ಹಿರಣ್ಣಪ್ಪನವರಿಗೂ ರಾಮಚಂದ್ರನಿಗೂ ಬೆಳಗಾದರೆ ಅಠಾರಾ ಕಛೇರಿ ಯಾತ್ರೆ ಆರಂಭವಾಗಿತ್ತು. ಅವರು ಈ ಯಾತ್ರೆಯ ಸಲುವಾಗಿ ಬಂದು ನಿಂತಿದ್ದರು. ರಾಮಚಂದ್ರ ತನ್ನ ಕೇಸಿನ ಕಟ್ಟುಗಳನ್ನು ಲಾಯರು ಮಿತ್ರರ ಕೆಗೆ ಹಾಕಿ ತಾನೂ ಯಾತ್ರೆಯಲ್ಲಿ ಉದ್ಯುಕ್ತನಾಗಿದ್ದನು. ಹತ್ತು ಹತ್ತು ಸಲ ಷರಿಫಖಾನರೂ, ಶೆಟ್ಟರೂ ಬಂದು ‘ಏನಾಯಿತು-ಏನಾಯಿತು’ ಎಂದು ವಿಚಾರಿಸಿಕೊಂಡು ಹೋಗುತ್ತಿದ್ದರು. ರಾಮಚಂದ್ರ ಕೋಲು ಮೋರೆ ಹಾಕಿಕೊಂಡು
“ಇನ್ನೂ ಏನೂ ಗೊತ್ತಾಗಿಲ್ಲ. ನೋಡಬೇಕು. ಅದೃಷ್ಟ ಹೇಗೆ ಇದೆಯೋ ಏನೋ?”
“ನಿಮಗೇನು ಭಯ ಬಿಡಿಸ್ವಾಮಿ”
ಎಂದು ಶೆಟ್ಟರು ಧೆರ್ಯ ಹೇಳಿ ಹೋಗುತ್ತಿದ್ದರು. ಮಾರನೆಯ ದಿವಸ ಖಾನರೂ ಶೆಟ್ಟರೂ ಬಂದಾಗ ರಾಮಚಂದ್ರನ ಮುಖದಲ್ಲಿ ಪೂರ್ಣ ಕಳೆ ಕೂಡಿಬಿಟ್ಟಿತ್ತು. ಉದ್ವೇಗದಿಂದ ಅವನು ಹುಚ್ಚನಂತೆ ಆಡುತ್ತಿದ್ದನು. ಶೆಟ್ಟರೂ ಉದ್ವೇಗದಿಂದಲೇ
“ಎನಾಯಿತು?”
ಎಂದು ಕೇಳಿದರು. ರಾಮಚಂದ್ರ ಉದ್ದನೆಯ ಲಕೋಟೆಯನ್ನು ಅವರ ಕೆಯಲ್ಲಿ ಕೊಟ್ಟ. ಶೆಟ್ಟರೂ ಸಾಹೇಬರೂ ಮುಖಕ್ಕೆ ಮುಖವಿಟ್ಟು ಓದಿ ನೋಡಿಕೊಂಡರು. ಸರ್ಕಾರದ ಆಜ್ಞೆ ರಾಮಚಂದ್ರನಿಗೆ ಮುನಿಸೀsಗಿರಿ ದೊರೆತಿತ್ತು. ಖಾನರು ಓಡಿ ಹೋಗಿ ಒಂದು ಹೂವಿನಹಾರ, ತುರಾಯಿ ತಂದು ರಾಮಚಂದ್ರನಿಗೆ ‘ಮುಬಾರP’ ಹೇಳಿದರು. ಶೆಟ್ಟರು ಕೆಕುಲುಕಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಕೆಲಸವಾದ ಬ್ರಹ್ಮಾನಂದದ ಜತೆಯಲ್ಲಿ ರಾಮುವಿಗೆ ಸಣ್ಣ ವೇದನೆಯೊಂದು ಕೂಡಿಕೊಂಡಿತ್ತು. ಬ್ಯಾಂಕು, ಸಹಕಾರ ಸಂಘ, ಪ್ರಜಾಪ್ರತಿನಿಧಿ ಸಭೆಗಳಿಗೆಲ್ಲಾ ಅವನು ರಾಜಿನಾಮೆಯನ್ನು ಕೊಡಬೇಕಾಗಿತ್ತು
“ಏತಕ್ಕೆ ಚಿಂತಿಸುವಿರಿ ಸ್ವಾಮಿ. ನಾವಿಲ್ಲವೇ? ನೀವಿದ್ದರೇನು ನಾವಿದ್ದರೇನು?”
