ ಮಾಡಿ ಜಯನ್ನ ಪದ್ಮನ್ನ ಕರೆದಿದ್ದಳು. ರೊಟ್ಟೀಗೆ ತುಂಬ ತೆಂಗಿನಕಾಯಿ, ಹಸೀಮೆಣಸಿನಕಾಯಿ, ಕೊತ್ತುಂಬರೀಸೊಪ್ಪು, ಬೆಣ್ಣೆ ಹಾಕಿ ಕಲಸಿ ಚೆನ್ನಾಗಿಯೇ ಮಾಡಿದ್ದಳು. ಜಯ ಸಂಕೋಚ ಬಿಟ್ಟು ಹೊಡೆಯುವುದಕ್ಕೆ ಆರಂಭಿಸಿದ್ದಳು. ಪದ್ಮ ಸೀಕರಣೆಯನ್ನು ರುಚಿ ನೋಡಿ ‘ನನಗೆ ಸಾಕಮ್ಮ’ ಎಂದಳು.
“ರೊಟ್ಟಿ ರುಚಿ ನೋಡೇ ಪದ್ಮಾ – ಸೊಗಸಾಗಿದೆ.’
“ನನಗೆ ರಾಗಿ ಪದಾರ್ಥ ತಿಂದರೆ ಮೆಗಾಗದಮ್ಮ – ಅಭ್ಯಾಸವಿಲ್ಲ”
ಎಂದು ಕುತ್ತಿಗೆಯನ್ನು ಕೊಂಕಿಸಿಕೊಂಡು ಅಂದಳು. ಭಟ್ಟರ ಮಗಳಿಗೆ ಇದು ಸಹನವಾಗಲಿಲ್ಲ.
“ಹೌದಮ್ಮ, ನೀವು ಶ್ರೀಮಂತರು. ನಿತ್ಯ ಲಾಡು ಚಿರೋಟಿ ತಿನ್ನುವವರು. ನಾವು ಬಡವರು – ನಮಗೆ ಈ ಒಣರೊಟ್ಟಿಯೇ ಪಂಚಭಕ್ಷ್ಯ ಪರಮಾನ್ನ”
ಎಂದು ಮೂದಲಿಸಿದಳು. ಪದ್ಮ ಅತ್ತು ಕರೆದು ಅತ್ತೇಗೆ ದೂರು ಹೇಳಿ ಅವರ ಕೆಲಿ ‘ಛೀಮಾರಿ’ ಮಾಡಿಸಿಕೊಂಡು ತೆಪ್ಪಗಾದಳು. ಅದೇ ಅವಕಾಶದಲ್ಲಿಯೇ ಮೀನಾಕ್ಷಮ್ಮನವರು
“ರಾಗಿ, ಅಕ್ಕಿ, ಗೋಧಿ ಇವು ಮನುಷ್ಯರ ಯೋಗ್ಯತೆಯನ್ನು ನಿರ್ಣಯಿಸುವುದಿಲ್ಲಮ್ಮಾ, ವಜ್ರದ ಓಲೆ, ಕೆಂಪಿನ ಓಲೆಗಳೂ ಯೋಗ್ಯತೆಯನ್ನು ನಿರ್ಣಯಿಸುವುದಿಲ್ಲ. ಮನಸ್ಸು ಚೆನ್ನಾಗಿರಬೇಕು. ಅಂತಃಕರಣವಿರಬೇಕು. ನಮ್ಮ ರಂಗಪ್ಪ, ಮರಿಗುಡ್ಡ, ಭಟ್ಟರೂ ಇವರ ಯೋಗ್ಯತೆಗೆ ಬೆಲೆ ಕಟ್ಟೋದಿಕ್ಕೆ ಸಾಧ್ಯವೇ? ಚಿನ್ನದಂತಹ ಜನ, ಚಿನ್ನದಂತಹ ಮನಸ್ಸು”
ಎಂದು ಸೊಸೆಯಂದಿರಿಗೆ ಹೇಳಿದ್ದರು.
