ವಾಣಿಮಾಯಿ

ಇಪ್ಪತ್ತನಾಲ್ಕು ಗಂಟೆಯೊಳಗೆ ಧಾತು ಬಂದರೆ ಬಂತು. ಇಲ್ಲವಾದರೆ ಇಲ್ಲ ಎಂದಿದ್ದಾರೆ ಡಾಕ್ಟರು ಎಂದ ನರಸಿಂಹ. ನನಗೆ ಒಸಗೆ ಕೊಡಲು ಬಂದವ. “ನಿನ್ನ ವಾಣಿಮಾಯಿ ಪೆಟಿಗೆ ಕಟ್ತ್ ಇಲಾರಿಲೆ ಇದ್ಲ್. ಬೇಗ ಬಾ.” ಎಂದು ಕರೆಯಲು ಬಂದವ. ಅವನ ಸ್ವರದಲ್ಲಿನ ಸಂಭ್ರಮವೆ! ನಾನವನ ಮುಖವನ್ನೇ ನೋಡದೆ “ಹೂಂ. ನೀ ಹೋವು. ನಾ ಬರ್‍ತೆ.” ಎಂದೆ.

ದಡಬಡನೆ ಹೊರಟು ಬಂದು ನೋಡಿದರೆ ವಾಣಿಮಾಯಿ ಉದ್ದಕ್ಕೂ ಮಲಗಿದ್ದಳು. ವಾಣಿಮಯಿಗಿಂತ ಬೇರೆಯಾಗಿ ಕಾಣುತ್ತಿದ್ದಳು. ಮಾತು ಹೊರಡುತ್ತಿರಲಿಲ್ಲ. ಕೈಕಾಲು ಹಂದುತ್ತಿರಲಿಲ್ಲ. ಇತ್ತಿನ ಧಾತೇ ಇರಲಿಲ್ಲ. ಪಾದ ಸೆಟೆದುಕೊಂಡಿತ್ತು. ನೊಣ ಕೂತರೂ ಅಲ್ಲಾಡುತ್ತಿರಲಿಲ್ಲ. ಅವಳ ಪುಳ್ಳಿ ನಾರ್‍ಣ ಬೈರಾಸು ಬೀಸಿ ನೊಣ ಓಡಿಸಿದ. “ಅಜ್ಜಿನ ಯೇಳ್ಸಗ ಈಗ, ಕಾಣ್ತ್ರಿಯಾ?” ಎನ್ನುತ್ತಾ “ಅಜ್ಜಿ, ಪೊಡಿ ಬೇಕಾ? ಕಿಣಿ ಅಂಗಡಿದ್. ಈಗಷ್ಟೇ ಕೊಣಂದ್ದ್. ಭಾರೀ ಒಂದು ಘಮ ಉಂಟು” ಎಂದ. ವಾಣಿಮಾಯಿ ಅಲ್ಲಾಡಲಿಲ್ಲ. ಈ ದೇಹದಲ್ಲಿ ಈಗ ಆಕೆ ಎಲ್ಲಿದ್ದಾಳೆ? ಎಲ್ಲಿಯೂ ಇರುವಂತೆ ಕಾಣುವುದಿಲ್ಲ. ಆದರೆ ಇದ್ದಾಳೆ! ಮುಂಚೆ ಹೇಗೆ ಇಡೀ ಆಗಿ ಇದರಲ್ಲಿ ಹರಡಿಕೊಂಡಿದ್ದಳು!

ನರಸಿಂಹ ಅವಳ ಕಾಲದೆಸೆಯಲ್ಲಿಯೇ ಒಂದು ಕುರ್ಚಿ ಹಾಕಿಕೊಂಡು ಪ್ರತಿಷ್ಠಾಪನೆ ಆದವರಂತೆ ಕುಳಿತಿದ್ದ. ಅವಳ ಜೀವ ಹೋಗುವುದು ನೋಡುವವರೆಗೂ ಅಲ್ಲಿಂದ ಕದಲಲಾರ. ಫಟಿಂಗ. ನನ್ನನ್ನು ಕಂಡದ್ದೇ ಜನಿವಾರದಿಂದ ಬೀಗದ ಗೊಂಚಲು ಬಿಚ್ಚಿ ಅವಳ ಚಿರುಟುಪಾದಕ್ಕೆ ಒಂದು ಬೀಗದ ಕೈಯಿಂದ ಗೀಚಿದ. “ಇಲ್ಲಿ ಕಾಣಿಯ, ಉಂಚಜೀವ ಇದ್ದಿಪ್ಪಿರೆ ಕಾಲ್ನ ಮೇಲೆ ಎಳಕಂತಿದ್ಲು….” ಎನ್ನುತ್ತ ಮತ್ತೆ ಗೀಚಿದ. ಎಲ್ಲ ನೋಡುತ್ತಾ ಇದ್ದರು. ಹೌದಲ್ಲ! ಒಂದು ಚೂರೂ ಹಂದ್ತಿಲ್ಲೆ! ಎಂದರು. ನರಸಿಂಹ ಕರ್ಕಶ ನಕ್ಕ.

ವಾಣಿಮಾಯಿಯ ಪಾದ… ಹಾಸು ಪಾದದ ಜೊತೆಗೆ ಕಲೆಕಲೆಯ ಮೋಟುಪಾದ…. “ರುಪಾಯಿ ಹುಣ್ಣು ಆದ್ದು ಇದೇ ವಾಣಿಗಲ್ದ?” ಎಂದರು ಮಾವಯ್ಯ ಒಬ್ಬರು ಬಗ್ಗಿ. ಸಣ್ಣದಿನಲ್ಲಿ ರುಪಾಯಿ ಹುಣ್ಣು ಆದದ್ದು, ಅವಳು ತೆವಳಿಕೊಂಡೇ ಹೋಗುತ್ತಿದ್ದದ್ದು, ಗುಡ್ಡೆಗೆ ಹೋಗುವ ಮುಂಚೆ ನೀರು ಕೊಂಡೊಯ್ದು ಕೊಟ್ಟಿದ್ದು, ಡಾಕ್ಟರ ಶಾಪಿಗೆ ಅವಳನ್ನು ಹೊತ್ತುಕೊಂಡೇ ಹೋಗಿದ್ದು…. “ಕಾಲಿಲೆ ಕಲೆ ಕಾಣು!” ಎಲ್ಲರೂ ಮಾತಾಡುವವರೇ. ಎಲ್ಲರೂ ಕೇಳುವವರೇ. ಎಲ್ಲರೂ ನೋಡುವವರೇ. “ಅಷ್ಟರಮೇಲೆ ಇವಳ ಕಾಲು ಯಾರು ಕಂಡಿದ! ಈಗಲೇ ಕಾಣ್ತದ್! ಅದು ಇಷ್ಟೆಲ್ಲ ರಾಮಾಯಣ ಆದ್ದ!” ಎಂದು ಉದ್ಗರಿಸಿದರು ಮಾವಯ್ಯ ಮಾವಯ್ಯನಿಗೇನು ಅರುಳುಮರುಳಾ? ಮೂಲಕತೆ ಕಾಣದಂತೆ ನಿಲ್ಲುವ ಅಡ್ಡಕತೆ ನಿಂತಲ್ಲೇ ಬೇರುಬಿಟ್ಟು ನಂಬಿಸುವ ಪ್ರಶ್ನಾತೀತವಾಗುವ ಚಮತ್ಕಾರವೆ! ಈ ಕಲೆಯ ಗುರುತು ನನಗಿಂತ ಹೆಚ್ಚು ಇನ್ನು ಯಾರಿಗೆ ಇರಲು ಸಾಧ್ಯ? ನರಸಿಂಹನನ್ನು ನೋಡಿದೆ. ಆತ ಕೈಕಟ್ಟಿಕೊಂಡು ಬೀಗದ ಕೈಗೊಂಚಲು ಅಲ್ಲಾಡಿಸುತ್ತ “ಹೂಂ. ಎಂಥಾ ದೊಡ್ಡ ಕಲೆ!” ಎಂದ ತಾನೂ. ಅಪಾ! ಇವನ ಧೈರ್ಯ! ಈ ಅಸಹ್ಯದಲ್ಲಿ ಒಂದು ಶಬ್ದ ಬಿಕ್ಕುವುದು ಕೂಡ ನನ್ನಿಂದ ಸಾಧ್ಯವಾಗಲಿಲ್ಲ. ಅವರೆಲ್ಲ ಮಾತಾಡುವ ಸಂತೋಷದಲ್ಲಿದ್ದರು. “ಇದು ಅಂದು ಇಷ್ಟೆಲ್ಲ ಆದ್ದಿಲ್ಲೆ. ಹಂಗಾರೆ ಅವಳು ದೊಡ್ಡದಾದಂಗೆ ಕಲೆಕೂಡ ದೊಡ್ಡದಾಯ್ತ!….” ಅಂತೆಲ್ಲ ಚರ್ಚೆಯೆಳೆಯುತ್ತಿದ್ದರು.