ಭರವಸೆಯನ್ನು ಕೊಟ್ಟರು.
ತಾವು ಎಂಟು ದಿವಸ ಬಂದು ನಿಂತು, ಪ್ರಯತ್ನಪಟ್ಟಿದ್ದಕ್ಕೂ ಸಾರ್ಥಕವಾಗಿ ಅಳಿಯನಿಗೆ ಕೆಲಸ ಸಿಕ್ಕಿತಲ್ಲಾ ಎಂದು ಹಿರಣ್ಣಪ್ಪನವರು ಪರಮಾನಂದಪಟ್ಟರು. ಪದ್ಮನಂತೂ ಸಂಜೆಯೊಳಗಾಗಿ ಬಸವನಗುಡಿ ಎಲ್ಲ ಮಹಿಳೆಯರಿಗೂ ತನ್ನ ಗಂಡನಿಗೆ ಕೆಲಸವಾದ ಸಂಗತಿಯನ್ನು ಹೇಳಿಕೊಂಡು ಬಂದಿದ್ದಳು.
ಲಕ್ಷ್ಮಣ, ಜಯನೂ ಸಂತೋಷಪಟ್ಟರು. ಆದರೆ ಜಯ ಗಡಗಡನೆ ನಡುಗಿದಳು. ಅವಳ ಮುಖ ಗಂಭೀರವಾಯಿತು.
“ಏತಕ್ಕೆ ಜಯಾ?”
ಎಂದು ಲಕ್ಷ್ಮಣ ಕೇಳಿದ
“ಏತಕ್ಕೂ ಇಲ್ಲ. ಭಾವನವರಿಗೆ ಕೆಲಸವಾದದ್ದು ಕೇಳಿ ಸಂತೋಷವಾಯಿತು ಅಷ್ಟೇ.”
“ಸಂತೋಷವಾದರೆ ಯಾರಾದರೂ ನಡುಗುತ್ತಾರೆಯೇ?”
“ಹೂ! ಸಂತೋಷ ಹೆಚ್ಚಾದರೆ ನಡುಕ ಬರುವುದೂ ಉಂಟು.”
“ಇರಬಹುದು. ಆದರೆ ನೀನು ನಡುಗಿದ್ದೇಕೆ?”
“ಹೇಳಿದರೆ ನೀವು ಕೋಪ ಮಾಡಿಕೊಳ್ಳುವಿರೇನೋ?”
“ಇಲ್ಲ- ಹೇಳು.”
“ಮೊದಲೇ ಭಾವನನ್ನು ಹಿಡಿಯುವವರಿಲ್ಲ. ಇನ್ನುಮೇಲಂತೂ ಸರಿಯೇ ಸರಿ – ನೀವೂ, ನಾನೂ ಉಳಿಯುವುದಕ್ಕಾದರೂ ಆಗುತ್ತದೆಯೇ?”
ಕಂಬನಿಯ ಕಟ್ಟೆಯೊಡೆಯಿತು. ಲಕ್ಷ್ಮಣ ಹೆಂಡತಿಯನ್ನು ಪ್ರೀತಿಯಿಂದ ನೇವರಿಸುತ್ತಾ
“ಜಯ, ಜಯ ಯಾವಾಗಲೂ ನಮ್ಮದು. ಭಯವೇನು? ನಾನಿಲ್ಲವೇ ನಿನಗೇನು ಭಯ?”
“ನನ್ನ ಯೋಚನೆಯಲ್ಲ. ನೀವು – ನಿಮ್ಮನ್ನು ಯಾರು ಹೊಟ್ಟೆ ಹಿಡಿದು ನೋಡಬಹುದು. ಅರ್ಧವಾಗಿಬಿಟ್ಟಿದ್ದೀರಲ್ಲಾ, ತಲೆಯಲ್ಲಿ ನರೆಗೂದಲು ಕೂಡ ಆರಂಭವಾಗಿದೆ.”
