ರಾಮಚಂದ್ರನಿಗೆ ಮಲ್ಲಿಕಾರ್ಜುನಯ್ಯನವರ ಕಛೇರಿ ಸಾಕಾಗಿತ್ತು. ಮಲ್ಲಿಕಾರ್ಜುನಯ್ಯನವರು ಕಛೇರಿಗೆ ಬರದೆ ಎಲ್ಲಾ ಕೆಲಸವನ್ನೂ ರಾಮಚಂದ್ರನ ಕೆಯಲ್ಲೇ ಮಾಡಿಸುತ್ತಿದ್ದುದನ್ನು ಕಕ್ಷಿಗಾರರು ಕಂಡಿದ್ದರು. ಅವರಲ್ಲಿ ಒಬ್ಬಿಬ್ಬರು ಪೂಟ ಲಾಯರುಗಳು ರಾಮಚಂದ್ರನಿಗೆ ಉಪದೇಶವನ್ನಾರಂಭಿಸಿದರು.
“ನೀವೇ ಆಫೀಸೇ ಮಾಡಿಬಿಡಿ ಸ್ವಾಮಿ ನಾವೆಲ್ಲಾ ನಿಮ್ಮ ಆಫೀಸಿಗೇ ಬಂದುಬಿಡುತ್ತೇವೆ. ಇದೆಲ್ಲಿ ಸಹವಾಸ ಮಲ್ಲಿಕಾರ್ಜುನಯ್ಯನವರದ್ದು”
ಎಂದು ಮೇಲಿಂದ ಮೇಲೆ ಹೇಳತೊಡಗಿದರು. ಅವರ ಆಟ ಮಲ್ಲಿಕಾರ್ಜುನಯ್ಯನವರಮುಂದೆ ನಡೆಯುತ್ತಿರಲಿಲ್ಲ. ರಾಮಚಂದ್ರ ಚಿಕ್ಕ ಲಾಯರು ಹೇಳಿದ ಹಾಗೆ ಕೇಳುತ್ತಾನೆ. ಏನೋ ಅಷ್ಟೋ ಇಷ್ಟೋ ಕೊಟ್ಟರೆ ತೃಪ್ತನಾಗಿ ಕೆಲಸ ಮಾಡಿಕೊಂಡು ಹೋಗುತ್ತಾನೆ. ಲಾಯರ ಹೆಸರು ಹೇಳಿ ತಾವು ಕೆತುಂಬ ಸಂಪಾದಿಸಬಹುದೆಂದು ಅವರ ಎಣಿಕೆ.
ರಾಮಚಂದ್ರ ಅವರ ಮಾತುಗೆ ಕಿವಿ ಜೋತುಬಿಟ್ಟ. ಬೇರೆ ಆಫೀಸನ್ನೇ ತೆಗೆದು ದೊಡ್ಡದಾಗಿ ಎZ.ಎ.ರಾಮಚಂದ್ರರಾಯರು, ಎಂ.ಎ.,ಎ ಎ.ಬಿ.
ಹೈಕೋರ್ಟು ಅಡ್ವೋಕೇಟರು ಎಂದು ಬೋರ್ಡನ್ನು ಹಾಕಿಬಿಟ್ಟ. ತಮ್ಮಲ್ಲಿಯೇ ಪಾಠ ಕಲಿತು. ತಮ್ಮ ಕಕ್ಷಿಗಾರರನ್ನೇ ಹಾರಿಸಿಕೊಂಡು ಹೋದನಲ್ಲಾ ಎಂದು ಮಲ್ಲಿಕಾರ್ಜುನಯ್ಯನವರಿಗೆ ಒಳಗೆ ಬೆಂಕಿ ಬೆಂಕಿ. ಮೇಲೆ
“ಬಹಳ ಸಂತೋಷ. ರಾಮಚಂದ್ರರಾ, ದೇವರು ನಿಮ್ಮನ್ನು ಚೆನ್ನಾಗಿ ಕಾಪಾಡಲಿ. ವೃತ್ತಿಯಲ್ಲಿ ದೊಡ್ಡ ಹೆಸರು ಸಂಪಾದಿಸಿ”
ಎಂದು ಶುಭಾಕಾಂಕ್ಷೆಯನ್ನು ಬಯಸಿದ್ದರು. ಗೊತ್ತಾದ ಫೀಜಿ (ಜಿees) ನಲ್ಲಿ ಎಂಟಾಣೆ ಭಾಗ ಪೂಟ ಲಾಯರುಗಳಿಗೆ ಹೋಗುತ್ತಿದ್ದರೂ ಮೊದಲನೆಯ ತಿಂಗಳಲ್ಲಿಯೇ ಐವತ್ತು ರೂಪಾಯಿನಷ್ಟು ರಾಮಚಂದ್ರನಿಗೆ ಸಂಪಾದನೆಯಾಯಿತು. ಹೊಸಹಳ್ಳಿ ಕಡೆ ಬಾಕಿ ವಸೂಲಿಗೆ ಹೋಗಿದ್ದಾಗ ಶಾಮಣ್ಣನವರು ರಾಮಚಂದ್ರ ವಕೀಲನಾಗಿರುವ ವಿಚಾರ ಅಲ್ಲಿಯ ರೆತರಿಗೆಲ್ಲಾ ತಿಳಿಸಿ ಅವರ ಕೇಸುಗಳೂ ಬರುವಂತೆ ಮಾಡಿದ್ದರು. ರಾಮಚಂದ್ರನ ಮಾವನವರು ತಮಗೆ ಬೇಕಾದವರಿಗೆಲ್ಲಾ ಅಳಿಯನ ವಿಷಯ ತಿಳಿಸಿ ಹೆಕೋರ್ಟು ಕೆಲಸಗಳನ್ನು ಅವನಿಗೇ ಕೊಡಿಸುತ್ತಿದ್ದರು. ತಿಂಗಳು ತಿಂಗಳಿಗೆ ರಾಮಚಂದ್ರನ ವರಮಾನ ಏರುತ್ತ ಬಂತು. ಕೆಯ್ಯಲ್ಲಿ ದಿವಸ ದಿವಸಕ್ಕೆ ಹೆಚ್ಚು ಹಣ ಚಲಿಸಲು ಮೊದಲಾಯಿತು. ಮೊದಲೇ ರಾಮಚಂದ್ರನನ್ನು ಹಿಡಿಯುವವರಿಲ್ಲ; ಈಗಂತೂ ಸರಿಯೇ ಸರಿಯಾಯಿತು. ಹಣ ಶೇಖರವಾಗುತ್ತ ಆಗುತ್ತ ಬಂದಂತೆ ರಾಮಚಂದ್ರನ ದಾಹವೂ ಹೆಚ್ಚುತ್ತ ಬಂದಿತು. ಆ ದಾಹವನ್ನು ಆರಿಸಲು ಮನೆಯಲ್ಲಿ ಯಾರೂ ಸಮರ್ಥರಾಗಲಿಲ್ಲ.