“ವಾಣಿಮಾಯಿ, ವಾಣಿಮಾಯಿ” ನಾನು ಅವಳ ಬಳಿ ನಿಂತು ಮೆಲ್ಲ ಕರೆಯುತ್ತಲೇ ಇದ್ದೆ. ದೊಡಪ ಬಂದರು. ಕೋಲೂರಿಕೊಂಡು. “ಇವಳು ಮೇಲೆ ಹೋತ ಮುಂಚೆ ಒಂಚೂರು ಕಂಡದ್ ಹೋಪ ಅಂದ್ ಬಂದೆ.” ಎಂದು ಸಾವಿನ ಹತ್ತಿರ ತಾನೂ ನಿಂತ ಸರಾಗದಲ್ಲಿ ಮೂಗಿಗೆ ಕೈ ಇಟ್ಟು ಸ್ಞೀಂಕೆನ್ನುತ್ತ ಸೀಂಟಿ “ಏನಿಯ ನಮ್ಮನೆಲ್ಲ ಬಿಟ್ಟು ನೀನೇ ಮೊದಲು ಹೋತಂದ್ ಮಾಡಿಯೆ ಅಲ್ಲ?” ಎಂದರು. ನೆನಪು ಕೆರಳಿಸಿಕೊಂಡವರಂತೆ… “ಅಂದ್ ಮೆಟ್ಟಿಗೆ ಹಟ ಮಾಡಿದ್ದು ಇದೇ ಹೆಣ್ಣಲ್ಲಯಾ….! ಯಂತ ಹೆಣ್ಣೆ ವಾಣಿ, ಮೆಟ್ಟಿಲ್ಲದ್ರೆ ಅಲ್ಲಿ ಯಮನ ಲೋಕಲೆ ಒಳಗೆ ಬಿಡ್ತಿಲ್ಲೇ….” ಎಂದಾಗ ನೆರೆದವರಿಗೆಲ್ಲ ನಗೆಯೇ ನಗೆ. ಎಲ್ಲರ ನಗೆ ನಿಂತರೂ ನರಸಿಂಹನ ನಗೆ ನಿಲ್ಲ. ನಿಲ್ಲದ ನಗೆಯಲ್ಲೇ ಎಂದ “ಆಚೆಗೆ ಹೋದ್ದಾಯ್ತು ಅವಳು. ಕಾಲು ಮಾ…ತ್ರ ಈಚೆ ಲೋಕಲೆ ಉಂಟು. ಮೆಟ್ಟಿಗೆ ಕಾಯ್ತು ಬೌಶ.” ಮತ್ತೆ ನಗೆ ಎಲ್ಲರಿಗೆ. ನಂಗೆ ನಿಜಕ್ಕೂ ದೊಡಪನ ಮೇಲೆ ಕೋಪ ಬಂತು. ಆದರೆ ಮುದುಕರು, ಹಿಂದೆ ಮುಂದೆ ಗ್ರಹಿಕೆ ಮರೆತವರು…. ಕೋಪ ಮಾಡಿಕೊಳ್ಳುವಂತೆಯೇ ಇಲ್ಲ. “ಎಲ್ಲಿ ಜೀವ ಹೋತೋ ಅಂದ್ ಬೇಗ ಬೇಗ ದಿವಸಾ ಅಡ್ತದ್ ಉಣ್ತದ್ ಅಡ್ತದ್ ಉಣ್ತದ್. ಜೀವ ಮಾತ್ರ ಹೋದ್ದಿಲ್ಲೆ” ಎಂದ ಕೇಶವ, ವಾಣಿಮಾಯಿಯ ಮಗ. “ಜೀವ ಹೋದ್ದು ನಮ್ಮದು. ಬಡ ಬಡ ಕೆಲಸ ಮಾಡಿ.” ಎಂದಳು ಅವನ ಹೆಂಡತಿ. ಅದಕ್ಕೆ ಪುನಃ ನರಸಿಂಹ ಇನ್ನೊಂದು ನಗೆ ಗೋಚಲೆಂದೇ “ಮತ್ತೆ! ನಾ ಹೇಳಿದ್ದ್ ಯಂತರ ಈಗ? ಮೆಟ್ಟು ತಗಂಡ್ ಬನ್ನಿ. ಚ್ಞೋಂಟು ಕಾಲಿಗೆ ಕೊಳಿಸಿ. ಜೀವ ಬೇಗ ಹೋಪು” – ಎಂದ. ಯಾಕೋ ಎರಡನೇ ಬಾರಿ ಅದನ್ನೇ ಹೇಳಿದ್ದರಿಂದಲೋ ಏನೋ ಯಾರೂ ಅಷ್ಟು ನಗಲಿಲ್ಲ. ವಾಣಿಮಾಯಿ ಇಷ್ಟೆಲ್ಲ ಆಗುವಾಗ ಹೀಗೆ ಮಲಗಿ ಇರುವಳಾದರೂ ಹೇಗೆ? ವಾಣಿಮಾಯೇ, ಏಳು ಏಳು. ಮೆಟ್ಟು ಕೊಡಿಸಿದವರಿಗಿಂತ ಹೆಚ್ಚಿಗೆ ಮಾತಾಡುವ, ಯಾವತ್ತೋ ಆಗಿಹೋದದ್ದನ್ನೆಲ್ಲ ಈಗ ಮೆಲುಕಿ ನಗೆ ನೆನಸುವ ಇವರಿಗೆಲ್ಲ ನೀನೇ ಸರಿ… ವಾಣಿಮಾಯಿ ವಾಣಿಮಾಯಿ….

ವಾಣಿಮಾಯಿ ಏಳುತ್ತಲೇ ಇಲ್ಲ!
*
*
*
ವಾಣಿಮಾಯಿಯೇನು ಸಾಮಾನ್ಯದವಳಲ್ಲ. ಅವಳಿಗೊಂದು ಹಟ ಎಂದರೆ!…. ಛೆ! ಎಲ್ಲರೂ ಹೇಳುವಂತೆ ನಾನೂ ಹಟ ಎಂದೆನೆ? ಹಾಗೆ ನೋಡಿದರೆ ವಾಣಿಮಾಯಿ ಆಸೆ ಪಟ್ಟಳೆಮದರೆ ತೀವ್ರ ಪಡುವವಳು ಅಷ್ಟೆ. ಆ ಶಬ್ದವನ್ನು ಹಿಂತೆಗೆದುಕೊಂಡೆ. ಅದು ಅಭ್ಯಾಸಬಲದಿಂದ ಬಂದದ್ದು, ಕ್ಷಮಿಸಿ. ಅವಳ ಆಸೆಗಳೆಂದರೆ ಅದೇನು ಬಹಳ ದೊಡ್ಡವೂ ಅಲ್ಲ, ಸಣ್ಣಪುಟ್ಟವು. ಅವುಗಳಲ್ಲಿ ದೊಡ್ಡದೆಂದರೆ ತಾನು ಒಂದು ಜೊತೆ ಮೆಟ್ಟು ತೆಗೆದುಕೊಳ್ಳಬೇಕು ಎಂಬುದೇ. ಅದಕ್ಕಾಗಿ ಅವಳಿಗೆ ಎಲ್ಲರೂ ಸೇರಿ ಗದರುವವರೇ. ‘ನಮಗೆಲ್ಲ ದಿವಸ ಹೋದ್ದಿಲ್ಯ? ನಿಂಗೆ ಅದಿಲ್ಲದೆ ಕಳೆಯ ಅಂದರೆ ಏನು!” ಎಂಬರು ದೊಡಮ. ಇನ್ನೊಂದು ಪಾಲಿನ ಮನೆಯ ಹೆಣ್ಣುಮಕ್ಕಳು ಬಂದು ಹೋದರಂತೂ ಅವಳ ಆಸೆ ಕೆದರಿಕೊಳ್ಳುವುದು. “ಅವರೆಲ್ಲ ಪೇಟೆಲೆ ಮೆಟ್ಟಿನ ಅಂಗಡಿಗೇ ಹೋಯಿದ್ ತೆಗಂತೋ ಉಂಬ್ರು. ಇಲ್ಲಿನ಼ಂಗೆ ಬ್ಯಾರಿ ಹೊಲಿತ ಮೆಟ್ಟಲ್ಲ” ಎನ್ನುತ್ತಿದ್ದಳು ವಾಣಿಮಾಯಿ. “ಬ್ಯಾರಿ ಹೊಲಿತ ಮೆಟ್ಟಾದರೂ ನಮಗುಂಟ?”

ನೆನಪಾಗುತ್ತದೆ – ಒಮ್ಮೆ ದೊಡಮ ಬರಿಯಕ್ಕೆ ದೋಸೆ ಮಾಡಿದ್ದರು. ಕಾಯಿಬೆಲ್ಲ ಕಲಸಿದ್ದರು. ಗದ್ದೆ ಮೇಲಿಂದ ಇನ್ನೊಂದು ಪಾಲಿನ ಹೆಣ್ಣುಮಕ್ಕಳು ಬರುವುದು ಕಾಣಿಸಿತು. ಕ್ಷಣದಲ್ಲಿ ಅವರು ಅಂಗಳಕ್ಕೂ ಬಂದರು. ನಾವೆಲ್ಲ ಕಿಟಕಿಯಲ್ಲಿ ನೋಡುತ್ತಿದ್ದಂತೆಯೇ ಮೆಟ್ಟಿಲ ಬಳಿ ಬಂದರು. ಪಾದ ಕೊಂಚ ಅಲುಗಿಸಿದ್ದೇ ಅವರ ಮೆಟ್ಟು ತಂತಾನೇ ನಯವಾಗಿ ಹೊರಕಳಚಿ ನಿಂತಿತು. ಅವು ಯಾವಾಗಲೂ ಹಾಗೆಯೇ. ಹೊರಡುವಾಗ ಅವರು ಪಾದ ಇಟ್ಟದ್ದೇ, ನೋವಾಗದಂತೆ ಒಳಸರಿದು ‘ಹೋಗುವ’ ಎನ್ನುತ್ತವೆ ಎಂದಳು ವಾಣಿಮಾಯಿ. ಅವರೆಲ್ಲ ಇರುವುದೂ ಹಾಗೆಯೇ, ದೊಡ್ಡ ಸಂಗತಿಗಳು ತಾವೇ ಎಂಬಂತೆ – ಎಂದು ವಿವರಿಸಿದಳು. ಅವತ್ತೊಂದು ದಿನ ಕಾವೇರಿ ಚಿಗಮ ಬಂದಿದ್ದಳಲ್ಲ ಮೆಟ್ಟು ಹಾಕಿಕೊಂಡು? ಪಾಪ, ತೆಗೆಯಲಿಕ್ಕೆ ಒಂದು ಗಂಟೆ ಬೇಕಾಯಿತು. ಹಾಕಿಕೊಂಡು ಹೊರಡಲಿಕ್ಕೂ. ಬಗ್ಗಿ, ಅದರ ದಡಿಯನ್ನು ಪಾದದ ದಂಟಿನ ಮೇಲೆ ಎಳೆದೆಳೆದು ಹಾಕಿಕೊಂಡದ್ದು ಕಾಣಬೇಕಿತ್ತು. ಕಾವೇರಿ ಚಿಗಮ ಹೇಳುತ್ತಿದ್ದರು. “ಪ್ರಾಯದ ಕಾಲಲೆ ಬೇಕೆಂದರೂ ಇದ್ದಿಲ್ಲೆ. ಈಗ ಬಂದಂತ್ ಕಾಣ್. ಮಗ ಇದ್ದಾನಲ್ಲ, ದೊಡ್ಡ ನ್ಯಾಯಾಧೀಸ. ಅವಂಗೆ ನಾನು ಬರಿಕಾಲಲೆ ನಡೆದ್ರೆ ನಾಚಿಗೆ ಆತುಂಬ್ರು! ಮಗಂಗೆ ಬೇಕಾಯಿ ಹಳತಿನ ಕಾಲಲೆ ಕೋಲ ಕಟ್ಟಗೇ ಆಯ್ತ!”

ದೊಡಮ ಅವಳ ಮಾತು ಕೇಳಿದವರು ಮುಖ ಅಡ್ಡ ತಿರುವಿದ್ದರು. ರಾತ್ರಿ ಊಟದ ಪಂಕ್ತಿಯ ಮಾತಿನಲ್ಲಿ ಕಾವೇರಿ ಚಿಗಮನ ವಿಷಯ ಬಂತೇ. “ಮಗ ಹೇಳಿದ ಹಂಗೆ ಇವಳು ಕೇಣ್ತದ್ ಸಾಕು. ಹಳತಿನ ಕಾಲಲೆ ತೆಗಂಡ್ ಹೋತ ಇವಳಿಗೆ!” ಆಗ ದೊಡಪ “ಕೆಲವು ಹೆಂಗಸರ ಹಣೆಬರ ಹಂಗೇ” ಎಂದರು. ಹಾಗೆ ಇರುವುದು ಸರಿಯಲ್ಲ ಎಂಬ ಅರ್ಥಕ್ಕೆ ನಾವು ಮುಟ್ಟಿಕೊಳ್ಳಬೇಕು. ದೊಡಪಂಗೆ ಜಾತಕ ಬಂದದ್ದು ಕಾವೇರಿ ಚಿಗಮನದ್ದೇ ಅಂತೆ. ಆದರೆ ದೊಡಪ ದೊಡಮನನ್ನೇ ಲಗ್ನವಾದರಂತೆ. ಯಾಕೆಂದರೆ “ನಂಗೆ ಆಗಳೇ ಗೊತ್ತಿತ್ತಿ. ಕಾವೇರಿಗೆ ಲಂಗ ಮೆಟ್ಟು ಸಪ್ಲೈ ಮಾಡ್ತ್ರೊಳಗೆ ನನ್ನ ಮಂಡೆ ಹಣ್ಣಾತ್ಽಽ ಅಂದ್. ದೊಡಮ ಹಂಗಿದ್ಲಾ ಕಾಣು. ಅವಳಿಗೆ ಯಾವುದೂ ಬೇಡ. ಇವತ್ತಿಗೆ ನಾನು ಹಾಕಿದ ಗೀಟು ಅವಳು ದಾಟಿದ್ದುಂಟ?” ಕಾವೇರಿ ಚಿಗಮ ಬಂದು ಹೋದಾಗೆಲ್ಲ ಎಷ್ಟು ಹೊತ್ತು ಮಾತು, ಅವಳ ಬಗ್ಗೆಯೇ, “ಗಂಡ ಬಿಗೀ ಇದ್ದಿಪ್ಪಿರೆ ಈಗ ಮಗನ ಹೆಸರಿಲೆ ಮೆರಿತ ಇಲಾರಿ ಇದ್ದಿಕ್ಕ? ನೀವಾದ್ರೆ ಹಿಂಗೆ ಮಾಡಗೆ ಬಿಟ್ಟಿಪ್ರಿಯ?”

“ಹ್ಞಾಂ ಹ್ಞಾಂ. ಸಿಗಿದು ಹಾಕಿಪ್ಪೆ.”

ಕಾವೇರಿ ಚಿಗಮನ ಪುರಾಣ ಯಾಕೆ ತೆಗೆದುಕೊಂಡೆ ನಾನು? ಅದು ಮುಗಿಯುವಂತಹುದಲ್ಲ. ಕಾವೆರಿ ಚಿಗಮ ಹೇಳುವ ಸಮಜಾಯಿಷಿಗೂ ದೊಡಪ ದೊಡಮನ ಚರ್ಚೆಗೂ ಅರ್ಥಾರ್ಥ ಸಂಬಂಧ ಉಂಟಾ? ಗಂಡನ ಅಡ್ಡಿ ಇಲ್ಲದೆಯೂ ಕಾವೇರಿ ಚಿಗಮ ಯಾಕೆ ಹಾಗಾದರೆ ತನಗೆ ಬೇಕಾದ್ದು ಕೊಳ್ಳಲಿಲ್ಲ? ಈಗಾದರೂ ಆಕೆ ಯಾಕೆ ಎಲ್ಲರ ಹತ್ತಿರವೂ ಸಮರ್ಥನೆ ನೀಡಬೇಕು? ಪ್ರಶ್ನೆ ಕೇಳಿದರೆ ‘ಅಧಿಕ’ ಎಂಬ ಬಿರಿದು ಬಿದ್ದು ಬಿಡುತ್ತದೆ. ಆಗ ಅವು ಹೊಳೆಯುತ್ತಲೂ ಇರಲಿಲ್ಲವಲ್ಲ…. ಇರಲಿ. ಸದ್ಯಕ್ಕೆ ಆ ವಿಚಾರವೇ ಬೇಡ.

ಹ್ಞಾಂ, ಆ ಇನ್ನೊಂದು ಪಾಲಿನ ಹುಡುಗಿಯರು ಬಂದರು. ಮೆಟ್ಟು ಕಳಚಿಟ್ಟರು. ಸರಸರವೆಂದು ಕಷ್ಟವಿಲ್ಲದೆ ಕಳಚಿದ ಕೆಂಪು ಹಸಿರು ಕಪ್ಪು ಫಳಫಳ ಮಿಂಚುವ ಮೆಟ್ಟುಗಳು. ಹುಡುಗಿಯರು ಒಳಗೆ ಬಂದರು. ದೊಡಮ ಹಾಸಿದ ಬಣ್ಣದ ಚಾಪೆಯ ಮೇಲೆ ಚಟ್ಟಾಮುಟ್ಟ ಹಾಕಿ ಕುಳಿತರು. ಹಾಗೆ ಕೂರುವುದು ಗಂಡಸರು ಮಾತ್ರ. ಉಳಿದವರಿಗಾದರೆ ಗದರಿ ಸರಿಯಾಗಿ ಕಾಲು ಮಡಚಿ ಬಾಮವಾಗಿ ಕೂಡಲು ಹೇಳುವ ದೊಡಮ – ಈ ಮಕ್ಕಳೆದುರು ಬಹಳ ಗೌರವದಿಂದ ಮಾತಾಡುತ್ತ ಇದ್ದರು. ಅವರೋ ಅಲ್ಲೊಂದು ಇಲ್ಲೊಂದು ಉತ್ತರ ಹೇಳುತ್ತಾ ನಡುನಡುವೆ ತಿಂಡಿಯನ್ನು ತಿನ್ನುತ್ತಾ ಇದ್ದರು. ಬದಿಯ ಕೋಣೆಯಲ್ಲಿಯೇ ಕೊಕ್ಕೆ ಸೂಜಿಯಲ್ಲಿ ಬಾಗಿಲಿಗೆ ಲೇಸಿನ ತೋರಣ ಹೆಣೆಯುತ್ತಿದ್ದ ವಾಣಿಮಾಯಿ ನಮ್ಮನ್ನು ಕರೆದಳು. ಸ್ವಲ್ಪ ತಡೆದು ಪಿಸುವಾಗಿ “ಅವರೆಲ್ಲ ಯಂತ ಮಾಡ್ತ್ರಿಯ?” ಎಂದು ಕೇಳಿದಳು. ನಾನು ಇಣಿಕಿ ನೋಡಿದೆ. “ಅದ ವಾಣಿಮಾಯೇ, ಅವು ತಿನ್ನತ್ ಸಾನು ತೆಳಿತಿಲ್ಲೆ. ಹಂಗೆ ಮೆಲ್ಲ ಜಗಿತೋ” ವಾಣಿಮಾಯಿಗೆ ಜೋರು ನಗೆ ಬಂತು. ಅವಳಿಗಿಂತ ಬಹಳ ಚಿಕ್ಕವಳಿದ್ದದ್ದಕ್ಕೋ ಏನೋ. ನಾ ಏನು ಮಾತಾಡಿದರೂ ಆಕೆ ನಗುತ್ತಿದ್ದಳು. ನನ್ನ ಕೆನ್ನೆಯನ್ನೊಮ್ಮೆ ಪ್ರೀತಿಯಿಂದ ಚಿವುಟಿ “ಬಾ. ಇಲ್ಲಿ ಕುಳ್ಕ. …ಅಂಥವರೆಲ್ಲ ಹಂಗೇ. ಉಣ್ತ್ ಸಾನು ತೆಳಿತಿಲ್ಲೆ. ದವಡೆ ಅಲ್ಲಾಡದ ಹಂಗೆ ಒಂದು ಕೋರ್ಜಿ ಅಕ್ಕಿ ಖಾಲಿ ಮಾಡ್ತೊ…. ಕಾಣೀಗ ದೊಡಮ ದೋಸೆ ಮಾಡಿ ಮಾಡಿ ಹಾಕ್ತದ್ ಅವು ತಿನ್ತದ್…. ಒಂದೇ ಸಮ….” – ಎಂದು ಬಾಯಿಗೆ ಕೈ ಅಡ್ಡ ಹಿಡಿದು ನಕ್ಕಳು. ತಾನೂ ಬಗ್ಗಿ ನೋಡಿ “ಕಂಡರೆ ಅವು ಸದ್ಯಕ್ಕೆ ಅಲ್ಲಿಂದ ಏಳ್ತ ಇಲಾರಿ ಇಲ್ಲೆ. ಒಂದು ಕೆಲಸ ಮಾಡುವ. ಏಳಿ ಎಲ್ಲ.” – ಎಂದಳು. ನಾನು, ನನ್ನೊಟ್ಟಿಗೆ ಮತ್ತಿಬ್ಬರಿದ್ದರು – ಯಾರು ನೆನಪಾಗುತ್ತಿಲ್ಲ…. ನಾವೆಲ್ಲ ಅವಳನ್ನು ಹಿಂಬಾಲಿಸಿ ಆಚೆ ಬಾಗಿಲಿಂದ ಹೊರಬಂದೆವು. ಮೆಟ್ಟಿಲ ಬಳಿ ಅವರು ಬಿಟ್ಟ ಒಂದು ಜೋಡು ಮೆಟ್ಟು ಮೆಟ್ಟಿಕೊಂಡೆವು. ಉದ್ದ ಗಿಡ್ಡ ಹೇಗೋ ಇದ್ದರೂ, “ನಮ್ಮ ಕಾಲಿಗೂ ಇವು ಎಷ್ಟು ಚಂದ ಕಾಣ್ತೋ!” ವಾಣಿಮಾಯಿಯ ಮುಖವಂತೂ ಮುಗುಳು ತುಂಬಿ ಹೋಗಿತ್ತು. ಇವು ನಮ್ಮದೇ ಅಂತ ಒಂದು ಗಳಿಗೆ ಅನಿಸಿತು, ನಮ್ಮದಾಗಿದ್ದರೆ ಅಂತಲೂ. “ಎಷ್ಟು ಮೆದು ಉಂಟಯ!” ಎಂದವಳು – “ಬನ್ನಿ, ಒಂದು ಸುತ್ತು ಹೊಡೆವ” – ಎಂದು ನಡೆದೇಬಿಟ್ಟಳು ವಾಣಿಮಾಯಿ. ಅವಳ ಹಿಂದೆ ನಾವು ಹಿತ್ತಿಲಿಗೆ ಒಂದು ಸುತ್ತು ಬಂದದ್ದಾಯಿತು. ಮನಸ್ಸಿನಲ್ಲಿ ಮುದ ಆವರಿಸಿಬಿಟ್ಟಿತ್ತು. “ಪಾದದ ಬದಲು ಇದೇ ನಮಗೆ ಇರಳಾಯಿಪ್ಪು…. ಒಳ್ಳೆ ಆಕಾಸಲೆ ನಡೆದ್ಹಂಗೆ ಆತು – ಹ್ಞೆ?!” ವಾಣಿಮಾಯಿ ಒಂದೇ ಸಮ ಹೇಳುತ್ತಲೇ ಇದ್ದಳು.