“ಮುದುಕನಾದೆ ಕಣೇ ಜಯಾ, ಅದಕೇ ನರೆಗೂದಲು. ನನಗೇನಾಗಿದೆ ಎಂದು ಇಷ್ಟು ಯೋಚಿಸುತ್ತೀ?” ಎಂದು ಸಮಾಧಾನ ಮಾಡಿದನು.
ಜಯನ ಊಹೆ ತಪ್ಪಾಗಲಿಲ್ಲ. ಅಡಿಗೆ ಕೆಲಸದ ಎಲ್ಲಾ ಹೊಣೆಗಾರಿಕೆಯೂ ಜಯನ ಮೇಲೇ ಬಿದ್ದುಬಿಟ್ಟಿತು. ರಾಮಚಂದ್ರನಿಗೆ ಕೆಲಸ ಸಿಕ್ಕಿದುದು ಪದ್ಮನಿಗೂ ಸಿಕ್ಕಿದಂತೆ ಆಗಿತ್ತು ಮನೆಗೆ ಅವಳೇ ಯಜಮಾನತಿ. ಮನೆಗೆಲಸ ಮಾಡುವುದೆಂದರೆ ತನ್ನ ಆತ್ಮ ಗೌರವಕ್ಕೆ ಕುಂದು ಬರುವುದೆಂಬ ಭಾವನೆಯು ಅವಳ ಮನಸ್ಸಿನಲ್ಲಿ ನೆಟ್ಟಿತ್ತು ಸಾವಿತ್ರಮ್ಮ ತನ್ನ ಪಾಡಿಗೆ ತಾನು ಇದ್ದುಬಿಡುತ್ತಿದ್ದಳು. ದುಃಖ ತಪದಲ್ಲಿ ಲೀನಳಾಗಿದ್ದ ಅವಳನ್ನು ಯಾರೂ ಮಾತನಾಡಿಸುವ ಹಾಗಿರಲಿಲ್ಲ. ಅತ್ತೆಯನ್ನು ಯಾವ ಕೆಲಸಕ್ಕೂ ಕರೆಯದೆ, ತನ್ನ ಕಷ್ಟವನ್ನು ಪರರಲ್ಲಿ ಹೇಳಿಕೊಳ್ಳದೆ ಜಯ ಗಾಣದೆತ್ತಿನಂತೆ ದುಡಿಯುತ್ತಿದ್ದಳು. ಬೆಳಿಗ್ಗೆ ಐದು ಗಂಟೆಗೆದ್ದು ಕೆಲಸಕ್ಕೆ ಆರಂಭಿಸಿದರೆ ರಾತ್ರಿ ಹನ್ನೊಂದಾಗುವವರೆಗೂ ಬಿಡುವೇ ಆಗುತ್ತಿರಲಿಲ್ಲ.
ಹೆಂಡತಿಯ ದುಡಿತವನ್ನು ಕಂಡು ಲಕ್ಷ್ಮಣ ಬಹಳವಾಗಿ ಮರುಗಿದನು. ಆದರೆ ಮಾತನಾಡುವ ಹಾಗಿರಲಿಲ್ಲ. ತಾನು ಸಂಪಾದನೆಯಿಲ್ಲದೆ ಕೂಳಿಗೆ ದಂಡವಾಗಿ ಮನೆಯಲ್ಲಿ ಕುಳಿತಿದ್ದ. ಹೆಂಡತಿಯೂ ಹಾಗೆ ಕುಳಿತಿರಲು ಸಾಧ್ಯವಿರಲಿಲ್ಲ.