ರಾಮಚಂದ್ರ ದಿವಸಕ್ಕೆ ಇಪ್ಪತ್ತೆಂಟು ಕೋರ್ಟುಗಳನ್ನು ಸುತ್ತಬೇಕಾಗಿತ್ತು. ಈ ಕೊರ್ಟಿನ ಕೆಲಸ ಮುಗಿಸಿಕೊಂಡು ಇನ್ನೊಂದು ಕೋರ್ಟಿಗೆ ಹೋಗುವಷ್ಟರಲ್ಲಿ ಕೇಸನ್ನು ಕೂಗಿ ಮುಂದಕ್ಕೆ ಹಾಕಿಬಿಡುತ್ತಿದ್ದರು. ಕೆಲಸವು ಹೆಚ್ಚಿದಂತೆ ಈ ತೊಂದರೆಯೂ ಹೆಚ್ಚಿತು. ಕಕ್ಷಿಗಾರರು ಗೊಣಗುಟ್ಟಲಾರಂಭಿಸಿದರು. ಯೋಚಿಸಿ ಯೋಚಿಸಿ ಕೊನೆಗೆ ಕೋರ್ಟು ಹರಾಜಿನಲ್ಲಿ ಸಿಕ್ಕಿದ ಒಂದು ಸಣ್ಣ ಮಾರಿ ಕಾರನ್ನು ಅಗ್ಗವಾಗಿ ಕೊಂಡು ಅದನ್ನು ರಿಪೇರಿಮಾಡಿಸಿ ಉಪಯೋಗಿಸಲಾರಂಭಿಸಿದನು.
ಗಂಡನ ಮನೋವೃತ್ತಿ ಹೆಂಡತಿಯ ಮೇಲೂ ಪರಿಣಮಿಸಲಾರಂಭವಾಯಿತು. ಮೊದಲೇ ಶ್ರೀಮಂತರ ಮಗಳು, ಸುಖವಾಗಿ ಬೆಳೆದವಳು, ಜತೆಗೆ ಹುಟ್ಟುಸೋಮಾರಿ; ಮನೆಯಲ್ಲಿ ಲಕ್ಷ್ಮಣ, ವೆಂಕಟೇಶನ ಹೆಂಡತಿಯರಿರುವಾಗ ತನ್ನ ಹೆಂಡತಿ ಕೆಲಸಮಾಡಕೂಡದೆಂಬುದೇ ರಾಮಚಂದ್ರನ ಶಾಸನ. ಗಂಡನ ಶಾಸನವನ್ನು ಪದ್ಮ ಮೊದಲು ಅಷ್ಟಾಗಿ ಕಿವಿಯ ಮೇಲೆ ಹಾಕಿಕೊಂಡಿರಲಿಲ್ಲ. ಅತ್ತಿಗೆ ವಾರಗಿತ್ತಿಯರು ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುವಾಗ ತಾನು ನೋಡುತ್ತ ನಿಂತುರುವುದು ಪದ್ಮನಿಗಾಗುತ್ತಿರಲಿಲ್ಲ. ಬೇಡ ಬೇಡವೆಂದರೂ ತಾನೇ ಕೆಲಸವನ್ನು ಹುಡುಕಿಕೊಂಡು ಅವರ ಜತೆಗೂ ದುಡಿಯುತ್ತಿದ್ದಳು. ಜಯ, ಶಾಂತಾ ಯಾರಾದರೂ ಸೋತರೆ ಅವರನ್ನು ವಿಶ್ರಮಿಸಲು ಹೇಳಿ ತಾನೇ ಸಂತೋಷದಿಂದ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಿದ್ದಳು.
“ನೀನು ಏತಕ್ಕೆ ಮಾಡುತ್ತೀ? ಅವರಿಬ್ಬರೂ ಇದ್ದಾರೆ, ಮಾಡಲಿ ಬಿಡು”
ಎಂದು ರಾಮಚಂದ್ರ ಉಪದೇಶವನ್ನು ತಪ್ಪದೆಹೆಂಡತಿಗೆಕೊಡುತ್ತಿದ್ದ. ತನ್ನ ಮಾತನ್ನು ಲಕ್ಷಿಸಲಿಲ್ಲವಲ್ಲಾ ಎಂಬ ಕೋಪದಿಂದ ಮೂಗು ಮುಖವನ್ನು ನೋಡದೆ ಹೆಂಡತಿಯನ್ನು ಬಡಿಯುತ್ತಿದ್ದನು. ಈ ನರಮೇಧವನ್ನು ನೋಡಲಾರದೆ ಶಾಂತಾ, ಜಯ ಎಲ್ಲಾ ಕೆಲಸಗಳನ್ನೂ ತಾವೇ ಮಾಡಿಕೊಂಡು ಹೋಗುತ್ತಿದ್ದರು.
