ಸ್ವಾತಂತ್ರ್ಯ: ೧೯೫೮ ರ ಪಾಠ

– ೧ –

ಸಾಕುಮಕ್ಕಳೆ ಸಾಕು ಎಂದೆ ನಾಲ್ಕು ಮಕ್ಕಳ ತಂದೆ
ದತ್ತು. ತಂದೆ? ಹೋಗೋ ಬಾಗಿಲೊಳಕ್ಕೆ
ನುಸುಳಿ ಡವಗುಟ್ಟುವೆದೆ ನಾಲ್ಕು ನಿಂತವು ಮೊಳಕೆ ಮೂಲೆಯೊಳಗೆ.
ಕರಿಮಣ್ಣ ಗಟ್ಟಿಗೊರಟೆಯೊಳಿದ್ದ ರಸವೊಡೆದು
ತೊರೆಮೊರೆಯಿತೆದೆ ನನ್ನ
ತಾರೀಫು ಮಾಡಿದರು:
ಇವಕ್ಕು ನಿನ್ನಂತೆ ಮೂಗೊಂದೆ. ಕಣ್ಣುಗಳಂತು
ಥೇಟ್ ನಿನ್ನವೆ. ಯಾರು ಬಲ್ಲರು? ನಿನ್ನ ಹೊಲ,
ನಿನ್ನದೇ ಬೀಜ; ಸಂತಾನ ನಿನ್ನದೆನ್ನುವುದಕ್ಕೆ
ಅಭ್ಯಂತರವೆ ಇಲ್ಲ. ಸರಿ, ಎಂದೆ. || ೧೦ ||
ತನಗೇ ತಾನೇ ಸುತ್ತ ಸಿಂಬಿಸುರುಟಿದ ಕರುಳು
ನಾಲ್ಕು ದಿಕ್ಕಿಗು ನಿಗಚಿ ಕುಡುಚಾಚಿ ಹಿಗ್ಗಿತು; ಹಾಗೆ
ಕಂಡು ಹಿಗ್ಗಿದೆ ಸಾಲುಗನ್ನಡಿಯೊಳಗೆ ನಿರಾತಂಕ – ಪ್ರತಿಫಲನದಹಂಕಾರರೇಖೆ.

ಏಕೋ ಮುಜುಗರ ನನಗೆ. ಬಿಳಿದೊಗಲ ಚಿಣ್ಣರ ಕಂಡು
ಕರಿದೊಗಲಿನವನು ನಾಚಿದ. ಪರದೇಶಿ ನಗೆಯ ಕೋಲಾಹಲದ
ಶಾಕೋಪಶಾಖೆಗಳ ಹೆಣಿಗೆ – ಮನೆಯೊಳಗೆ, ಹೊರಗೆ.
ನನ್ನ ಮಲಗುವ ಕೋಣೆಗೂ ಬಿತ್ತು ತುರಿನೆರಳು.
ಕತ್ತಿಯಾಡದ ಹಳುವದಲ್ಲಿ ತೊಳಲಿದ ಹಾಗೆ;
ಹೊಸಬಣ್ಣ ಬಳಿದ ಮನೆಯಲ್ಲಿ ಮುರುಟಿದ ಹಾಗೆ.
ಶತಮಾನಗಳ ಶೃತಿಸ್ಮೃತಿಯ ಪಂಚಾಯತನ || ೨೦ ||
ಪೀಠದೊಳಗೂ ಹೊಕ್ಕ ಬೇರ ಬಿಗಿತ.
ಬಂದಳಿಕೆ ಸುತ್ತಿ ಬಿಗಿದಿರಲು ಸಾಕಿದ ತಂದೆ
ನಾನಾದೆ ಖಂಡಿತಾ ದತ್ತುತಂದೆ.
ಔರಸದ ಕಟ್ಟೆಯೊಳಗಿಲ್ಲ ತುಳಸಿಯ ಮೊಳಕೆ;
ಕಾಡುಗಿಡಗಳ ಕಳಪೆಕಳೆಯ ಕೋಲಾಹಲವು ತೋಟದೊಳಗೆ.