ಜಯನಿಗೆ ದುಡಿತದ ಶ್ರಮ ಗೊತ್ತಾಗುತ್ತಿರಲಿಲ್ಲ. ತನ್ನ ಮನೆ ತಾನು ದುಡಿಯದೆ ಮತ್ತೆ ಯಾರು ದುಡಿಯಬೇಕು ಎನ್ನುವ ಭಾವನೆಯಿಂದ ಎಷ್ಟು ಎಷ್ಟು ಕೆಲಸ ಮೇಲೆ ಬಿದ್ದರೂ ಸಂತೋಷದಿಂದ ನಿರ್ವಹಿಸುತ್ತಿದ್ದಳು. ಆದರೆ ಭಾವನವರ ಬಿರುನುಡಿಗಳು ಅವಳನ್ನು ಹಣ್ಣು ಹಣ್ಣು ಮಾಡಿಬಿಡುತ್ತಿದ್ದುವು. ಸೊಸೆಯಂದಿರನ್ನು ಕಾಡಲು ಅಧಿಕಾರ ಪಡೆದ ಅತ್ತೆ. ಕೆ ಹಿಡಿದ ಗಂಡನೇ ಒಂದು ಮಾತು ಆಡದಿರುವಾಗ ಭಾವನವರ ಬಾಯಿಂದ ಎಷ್ಟು ಮಾತುಗಳನ್ನು ಕೇಳಬೇಕು ಎಂದು ಕೊರಗುವಳು. ಭಾವನವರ ‘ಮರ್ಜಿ’ಯನ್ನನುಸರಿಸಿ ಅವರಿಗೆ ತೃಪ್ತಿಯಾಗುವಂತೆ ಅಡಿಗೆ ಮಾಡುವಳು. ಅವಳು ಏನು ಮಾಡಿದರೂ ಅದರಲ್ಲಿ ಕುಂದು, ಕೊರತೆ ರಾಮಚಂದ್ರನಿಗೆ ಕಂಡುಬರುತ್ತಲೇ ಇದ್ದವು.
ಇದ್ದಕ್ಕಿದ್ದ ಹಾಗೆ ಜಯನಿಗೆ ತಲೆ ಸುತ್ತುವುದಕ್ಕೆ ಆರಂಭವಾಯಿತು. ಏನು ತಿಂದರೂ ಕೂಡಲೆ ವಾಂತಿಯಾಗುವುದಕ್ಕೆ ಮೊದಲಾಯಿತು. ಸಾವಿತ್ರಮ್ಮ ಜಯನ ಕೆಲಸವನ್ನು ವಹಿಸಿಕೊಂಡಳು. ಸೊಸೆ ಏನಾದರೂ ಕೆಲಸ ಮಾಡಲು ಬಂದರೆ
“ಬೇಡಪ್ಪಾ. ನಾಲ್ಕು ದಿವಸ ಸುಧಾರಿಸಿಕೋ. ನಾನು ನೋಡಿಕೊಂಡು ಹೋಗುತ್ತೇನೆ.”
ಎಂದು ಹೇಳುತ್ತಿದ್ದಳು. ಶಾಂತಾ, ಜಯನನ್ನು ಮನೆಗೆ ಕರೆದುಕೊಂಡು ಹೋಗಿ ಹಣ್ಣು ಹಂಪಲು ತರಿಸಿಕೊಡುತ್ತಿದ್ದಳು. ಅದು ಇದೂ ತಿಂಡಿಯನ್ನು ಮಾಡಿ ಅವಳಿಗೆ ಕೊಡುತ್ತಿದ್ದಳು.
“ಬಯಕೆಯೇನಾದರೂ ಇದ್ದರೆ ಹೇಳೂ ಜಯಾ. ಯಾವದನ್ನೂ ಈಗ ಮುಚ್ಚಿಕೊಳ್ಳಬಾರದು.”