ತಾನು ಹೆಚ್ಚು-ಮೇಲು, ಇತರರು ಕಡಿಮೆ-ಕೀಳು ಎಂಬ ಭಾವನೆಯನ್ನು ಹೆಂಡತಿಯ ಸರಳ ಮನಸ್ಸಿನ ಮೇಲೆ ರಾಮಚಂದ್ರ ಚೆನ್ನಾಗಿ ಬಿತ್ತಲಾರಂಭಿಸಿದನು. ವೆಂಕಟೇಶನನ್ನು ‘ಹೊಟ್ಟೆಗಿಲ್ಲದವನು’ ಎಂದೇ ಸಂಬೋಧಿಸುತ್ತಿದ್ದನು. ಲಕ್ಷ್ಮಣನಂತೂ ಅವನ ಭಾಗಕ್ಕೆ ‘ತಂಬೂರಿ ದಾಸಯ್ಯ’ ನಾಗಿದ್ದನು.
ಗಂಡನ ರಣಶಿಕ್ಷೆಯನ್ನು ಸಹಿಸಲಾರದೆ ಪದ್ಮ ಅವನಿಗೆ ಹೇಗೆ ಬೇಕೋ ಹಾಗೆ ಇರತೊಡಗಿದಳು. ರಾಮಚಂದ್ರ ಯಾರನ್ನು ಬಯ್ಯುವನೋ ಅವರನ್ನು ಬಯ್ಯುವಳು. ಅವನು ಯಾರನ್ನು ಹೊಗಳುವನೋ ಅವರನ್ನು ಅವಳೂ ಹೊಗಳುವಳು. ‘ಬೂಚಿ’ ಮಾತುಗಳಲ್ಲಿ ಗಂಡನಿಗಿದ್ದ ಪ್ರೇಮವನ್ನು ಕಂಡುಕೊಂಡಳು. ಅವನಿಗೆ ಹಿತವಾಗುವ ರೀತಿಯಲ್ಲಿ ಬೇಕಾದಷ್ಟು ಬೂಚಿಯನ್ನಾಡುವುದನ್ನು ಕಲಿತಳು. ತಾನು ಗೆದ್ದದ್ದು ಒಂದು ಪ್ರೋನೋಟು ದಾವೆಯಾದರೂ ಅದನ್ನು ಹೆಂಡತಿಯ ಮುಂದೆ ಬಡಾಯಿ ಕೊಚ್ಚಿಕೊಂಡ ಹೊರತೂ ರಾಮಚಂದ್ರನಿಗೆ ತೃಪ್ತಿಯಿಲ್ಲ. ಪದ್ಮ ತಪ್ಪದೆ
“ಏನು ಜಾಣರೂಂದ್ರೆ ನೀವು. ಎಲ್ಲಾ ಕೇಸನ್ನೂ ಗೆದ್ದುಬಿಡ್ತೀರಲ್ಲಾ ಎದುರು ಕಡೆಯವರ ಗತಿಯೇನೂಂದ್ರೆ!”
ಎನ್ನುತ್ತಿದ್ದಳು. ಊಟ ಮುಗಿಸಿದ ಮೇಲೆ ಪದ್ಮನೇ ಎಲಡಿಕೆ ತಂದುಕೊಡುತ್ತಿದ್ದಳು. ರಾಮಚಂದ್ರ ಹೆಮ್ಮೆಯಿಂದ
“ಇವತ್ತು ಹೆಕೋರ್ಟು ಕೇಸು ಕಣೇ.”
“ಹೆಕೋರ್ಟು ಕೇಸೇ!! ನೀವು ಗೆದ್ದು ಬರೋದು ಖಂಡಿತ. ಹೆಕೋರ್ಟಿಗೆ ಹೋದರೆ ನೀವು ಹೋಗಬೇಕು. ಸುಮ್ಮನೆ ಎಲ್ಲಾರೂ ಹೋದರೆ ಬಂತೇ ಭಾಗ್ಯ?”