ಲಕ್ಷ್ಮಣ ಬಂದಿದ್ದ ಸುದ್ದಿ ಅವನ ಹಳೆಯ ಗೆಳೆಯರಲ್ಲಿ ಬೇಗನೆ ಹರಡಿಬಿಟ್ಟಿತು. ಲಕ್ಷ್ಮಣ ಬೆಂಗಳೂರಿನಲ್ಲಿ ಒಬ್ಬ ಪ್ರಸಿದ್ಧ ವಿದ್ವಾಂಸರ ಹತ್ತಿರ ಸಂಗೀತ ಕಲಿಯುತ್ತಿರುವುದು ಅವರಿಗೆ ಶಾಮಣ್ಣನವರ ಮೂಲಕ ಗೊತ್ತಾಗಿತ್ತು.
“ಈಗ ಪಲ್ಲವಿ ಹಾಡುತ್ತಾನ್ರಯ್ಯ!”
ಎಂದು ಶಾಮಣ್ಣನವರು ತಿಳಿಸಿದ್ದರು. ಗg ಸ್ಕೂ ಸಂಗೀತದ ಮೇಷ್ಟ್ರು ರಾಮಸ್ವಾಮಿ ಅಯ್ಯಂಗಾರಿ, ವೆಂಕಟಸ್ವಾಮಿ, ರಂಗದಾಸ ಎಲ್ಲರೂ ದೇವಸ್ಥಾನದಲ್ಲಿ ಸಭೆಸೇರಿದರು. ಗಹನವಾದ ವಿಷಯವೊಂದನ್ನು ಅವರು ನಿರ್ಣಯಿಸಬೇಕಾಗಿತ್ತು.
“ಲಕ್ಷ್ಮಣರಾಯರನ್ನು ಹೇಗೆ ಕೇಳುವುದು?” ಎಂದು ಗg ಸ್ಕೂ ಮೇಷ್ಟ್ರು ಸಂಶಯ ತೆಗೆದರು.
“ಹೇಗೆ ಕೇಳೋದು ಅಂದರೆ ನಾಳೆ ಶನಿವಾರ ಭಜನೆಯಲ್ಲಿ ನೀನು ಹಾಡಬೇಕು ಎಂದು ಹೇಳೋದೇ” ಎಂದು ಪುಳಿಯೋಗರೇ ರಾಮಸ್ವಾಮಿ ಅಯ್ಯಂಗಾರಿ ಉತ್ತರ.
“ಅಲ್ಲಾ ಸ್ವಾಮಿ. ಮೊದಲು ಅಂದರೆ ಹುಡುಗರಾಗಿದ್ದರು. ಈಗ ಬೆಂಗಳೂರಿನಲ್ಲಿ ವಿದ್ಯಾ ಕಲಿತು ಬಂದಿದ್ದಾರೆ ಬಡ ಹಳ್ಳಿ ಜನ ನಮ್ಮ ಮಾತು ಯಾವ ಲಕ್ಷ್ಯಸ್ವಾಮಿ?” ಎಂದು ವೆಂಕಟಶಾಮಯ್ಯ ಸಂದೇಹವನ್ನು ಸೂಚಿಸಿದ.
“ಆ ಭಯವೇನೂ ಇಲ್ಲ. ಲಕ್ಷ್ಮಣರಾಯರ ತಲೆ ಅದಕ್ಕೆಲ್ಲಾ ತಿರುಗೋದಿಲ್ಲ. ನಮ್ಮ ಭಾರತದ ಶಾಮಣ್ಣನವರು ಇದ್ದಿದ್ದರೆ ಚೆನ್ನಾಗಿತ್ತು” ಎಂದು ರಂಗದಾಸ ಹೇಳಿದ.
“ಪ್ರಯತ್ನ ಮಾಡೋಣ, ನಾವು – ಅವರ ಹಳೆಯ ಸ್ನೇಹಿತರು. ನಾವು ಕೇಳಿದರೆ ಪ್ರಾಯಶಃ ಲಕ್ಷ್ಮಣರಾಯರು ಇಲ್ಲಾ ಎನ್ನಲಾರರು. ಮಿಕ್ಕದ್ದನ್ನು ದೇವರಿಗೆ ಬಿಟ್ಟುಬಿಡೋಣ” ಎಂದು ಮೇಷ್ಟ್ರು ಧೆರ್ಯ ಹೇಳಿದರು.