– ೨ –
ಗಾಳಿ ಬೀಸುವುದೆಲ್ಲ ಕಡೆಗು. ಮೋಡದ ಆಟ
ಆಕಾಶದಂಚಿನಿಂದಂಚಿಗೆ ನಿರಾತಂಕ. ತಾರೆಯ ಮಿಟುಕು
ತೊಟಕುವುದು ಜಗತ್ತಿನಾದ್ಯಂತ. ಕಲ್ಪನೆಯೊಳಗೆ
ಬೀಜವೊಂದೇ ಹಬ್ಬಿ ತಬ್ಬಬಹುದಖಿಲಾಂಡಕೋಟಿಯನ್ನು.
ಪ್ರಾಣವೋ ಅಸ್ಥಿಪಂಜರಬದ್ಧ; ಮೋಡವೇ || ೩೦ ||
ಇಳಿವಾಗ ತನುರೂಪಿ ಬಿಂದು. ಬೆಳಕಿನ ಬದುಕು
ವಸ್ತುವಸ್ತುವ ಪರದೆಗವಲಂಬಿ.
ನೋಡೀ ನುಗ್ಗೆ:
ನಿಲ್ಲಲೊಂದಿಷ್ಟು ಲಂಗೋಟಿಯಗಲದ ಜಾಗ,
ಆಕಾರತಳೆದ ಆಭೋಗ. ಉಳಿದದ್ದೆಲ್ಲ
ಪರದೇಶ, ಗೊಡ್ಡುಗಾಳಿಯ ಕಾಮಕೇಳಿ ಫಲ.

ಬೆಳೆಯ ಬಿಡು ಮರವ ಬೀಸಾಗಿ; ಒಂದೇ ಚದರ
ಗಜ ಸಾಕು. ಸುತ್ತೂ ಬೇಕೆ
ಬೇಲಿ? ಬಿಗಿ. ಊರ್ಧ್ವಮುಖಿ
ಏರಲಿರಲಾಕಾಶದಲ್ಲಿ ತಳಿರ ತುರಾಯಿ ತಕ್ಕಷ್ಟು ತಾವು || ೪೦ ||
ಕಟ್ಟದಿರು ಹಲಸಿಗೆ ಫರಂಗಿಕಸಿ. ಬಿಟ್ಟುಬಿಡು
ತನ್ನ ಪಾಡಿಗೆ ತಾನು ಶಾಖೆ ಹರಡಿ
ನೇಸರಿನ ಲಗ್ಗೆ ಹಾಸಿಗೆಗೆ; ಗರ್ಭಾಧಾನ
ಜರುಗಿ ಹೀಚುಗಳ ಹೊರೆ
ತೂಗುವುದು ತೊಟ್ಟಿಲಲಿ ಪುಟ್ಟ ಹಸುಳೆ.
ಕಟ್ಟುವುದು ಮರಿ ಬರುವ ಬಯಕೆ ಘನಿಸಿದ ಗೂಡು;
ಹಕ್ಕಿಜೊತೆ ತಂಗುವುದು ಕೊಂಬೆಯೊಳಗೆ.
ಒಂದು ತಿನ್ನುವುದು ಸವಿಹಣ್ಣ ಚಪ್ಪರಿಸುತ್ತ
ನೋಡುವುದು ತಿನ್ನದಿನ್ನೊಂದು ಸುತ್ತ.
ಹಣ್ಣ ತಿನ್ನದಪೂರ್ವ ಹಕ್ಕಿ ಬರುವುದ ಕಾದು || ೫೦ ||
ಕದವಿರದ ಕೊಂಬೆ ಅಲುಗಾಡುತ್ತದೆ.
ಎಷ್ಟೆ ಬಂದರು ಹಕ್ಕಿ ಅಷ್ಟು ಸಂತಸ ಉಕ್ಕಿ
ಗೃಹಸ್ಥಧರ್ಮದ ಗಂಧ ತೇಯುತ್ತದೆ.