ಎಂದು ಹೇಳುತ್ತಿದ್ದಳು. ಸಂತೋಷದಿಂದ ರಾಮಚಂದ್ರನ ಬಾಯಂಚುಗಳು ಕಿವಿಯವರೆಗೂ ಬಂದು ಬಿಡುತ್ತಿದ್ದವು. ಹೆಂಡತಿ ಯಾರ ಮೇಲೆ ಏನು ಚಾಡಿ ಹೇಳಿದರೂ ರಾಮಚಂದ್ರ ನಂಬುತ್ತಿದ್ದನು. ಇದನ್ನು ತಿಳಿದಿದ್ದ ಪದ್ಮ ಸಮಯೋಚಿತವಾಗಿ ಈ ಆಯುಧವನ್ನು ಉಪಯೋಗಿಸಲಾರಂಭಿಸಿದಳು. ರಾಮಚಂದ್ರ ಮನೆಗೆ ಬಂದ ಹೊತ್ತಿನಲ್ಲಿ ಕೆಯಲ್ಲಿ ಒಂದೆರಡು ಪಾತ್ರೆಗಳನ್ನು ಹಿಡಿದು ಅಡಿಗೆಯ ಮನೆಗೂ ಬಚ್ಚಲುಮನೆಗೂ ಹತ್ತಾರು ಸಲ ಓಡಿಯಾಡಿ ‘ನನ್ನ ಹೆಂಡತಿ ಎಷ್ಟು ದುಡಿಯುತ್ತಾಳೆ – ಒಂದೇ ಸಮನಾಗಿ’ ಎಂದು ಅವನಂದುಕೊಳ್ಳುವಂತೆ ಮಾಡಿಬಿಡುತ್ತಿದ್ದಳು. ಅವನತ್ತ ಕೋರ್ಟಿಗೆ ಹೋದರೆ ತಾನೂ ಊಟ ಮಾಡಿ ಕೋಣೆಯ ಕದ ಹಾಕಿ ಸುಖವಾಗಿ ಮಲಗಿ ನಿದ್ರಿಸುತ್ತಿದ್ದಳು. ಶಾಂತಾ, ಜಯ ಮನೆಯಲ್ಲಿ ಎಲ್ಲರಿಗೂ ಬಡಿಸಿ, ರಾಯರಿಗೆ ಬೇಕಾದ ಪಥ್ಯದ ಅಡಿಗೆ ಮಾಡಿಕೊಟ್ಟು ತಾವೂ ಊಟಮಾಡಿ ಕೆತೊಳೆಯುವ ಹೊತ್ತಿಗೆ ಮಧ್ಯಾಹ್ನವಾಗಿಬಿಡುತ್ತಿತ್ತು. ಬಿಸಿಲಿನಲ್ಲಿ ಹೋಗಿರುವವನು ಬಂದು ರೇಗುತ್ತಾನಲ್ಲಾ ಎಂದು ಹೆದರಿಕೊಂಡು ಏನಾದರೂ ತಿಂಡಿ ಕಾಫಿ ತಪ್ಪದೆ ಮಾಡಿಡುತ್ತಿದ್ದರು. ರಾಮು ಬರುವ ಹೊತ್ತಿಗೆ ಸರಿಯಾಗಿ ಪದ್ಮ ಎದ್ದು ಅವನಿಗೆ ತಾನೇ ತಿಂಡಿ ಕಾಫಿಯನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು. ರಾಮುವಿಗೆ ಸುಮ್ಮನೆ ತಿನ್ನುವ ಅಭ್ಯಾಸವೇ ಇರಲಿಲ್ಲ.
“ನೀನು ತಾನೇ ಮಾಡಿದ್ದು?”
“ಹೂಂ”
“ದುಡಿ ದುಡಿ. ರಟ್ಟೆ ಗಟ್ಟಿಯಾಗಿದೆ ದುಡಿ. ಈ ಮನೆಯೊಳಗೆ ದುಡಿಯುವುದಕ್ಕೆ ನೀನು, ಹೊರಗೆ ದುಡಿಯುವುದಕ್ಕೆ ನಾನು ಕಂಕಣ ತೊಟ್ಟಿದ್ದೇವೆ. ಮಿಕ್ಕವರೆಲ್ಲಾ ಸುಮಾನ ಹತ್ತಲಿ.”
ದಿನವೂ ಈ ಮಾತುಗಳನ್ನು ಶಾಂತಾ, ಜಯ ಇಬ್ಬರೂ ಕೇಳುತ್ತಿದ್ದರು. ಶಾಂತನಿಗೆ ಕಾಣದ ಹಾಗೆ ಜಯ, ಜಯನಿಗೆ ಕಾಣದ ಹಾಗೆ ಶಾಂತಾ ಅತ್ತು ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತಿದ್ದರು. ಒಂದು ದಿವಸ ಕೆಲಸ ಎಂದಿಗಿಂತಲೂ ಹೆಚ್ಚಾಗಿತ್ತು. ಹಳ್ಳಿಯವರು ಆರು ಜನ ಬಂದುದರಿಂದ ಅವರಿಗೆ ಬೇರೆ ಅಡಿಗೆ ಮಾಡಬೇಕಾಯಿತು. ಹಿಟ್ಟು ತೊಳಸಿ ತೊಳಸಿ ಜಯ, ಶಾಂತರ ಕೆ ಬಿದ್ದು ಹೋಯಿತು. ಮಧ್ಯಾಹ್ನದ ತಿಂಡಿಯನ್ನೂ ಮಾಡಿಟ್ಟು, ಫಿಲ್ಟgನಲ್ಲಿ ಕಾಫಿಯನ್ನು ಹಾಕಿ ಇಬ್ಬರೂ ಹಾಗೇ ತಲೆ ಕೆಳಗೆ ತೋಳುಕೊಟ್ಟು ಅಡಿಗೆಯ ಮನೆಯಲ್ಲಿಯೇ ಮಲಗಿದರು. ರಾಮುವಿಗೆ ಅವತ್ತು ಕೊರ್ಟಿನಲ್ಲಿ ಮುಖಪ್ರಕ್ಷಾಳನವಾಗಿತ್ತು. ಕಕ್ಷಿಗಾರನಿಗೆ ವಿವೇಕ ಹೇಳದೆ, ಕೆಟ್ಟಕೇಸನ್ನು ಹಾಕಿ, ಕಕ್ಷಿಗಾರನಿಗೆ ಸ್ಟಾಂಪು ಹಣವನ್ನೂ ಇತರ ಖರ್ಚುಗಳನ್ನೂ ಉಂಟುಮಾಡಿದ್ದನೆಂದು ಜಡ್ಜಿಗಳು ರಾಮುವನ್ನು ಚೆನ್ನಾಗಿ ಬಯ್ದಿದ್ದರು. ಆ ಕೋಪ ಕುದಿಯುತ್ತಲೇ ಇತ್ತು. ಯಥಾಪ್ರಕಾರ ಹೆಂಡತಿ ತಿಂಡಿ ಕಾಫಿ ಮುಂದಿಟ್ಟ ಕ್ಷಣವೇ, ಮನೆಯವರನ್ನೆಲ್ಲಾ ಬಯ್ಯಲಾರಂಭಿಸಿದನು. ಶಾಂತಾ, ಜಯರಿಗಂತೂ ಹೀನಬೆಗಳದ ಸುರಿಮಳೆಯಾಗಿ ಹೋಯಿತು. ಅಡಿಗೆಯ ಮನೆಯಲ್ಲಿ ಮಲಗಿದ್ದ ಇಬ್ಬರೂ ಚೆನ್ನಾಗಿ ಕೇಳಿಸಿಕೊಂಡು ಅಂದೇ ಒಂದು ನಿರ್ಧಾರಕ್ಕೆ ಬಂದರು:
‘ಏನೇ ಆದರೂ ಮಧ್ಯಾಹ್ನದ ಕಾಫಿತಿಂಡಿ ತಾವು ಮಾಡಬಾರದೆಂದು.’ ಮಾರನೆಯ ದಿವಸ ತಾನು ಏಳುವ ಹೊತ್ತಿಗೇ ಪದ್ಮ ಎದ್ದು ಅಡಿಗೆಯ ಮನೆಗೆ ಹೋದಳು. ತಿಂಡಿಕಾಫಿ ಸಿದ್ದವಾಗಿರಲಿಲ್ಲ. ಗಂಡ ಬರುವ ಹೊತ್ತಿಗೆ ಒಲೆ ಹೊತ್ತಿಟ್ಟು ಕಾಫಿಗೆ ನೀರಿಟ್ಟಳು. ರಾಮು ಬಂದೇ ಬಿಟ್ಟ. ಅವಸರವಸರವಾಗಿ ಕೆಟ್ಟ ಕಾಫಿಯೊಂದನ್ನು ರಾಮುವಿಗೆ ತೆಗೆದು ಕೊಂಡು ಹೋಗಿ ಕೊಟ್ಟಳು. ಕಾಫಿಯನ್ನು ಪದ್ಮನ ತಲೆಯ ಮೇಲೆ ಸುರಿದು ಅವಳನ್ನು ಚೆನ್ನಾಗಿ ಹೊಡೆದು ಸಮಾಧಾನ ಹೊಂದಿದನು. ಈ ಹತ್ಯಾಕಾಂಡವನ್ನು ನೋಡಲಾರದೆ ಪುನಃ ಜಯ, ಶಾಂತರೇ ಮಧ್ಯಾಹ್ನದ ಉಪಾಹಾರವನ್ನೂ ಮಾಡತೊಡಗಿದರು.
ಒಂದು ಮಧ್ಯಾಹ್ನ ಊಟ ಮಾಡಿ ಪದ್ಮ ಹೋಗಿ ಮಲಗಿಬಿಟ್ಟಳು. ಅವತ್ತು ರಾಮಚಂದ್ರನಿಗೆ ಕೋರ್ಟು ಕೆಲಸ ಹೆಚ್ಚು ಇರಲಿಲ್ಲ. ಬೇಗ ಮುಗಿಸಿಕೊಂಡು ಮನೆಗೆ ಬಂದ. ಕಾಫಿ ಇನ್ನೂ ಸಿದ್ಧವಾಗಿರಲಿಲ್ಲ. ಮೆಮೇಲೆ ಆವೇಶ ಬಂದಿತು. ಹೆಂಡತಿಯನ್ನು ಲಕ್ಷ್ಯವಿಲ್ಲದೆ ಬಡಿಯುವುದಕ್ಕಾರಂಭಿಸಿದನು. ಅವನ ಪ್ರಾಹಾರವನ್ನು ತಡೆಯಲಾರದೆ ತೊಟ್ಟಿಗೆ ಓಡಿ ಬಂದಳು. ಅಲ್ಲಿಗೂ ಅಟ್ಟಿಸಿಕೊಂಡು ಬಂದನು. ‘ಹೋ’ ಎಂದು ಚೀರಿದಳು. ಅವಳು ಕೂಗಿದ ರಭಸಕ್ಕೆ ರೂಮಿನಲ್ಲಿದ್ದ. ವೆಂಕಟೇಶ, ಲಕ್ಷ್ಮಣ ಇಬ್ಬರೂ ಓಡಿಬಂದರು. ರಾಮಚಂದ್ರನ ಕೋಪ ಇಮ್ಮಡಿಸಿತು. ಕೋಪದ ಭರದಲ್ಲಿ ಹೆಂಡತಿಯನ್ನು ಒದ್ದುಬಿಟ್ಟ. ಪದ್ಮನಿಗೆ ಸ್ಮೃತಿ ತಪ್ಪಿತು. ಇದನ್ನು ಕಣ್ಣಾರೆ ಕಂಡ ವೆಂಕಟೇಶ, ಲಕ್ಷ್ಮಣರು ತುಂಬ ನೊಂದುಕೊಂಡರು. ಲಕ್ಷ್ಮಣ ಜಯನನ್ನು ಬರಹೇಳಿ ಪದ್ಮನಿಗೆ ಉಪಚರಿಸಲು ಹೇಳಿದ. ವೆಂಕಟೇಶನ ದೇಹಾದ್ಯಂತವೂ ಕೋಪದಿಂದ ಕಂಪಿಸತೊಡಗಿತು.
