ಮಾರನೆಯ ದಿನದ ಬಸ್ಸಿನಲ್ಲಿ ಶಾಮಣ್ಣನವರು ಬಂದಿಳಿದರು. ಹಿಂದಿನ ಸಂಜೆ ಲಕ್ಷ್ಮಣನ ಕಛೇರಿಯಾದದ್ದು ಕೇಳಿ ‘ಎಂತಹ ಅವಕಾಶ ತಪ್ಪಿ ಹೋಯಿತು’ ಎಂದು ಬಹಳ ವ್ಯಸನಪಟ್ಟುಕೊಂಡರು.
“ಏನು ಶಾಮಣ್ಣ ಬಂದುಬಿಟ್ಟಿರಿ. ಅಲ್ಲಿ ಮನೆಯ ಕಡೆ…”
“ಪರವಾಯಿಲ್ಲ ಹೊಗಿ ಬಾ ಎಂದು ರಾಯರು ಹೇಳಿದರಮ್ಮಾ ನನಗೂ ಮನಸ್ಸು ತಡೆಯಲಿಲ್ಲ. ಬಂದುಬಿಟ್ಟೆ”
ಎಂದು ಹೇಳಿದರು. ಶಾಮಣ್ಣನವರು ಬಂದುದು ಲಕ್ಷ್ಮಣನಿಗೆ ಬಲಭುಜ ಬಂದಂತಾಯಿತು. ಮೀನಾಕ್ಷಮ್ಮನವರ ದೇಹಸ್ಥಿತಿ ತೀರಾ ಕೆಡುತ್ತ ಬಂದಿತ್ತು. ಕಾಹಿಲೆ ದಿವಸಕ್ಕೆ ಒಂದೊಂದು ರೂಪವನ್ನು ತಾಳಲಾರಂಭಿಸಿತು. ತಮ್ಮ ಸ್ಥಿತಿಯ ಪರಿಣಾಮ ಮೀನಾಕ್ಷಮ್ಮನವರಿಗೂ ಗೊತ್ತಾಯಿತು. ಮನಸ್ಸಿಗೆ ಧೆರ್ಯ ತಂದುಕೊಂಡರು. ಹೊರಗೆ ಯಾವ ಬಗೆಯ ನೋವನ್ನೂ ತೋರಗೊಡುತ್ತಿರಲಿಲ್ಲ.
ಸೊಸೆಯಂದಿರ ಶಿಕ್ಷಣದ ಕಡೆಗೆ ಗಮನಕೊಡಲಾರಂಭಿಸಿದರು. ಮನೆಯಲ್ಲಿ ಯಾರ ಯಾರ ಬಗ್ಗೆ ಹೇಗೆ ಹೇಗೆ ನಡೆದುಕೊಳ್ಳಬೇಕು, ಮನೆಗೆಬಂದು ಹೋಗುವವರ ವಿಚಾರದಲ್ಲಿ ಹೇಗೆ ವರ್ತಿಸಬೇಕು, ನಂಟರಿಷ್ಟರ ಗುಣದೋಷಗಳ ಪರಿಚಯ- ಎಲ್ಲವನ್ನೂ ತಿಳಿಸುತ್ತ ಬಂದರು. ಪದ್ಮನನ್ನು ಕರೆದು ಕೂಡಿಸಿಕೊಂಡು
“ರಾಮೂನ್ನ ನೋಡಿಕೊಳ್ಳುವುದು ಸ್ವಲ್ಪ ಜವಾಬ್ದಾರಿ ಕೆಲಸಾ ಪದ್ಮಾ, ಅವನ ಮನಸ್ಸು ಒಳ್ಳೆಯದು; ಆದರೆ ಬಹಳ ದುಡುಕು. ಮುಂಗೋಪ ಹೆಚ್ಚು, ನೀನೆಲ್ಲಾ ಸೆರಿಸಿಕೊಂಡು ಹೋಗಬೇಕಮ್ಮ. ಇನ್ನು ಮುಂದೆ ನೀನೇ ಮನೇ ಯಜಮಾನತಿ- ರಾಮುವೇ ಯಜಮಾನ, ದೊಡ್ಡವರ ಗೌರವಕ್ಕೆ ಕುಂದುತರದ ಹಾಗೆ ನಡೆದುಕೊಂಡು ಹೋಗಬೇಕು.”
“ಹಾಗೇ ಆಗಲಿ ಅತ್ತೆಮ್ಮನವರೇ.”