– ೩ –
ಈಗಲೂ ನೆನಪುಂಟು: ಪಡುಗಡಲ ಮೊರೆ ಬಾರು
ಗೋಲ ಬೀಸಿಗೆ ಸಿಕ್ಕ ನಮ್ಮ ಮನೆಗೆ
ಇತ್ತಿದಿರು ತೇರು ಹನೆಮರ ಹಳಬ. ತನ್ನ ಗರಿಛತ್ರಿಯೊಳ
ಗಿಟ್ಟು ಕಾಯಿಯ ಜೊಂಪೆ ಹೊರೆಯುತ್ತಿದ್ದ.
ಕಡ್ಡಿಗೊಂದೊಂದು ಗುಬ್ಬಚ್ಚಿ ಗೂಡನು ತೂಗಿ
ಹೊರೆಯ ಹೆಚ್ಚಳಕ್ಕೆ ತಲೆದೂಗುತಿದ್ದ.
ಆಸಾಡಿ ಮಳೆಯ ಬಿಳಿಕಂಬಿ ಸಂದುಗಳಲ್ಲಿ || ೬೦ ||
ಅರಳುತ್ತಿದ್ದುವು ಗುಬ್ಬಿ – ಅರಸಿನದ, ಹಾಲಿನ ಕೆನೆಯ
ಸಾಲಭಂಜಿಕೆ – ಪಾಚಿಗಟ್ಟಿ ಜಾರುವ ನೆಲದ
ನಮ್ಮ ಬಳುಮಾಡಿಗೂ ಬಂದ ವಿಶ್ವ.
ಇದು ಗಂಡು ಇದು ಹೆಣ್ಣು, ಇದು ಪುಟ್ಟ ಮೆರಿ ಪಾಪ!
ತಿಂಡಿ ತಿನ್ನುತ್ತಿದ್ದ ನಾವು ಹುಡುಗರು ಬೆರಗು
ಗಣ್ಣ ನಲವಿಗೆ ಬಾಯಿಬಿಟ್ಟು ನಿಂತು
ಮರುನಿಮಿಷವೇ ಒಳಕ್ಕೋಡುತಿದ್ದೆವು, ತಂದು
ಚೆಲ್ಲುತಿದ್ದೆವು ಅಕ್ಕಿ ಬೆಳ್ಳಿ ಬೊಗಸೆ,
ಕುಟುಕು ಕುಟುಕಿನ ಸಫಲನಾಟ್ಯ, ಭೋರ್ಮಳೆ ಮೊರೆತ,
ಮರಿಯ ಕೆಂಬಾಯಿಯಲಿ ತಾಯ ಕೊಕ್ಕು || ೭೦ ||
ಕುಟುಕಿಟ್ಟ ಬೆಳತಿಗೆಯ ಕರುಳ ತುಡಿತ.
ನಮಗೊ ಗುಬ್ಬಚ್ಚಿದೋಚುವ ಕಾಳ ಕಾಗೆಗಳ
ಸೋವಿ ಅಟ್ಟುವ ನಿಷ್ಠ ಬೆಂಗಾವಲಾಟ.
ಮಳೆಯ, ಗುಡುಗಿನ, ಸಿಡಿಲಿನಟ್ಟಹಾಸದ ಜೈಲು;
ಅಲ್ಲಿ ಸಣ್ಣಗೆ ಅರಳಿ ಹೊಳೆದ ಬಯಲು!

– ೪ –

ಮನೆಯ ಮಕ್ಕಳ ಕೊಡೆ ಆಡಬಂದರೆ ಊರ
ಹುಡುಗ ಪಾಳೆಯ, ತಿಂಡಿ ಕೊಟ್ಟು ನಗಿಸು;
ಅಲ್ಲೆ ತಳವೂರಿಸಲು ಬಯಸಿ ತೆಳ್ಳಗೆಮಾಡ
ಬೇಡ ಇರುವಷ್ಟು ತಂಭಾಲು ಗುಟುಕು.
ಕಟ್ಟೆಯೊಳಗಡೆ ನೀರ ಹಣಿಸಿದರೆ ಬೆಳೆವ ಮರ || ೮೦ ||
ತಲೆಮೇಲೆ ತಳೆಯುವುದು ಗೂಡ ಮಾಲೆ.
ಅದರೊಳಗೆ ಬಂದಳಿಕೆ ಬೆಳೆವ ವಿಶ್ವವಿಶಾಲ
ಭಾವವೇ ಬಿಡುಗಡೆಗೆ ಬಿಟ್ಟ ಕೂಳೆ.
ಇಲದಿದ್ದರೂ ಸರಿಯೆ ಮನೆಗೆ ತೊದಲಿನ ರಕ್ಷೆ;
ತರಬೇಡ ದತ್ತುಗಳ ಜಿಗಣೆಯೊಲುಮೆ.
ನಿನ್ನ ಬೀಜದ ಫಲಕ್ಕೆ ಕಾದು ಕುಳಿತಿರು ಬರುವ
ವರೆಗೆ ಹಣ್ಣನ್ನುಣದ ಅಮರ ಪಕ್ಷಿ.
*****
೮ ಆಗಸ್ಟ್ ೧೯೫೮

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