“ಬಹಳ ಗಟ್ಟಿಗನಯ್ಯಾ, ವೀರ. ಹೆಂಡತಿಯನ್ನು ಸಾಯಬೀಳ ಹೊಡೆಯುವ ಮಹಾವೀರ. ವಿದ್ಯಾ ಕಲಿತು ಲಾಯg ಆದ್ದಕ್ಕೆ ನಿನ್ನ ಜನ್ಮ ಸಾರ್ಥಕವಾಯಿತು. ರಾಯರಿಗೆ ಏನು ಗೌರವವೋ – ತಮ್ಮ ಮಗನನ್ನು ನೋಡಿ ಅವರು ಎಷ್ಟು ಹೆಮ್ಮೆಪಟ್ಟುಕೊಂಡರೂ ಸಾಲದು.”
“ನಿನಗೆಷ್ಟೋ ಬಾಯಿ? ಮನೆಯಲ್ಲಿ ತಿರುಪೆಕೂಳು ತಿಂದುಕೊಂಡು ಬಿದ್ದಿರೋ ನಾಯಿ. ನನ್ನ ಹೆಂಡತಿಯನ್ನ ನಾನು ಬೇಕಾದ್ದು ಮಾಡುತ್ತೇನೆ. ನೀನು ಯಾರು ಕೇಳುವುದಕ್ಕೆ?”
“ನನ್ನ ಸುದ್ದಿ ನಿನಗೇಕೋ? ಬೇಕಾದರೆ ಇರು ಸಾಕಾದರೆ ನಮ್ಮ ಮನೆ ಬಿಟ್ಟು ಹೋಗು. ನನ್ನ ಸುದ್ದೀಗೆ ಮತ್ತೇನಾದರೂ ಬಂದರೆ ಕತ್ತು ಹಿಡಿದು ಆಚೆ ತಳ್ಳಿಸುತ್ತೇನೆ.”
“ತಳ್ಳಿಸದೆ ಏನಪ್ಪಾ ಮಡುತ್ತೀ. ಕಷ್ಟಪಟ್ಟು ಎಲ್ಲಾ ಸಂಪಾದಿಸಿದ್ದಿ. ಸ್ವಂತ ತಾಯೀಗೆ ಗುಟುಕು ನೀರು ನೀಡದ ಮಹಾನುಭಾವ. ಇನ್ನು ನಾವು ಒಂದು ಲಕ್ಷ್ಯವೇ?”
ರಾಮಚಂದ್ರನ ನಾಲಿಗೆಗೆ ಲಗಾಮು ತಪ್ಪಿತು. ವೆಂಕಟೇಶನನ್ನ ಎಷ್ಟು ವಿಧದಲ್ಲಿ ಎಷ್ಟು ಹೊಲಸು ಮಾತುಗಳಲ್ಲಿ ಬಯ್ಯಬಹುದೋ ಅಷ್ಟನ್ನೂ ಮುಗಿಸಿದನು. ಕೇಳಿ ಕೇಳಿ ವೆಂಕಟೇಶನಿಗೂ ಸಾಕಾಯಿತು.
“ಹೆಣ್ಣುಮಗಳು ನಾಲ್ಕು ತಿಂಗಳು ಬಸುರಿ, ಅವಳನ್ನು ಒದ್ದೆಯಲ್ಲಾ ಪಾಪೀ. ನಾಳೆಯೇನಾದರೂ ಹೆಚ್ಚು ಕಡಿಮೆಯಾದರೆ?”
“ಆದರೆ – ನಿಮ್ಮಪ್ಪನ ಮನೆ ಗಂಟೇನೋ ಹೋಯಿತು?”
ಎಂದ. ವೆಂಕಟೇಶನ ಸಹನೆ ಮೇರೆ ಮೀರಿತು. ರಾಮುವಿನ ಷರಟಿನ ಕುತ್ತಿಗೆ ಹಿಡಿದು ಫಟೀರೆಂದು ನಾಲ್ಕು ಬಿಸಿಬಿಸಿಯಾಗಿ ಕೊಟ್ಟನು. ರಾಮುವಿನ ಹೊಲಸು ಬಾಯಿ ನಿಂತಿತು. ‘ಗೊಳೋ’ ಎಂದು ಅಳಲಾರಂಭಿಸಿದನು.
“ಇಷ್ಟು ದಿವಸ ಧಣಿ ಮಗ ಎಂದು ಸುಮ್ಮನಿದ್ದೆ. ಇನ್ನೊಂದು ದಿವಸ ಹೀಗೆ ಮಾಡು, ಹಲ್ಲು ಮುರಿದು ಕೆಗೆ ಕೊಡುತ್ತೇನೆ.”
ಎಂದು ಅವನನ್ನು ಬಿಟ್ಟ. ರಾಮು ಅಳುತ್ತಲೇ ಹೋಗಿ ಕೋಣೆ ಸೇರಿಕೊಂಡ.
ಪದ್ಮನಿಗೆ ಹೆಚ್ಚು ಘಾತವೇನೂ ದೆವವಶಾv ಆಗಲಿಲ್ಲ. ಮೂರು ನಾಲ್ಕು ದಿವಸ ಹೊಟ್ಟೆ ಹಿಡಿದುಕೊಂಡ ಹಾಗೆ ಆಗಿ. ನೋಯುತ್ತಿತ್ತು. ಬಿಸಿನೀರಿನ ಕಾವಟವನ್ನು ಕೊಡಲು ನೋವು ಕಡಿಮೆಯಾಗುತ್ತ ಬಂತು.