ವಾಣಿಮಾಯಿಯದು ಹಾಸುಪಾದವಂತೆ. ಹಾಸುಪಾದವೆಂದರೆ ಕಾಲು ತೊಳೆದು ಇಟ್ಟ ಹೆಜ್ಜೆಯಲ್ಲಿ ಪಾದದ ಅಚ್ಚು ಪೂರ್ತಿ ಬೀಡುತ್ತದೆಯಂತೆ. ಒಂಚೂರೂ ಓರೆಕೋರೆ ಇಲ್ಲದೆ. ಅದು ಚಂದ ಅಲ್ಲ, ಲಕ್ಷಣವೂ ಅಲ್ಲ ಅಂತ ದೊಡಮ. ಲಕ್ಷಣ ಅಂತ ದೊಡಪ. ಮನೆಯಲ್ಲಿ ಉಳಿದ ಹಿರಿಯರನ್ನೆಲ್ಲ ಒಟ್ಟು ಸೇರಿಸಿ ನಾನಿಲ್ಲಿ ದೊಡಮ ದೊಡಪ ಅಂತ ಎರಡೇ ವಿಂಗಡಣೆಯಲ್ಲಿ ನೆನೆಯುತ್ತಿದ್ದೇನೆ…. ಸದ್ಯ ಸಾಕಷ್ಟೆ? ಪ್ರತ್ಯಪ್ರತ್ಯೇಕ ಯಾಕೆ ಅನಾವಶ್ಯಕ. “ಈ ಹಾಸುಪಾದಕ್ಕೆ ಕಾಲುಚೈನು ಸಾ ಚಂದ ಕಾಣ್ತಿಲ್ಲೆ” ಎಂದು ದೊಡಮ ಅವಳಿಗೆ ಕೊಡಿಸಿರಲಿಲ್ಲ. ಕಾಲು ಚೈನು ಹಳತು ಫ್ಯಾಶನ್ನು. ತನಗೆ ತೆಗೆಸಿಕೊಟ್ಟರೂ ಬೇಡ ಎಂದು ವಾಣಿಮಾಯಿ ಅದನ್ನು ಧಿಕ್ಕರಿಸಿಯೂ ಇದ್ದಳು. “ನಂಗೊಂದು ಮೆಟ್ಟು ತೆಗೆಸಿಕೊಡ್ನಿ ಸಾಕು” – ಎಂಬುದೊಂದೇ ಅವಳದು. “ಯಂತದಕ್ಕ ಮೆಟ್ಟು? ಮೆಟ್ಟು ಹಾಕಿಂಡಿರೆ ಕಾಲಿನ ಲಕ್ಷಣ ಹೋತು” – ಎನ್ನುವುದೂ ದೊಡಮನೇ! “ನನ್ನ ಕಾಲಿಲೆ ಲಕ್ಷಣ ಇಲ್ಲೆ ಅಂದೆ ಮತ್ತೆ!” ಎಂದು ಎದುರು ಸವಾಲು ಹಾಕದೇ ಇದ್ದರೆ ಅದು ವಾಣಿಮಾಯಿಯೇ? ಜಾಸ್ತೆ ವಾದ ಮಾಡದರೆ “ಮೆಟ್ಟು ಹಾಕುವುದು ಒಂದೋ ಬೊಂಬಾಯಿ ಸೂಳೆಯರು ಇಲ್ಲ ಊರ ನಾಯಕಸಾನಿಯರು. ಹೊರತು ಮರ್ಯಾದಸ್ಥರಲ್ಲ…..” ಗರ್ಜನೆಗೆ ಕುಮ್ಮಕ್ಕು ಕೊಡಲು ನರಸಿಂಹನಿದ್ದಾನೆ. ನರಸಿಂಹನಿಗೇಕೆ ವಾಣಿಮಾಯಿಯನ್ನು ಕಂಡರೆ ಆಗುವುದಿಲ್ಲ? ವಾಣಿಮಾಯಿಗೇಕೆ ನರಸಿಂಹನ ಸ್ವರ ಕೇಳಿದರೇ ಆಗುವುದಿಲ್ಲ? “ನೀವು ಮೆಟ್ಟುಗಿಟ್ಟು ಕೊಡಿಸಳೆ ದೊಡಮ. ಈಗಳೇ ಇಷ್ಟು ಹಾರ್‍ತಲ್. ಇನ್ನು ಅದೊಂದು ಶೋಕು ಬಾಕಿ…. ನಿಮಗೆ ಯಂತದೂ ತೆಳಿತಿಲ್ಲೆ….” – ಅಂತೆಲ್ಲ ಚುಚ್ಚಿ ಕೊಡುತ್ತಿದ್ದ. “ನಂಗೆ ದೊಡಪ ತೆಗೆಸಿಕೊಡ್ತರ್” – ಎನ್ನುವಳು ವಾಣಿಮಾಯಿ.

ಹಿತ್ತಲಿಗೆ ಇನ್ನೂ ಒಂದು ಸುತ್ತು ಬಂದದ್ದಾಯಿತು. ಓಳಗಿಣಿಕಿದರೆ ಅವರದಿನ್ನೂ ತಿಂಡಿ ತಿಂದೇ ಮುಗಿದಿರಲಿಲ್ಲ. ನಮ್ಮನ್ನು ಯಾರೂ ಗಮನಿಸುವ ಹಾಗೆಯೇ ಇರಲಿಲ್ಲ. ದೊಡಮ ನರಸಿಂಹ ಎಲ್ಲರೂ ಅವರ ಹತ್ತಿರವೇ ಇದ್ದರು. “ಮೇಲಿಂದ ದೇವತೆಗಳು ಬಂದಿದೋ. ಅವರು ಹೋಪ ಮುಟ್ಟ ಇವರು ಯಾರೂ ಅಲ್ಲಿಂದ ಯೇಳ್ತೆಲ್ಲೆ – ಗ್ಯಾರೆಂಟಿ” – ಎಂದು ಚಿಟಿಕೆ ಹೊಡೆದ ವಾಣಿಮಾಯಿ ಮತ್ತೆ ಹೊರಟಳು, ಹಿಂದೆಯೇ ನಾವು. “ಹಂಗೆ ಹೆಕ್ಕಿರೆ ಆ ತಿಂಡಿ ಮುಗಿತರೊಳಗೆ ಬೆಳಗಾತು… ಅಲ್ಲಯ…. ಅವೆಲ್ಲ ಚಡ್ಡೆ ಹಾಕಿಂತೋ ಉಂಬ್ರು! ನಮ್ಮ ಹಾಗೆ ಕೋಮಣ ಅಲ್ಲ ಉಂಬ್ರು…. ಒಮ್ಮೆ ಗೊತ್ತುಂಟಾ? ಚಡ್ಡಿ ಲಾಡಿ ಬಿಚ್ಚುಗೆ ಬರದೆ ಅದೇ ಆ ಗಳಬಾಯಿ ಯಮುನ ಚಡ್ಡಿಲೇ ಎಲ್ಲ ಮಾಡಿಂಡ್ಽಽ….!” – ಬಿದ್ದು ಬಿದ್ದು ನಕ್ಕಳು ವಾಣಿಮಾಯಿ. ಹಾಗೇ ಆಗಬೇಕು ಬಂಬಂತೆ. “ಈಗೆಲ್ಲ ಲಾಡಿ ಬೇತ್ತಿಲ್ಲೆ. ಇಲಾಸ್ಟಿಕ್ ಉಂಬ್ರು.” – ಎಂದು ತಾನೂ ಪಿಸು ನುಡಿದಳು, ನಮ್ಮ ಜೊತೆಗಿದ್ದ ಇನ್ನೊಬ್ಬಳು…. ಯಾರದು…. ನನಗೇಕೆ ನೆನಪೇ ಆಗುತ್ತಿಲ್ಲ! “ಅದು ಅದರ ಅಜ್ಜ” – ಎಂದಳು ವಾಣಿಮಾಯಿ. ಎಲ್ಲ ತನಗೆ ತಿಳಿದಿದೆ ಎನ್ನುವಂತೆ. ತಿಳಿದಿರದಿದ್ದರೂ ತಿಳಿದ ಗರ್ವದಲ್ಲಿ ಮಾತಾಡಬೇಕೆಂದರೆ ಅದನ್ನು ವಾಣಿಮಾಯಿಯ ಹತ್ತಿರವೇ ಕಲಿಯಬೇಕು. ಅವಳ ಮಾತು ಕೇಳುತ್ತ ನಾನು ಕಿರುಗುಟ್ಟುವಂತಾಯಿತು…. “ವಾಣಿಮಾಯಿ, ಚಡ್ಡಿ ನಾನು ಸಾ ಹಾಕಿಂತೆ….” ಎಂದೆ ಅಪರಾಧಿಯಂತೆ. “ಕಾಂಬ” ಎಂದು ಅಂಗಿ ಎತ್ತಿ ಕೆಳಗೆ ಬಿಟ್ಟು, “ಹೋ…. ಇದು ಆಚೆಪಾರ್ಟಿ ಮಂಗಯಾ!” – ಎಂದಳು. ಅವಳು ಇನ್ನು ತನ್ನ ಪಾರ್ಟಿಯಿಂದ ನನ್ನನ್ನು ವಜಾ ಮಾಡುತ್ತಾಳೇಂದು ಹೆದರಿ ನನಗೆ ಕಣ್ಣಲ್ಲಿ ನೀರು ಹನಿದು ಬಂತು. “ಯೇ. ಅಷ್ಟಕೆಲ್ಲ ಬೇಜಾರು ಮಾಡಿಂಬುಗಾಗ. ಕುಸಾಲಿಗೆ ಹೇಳಿಯೆ. ಸಣ್ಣಮಕ್ಕಳು ಚಡ್ಡಿ ಹಾಕಿಂತೊ. ಇಚಿತ್ರ ಯಂತ?….”