“ಇನ್ನೊಂದು ಮಾತು. ಇದನ್ನು ಹೇಳಿದೆ ಎಂದು ಮನಸ್ಸಿಗೆ ಏನೂ ತಿಳಿದುಕೊಳ್ಳಬೇಡ. ಗೋಪಾಲಿ ಹೇಗೋ ಲಕ್ಷ್ಮಣನೂ ಹಾಗೇ ನಿನಗೂ ರಾಮುಗೂ. ಅವರಿಬ್ಬರನ್ನೂ ನೋಡಿಕೊಳ್ಳುವುದು ನಿಮ್ಮ ಭಾರ. ಜಯನೂ ನೀನೂ ಯಾವಾಗಲೂ ಹೊಂದಿಕೊಂಡು ಹೋಗಿ. ನಿಮ್ಮನಿಮ್ಮಲ್ಲಿ ಎನಾದರೂ ಒಡಕು ಹುಟ್ಟಿದರೆ ಗಂಡಂದಿರಿಗೆ ಚಾಡಿ ಹೇಳಬೇಡಿ- ನೀವೇ ಸರಿಪಡಿಸಿಕೊಳ್ಳಿ.”
ಆ ಮಾತನ್ನೇ ಮೀನಾಕ್ಷಮ್ಮನವರು ಜಯನಿಗೂ ಹೇಳಿದರು.
“ಸಂಗೀತ ಒಂದು ಬಿಟ್ಟರೆ ಲಕ್ಷ್ಮಣನಿಗೆ ಪ್ರಪಂಚ ವ್ಯವಹಾರ ಒಂದೂ ತಿಳಿಯಲ್ಲಮ್ಮ. ಅವನು ಯಾವಾಗಲೂ ಮಗುವಾಗಿಯೇ ಇರುತ್ತಾನೆ. ಮನಸ್ಸಿಗೆ ಏನಾದರೂ ನೋವಾದರೆ ಇತರರಹಾಗೆ ಹೊರಗೆ ಹಾಕುವ ಸ್ವಭಾವವಲ್ಲ ಅವನದು. ಒಳಗೇ ಕೊರಗುತ್ತಾನೆ. ನೀನು ಜಾಣೆ. ಎಲ್ಲಾ ತಿಳಿದುಕೊಳ್ಳಬಲ್ಲೆ. ಅವನನ್ನು ಸಂರಕ್ಷಿಸುವ ಭಾರ ನಿನ್ನದು.”
“ಇದು ಯಾಕೆ ಹೀಗೆ ಮಾತನಾಡುತ್ತೀರಿ ಅತ್ತೆಮ್ಮನವರೆ?” ನಮಗೆ ಬುದ್ಧಿ ಹೇಳಿ ದಾರಿ ತೋರಿಸೋಕೆ ನೀವು ಇರುವಾಗ ನಮಗೇನು ಯೋಚನೆ- ಏನು ಕೊರತೆ.”
“ನಾನು ಇರೋದು- ಅದು ಮುಗಿಯುತ್ತಾಬಂತು ಕಣೇ ತಾಯಿ.”
ಎಂದು ಕಣ್ಣಿನಲ್ಲಿ ನೀರು ತಂದುಕೊಂಡು ಹೇಳಿದರು. ಮೀನಾಕ್ಷಮ್ಮನವರ ಮನಸ್ಸಿನಲ್ಲಿ ಏನೋ ಹೊಳೆಯಿತು. ಹೇಗೋ ಶುಕ್ರವಾರ-ಕುಂಕುಮಾರ್ಚನೆ ಮಾಡಿ ನಾಲ್ಕು ಜನ ಮುತ್ತೆದೆಯರಿಗೆ ಹೂವಿಳ್ಯ ಮಾಡುವ ಎಂದುಕೊಂಡರು. ಶಾಮಣ್ಣನವರನ್ನು ಕರೆದು
“ಒಂದು ದಿವಸದ ಮಟ್ಟಿಗೆ ಬಂದು ಹೋಗಬೇಕಂತೇ ಎಂದು ಅವರಿಗೆ ಹೇಳಿ ಕಳುಹಿಸಿ ಶಾಮಣ್ಣನವರೇ”
ಎಂದು ಹೇಳಿದರು. ಕುಂಕುಮಾರ್ಚನೆ, ಹೂವಿಳ್ಯ ಮುಗಿಯುವ ಹೊತ್ತಿಗೆ ಮೂರು ಗಂಟೆ ಆಯಿತು. ಅನಂತರ ಊಟದ ಶಾಸ್ತ ಮುಗಿಸಿ ಮಲಗಿದರು. ಸಂಜೆ ಬಸ್ಸು ಬರುವ ಹೊತ್ತಿಗೆ ಜ್ವರದಿಂದ ಮೆಕಾದು ಕೆಂಡದಂತಾಗಿತ್ತು.