ಭಾರಿ ಭಜನೆ ಏರ್ಪಾಟಿಗೆ ತಕ್ಕಹಾಗೆ ಭಾರಿ ‘ಚರುಪೂ’ ತರಬೇಕೆಂದು ಅಮಲ್ದಾರರನ್ನೇ ಮುತ್ತಿಗೆ ಹಾಕಿದರು. ಕಛೇರಿಗಿಂತಲೂ ಮೊದಲೇ ಚರುಪಿನ ವ್ಯವಸ್ಥೆಯಾಗಿಹೋಯಿತು. ಮೇಷ್ಟ್ರು, ದಾಸರು ಎಲ್ಲರೂ ಹೆದರಿ ಹೆದರಿಕೊಂಡೇ ಲಕ್ಷ್ಮಣನನ್ನು ಕೇಳಿದರು. ಅವನು ಕೂಡಲೆ ಒಪ್ಪಿ ಅವರನ್ನು ಆನಂದಪಡಿಸಿಬಿಟ್ಟನು.
ಭಜನೆ ಮನೆ ಸಾಲುವುದಿಲ್ಲವೆಂದು ಮುಂದೆ ಒಂದು ಡೊಡ್ಡ ಚಪ್ಪರವನ್ನೇ ಎಬ್ಬಿಸಿಬಿಟ್ಟರು. ಅಡಿಕೆ ಮರಗಳಿಗೂ, ತೆಂಗಿನ ಗರಿಗಳಿಗೂ ಏನೂ ಕ್ಷಾಮವಿರಲಿಲ್ಲ. ಸೊಗಸಾಗಿ ಚಪ್ಪರ ಹಾಕಿ ಕಂಬಕ್ಕೆಲ್ಲಾ ಕಾಡು ಹೂವಿನ ಅಲಂಕಾರ ಮಾಡಿ ಹಾಡುವವರಿಗೆ ಗgಸ್ಕೂಲಿನಿಂದ ನಾಲ್ಕು ಬೆಂಚು ತರಿಸಿ ವೇದಿಕೆ ಹಾಕಿಸಿ ಪೆಟ್ರೊಮ್ಯಾP ದೀಪದ ವ್ಯವಸ್ಥೆ ಜರ್ಬು ಮಾಡಿಬಿಟ್ಟರು. ಪಕ್ಕವಾದ್ಯಗಳಿಗೆ ಯಥಾ ಪ್ರಕಾರ ರಂಗಸ್ವಾಮಿ ಅಯ್ಯಂಗಾರಿ, ವೆಂಕಟಶಾಮಿ ಕುಳಿತರು.
ಊರಿಗೆ ಊರೇ ಬಂದುಬಿಟ್ಟಿತು. ಮೀನಾಕ್ಷಮ್ಮನವರು ಸೊಸೆಯರೊಂದಿಗೆ ತಾವೂ ಬಂದಿದ್ದರು. ತಾಯಿಗೂ ಮಗನಿಗೂ ಸ್ವಲ್ಪ ಮಾತುಕತೆ ನಡೆದಿತ್ತು.
“ನೀನೂ ಬರುತ್ತೀಯಾ ಅಮ್ಮಾ?”
“ಏಕೆ ನಾನು ಬರಬಾರದೇನು?”
“ಅಷ್ಟು ಹೊತ್ತು ಕುಳಿತುಕೊಳ್ಳಲಿಕ್ಕಾಗುವುದಿಲ್ಲ. ಮೊದಲೇ ಬೆನ್ನು ನೋವು. ಅಲಸಿಕೆ ಹೆಚ್ಚಾಗಿ ಜ್ವರಗಿರ ಬಂದೀತು ಎಂದು ನನಗೆ ಭಯ.”
“ಊರಿಗೆ ಊರೇ ನಿನ್ನ ಸಂಗೀತ ಕೇಳಬಹುದು. ನಾನು ಮಾತ್ರ ಕೇಳಬಾರದೇನೋ ಲಚ್ಚಣ್ಣ!”
“ಹಾಗಲ್ಲಮ್ಮಾ. ನಿನಗೆ ಬೇಕಾದರೆ ದಿನಾ ಹಾಡುತ್ತೇನೆ. ಸುಮ್ಮನೆ ಆಯಾಸವಾಗುತ್ತಲ್ಲಾ ಎಂದು ಹೇಳಿದೆ ಅಷ್ಟೆ ನೀನು ಬರಬಾರದು ಎಂದು ನಾನು ಬಯಸುತ್ತೇನೆಯೇ?”