“ನನಗೆ ಬಯಕೆಯೇನೂ ಇಲ್ಲಮ್ಮ”
ಎಂದು ಜಯ ಉತ್ತರ ಹೇಳಿಬಿಡುತ್ತಿದ್ದಳು. ಶಾಂತನ ಮನೆಗೆ ಜಯಾ ಹೋಗಿ ಬರುತ್ತಿದ್ದುದನ್ನು ಪದ್ಮ ಗಂಡನಿಗೆ ತಿಳಿಸಿದಳು. ಕೆಲಸಕ್ಕೆ ಕಳ್ಳಬೀಳುವುದಕ್ಕೆ ಈ ನೆವವನ್ನು ಅವಳು ಹೂಡಿರುವುದಾಗಿ ರಾಮಚಂದ್ರ ಭಾವಿಸಿಕೊಂಡನು. ಮನಸ್ಸು ಬಂದಂತೆ ಮಾತನಾಡತೊಡಗಿದನು. ಜಯನ ಕಿವಿಗೆ ಮಾತುಗಳು ಶೂಲದಂತೆ ಬಂದು ನೆಟ್ಟವು. ಅಂದಿನಿಂದ ತಾನೇ ಕೆಲಸಗಳನ್ನು ಮತ್ತೆ ವಹಿಸಿಕೊಂಡಳು. ಯಾರೆಷ್ಟು ಹೇಳಿದರೂ ಬಿಡುತ್ತಿರಲಿಲ್ಲ. ಶಾಂತಾ ಇದನ್ನು ಕೇಳಿ
“ನಿನ್ನನ್ನು ದೇವರು ಕಾಪಾಡಬೇಕು ಕಣೇ ಜಯಾ. ನೀನು ಹೇಗೆ ಮೆಕಳೆದು ಮತ್ತೆ ಮನುಷ್ಯಳಾಗುತ್ತೀಯೋಮ್ಮ”
ಎಂದು ಹೇಳಿದಳು.
ಜಯ ಗರ್ಭವತಿಯಾಗಿದ್ದುದು ಸುಳ್ಳೆಂದು ಭಾವಿಸಿದ್ದ ರಾಮಚಂದ್ರನ ಕಣ್ಣುಗಳಿಗೆ ಲಕ್ಷಣಗಳು ಚೆನ್ನಾಗಿ ಕಾಣಲಾರಂಭಿಸಿದವು. ಐದುತಿಂಗಳು ತುಂಬಿತು. ಆಗಲೂ ಅವಳು ಕೆಲಸಮಾಡುತ್ತಿದ್ದರೆ ನೋಡಿಕೊಂಡು ಸುಮ್ಮನೇ ಇರುತ್ತಿದ್ದನು. ಯಾವದಕ್ಕೆ ಸ್ವಲ್ಪ ತಡವಾದರೂ ತನ್ನ ಬೆಗಳ ಮಳೆಯನ್ನು ಪ್ರಾರಂಭಿಸುತ್ತಿದ್ದನು.
ಒಂದು ದಿನ ರಾಮಚಂದ್ರ ಮನೆಗೆ ಬರುವ ಹೊತ್ತಾಗಿತ್ತು. ಹಂಡೆಯಲ್ಲಿ ಒಂದು ಬಿಂದಿಗೆಗಿಂತ ಹೆಚ್ಚು ನೀರಿರಲಿಲ್ಲ. ಸ್ನಾನಕ್ಕೆ ನೀರಿಲ್ಲವೆಂದು ರೇಗುವನಲ್ಲಾ ಎಂದು ಜಯ ಬೇಗೆ ಬೇಗನೆ ನೀರು ಸೇದಿ ಹಾಕುತ್ತಿದ್ದಳು. ನೀರು ಸೇದಿಹಾಕುವ ರಭಸದಲ್ಲಿ ತಲೆತಿರುಗಿ ಬಂತು. ದೊಪ್ಪನೆ, ಬಿಂದಿಗೆಯನ್ನೂ ಕೆಡವಿಕೊಂಡು ಬಿದ್ದುಬಿಟ್ಟಳು. ಜ್ಞಾನ ತಪ್ಪಿತು. ಸಾವಿತ್ರಮ್ಮ ಓಡಿಬಂದಳು.
“ಅಯ್ಯೋ – ಅನಾಹುತವಾಯಿತು”
ಎಂದು ಕೂಗಿ ಗಾಡಿ ತರಿಸಿ ಸೊಸೆಯನ್ನು ಕರೆದುಕೊಂಡು ಹೋಗಿ ಹೆರಿಗೆ ಆಸ್ಪತ್ರೆಗೆ ಸೇರಿಸಿದಳು. ಲಕ್ಷ್ಮಣನ ಬುದ್ದಿಗೆ ಮಂಕು ಕವಿದುಕೊಂಡಿತು. ಏನುಮಾಡಲೂ ತೋರದೆ ಆಸ್ಪತ್ರೆಯ ಬಾಗಿಲ ಬಳಿ ಕುಳಿತುಬಿಟ್ಟನು. ಸುದ್ದಿ ಕೇಳಿದ ಕೂಡಲೆ ಶಾಂತ ಆಸ್ಪತ್ರೆಗೆ ಓಡಿದಳು. ಜಯನ ಸ್ಥಿತಿಯನ್ನು ನೋಡಲಾರದೆ ತಲೆತಗ್ಗಿಸಿಬಿಟ್ಟಳು.