ರಾಯರು ಸ್ವಲ್ಪ ಗಾಬರಿಯಾಗೇ ಬಂದರು. ಬೆಳಿಗ್ಗೆಯಿಂದ ನಡೆದುದನ್ನು ಕೇಳಿ ಶಾಮಣ್ಣನವರನ್ನು ಆಕ್ಷೇಪಿಸಿದರು.
“ತಿಳಿದೂ ತುಳಿದೂ ಕುಂಕುಮಾರ್ಚನೆ, ಹೂವಿಳ್ಯಕ್ಕೆ ನೀನು ಹೇಗೆ ಅವಕಾಶಕೊಟ್ಟೆ ಶಾಮಣ್ಣ?”
“ನಾನೇ ಹೇಳಿದೇಂದ್ರೆ. ಶಾಮಣ್ಣನವರ ಮೇಲೆ ಕೋಪಿಸಿಕೊಳ್ಳಬೇಡಿ. ನನ್ನದು ಕೊನೆಯಾಸೆಗಳು ಕೆಲವಿದ್ದವು. ಅವುಗಳಲ್ಲಿ ಇದೂ ಒಂದಾಗಿತ್ತು.”
“ನೀನು ಹೀಗೆ ಮಾತನಾಡಬಾರದು ಮೀನಾ. ಅಧೆರ್‍ಯತಂದು ಕೊಳ್ಳುವುದೇ?”
“ಅಧೆರ್‍ಯವಲ್ಲ, ಪೂರ್ತಿ ಧೆರ್‍ಯವೇ ಇದೆ ನಿಮ್ಮ ಕೊನೆಯ ದರ್ಶನ ಎಲ್ಲಿ ತಪ್ಪುತ್ತೋ ಎಂತಾ ಹೆದರಿದ್ದೆ. ನಾನು ಇನ್ನು ಹೋಗಿ ಬರುತ್ತೇನೆ.”
“ಎಲ್ಲಿಗೆ, ಎಲ್ಲಿಗೇ ಮೀನಾ?”
ಎಂದು ರಾಯರು ಕೇಳಿದ್ದು ಮೀನಾಕ್ಷಮ್ಮನವರ ಕಿವಿಯ ಮೇಲೆ ಬೀಳಲಿಲ್ಲ. ಸುತ್ತಲೂ ನಿಂತಿದ್ದ ಮಗ- ಸೊಸೆಯಂದಿರನ್ನು ಹತ್ತಿರ ಕರೆದು ಎಲ್ಲರನ್ನೂ ಪ್ರೀತಿಯಿಂದ ನೇವರಿಸಿದರು.
“ರಾಮೂನ್ನ ನೋಡಲಿಲ್ಲ. ಸಾವಿತ್ರಮ್ಮಂಗೆ ಹೇಳಪ್ಪಾ. ವೆಂಕಟೇಶ, ಶಾಂತಾ, ಗೋಪೀ…ಎಲ್ಲರಿಗೂ ಹೇಳು”
ಎಂದು ಮಗನಿಗೆ ತಿಳಿಸಿ, ಮೆಲ್ಲಗೆ ಏಳಲು ಪ್ರಯತ್ನಿಸಿದರು. ಲಕ್ಷ್ಮಣ ಹಿಡಿದೆತ್ತಿ ಕುಳ್ಳಿರಿಸಿದನು. ಗಂಡನನ್ನು ನೋಡುತ್ತಾ
“ಸ್ವಲ್ಪ ನಿಂತುಕೊಳ್ಳುತ್ತೀರಾ”
ಎಂದರು. ರಾಯರು ಎದ್ದು ನಿಂತರು. ಮೀನಾಕ್ಷಮ್ಮನವರು ಮತ್ತೆ ಒಂದು ಸಲ ಸುತ್ತಲೂ, ಕಣ್ತುಂಬ ಗಂಡ, ಮಗ, ಸೊಸೆಯಂದಿರು ಶಾಮಣ್ಣ ಎಲ್ಲರನ್ನೂ ನೋಡಿ ಗಂಡನ ಪಾದಗಳನ್ನು ಮುಟ್ಟಿ ಅದರಮೇಲೆ ತಲೆಯನ್ನಿಟ್ಟರು.
-ಮತ್ತೆ ಏಳಲಿಲ್ಲ.
*****
ಮುಂದುವರೆಯುವುದು
ಸಂಧ್ಯಾ ರಾಗ – ೧೬