ವೆಂಕಟೇಶಯ್ಯ ಅಂದೇ ಹೋಗಿ ಹನ್ನೆರಡು ರುಪಾಯಿ ಬಾಡಿಗೆಗೆ ಒಂದು ಸಣ್ಣ ಮನೆ ನೋಡಿ ಬಂದ. ಸಂಸಾರ ಹೂಡುವುದಕ್ಕೆ ತಕ್ಕ ಅನುಕೂಲವಿರಲಿಲ್ಲ. “ಏನಾದರೂ ಚಿಂತೆಯಿಲ್ಲ. ಸದ್ಯ ಈ ಹಾಳು ಸಹವಾಸ ತಪ್ಪಿದರೆ ಸಾಕು” ಎಂದು ನಿಶ್ಚಯಿಸಿದ. ಶಾಂತನ ಕಿವಿಯಲ್ಲಿ ಒಂದು ಜತೆ ವಜ್ರದೋಲೆ ಇತ್ತು. ಅದನ್ನು ಮಾರಿ ಮನೆಗೆ ಬೇಕಾದ ಪಾತ್ರೆ ಪದಾರ್ಥ ಎಲ್ಲವನ್ನೂ ಹೊಂದಿಸಿಕೊಂಡನು.
ರಾಯರಿಗೆ ಹೇಳಿ ಬರಲು ಹೋದ. ಅವರ ಸ್ಥಿತಿಯನ್ನು ನೋಡಿ ಕಂಬನಿದುಂಬಿ ಹಿಂತಿರುಗಿದ. ಸಾವಿತ್ರಮ್ಮ ಎಷ್ಟೋಹೇಳಿ ನೋಡಿದರು. ವೆಂಕಟೇಶನು ಮನಸ್ಸು ಬದಲಾಯಿಸಲಿಲ್ಲ. ಲಕ್ಷ್ಮಣನಿಗೂ ಜಯನಿಗೂ ಹೇಳುವುದು ಬಹಳ ಕಷ್ಟವಾಯಿತು. ಶಾಂತಾ ಜಯ ಒಬ್ಬರ ಕುತ್ತಿಗೆ ಒಬ್ಬರು ತಬ್ಬಿಕೊಂಡು ಅತ್ತರು.
“ಮನೆ ದೂರವಿಲ್ಲ, ದಿನ ಬರುತ್ತಿರುತ್ತೀಯೋ ಇಲ್ಲಮ್ಮ” ಎಂದು ಶಾಂತಾ, ಜಯನನ್ನು ಕೇಳಿದಳು.
“ನಾವು ಗೆದ್ದ ಹಾಗೆ ಆಯಿತು. ಇನ್ನು ಎಲ್ಲಾ ನಿನ್ನ ಮೇಲೆ. ಲಚ್ಚಣ್ಣನ ಮೇಲೆ ಆರಂಭವಾಗುತ್ತದಲ್ಲೇ ಜಯ.”
“ಏನು ಮಾಡುವುದಮ್ಮ? ಬಂದದ್ದು ಬರಲಿ. ದೇವರಿದ್ದಾನೆ. ಕರ್ಮ ಧರ್ಮ ನೋಡುವುದಕ್ಕೆ”
ಎಂದು ಜಯ ಸಮಾಧಾನ ಮಾಡಿದಳು. ಸಾವಿತ್ರಮ್ಮ ಓಡಿ ಬಂದರು. ಶಾಂತನನ್ನು ಮಣೆಯ ಮೇಲೆ ಕೂರಿಸಿ ಕುಂಕುಮ, ಎಲಡಿಕೆಯನ್ನು ಕೊಟ್ಟರು. ಅದರ ಜತೆಗೆ ಒಂದು ರವಿಕೆ ಕಣ, ಒಂದು ಸವರ ಇತ್ತು.
“ಶಾಂತಾ, ನಿಮ್ಮಮ್ಮ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ರಾಮೂನ್ನ ಎಲ್ಲಾರೂ ನನಗೋಸ್ಕರ ಕ್ಷಮಿಸೀಮ್ಮಾ. ಹೆಣ್ಣುಮಗಳು ನೀನು ಹೀಗೆ ನೊಂದುಕೊಂಡು ಹೋಗುವುದು ಶ್ರೇಯಸ್ಸಲ್ಲ. ವಿವೇಕವಲ್ಲ, ತಾನು ಪಾಳೆಯಗಾರ ಎಂದು ತಿಳಿದುಕೊಂಡಿದ್ದಾನೆ”
ಎಂದು ಹೇಳಿದರು. ರಾಯರು ಒಳಗಿನಿಂದ ಕೂಗಿದ ಧ್ವನಿ ಕೇಳಿಬರಲು ಸಾವಿತ್ರಮ್ಮ ಒಳಗೆ ಹೋದರು. ವೆಂಕಟೇಶ ಹೊರಡುವ ಹೊತ್ತಿಗೆ ರಾಮುವಿನ ಮೋಟಾರು ಧ್ವನಿ ಕೇಳಿಬಂತು. ಅವನೇ ಒಳಗೆ ಬಂದ, ವೆಂಕಟೇಶ ಅವನನ್ನು ನೋಡಿ
