ನೀನು ಕೆಂಪು ತೊಟ್ಟಿನ
ಮಿದು ಬಿಳಿ ಪಾರಿಜಾತ
ತಿಳಿ ಮಳೆಯ ನಂತರದ
ಹಸಿರು ಬಾಳೆಯ ತೋಟ
ನಸುಕಿನಿಬ್ಬನಿ
ಇಳಿದಾಗ
ಗುಡ್ಡದ ಮೇಲೆ ಗಾಳಿಗೆ
ಇಂಚರ ಕೊಟ್ಟು
ಕೂತ ಬಣ್ಣದ ಪುಚ್ಛದ ಪುಟ್ಟ
ಅನಾಮಧೇಯ ಹಕ್ಕಿ ನೀನು
ಹಾರುತ್ತೀ
ನನ್ನ ಕವಿತೆಯ ಹಿಡಿತ ಬಿಟ್ಟು
ಜಾರುತ್ತೀ
ನನ್ನ ಅಗ್ಗದ ಶಬ್ದಗಳ
ಕೊಂಬುಗಳಿಂದ ಕೊಸರಿ
ಗೊತ್ತೆ ಎಷ್ಟೊಂದು
ಝರಿಗಳು ನಿನಾದ
ಜಿನುಗಿ ಎಲ್ಲೋ ಕಲ್ಲುಬೆಟ್ಟಗಳ
ನೀರವ ಏಕಾಂತದಲ್ಲಿ
ಸಿಹಿಯಾಗಿ ಹರಿದು
ಮಣ್ಣಿನ ನಿಗೂಢ ಅನೂಹ್ಯದೊಳಗೆ
ಇಳಿದು ಮುಗಿದು ಹೋಗುತ್ತವೆ
ಮತ್ತಿಲ್ಲಿ ಜನಪದದ ನಡು
ದಟ್ಟ ಬಾವಿಗಳಲ್ಲಿ
ಬಿದ್ದ ಕೊಡಗಳ ಮೇಲೂ
ಹಾವಸೆ ಏಳುತ್ತದೆ
ಎಲ್ಲಿ ಶುರುವಾಯಿತು
ಎಲ್ಲಿ ಮುಗಿಯಿತು
ಅಂತ ಹೇಗೆ ಹೇಳಲಿ?
ಬಿದ್ದ ಒಂದು ಸಂಪಿಗೆ
ಎಸಳಲ್ಲಿ ಪರಿಮಳ
ತಾಳದೆ
ಇರುವೆ ಸಾಯುತ್ತಿರುವಾಗ
ತೊಟ್ಟು ಬಿಟ್ಟು ಬಂದ ಹೂವಿನ ಗಾಯವನ್ನು
ಗಾಳಿ ನೆಕ್ಕುವಾಗ
ಉದುರುವ ಗೊಂಡೆ ಹೂಗಳ ಹುಡಿಗೆ
ನೆಲದ ತುಂಬ ಹಸಿರು
ರೋಮಗಳು ನಿಮಿರುವಾಗ
ನಾನು ಹಟ ಹಿಡಿಯುತ್ತೇನೆ
ನನಗೆ ಕವಿತೆಗಳನ್ನೆಲ್ಲ
ಕಳಚಿಟ್ಟು ಬಂದ
ನೀನು ಬೇಕು
*****