ವಾಣಿಮಾಯಿ, ನಂಗೆ ಶಾಲೆಗೆ ಹೋಗುವಾಗ ಮೆಟ್ಟು ಸಾ ಉಂಟು. ಇಲ್ಲಿಗೆ ಬರುವಾಗ ಗುಡ್ಡೆ ಬೇಣ ತಿರುಗಿ ಹಾಳಾಗುತ್ತದೆ ಅಂತ, ಕಳೆದುಹೋಗುತ್ತದೆ ಅಂತ…. ಹೇಳಲು ಬಾಯಿ ಹೊರಡಲೇ ಇಲ್ಲ. ಅವಳ ಹಿಂದೆ ತಿರುಗುತ್ತಿದ್ದಂತೆ ಅವಳು ಆ ಇನ್ನೊಂದು ಪಾಲಿನ ಹುಡುಗಿಯರನ್ನು ಟೀಕಿಸುತ್ತಿದ್ದಂತೆ ನಾನು ಎಷ್ಟು ಗಟ್ಟಿಯಾಗಿ ನಗುತ್ತಿದ್ದೆ! ನನ್ನ ಒಳ ಪುಕ್ಕು, ಅಸ್ವಸ್ಥತೆ ತೋರದಂತೆ. ನನಗೀಗ ಎಲ್ಲಕ್ಕಿಂತ ಹೆಚ್ಟು ವಾಣಿಮಾಯಿ ಬೇಕಾಗಿದ್ದಳು. ಅವಳ ಜೊತೆಗಿದ್ದರೆ ಉಳಿದವರೆಲ್ಲ ಅವಳಿಗಿಂತ ಸಣ್ಣವರಾಗಿ ತೋರುತ್ತಿದ್ದರು. ನನಗೂ ಮೆಟ್ಟು ಇಲ್ಲ ಮತ್ತು ನಾನು ಅವಳಂತೆಯೇ ಬೇಸರದಲ್ಲಿದ್ದೇನೆ ಎಂಬಂತೆಯೇ ಇದ್ದುಬಿಟ್ಟೆ ನಾನೂ. “ನಿನ್ನ ಚಡ್ಡೆ ತೋರುಸು ಒಮ್ಮೆ. ನಾನೇ ನಂಗೊಂದು ಹೊಲಕಂತೆ. ಅದಕ್ಕೇನಾಗ್ಗು, ಬ್ರಮ್ಮ ಇದ್ಯೆಯ?” ಮುಂತಾಗಿ ಮಾತಾಡುತ್ತು ಮುಂದೆ ಮುಂದೆ ಹೋಗುತ್ತಿದ್ದ ಅವಳ ಹಿಂದೆಯೇ ಹಿತ್ತಲಿಗೆ ಮತ್ತೊಂದು ಸುತ್ತು ಹಾಕಿದೆವು. “ಸಾಕಿನ್ನು. ಬಿಟ್ಟು ಬಿಡುವ ಎಲ್ಲಿತ್ತೋ ಅಲ್ಲಿಯೇ. ನಮಗೆ ಯೋಗ್ಯತೆ ಇದ್ದರೆ ನಮ್ಮ ಗೆಂಡ ಆಪಂವ ತೆಗೆಸಿಕೊಡುವ…. ಇವುಗಳ ಹೇಸಿಗೆ ನಮಗೆ ಯಾಕೆ?” ಎಂದು ಆಕೆ ಹೇಳಿದರೆ “ಹಿಂಗೆಲ್ಲ ಇನ್ನೊಬ್ಬರದು ಹಾಕಿಂಡ್ರೆ, ಹಾಕಿಂತ ಯೋಗವೂ ಅಲ್ಲಿಯೇ ಕಂತಿ ಹೋತುಂಬ್ರು. ಬೇಡ. ಬಿಟ್ಟುಬಿಡುವ” – ಎಂದಳು ಇನ್ನೊಬ್ಬಳು…. ಅವಳು ಯಾರೆಂದೇ ನನಗೆ ನೆನಪಾಗುತ್ತಿಲ್ಲವಲ್ಲ ….ಅಂದು ಅಷ್ಟು ನಿಜವಾಗಿದ್ದವಳು! ಸದ್ದಾಗದಂತೆ ಹಿತ್ತಿಲಿನ ಒದ್ದೆ ಮಣ್ಣನ್ನೆಲ್ಲ ಅಂಟಿಸಿಕೊಂಡ ಮೆಟ್ಟನ್ನು ನಾವು ಕಳಚಿಡುತ್ತಿದ್ದಂತೆ ವಾಣಿಮಾಯಿ ಧಿಡಧಿಡನೆ ಓಡಿದಳು. ಎಲ್ಲಿಗಪ್ಪ ಎಂದು ನೋಡುವುದರೊಳಗೆ ಹಟ್ಟಿಯವರೆಗೆ ಹೋಗಿ ಅಲ್ಲಿ ಹೊರಗೇ ಬಿದ್ದಿದ್ದ ಒಂದು ಮುದ್ದೆ ಸೆಗಣಿಯನ್ನು ಪಚಾರನೆ ಮೆಟ್ಟಿ ವಾಪಾಸು ಓಡಿಬಂದಳು. ಮೆಟ್ಟು ಕಳಚಿಟ್ಟು ಏನೂ ಅರಿಯದ ಮುಖ ಮಾಡಿಕೊಂಡು “ಬಾಯಿ ಬಿಡಳೆ – ಸುಮ್ಮನಿರಿ” – ಎಂದು ತುಟಿಯೊಳಗೇ, ನಮಗೆ ಮಾತ್ರ ಕೇಳಿಸುವಂತೆ ಹೇಳುತ್ತ ನಮ್ಮನ್ನು ಎಬ್ಬಿಕೊಂಡು ಕೈಕಾಲು ತೊಳೆದು ಹಿಂದಿನ ಬಾಗಿಲಿಂದ ಒಳಗೆ ಬಂದು ಮುಂಚಿನಂತೆಯೇ ಕುಳಿತುಬಿಟ್ಟಳು.

ನರಸಿಂಹ ಏನು, ತಾನೇ ಮೇಲೆ ಮೇಲೆ ಮಾತೇರಿಸಿ ಆ ಹಿಡುಗಿಯರೊಡನೆ ಪಟ್ಟಾಂಗ ಬಿಚ್ಚಿದ್ದ. ಇದೆಲ್ಲ ನಮಗೆ ವಾಣಿಮಾಯಿ ಬೊಟ್ಟು ಮಾಡಿ ತೋರಿಸುತ್ತ ಗೊಣಗುತ್ತ ಇದ್ದಳು. ಅವ ಹತ್ತು ಮಾತಾಡಿದರೆ ‘ಅವು’ ಒಂದು ಮಾತಾಡಿದರೂ ಅಡ್ಡಿಲ್ಲ. ‘ಅವುಗಳ’ ಮುಂದೆ ‘ಮಂಡೆ ಕೆಳಗಾದ ಇಂಗ್ಲಿಸ್’ ಬೇರೆ ಹಾರಿಸುತ್ತಿದ್ದ. ಅವರೆಲ್ಲ ಮುಖ ಅಡ್ಡ ಹಾಕಿಕೊಂಡು ಮರೆಯಲ್ಲಿ ನಗುವುದು ನಮಗೆ ಈಚಿಂದ ಕಾಣಿಸುತ್ತಿತ್ತು. “ಹಂಗೇ ಆಗ್ಗು, ಅವು ಇನ್ನಷ್ಟು ಹ್ಹೊಹ್ಹೊ ನಗಗು… ಪೋಂಕು ನರಸಿಂಹ. ನಮ್ಮ ಹಕ್ಕ್ರೆ ಹಿಂಗೇ ಮಾತಾಡಿರೆ ಅವಂಗೆ ಗಂಟು ಮುಳುಗ್ತ? ನಮ್ಮನ್ನ ಕಂಡಕೂಡ್ಲೆ ಗುರ್‌ರ್ ಅನ್ತದೇಕೆ?”

