ಪಂಚ ಭೂತಗಳ ದೇಹ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಮಣ್ಣು ದೇಹದೊಳಗಿನ ಮಣ್ಣಿಗೆ ಹೇಳಿತು-
“ಬಂದು ಬಿಡು ಮಣ್ಣೆ, ಆತ್ಮ ಸಂಗಾತ ಬಿಟ್ಟು ಬಿಡು
ನೀನು ನನ್ನ ಧಾತು, ನನ್ನ ಸಹವಾಸವೆ ನಿನಗೆ ಸುಖ
ಆತ್ಮ ಬಿಟ್ಟು ಹಾರಿ ಬಂದು ಬಿಡು”

ಶರೀರ ಉತ್ತರ ಕೊಟ್ಟಿತು
ಹೂಂ, ನಾನೂ ವಿರಹದಿಂದ ಒದ್ದಾಡುತ್ತಿದ್ದೇನೆ”

ಜಲ ದೇಹದೊಳಗಿನ ತೇವಕ್ಕೆ ಹೇಳಿತು-
“ಜಲಾಂಶವೆ, ನಿನ್ನ ವಿದೇಶ ವಾಸ ಬಿಟ್ಟು ವಾಪಸಾಗು”
ಬೆಂಕಿ ದೇಹದ ಶಾಖಕ್ಕೆ ಕೂಗಿ ಹೇಳಿತು-
“ನೀನು ಬೆಂಕಿ, ನಿನ್ನ ಬೇರಿಗೆ ವಾಪಸಾಗು”

ದೇಹದೊಳಗೆ ೭೨ ರೋಗಗಳಿವೆ
ಈ ಭೂತಗಳ ಜಗಳದಿಂದಾಗಿ ದೇಹ ನರಳಿತು
ದೇಹ ಚೂರಾಗಿ ಮಣ್ಣು ಜಲ ಅಗ್ನಿಗೆ ತವರಿಗೆ ವಾಪಸಾಗುವ ಆಸೆ
ಈ ಚತುರ್ ಭೂತಗಳು ಕಾಲುಕಟ್ಟಿದ ೪ ಹಕ್ಕಿಗಳು
ಸಾವು, ರೋಗ ರುಜಿನ ಆ ಕಟ್ಟನ್ನು ಸಡಿಲಿಸುತ್ತವೆ
ಕಟ್ಟು ಬಿಚ್ಚಿದ್ದೆ ತಡ ಪ್ರತಿಯೊಂದು ಹಕ್ಕಿಗೂ ಹಾರುವ ತವಕ
ಅವಕ್ಕೆ ಪರಸ್ಪರ ಅಸಹ್ಯ, ದ್ವೇಷ
ಇದರಿಂದಾಗಿ ದೇಹಕ್ಕೆ ಹೊಸ ಹೊಸ ನೋವು
ಆ ಹಕ್ಕಿಗೂ ತನ್ನ ಮೂಲ ಗೂಡಿಗೆ ಹಾರುವಾತುರ
ದೇವ ನಿಯಂತ್ರಣ ಈ ಹಾರಾಟವನ್ನು ನಿಯಂತ್ರಿಸುತ್ತದೆ
*****