“ಸಭೆಯಲ್ಲಿ ನೀನು ಹಾಡಿದ್ದು ನಾನು ಕೇಳಿಲ್ಲ. ಶಾಂತನ ಮದುವೆಯಲ್ಲಿ ನೀನು ಹಾಡಿದಾಗ ಬರೀ ಓಡಾಟದಲ್ಲಿಯೇ ಆಗಿಹೋಯಿತು. ನಾನು ಬಂದೇ ಬರುತ್ತೇನಪ್ಪಾ. ಬಹಳ ಆಯಾಸವಾದರೆ ಎದ್ದು ಮನೆಗೆ ಹೊರಟುಬರುತ್ತೇನೆ.”
“ಹಾಗೇ ಮಾಡಮ್ಮಾ”
ಎಂದು ಲಕ್ಷ್ಮಣ ತಾಯಿಗೆ ಸೋಲಬೇಕಾಯಿತು.
ಕಛೇರಿ ಆರಂಭವಾಯಿತು. ‘ವಾತಾಪಿ ಗಣಪತಿಂ ಭಜೆ’ಯಿಂದಲೇ ಆರಂಭ. ರಾಮಸ್ವಾಮಿ ಕೆ ಸೋಲುತ್ತಾ ಬಂತು. ವೆಂಕಟಶಾಮಿ ತಪ್ಪು ತಾಳ ಹಾಕಿದ. ಲಕ್ಷ್ಮಣ ಸ್ನೇಹಿತರ ದೋಷಗಳನ್ನು ತಿಳಿದು
“ಸಾವಕಾಶವಾಗಿ ಅನುಸರಿಸಿಕೊಂಡು ಹೋಗಿ.”
ಎಂದು ಧೆರ್ಯ ಹೇಳಿದನು. ಲಕ್ಷ್ಮಣ ಹಾಡುತ್ತಾ ಹೋದಂತೆ ರಾಮಸ್ವಾಮಿ ಪಿಟೀಲನ್ನು ಕೆಳಗಿಟ್ಟು ತಾನೂ ತೆಪ್ಪಗೆ ಕೇಳುತ್ತ ಕುಳಿತು ಬಿಟ್ಟ. ವೆಂಕಟಶಾಮಿ ‘ಟೇಕ’ಗಳನ್ನು ಮಾತ್ರ ಹಾಕುತ್ತ ಹಾಗೂ ಹೀಗೂ ಲಕ್ಷ್ಮಣನ ಜತೆಯಲ್ಲಿ ಹೋಗಲು ಪ್ರಯತ್ನಪಡುತ್ತಿದ್ದ. ನಾಲ್ಕು ಕೀರ್ತನೆ ಮುಗಿಸುವ ಹೊತ್ತುಗೆ ತಾಲ್ಲೂಕು ಕಛೇರಿ ಗಂಟೆ ೧೧ ಬಡಿಯಲಾರಂಭಿಸಿತು. ಲಕ್ಷ್ಮಣ ಒದೆರಡು ದೇವರ ನಾಮಗಳನ್ನು ಹಾಡಿ ಮಂಗಳವನ್ನು ಹಾಡಿಬಿಟ್ಟ. ಕಛೇರಿ ಮುಗಿಯಲು ಎದ್ದುಹೋಗಿ ಮೊದಲು ತಾಯಿಗೆ ನಮಸ್ಕಾರ ಮಾಡಿದನು. ಮೀನಾಕ್ಷಮ್ಮನವರು ಮಾತನಾಡಲಾರದಾಗಿದ್ದರು. ಮಗನ ತಲೆಯ ಮೇಲೆ ಕೆಯಿಟ್ಟು ಹರಸಿದರು. ಎಲ್ಲರೂ ಬಗೆಬಗೆಯಾಗಿ ಲಕ್ಷ್ಮಣನನ್ನು ಹೊಗಳಿದರು. ಕಣ್ಣೀರು ಒರೆಸಿಕೊಂಡು ಒರೆಸಿಕೊಂಡು ಅಮಲ್ದಾರರ ಕರವಸ್ತವೆಲ್ಲಾ ನೆನೆದು ಒದ್ದೆಮುದ್ದೆಯಾಗಿತ್ತು. ಅವರೇ ಎದ್ದು ನಿಂತು ಸಭೆಯನ್ನುದ್ದೇಶಿಸಿ ನಾಲ್ಕು ಮಾತುಗಳನ್ನಾಡಿ, ಮುಂದೆ ಲಕ್ಷ್ಮಣರಾಯನಿಗೆ ಎಂತಹ ಭವಿಷ್ಯವಿದೆ ಎಂಬುದನ್ನು ಸೂಚಿಸಿದರು.