ಅಂತೂ ಬಂದವರು ಎದ್ದರು. ಹೊರಡಲೆಂದು ಹೊರಬಂದರು. ಮೆಟ್ಟಿನ ಬಳಿ ಬಂದರು… ಹ್ಞಂ! ಅಂತ ಗಕ್ಕನೆ ನಿಂತುಬಿಟ್ಟರು. “ಇದಯ! ಮೆಟ್ಟೆಲೆ ಈ ನಮೂನೆ ಮಣ್ಣುಮೆತ್ತಿಂಡ್ದ್ ಹೆಂಗೇ? ಇಶ್ಶ್… ಸೆಗಣಿ!” ಎಂದು ಆ ‘ಗಳಬಾಯಿ’ ಯಮುನಾ ಕೇಳಿಯೇಬಿಟ್ಟಳು! ಇಷ್ಟರವರೆಗೂ ಗಲ್ಲಕ್ಕೆ ಕೈ ಒತ್ತಿಕೊಂಡು ಮಾತಾಡಿದ ಆ ಹೆಣ್ಣುಮಕ್ಕಳು, ಎಷ್ಟು ತಿರಸ್ಕಾರದಿಂದ, ಇದೊಂದು ಅನಾಗರಿಕ ಮನೆ ಎಂಬಂತೆ, ದೃಷ್ಟಿ ಬೀರಿದರು! ಎಂದಳು ವಾಣಿಮಾಯಿ. ಅಂದು ವಾಣಿಮಾಯಿಗೆ ಹೇಗೆ ಕಾಣುತ್ತಿತ್ತೋ ನಮಗೂ ಹಾಗೆಯೇ ಕಾಣುತ್ತಿತ್ತು! “ಇದ್ ಹೆಂಗೆ ಆಯ್ತಿಯಾ!” ಎಂದು ದೊಡಮನೂ ಕಕ್ಕಾಬಿಕ್ಕಿ ನುಡಿದರೆ ನರಹಿಂಹ “ನಾಯಿ ಎಳಕಂಡು ಹೋಯ್ತಾ ಅಂತೆಳಿ!” ಎಂದು ನನ್ನ ಜ್ಞಾನಬಿಚ್ಚಿ ಹಹ ನಕ್ಕ. ಗಾಳಿಯಲ್ಲಿ ಹಾರಿದಂತೆ ಓಡಿ ಒಂದು ಕೊಡಪಾನ ನೀರು ತಂದ. ಧೊಪಧೊಪ ಸುರಿದ. “ಸಾಕು ಸಾಕು ಹಂಗೆ ನೀರು ಸೋಕಿರೆ ಮೆಟ್ಟು ಹಾಳಾತು” ಎಂದು ಅವರು ಹೇಳುತ್ತಾ ಇದ್ದಂತೆ….. ಆ ಯಮುನ (‘ಅಂಥಿಂಥ ಮಾರಿಯಲ್ಲ’) ಸರಕ್ಕ ನಾವು ಇಣುಕುತ್ತಿದ್ದ ಕಿಟಕಿಯತ್ತ ನೋಡಿಯೇಬಿಟ್ಟಳಲ್ಲ! ನಮಗೆ ತಲೆ ಅಡಗಿಸಲೂ ಪುರಸೋತು ಕೊಡದೆ! ಎಲ್ಲ ಅರ್ಥವಾದವಳಂತೆ ಬಾಯಿಯನ್ನೊಮ್ಮೆ ವಾರೆ ತಿಪ್ಪಿ ಮೊಣಕೈಯಿಂದ ಉಳಿದವರಿಗೆ ಸನ್ನೆ ತಿವಿದಳು….. ನಾವು ಅಡಗಿದೆವು. ಅವರೆಲ್ಲ ಹೊರಟುಹೋದರು.
*
*
*
ಅವರ ಮೆಟ್ಟಿಗೆ ಮಣ್ಣು ಮಾತ್ರವಲ್ಲ ಆ ಪಾಟಿ ಸೆಗಣಿಯೂ ಮೆತ್ತಿಕೊಂಡದ್ದು ಹೇಗೆಂಬ ಯೋಚನೆಯಲ್ಲಿಯೇ ಎಲ್ಲ ಒಳಬಂದರು. ನರಸಿಂಹನ ಮುಖದಲ್ಲೇನು ಅವರು ಬಂದು ಹೋದ ಗುಂಗಿನ ಗೆಲು ಕುಣಿಯುತ್ತಿತ್ತು. ಈ ಗೋಡೆಯಿಂದ ಆ ಗೋಡೆಗೆ ಆ ಗೋಡಿಯಿಂದ ಈ ಗೋಡೆಗೆ ಮುಖ ಅಪ್ಪಳಿಸಿ ಸಪಾಟಾಗಬೇಕು, ಹಾಗೆ. ಮರುಳು ಮರುಳು ರಭಸದಿಂದ ಶತಪಥ ತಿರುಗಿದ. ಸುಮ್ಮಸುಮ್ಮನೆ ನಗುತ್ತಿದ್ದ. ಹಾಗೆ ನಗುತ್ತಿದ್ದವ ಒಮ್ಮೆಗೇ ಏನೋ ನೆನಪಾದವರಂತೆ ವಕ್ರಮುಖನಾದ. ದೊಡಮನ ಹತ್ತಿರ ಬಂದು “ಸೆಗಣಿ ಮೆತ್ತಿಟ್ಟಿದ್ ಯಾರಂದ್ ನಂಗೆ ಗೊತ್ತುಂಟು. ಗೊತ್ತಿಲ್ಲೆ ಅಂದ್ ಮಾಡಿಂತ್ ಬೇಡ. ಅವಳ ಹಂಕಾರ ಬಿಡಿಸಿಕೊಡದ್ರೆ ನಾನು ನರಸಿಂಹನಾ!?” – ಎಂದ, ನಾವು ಕುಳಿತಕಡೆಯೇ ಬಾಯಿ ತಿರುಗಿಸಿ. ವಾಣಿಮಾಯಿಗೆ ಕೆರಳಲು ಇಷ್ಟು ಸಾಕು. “ಯೇನಿಯ ಮಾಡ್ತೆ? ಮಾಡ್ತ ಉಂಬ್ರು ಮಾಡ್ತ, ಹೂಂಸುಬುರುಕ. ಅಟ್ಲ್ ಮಾಡ್ ಹೋವು… ನಾವು ಉಣ್ತೋ” – ಎಂದು ಬಿಟ್ಟಳು. ನರಸಿಂಹ ಅಷ್ಟು ಹೇಳಿ ಎಲ್ಲಿಗೆ ಹೋಗಲಿಕ್ಕೋ ಮೆಟ್ಟಿಲಿಳಿದವ ಇದನ್ನು ಕೇಳಿ ಮೈಮೇಲೆ ದರ್ಶನ ಬಂದವರಂತೆ ಮತ್ತೆ ಹತ್ತಿ ಬಂದ. ಚಾವಡಿಯಲ್ಲಿ ಸಿಸಿದ್ದ ಬಾರುಕೋಲು ಎಳೆದು “ಏನಂದೆ ಮುಂಡೆ? ಅಟ್ಲ್ ಮಾಡು ಅಂದೆಯ! ಅಟ್ಲ್ ನಾ ಮಾಡ್ತಾರೆ, ನೀನ್ಯಾಕೆ? ಮೆಟ್ಟು ಮೆಟ್ಟಿಂಡ್ ಬ್ಯಾರಿಕ್ಳ ಹಿಂದೆ ಓಡಿ ಹೋಪುಗಾ?” ಎನ್ನುತ್ತ ಇನ್ನೇನು ಹೊಡೆದೇಬಿಟ್ಟೆ ಎಂಬಂತೆ ಅವ ನುಗ್ಗಿ ಬರಲಿಕ್ಕೂ ವಾಣಿಮಾಯಿ ಸಟ್ಟ ಎದ್ದು “ಬಾ ಬಾಯ. ಹಕ್ಕೈ ಬಾ. ಕೈಲೆ ಏನುಂಟು ಗೊತ್ತುಂಟ? ಈ ಕೊಕ್ಕೆ ಸೂಜಿಲೆ ನಿನ್ನ ಕಣ್ಣ ಚಂದ್ರಿಕೆ ರವ್ವ ತೆಗಿತೆ, ಬಾ” ಕೊಕ್ಕೆ ಸೂಜಿಯನ್ನೇ ಆಯುಧವಾಗಿ ಹಿಡಿದು ಮಹಾಂಕಾಳಿಯಂತೆ ನಿಂತುಬಿಟ್ಟಳು. ಅಬ್ಬ! ಎಷ್ಟುದ್ದ ಎಷ್ಟಗಲ ಈ ವಾಣಿಮಾಯಿ! ಸಿಟ್ಟುಬಂದರೆ ಇನ್ನಷ್ಟು!

ನರಸಿಂಹ ಹೊಡಿತೆ ಬಡೆತೆ ಎನ್ನುತ್ತ ಬಾರುಗೋಲನ್ನು ಗಾಳಿಗೆ ಹೊಡೆಯುತ್ತಾ ನಡುನಡುವೆ ನಮಗೇ ಹೊಡೆಯುತ್ತಾನೆ ಎಂದು ನಾವು ಹೆದರುವ ಹಾಗೆ ನಮ್ಮ ಕಡೆ ರೊಯ್ಯನೆ ನೋಡಿ ಕರುಳಿನುದ್ದಕೂ ನಡುಕ ಹುಟ್ಟಿಸುತ್ತ ಹಾಗೆ ಹಾಗೇ ನಿಧಾನಕ್ಕೆ ಮಾಯವಾದ. “ನಾಯಿ ಎಲ್ಲಿದೊ” – ಹಿಂದೆಯೇ ಗೊಣಗಿದಳು ವಾಣಿಮಾಯಿ. ದೊಡಮ ಅಡಿಗೆ ಕೋಣೆಯಿಂದ ಬೊಬ್ಬೆ ಹೊಡೆಯುತ್ತಿದ್ದರು. “ಮಾಡ್ತೆಲ್ಲ ಅನ್ಯಾಯ. ಬುದ್ಧಿ ಹೇಳುಗಾಗ ಅಲಾ! ಎಷ್ಟುದ್ದ ನಾಲಗೆ. ಹಿಂಗೇ ನಾಲಗೆ ಮಾಡಿರೆ, ಎಲ್ಲಿ ಹೋಯಿ ಬೇಯ್ತೇ…..” ಮುಂತಾಗಿ ಎಲ್ಲ. ಮೆಟ್ಟೆಗೆ ಸೆಗಣಿ ಮೆತ್ತಿಸಿದ್ದಕ್ಕಿಂತಲೂ ನರಸಿಂಹನಿಗೆ ಅಡೆಗೆ ಮಾಡು ಹೋಗು ಎಂದದ್ದೇ ಹೆಚ್ಚಾಗಿ ಅವನ ಹಟದಿಂದ ಅಂದು ಮಧ್ಯಾಹ್ನ ವಾಣಿಮಾಯಿಯನ್ನು ಯಾರೂ ಊಟಕ್ಕೆ ಕರೆಯಲಿಲ್ಲ. ಅವಳೋ, ಒಂದು ಹೊತ್ತು ಊಟ ಮಾಡದಿದ್ದರೆ ಯಾರೇನು ಸತ್ತು ಹೋಪರಾ? ಎನ್ನುತ್ತ ದುಃಖಪಡದೆ “ಇನ್ನಷ್ಟು ಗರ್ವಲೆ” ಜೋರಾಗಿ ಲೇಸು ಹೆಣೆಯುತ್ತ ಕುಳಿತಳು…. ಕೋಣೆಯಿಂದ ಹೊರಗೇ ಬರಲಿಲ್ಲ. ನಾವು ಉಣ್ಣೆವು ಎಂದು ಕುಳಿತರೆ ದೊಡಮ ಪುಸಲಾಯಿಸಿ ಎಳೆದುಕೊಂಡೇ ಹೋಗಿ ಕೂಡಿಸಿದರು. ಹಸಿವಾಗುತ್ತಿದ್ದ ನಮಗೆ ಉಣ್ಣಲೂ ಅಲ್ಲ, ಬಿಡಲೂ ಅಲ್ಲ.

ಸಂಜೆಗೆ ದೊಡಪ ಬಂದರು. ಎಲ್ಲ ತಿಳಿದರು. ಏನೂ ಹೇಳಲಿಲ್ಲ! ಊಟದ ಹೊತ್ತಿನಲ್ಲಿ “ನಂಗೆ ವಾಣಿ ಇಲ್ಲದ್ರೆ ಊಟ ಸೇರ” ಎಂದು ಅವಳನ್ನು ತಾವೇ ಹೋಗಿ ಕರೆದುಕೊಂಡು ಬಂದರು. ಬಾ ಮಗ ಎಂದು ತನ್ನ ಬಳಿಯೇ ಕೂಡಿಸಿಕೊಂಡರು. ನರಸಿಂಹ ಉರಿ‌ಉರಿಯಾಗಿ ಉಂಡು ಎದ್ದುಹೋದ. ದೊಡಪನ ಎದುರು ವಾದಿಸಿದರೆ ಅವರು ಉತ್ತರವನ್ನೇ ಕೊಡಲಿಲ್ಲ. ಎಷ್ಟು ವಿಚಿತ್ರ ಈ ದೊಡಪ! ದೊಡಮ ತಾನು ಹಾಕಿದ ಗೆರೆ ದಾಟುವುದಿಲ್ಲ ಎಂದು ಖುಷಿಪಡುವರು. ಕಾವೇರಿ ಚಿಗಮನ ಹಾಗೆ ದೊಡಮ ಮೆಟ್ಟು ಹಾಕಿದರೆ “ಸಿಗಿದು ಹಾಕಿಪ್ಪೆ” ಎಂದವರು ವಾಣಿಮಾಯಿಗೆ ಮಾತ್ರ ವಿಶೇಷ ಪ್ರೀತಿ ತೋರಿಸುವರು.
*
*
*
ಇದರ ನಂತರವಂತೂ ವಾಣಿಮಾಯಿಯದು ಒಂದೇ ರಾಗ. “ದೊಡಪ, ನಂಗೆ ಮೆಟ್ಟು ಬೇಕು. ಮೆಟ್ಟು ಬೇಕು ದೊಡಪ.” ಕೇಳಿ ಕೇಳಿ ಕಡೆಗೆ ದೊಡಪ “ಅಷ್ಟೇ‌ಅಲ್ದ. ಅದಕ್ಕೇನಾಗ್ಗು” ಎಂದರು! “ಆಯೇಸ ಎಲ್ಲ ಬೇಡಯೇ.” ಎಂದು ದೊಡಮ ಹೇಳಿದರೆ ಕೇಳುವವರೇ ಅವರು? – ಅವರು ಕೇಳಲಿಲ್ಲ ಎಂದು ನಾವು ಎಷ್ಟು ಖುಷಿಪಟ್ಟೆವು!!