“ಹೆಕೋm ಅಡ್ವೋಕೇm ರಾಮಚಂದ್ರರಾಯರೇ, ತಮ್ಮ ಅಪ್ಪಣೆಯಂತೆ ಮನೆ ಬಿಟ್ಟು ಹೋಗುತ್ತಿದ್ದೇವೆ. ಇವತ್ತು ನೀವೇ ಗೆದ್ದಿರಿ, ಆದರೆ ಒಂದು ಮಾತು, ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರಿ. ಇವತ್ತು ನಿಮ್ಮದು ಮೇಲುಗೆ. ನಿಮಗೆ ಈಗ ಶುಕ್ರದೆಶೆ ನಡೆಯುತ್ತಾ ಇದೆ. ಅದರ ಬಲದಲ್ಲಿ ಬೇಕಾದ್ದು ಮಾಡಬಹುದು ಅಂದುಕೊಂಡು ಮಾಡುತ್ತಾ ಇದ್ದೀರಿ – ಮಾಡಿ, ಪ್ರಪಂಚ ಚಿಕ್ಕದು. ಮತ್ತೆ ಯಾವಾಗಲಾದರೂ ನೀವೂ ನಾವೂ ಸಂಧಿಸಿಯೇ ಸಂಧಿಸುತ್ತೇವೆ. ನಿಮಗೆ ಹೇಗೆ ಈಗ ಶುಕ್ರ ದೆಶೆಯೋ ಆಗ ನನಗೆ ಶುಕ್ರದೆಶೆ ಆರಂಭವಾಗಿರತ್ತೆ. ನಿಮ್ಮ ಲೆಕ್ಕವನ್ನೆಲ್ಲಾ ಬಡ್ಡಿ, ಚಕ್ರಬಡ್ಡಿ ಸಹಿತ ತೀರಿಸುತ್ತೇನೆ – ಅದನ್ನು ಮರೆಯಬೇಡಿ”
ಎಂದು ಹೇಳಿ ಹೆಂಡತಿಯೊಡನೆ ಹೊರಟು ಹೋದನು. ತನಗಾದ ಅವಹೇಳನವನ್ನು ಲಕ್ಷ್ಮಣನೂ ನೋಡಿದನಲ್ಲಾ ಎಂದು ರಾಮಚಂದ್ರನಿಗೆ ಕೋಪ ಬಂತು.
“ಅವನು ಹುಚ್ಚ ಹುಚ್ಚಾಗಿ ಮಾತನಾಡುತ್ತಾ ಇದ್ದರೆ ನಿಂತು ಕೊಂಡು ನೋಡುತ್ತಾನೆ…”
“ನಾನೇನು ಮಾಡಬೇಕಾಗಿತ್ತು?”
“ನನ್ನ ಪರ ನಾಲ್ಕು ಮಾತು ಆಡುವುದಕ್ಕೇನಾಗಿತ್ತು?”
“ನಿನ್ನಪರ ಆಡುವುದಕ್ಕೇನೂ ಇರಲಿಲ್ಲ.”
“ಅಣ್ಣಾ, ತಮ್ಮ ಅನ್ನೋ ಭಾವನೆ ಕೂಡ ಇಲ್ಲ.”
“ಹೇಗೆ ಬರಬೇಕು? ಅದು ನಿನಗೆ. ಒಂದು ಕಡೆ ದರ್ಪ, ಒಂದು ಕಡೆ ಹಣ ಎರಡೂ ಇರುವಾಗ ನಿನಗೆ ಯಾರು ಏತಕ್ಕೆ ಬೇಕು? ದರ್ಪ, ಹಣವೇ ನಿನ್ನ ಅಣ್ಣಾ ತಮ್ಮ, ಏಲ್ಲಾನೂ.”
“ನೀನು ಎಷ್ಟಾದರೂ ಅವರ ಕಡೆಯೇ ಅಲ್ಲವೇ?”
“ನಾನು ಅವರ ಕಡೆ ನಿಜ, ನಿನ್ನ ಕಡೆ ಯಾರಿದ್ದಾರೆ ತೋರಿಸುಮುಂದಕ್ಕೆ ಇದೇ ಕಟ್ಟಿಟ್ಟ ಬುತ್ತಿ.”
“ಆಗಲಿ ಬಿಡಯ್ಯಾ. ಏನಾದರೂ ನಿನ್ನ ಸಹಾಯವೇನೂ ಕೇಳುವ ಹಾಗಿಲ್ಲ.”
“ಬಹಳ ಸಂತೋಷಾಪ್ಪ”
ಎಂದು ಮಾತು ಮುಗಿಸಿದನು. ವೆಂಕಟೇಶ, ಶಾಂತಾ ಹೊರಟು ಹೋದುದು ಲಕ್ಷ್ಮಣ ಜಯ ಇಬ್ಬರಿಗೂ ಏನೋ ಕಳೆದುಕೊಂಡಂತೆ ಆಗಿತ್ತು. ವೆಂಕಟೇಶ, ಲಕ್ಷ್ಮಣರ ಮನಸ್ಸು ಬೆರೆತು ಹೇಗೆ ಒಂದಾಗಿತ್ತೋ ಜಯ ಶಾಂತರ ಮನಸ್ಸೂ ಹಾಗೇ ಒಂದಾಗಿತ್ತು. “ನಾವು ಗೆದ್ದ ಹಾಗಾಯಿತು. ಇನ್ನೆಲ್ಲಾ ನಿನ್ನ ಮೇಲೆ ಲಚ್ಚಣ್ಣನ ಮೇಲೆ ಆರಂಭವಾಗುತ್ತದಲ್ಲೇ ಜಯಾ” ಎಂದು ಶಾಂತಾ ಹೇಳಿದ್ದುದು ಮತ್ತೆ ಮತ್ತೆ ಜಯನ ಜ್ಞಾಪಕಕ್ಕೆ ಬರುತ್ತಿತ್ತು. ತನ್ನ ಅಸಹಾಯಕತೆಯನ್ನು ನೆನೆದು ನಿಟ್ಟುಸಿರು ಬಿಟ್ಟಳು.
*****
ಮುಂದುವರೆಯುವುದು