ಡಾಕ್ಟರು ಪೂರ್ವಸಿದ್ಧತೆಯನ್ನು ಮಾಡಿ ಜಯನನ್ನು ಶಸ್ತಚಿಕಿತ್ಸೆಗೆ ಕರೆದೊಯ್ದರು. ಕಾಲು ಗಂಟೆಯೊಳಗಾಗಿ ದೊಡ್ಡ ಆಸ್ಪತ್ರೆಯ ಡಾಕ್ಟರುಗಳೂ ಶಸ್ತಚಿಕಿತ್ಸೆಯ ಮಂದಿರಕ್ಕೆ ಹೋದರು. ಚಿಕಿತ್ಸಾ ಮಂದಿರದ ಮುಂದೆ ಸಾವಿತ್ರಮ್ಮ, ಲಕ್ಷ್ಮಣ, ಶಾಂತಾ ಬೊಂಬೆಗಳಂತೆ ಕುಳಿತು ಬಿಟ್ಟರು. ಮಂದಿರದಿಂದ ಹೊರಬಿದ್ದ ದಾದಿಯನ್ನು ಸಾವಿತ್ರಮ್ಮ
“ದೊಡ್ಡಜೀವ ಉಳಿಯುತ್ತೇನೇ ತಾಯೀ?”
ಎಂದು ಕೇಳಿದಳು. ದಾದಿ
“ನೋಡಬೇಕಮ್ಮ. ಉಳಿದರೆ ನಿಮ್ಮ ಅದೃಷ್ಟ ದೊಡ್ಡದು”
ಎಂದು ಹೇಳಿ ಮತ್ತೆ ಒಳಗೆ ಹೊರಟು ಹೋದಳು. ಲಕ್ಷ್ಮಣನ ಕಣ್ಣುಗಳು ಒಮ್ಮೆ ಮಂದಿರದ ಬಾಗಿಲನ್ನು ನೋಡುತ್ತಿದ್ದವು. ಒಮ್ಮೆ ಮಂದಿರದ ಎದುರಿಗಿದ್ದ ಗಡಿಯಾರವನ್ನು ನೋಡುತ್ತಿದ್ದವು. ಒಂದೊಂದು ನಿಮಿಷ ಒಂದೊಂದು ಯುಗವಾಗಿತ್ತು. ಕಾಲು ಗಂಟೆಯಾಯಿತು. ಅರ್ಧಗಂಟೆಯಾಯಿತು – ಒಂದು ಗಂಟೆಯಾಯಿತು. ಡಾಕ್ಟರು ಒಬ್ಬೊಬ್ಬರಾಗಿ ಹೊರಬೀಳರಾರಂಭಿಸಿದರು.
ಯಾರ ಮುಖದಲ್ಲಿಯೂ ಕಳೆಯಿಲ್ಲ. ಗಂಭೀರ ಭಾವ ಮೂಡಿದೆ. ಶಾಂತಾ ಒಬ್ಬ ಡಾಕ್ಟರನ್ನು
“ಏನಾಯಿತು ಸg?”
ಎಂದಳು. ಡಾಕ್ಟರು ದೀರ್ಘವಾಗಿ ಉಸಿರೆಳೆದು
“ಪ್ರಯತ್ನ ಸಫಲವಾಗಲಿಲ್ಲಮ್ಮ”
ಎಂದುಬಿಟ್ಟರು. ಲಕ್ಷ್ಮಣ ನಿಂತಲ್ಲಿಯೇ ಸ್ಮೃತಿತಪ್ಪಿ ನೆಲಕ್ಕೆ ಉರುಳಿದನು.
*****
ಮುಂದುವರೆಯುವುದು
ಸಂಧ್ಯಾ ರಾಗ – ೨೧