ಒಂದು ಸಂಜೆ ಆ ಪಾಲಿನ ಮನೆಯಲ್ಲಿ ವಿಶೇಷಕಟ್ಟಳೆ ಎಂದು ನರಸಿಂಹ, ದೊಡಮ ಎಲ್ಲ ಹೋಗಿದ್ದರು. ನಾವು ದೊಡಪನೂ ಹೋಗಿದ್ದಾರೆ ಅಂತೆಣಿಸಿದ್ದೆವು. ಒಳಗೇನೋ ನಮ್ಮಷ್ಟಕ್ಕೆ ಹಾಡಿಕೊಳ್ಳುತ್ತು ಇದ್ದೆವು. ಯಾರೋ ಮೆಟ್ಟಿಲು ಹತ್ತಿದ ಸದ್ದಾಯಿತು. ನೋಡಿದರೆ ದೊಡಪ! ಹಿಂದೆಯೇ ಮೋಪಬ್ಯಾರಿ!

ಅಬ್ಬಾ! ಬ್ಯಾರಿಕ್ಳನ್ನು ಕಂಡರೆ ಭಯವಾಗುತ್ತದೆ. ನರಸಿಂಹ ಯಾಯಾವ ರೀತಿಯಲ್ಲೆಲ್ಲ ಇವರ ಬಗ್ಗೆ ಹೇಳಿದ್ದಾನೆ! ಬ್ಯಾರಿಗಳ ಎದುರು ಹಾಗೆಲ್ಲ ಹೋಗಬಾರದು. ನೋಡಿದರೆ ಅವರು ನಮ್ಮನ್ನು ಕದಿಯುತ್ತಾರೆ. ಕಣ್ಣಲ್ಲೇ ಹಾಳು ಮಾಡುತ್ತಾರೆ. ಕೈಯಲ್ಲಿ ಚೂರಿ ಇಟ್ಟುಕೊಂಡೇ ತಿರುಗುತ್ತಾರೆ. ಕಿವಿ, ಮೂಗು ಕತ್ತರಿಸಿ ಕಾಡಿಗೆ ಬಿಡುತ್ತಾರೆ…. ” ಅಷ್ಟು ಮಾಡಿರೂ ಬ್ಯಾರಿಕ್ಳೇ ಅಕ್ಕು. ನರಸಿಂಹ ಬೇಡ.” ಎಂದು ಅವನ ಪುಂಗಿ ಎದುರು ವಾಣಿಮಾಯಿ! ಆದರೂ ಅವಳಿಗೂ ಬ್ಯಾರಿಗಳೆಂದರೆ ಹೆದರಿಕೆ ಎಂದು ತಿಳಿದದ್ದು ಮತ್ತು ನರಸಿಂಹ ಹೇಳುವುದೆಲ್ಲ ಅವಳ ಮೇಲೆಯೂ ಪರಿಣಾಮವಾಗಿದೆ ಎಂದು ತಿಳಿದದ್ದು ಮೋಪ ಬ್ಯಾರಿ ಬಂದಾಗಲೇ!

ದೊಡಪ ಕರೆದರು. ವಾಣಿಮಾಯಿ, ಅವಳ ಹಿಂದೆ ನಾನು, ಹಿಂದೆ ಮತ್ತಿಬ್ಬರು (ಯಾರಪ್ಪ – ನೆನಪು ಹೋಗಿಯೇ ಬಿಟ್ಟಿತೇ ಹಾಗಾದರೆ!) ಮೆಲ್ಲಗೆ ಹೊರಬಂದೆವು. ಮರೆಯಲ್ಲಿ ನಿಂತೆವು.

“ಯಂತ ಹೆಣ್ಣೆ! ಹೆದ್ರತೆಂತರ! ಮೋಪಬ್ಯಾರಿ ಗೊತ್ತಿಲ್ದ? ಮೆಟ್ಟಿನಂಗಡಿಯವ! ನಮ್ಮ ಒಕ್ಕಲು ಹಾಜಿಬ್ಯಾರಿಯ ಮಗ!” ಎಂದು ನಕ್ಕರು ದೊಡಪ. ಬ್ಯಾರಿ ಚಾವಡಿಯ ಪಾತಾಳಂಕಣದಲ್ಲಿ ತುರುಕಾಲಿನಲ್ಲಿ ಕುಳಿತಿದ್ದ.

“ಬಾ – ನಿನ್ನ ಕಾಲಳತೆ ಕೊಡು.” ಎಂದು ದೊಡಪ ಮತ್ತೆ ಕರೆದರು.

ವಾಣಿಮಾಯಿ ಒಂದು ಹೆಜ್ಜೆಯೂ ಮುಂದೆ ಹೋಗಳು! ನಾವೂ ಸುಮ್ಮನೆ ನಿಂತು ಕೊಂಡೆವು.

ಬ್ಯಾರಿ ತಲೆಗೊಂದು ಕೆಂಪುಬಿಳಿ ಚೌಕುಳಿ ಟುವಾಲು ಸುತ್ತಿಕೊಂಡಿದ್ದ. ಚೌಕುಳಿ ಮುಂಡು ಉಟ್ಟಿದ್ದ. ಶರಟಿನ ತೋಳನ್ನು ಮಡಚಿದ್ದ. ಅವನ ಕೈ ನರವೆಲ್ಲ ಕಾಣುತ್ತಿತ್ತು. ಬಗ್ಗು ಮೀಸೆಯ ಬಾಯಿಯಲ್ಲಿ ವೀಳೆಯ ಜಗಿಯುತ್ತಿದ್ದ. ಕಣ್ಣಲ್ಲಿ ನಗುತ್ತಿದ್ದ. ಚೂರಿ ಎಲ್ಲಿಟ್ಟುಕೊಂಡಿದ್ದಾನೋ…. ಕಾಣದಂತೆ! ಇಷ್ಟರವರೆಗೆ ಬ್ಯಾರಿಗಳನ್ನು ಹೀಗೆ ಇಷ್ಟು ಹತ್ತಿರದಿಂದ ನಾವು ಕಂಡೇ ಇರಲಿಲ್ಲ. ಅವನೇ ಕರೆದ “ಬಲೆ ಅಮ್ಮ.” ವಾಣಿಮಾಯಿ ನಿಂತಲ್ಲೇ ಸಣ್ಣಗೆ ನಡುಗಿದ್ದನ್ನು ಕಂಡು ನನಗೆಲ್ಲಿಂದಲೋ ಧೈರ್ಯ ಬಂದು ಅವಳನ್ನು ಮುಂದೆ ನೂಕಿಬಿಟ್ಟೆ. ಅವಳು ಹಿಂದಿರುಗುವುದರೊಳಗೆ ದೊಡಪ ಬಂದು ರಟ್ಟೆ ಹಿಡಿದು ಬ್ಯಾರಿ ಕುಳಿತೆಡೆಗೆ ಕರೆದೊಯ್ದರು. ಬ್ಯಾರಿ ಕಿವಿಯೆಡೆಯಿಂದ ಪೆನ್ಸಿಲು ಎಳೆದುಕೊಂಡು ನೆಲದ ಮೇಲೆ ಒಂದು ಖಾಲಿ ಕಾಗದವಿಟ್ಟುಕೊಂಡು ಕಾಯುತ್ತಿದ್ದವ, ಕಾಗದದ ಮೇಲೆ ಕಾಲಿಡಲು ಹೇಳಿದ. ವಾಣಿಮಾಯಿ ಎಷ್ಟು ಹೆದರಿದಳು! ಅವಳು ಹೇಗೆಲ್ಲ ಹೆದರುವುದನ್ನು ಇದೇ ಮೊದಲ ಸಲ ನಾವು ಕಂಡದ್ದು. ಆದರೂ – ಅವಳ ಮುಖದಲ್ಲಿ ಸಣ್ಣದೊಂದು ನಗೆಯೂ ಇತ್ತಲ್ಲವೆ!…. ಕಾಲು ಎತ್ತಿ ಇಡಲು ಏನಾಗಬೇಕು? ದೊಡಪ ಇದ್ದಾರೆ, ಹಾಗೇನಾದರೂ ಅವ ಹಾರಿಸಿಕೊಂಡು ಹೋಗಲು ಹವಣಿಸಿದರೆ. ನಮ್ಮ ಎಣಿಕೆಗೆ ಸರಿಯಾಗಿ ದೊಡಪ “ಯಂತ ಹೆಣ್ಣೆ, ಹಿಂಗೆ ಹೆದರಿದರೆ ಮೆಟ್ಟೂ ಇಲ್ಲೆ ಯಂತದೂ ಇಲ್ಲೆ” ಎಂದರು. ಕಡೆಗೆ ನಿಧಾನ, ಮದುಮಗಳಂತೆ, ವಾಣಿಮಾಯಿ ಪಾದವನ್ನೆತ್ತಿ ಬ್ಯಾರಿಯ ಕಾಗದದ ಮೇಲಿಟ್ಟಳು. ಬ್ಯಾರಿ ಎಡಗೈಯಿಂದ ಅವಳ ಪಾದದಗಂಟು ಹಿಡಿದು ಬಲಗೈಯ ಪೆನ್ಸಿಲನ್ನು, ಸುತ್ತಲೂ ಓಡಿಸಿದ. “ಆಂಡ್, ಗೆಪ್ಲೆ” ಎಂದ. ಪಾದ ತೆಗೆದರೆ, ಅದರ ಮೇಲೆ ಅವಳ ಪಾದದ ಆಕಾರ ಮೂಡಿತ್ತು! ಅಗಲ, ಹಾಸುಪಾದ. ಲಕ್ಷಣವೋ ಅವಲಕ್ಷಣವೋ ಎರಡೂ ಹೇಳಿಸಿಕೊಂಡದ್ದು.