ಈ ಎಲ್ಲ ಹೊಗಳಿಕೆಯ ಮಾತುಗಳನ್ನು ಕೇಳಿಕೇಳಿ ಲಕ್ಷ್ಮಣನಿಗೆ ಬೇಸರ ಬಂದಿತ್ತು. ಅವನ ಧ್ಯಾನವೆಲ್ಲಾ ಚೆನ್ನಪ್ಪನ ಮೇಲೆ ನೆಟ್ಟಿತ್ತು.
‘ಇಂದು ಅವರು ಕೇಳಿದ್ದರೆ ಎಂದು ಮನಸ್ಸು ಕಾತರಪಡುತ್ತಿತ್ತು. ಹಿಂದಿನ ನೆನಪು-ಅದೇ ಭಜನೆಯ ಮನೆ-ತಾನು ಹಾಡಿದುದು-ಚೆನ್ನಪ್ಪನವರು ಹಾಡಿದುದು-ಅವರು ಹೇಳಿದ ಮಾತುಗಳು ಕಿವಿಗೆ ಕಟ್ಟಿದಂತಿದ್ದವು. ಜನರ ಸ್ತುತಿಯನ್ನೆಲ್ಲಾ ಗುರುವಿಗೆ ಮನಸ್ಸಿನಲ್ಲಿಯೇ ಅರ್ಪಿಸಿಬಿಟ್ಟನು.
ಲಕ್ಷ್ಮಣನ ಸಂಗೀತವನ್ನು ಎಲ್ಲರೂ ಮೆಚ್ಚಿದರು. ಎಲ್ಲರೂ ಹೊಗಳಿದರು. ಆದರೆ ಅವನೇ ಅದನ್ನು ಮೆಚ್ಚಲಿಲ್ಲ.
“ಇಲ್ಲ, ಇದು ಸಂಗೀತವಲ್ಲ. ‘ಸರಿಗಮಪಧನಿಸ’ಗಳ ಹೋರಾಟ. ಸುಖವಾದ ‘ಶಾರೀರ’ದ-ಸಮ್ಮೋಹನಾಸ್ತ. ಒಂದು ದಿವಸ ನಿಜವಾದ ಸಂಗೀತವನ್ನು ಹಾಡಬೇಕು.”
ಎಂದಂದುಕೊಂಡನು. ಅವನಿಗೆ ಆಗ-ಮನಸ್ಸಿನ ಆ ಅಸ್ತವ್ಯಸ್ತ ಸ್ಥಿತಿಯಲ್ಲಿ ಗೋಪಾಲನ ಕಥೆಯ ನೆನಪು ಬಂದಿತು. ಜನತೆಯ ಆಸೆ ಮುಗಿಯುವಲ್ಲಿ ಕಲಾವಿದನ ಆಸೆ ಅರಂಭವಾಗುತ್ತದೆ. “ಜನತೆಗೆಲ್ಲಿ ತೃಪ್ತಿ ತೋರುವುದೋ ಕಲಾವಿದನಿಗಲ್ಲಿ ಅತೃಪ್ತಿ ಮೊಳೆಯುತ್ತದೆ.” ಎನ್ನುವ ಮಾತುಗಳು ಕಥೆಯಲ್ಲಿ ತನ್ನನ್ನು ಉದ್ದೇಶವಾಗಿ ಬರೆದನೋ ಎಂದು ಯೋಚಿಸತೊಡಗಿದನು.
‘ಮನೆಗೆ ಹೋಗೋಣವೇನಪ್ಪಾ’ ಎಂದು ಮೀನಾಕ್ಷಮ್ಮನವರು ಎಚ್ಚರಗೊಳಿಸಿದಾಗಲೇ ಸ್ಮೃತಿ. ನಕ್ಕು ‘ಆಗಲಮ್ಮಾ’ ಎಂದನು.
*****
ಮುಂದುವರೆಯುವುದು