…….ಈಗ ಎಷ್ಟು ನಿರ್ಜೀವವಾಗಿ ನರಸಿಂಹ ಗೀಚಿದರೂ ಅಲ್ಲಾಡದೆ ಸೆಟೆದುಕೊಂಡಿದೆ!! ವಾಣಿಮಾಯಿ….ವಾಣಿಮಾಯಿ….

ಇನ್ನೊಂದು ಪಾದದ ಅಳತೆಯನ್ನು ಹಾಗೆಯೇ ತೆಗೆದುಕೊಂಡಾಯ್ತು. ವಾಣಿಮಾಯಿ ಈಚೆಗೆ ಬಂದಳು. ಅವಳ ಮುಖ ತುಂಬ ಮುಗುಳು ಮುಗುಳು ನಗೆ ಹರಡಿಕೊಂಡಿತ್ತು. ಎಷ್ಟು ಚೆಂದ ವಾಣಿಮಾಯಿ ಆ ಮುಗುಳಿನಲ್ಲಿ! ದೊಡಪನಿಗೆ ಏನು ಕಂಡಿತೋ. ನಮಗೂ ಕಾಲಿಡಲು ಹೇಳಿದರು. ಬ್ಯಾರಿ ನಮ್ಮ ಕಾಲಳತೆಯನ್ನೂ ತೆಗೆದುಕೊಂಡ. ಬಾಯಾರಿಕೆ ಕುಡಿದು ಲೋಟ ತೊಳೆದು ಜಗಲಿಯ ತುದಿಯಲ್ಲಿ ಕವುಚಿ ಇಟ್ಟು ನಾಲ್ಕು ಮಾತಾಡಿ, ನಮ್ಮ ಕಡೆಗೂ ತಿರುಗಿ ‘ಬರ್ಪೆ’ ಎಂದು ಹೇಳಿ, ಹೊರಡಲು ಮೆಟ್ಟಿಲು ಇಳಿದ – ನರಸಿಂಹ ಹಾಜರಾದ! ಹೇಗೆ, ಇಷ್ಟು ಬೇಗ! ಒಸಗೆ ಸಿಕ್ಕಿದ್ದು ಹೇಗೆ!

ಮತ್ತಿನ ಅವನ ಅವತಾರ ಹೇಳುವುದು ಬೇಡವಷ್ಟೆ? “ಹೆಮ್ಮಕ್ಕಳಿಗೆ ತೀರಾ ಪೇಶನ್ನು ಯಾಕೆ ಬೇಕು? ಇವಳೊಬ್ಬಳಿಗೆ ಅದೇನು ಗರ್ಜು. ಇವಳು ಹೇಳಿದ ಹಂಗೇ ಕೇಣ್ನಿ. ಮತ್ತೆ ಆ ಬ್ಯಾರಿನ್ನೇ ಕಟ್ಟಿಂಡ್ ಹಾರತ್ಲ್. ಅವ ಏನು ಸಾಮಾನ್ಯದವ ಅಲ್ಲ. ನೀವು ಕಾಣ್ತ ಕುಳ್ಕಣಿ. ಕಡೆಗೆ ಬಾಯಿ ಬಾಯಿ ಬಡಕಂಡೆ ಹೋದ ಮರ್ಯಾದೆ ವಾಪ್ಸು ಬರ್‍ತಾ?” ಅಂತೆಲ್ಲ ಅತ್ತ ಇತ್ತ ಮೇಲೆ ಕೆಳಗೆ ತಿರುಗುತ್ತ ಹೌವೌವೌ ಎಂದ. ದೊಡಪ ಎಂದಿನಂತೆ ಒಂದೂ ಮಾತಾಡಲಿಲ್ಲ. ವಾಣಿಮಾಯಿಗೆ ಅದೇ ಸಿಟ್ಟು, ದುಃಖ. ಅವನ ಆರ್ಭಟ ಕೇಳಿ ಕೇಳಿ ಕಡೆಗೆ “ನೀನು ಮೆಟ್ಟು ಮೆಟ್ಟಿಂಡಿದಿಯಲ್ಲ. ಅದು ಅಡ್ಡಿಲ್ಲಯ? ಚಟ್ಟಲೆ ನಿನ್ನ ಹೊತ್ತಂಡ್ ಹೋಪ್ತಿಗೆ ಒಟ್ಟಿಗೇ ತೆಕಂಡ್ ಹೋವು ಮತ್ತೆ. ಬಿಟ್ಟು ಹೋಗಡಾ. ನಿನ್ನ ಹೆಂಡತಿ ಮೆಟ್ಟಿಂಡ್ ಯಾರೊಟ್ಟಿಗಾರೂ ಓಡಿ ಹೋಪ್ಳು” – ಎಂದು ಕೂಗಿದಳು. ಈ ಮಾತಿಗೆ ದೊಡಪ ನಕ್ಕರು.

“ದೊಡಪ, ಅವ ಅಂಗೆಲ್ಲ ನನ್ನ ಜರಿತ ಕಾಣಿ ಮತ್ತೆ. ನನ್ನನ್ನೇನು ಅವ ಕ್ರಯಕ್ಕೆ ಕೊಂಡಿದ್ದನಾ!” ಎಂದರೆ ವಿಚಿತ್ರ ದೊಡಪ ಅದನ್ನ ಬೇರೆಯೇ ತಿರುಗಿಸಿ “ಹೆಂಗೆ ಹೇಳ್ತದ್ ಮಗಾ, ಋಣಾನುಬಂಧ ಹೆಂಗೆ ಹೆಂಗೆ ಬರಕಂತೋ ಈಗಳೇ ಹೇಳಗೆ ಬರ್‍ತಿಲ್ಲೇ” ಎಂದು ರಾಗವೆಳೆದರು. ಅದನ್ನ ಕೇಳಿದವಳೇ ವಾಣಿಮಾಯಿ ಕೈಯನ್ನು ಕತ್ತಿಯಂತೆ ಬೀಸಿ ಆಡಿಸುತ್ತ “ಹ್ಞಂ ಹ್ಞಂ! ಬೇಡಿ ತಿಂತವನ್ನಾದರೂ ಮದುವೆ ಆಪೆ, ಈ ನರಸಿಂಹನ್ನಲ್ಲ” ಎಂದು ಗುಡುಗಿ ಎದ್ದು ಒಳಗೆ ನಡೆದುಬಿಟ್ಟಳು. ಕಣ್ಣಲ್ಲಿ ಒಂದು ಹನಿ ನೀರನ್ನೂ ತೆಗೆಯೆ ಎಂದು ಶಪಥ ತೊಟ್ಟಂತಿದ್ದವಳು… ಕಣ್ಣಲ್ಲಿ ನೀರು ಬಂದದ್ದು ನಮಗೆ, ಎಲ್ಲ ನೋಡುತ್ತ ಬೆಪ್ಪುಗಟ್ಟಿದವರಿಗೆ. ಭಯಕ್ಕೋ ಅವಳೊಳಗಿನ ಸಂಕಟ ನನಗೇ ಆಗುತ್ತಿದೆ ಅಂದುಕೊಂಡದ್ದಕ್ಕೋ ನಾನಂತೂ ಬಿಕ್ಕಿ ಬಿಕ್ಕಿ ಅಳತೊಡಗಿದೆ. ದೊಡಪ ” ಏನಿಯ, ಬುಳ್ಪುಗಾಗ. ಅವಕ್ಕೆ ಬುದ್ಧಿಯಿಲ್ಲೆ. ಜಗಳ ಆಡಿಂತೋ. ನೀ ಹೆದರಳೆ.” ಎಂದು ನನ್ನನ್ನೆಳೆದು ತಾನು ಕುಳಿತ ಆರಾಮ ಕುರ್ಚಿಯ ಕೈಮೇಲೆ ಕೂಡಿಸಿಕೊಂಡು ಬೆನ್ನುತಟ್ಟಿದರು. ಆಚಿಂದ ಇನ್ನೂ ನರಸಿಂಹನ ಗರ್ಜನೆ ಕೇಳುತ್ತಿತ್ತು. “ಅವಳು ಮೆಟ್ಟು ಮೆಟ್ಟಿಂಡ್ ಎಲ್ಲಿಗೆ ಹೋತ್ಲ್ ಕಂಡೇ ಬಿಡ್ತೆ ನಾನೂ”
*
*
*
ಆ! ಮೆಟ್ಟು ಬಂತು! ದೊಡಪ ಪೇಟೆಯಿಂದ ತಂದ ಕಟ್ಟು ಬಿಚ್ಚಿದರು.

ಇದೆಂತ ಮೆಟ್ಟು! ಸ್ಸಿ! ಒಂದು ಬಣ್ಣವೇ ಇಲ್ಲ. ಹೊಳಪಂತೂ ಮೊದಲೇ ಇಲ್ಲ. ಮೋಪಬ್ಯಾರಿಯೇ ಹೊಲಿದ ಮೆಟ್ಟು. ಹೊಲಿಗೆಯ ಗೀಟೆಲ್ಲ ಕಾಣುತ್ತಿತ್ತು. ಆದರೂ ಅದು ಮೆಟ್ಟು! ಕಡೆಗೂ ಮೆಟ್ಟು ಹೌದಲ್ಲ! ಮೂಗಿಗೆ ಹಿಡಿದು ಮೂಸಿದಳು ವಾಣಿಮಾಯಿ. ಫ್ಞುಂ!…. ನಮ್ಮ ಮೂಗಿಗೂ ಹಿಡಿದಳು! ಫ್ಞುಂ!…. ಹಸೀ ವಾಸನೆ, ಪರಿಮಳ. ವಾಣಿಮಾಯಿಗೆ ಎಷ್ಟು ಎಷ್ಟು ನಗೆ! ನಮಗೂ! ಬಂತಲ್ಲ ಅಂತೂ ಮೆಟ್ಟು! “ಇವರದೆಲ್ಲ ಎಲ್ಲಿ ದೊಡಪಾ?” “ಬ್ಯಾರಿ ಕೊಟ್ಟುದಿಲ್ಲೆ” ಎಂದರು ದೊಡಪ ಸಂಧ್ಯಾವಂದನೆಗೆ ಕೂಳಿತವರು, ಕಣ್ಣುಮುಚ್ಚಿ…(“ನೀವು ಅಂದ್ ಹಂಗೆ ಢೋಂಗಿ ಮಾಡಿದ್! ಅಲ್ಲ ದೊಡಪಾ!?” ಎಂದು ಈಗ ಛೇಡಿಸಿದರೂ ಮುದಿ ಮುದೀ ದೊಡಪನ ಬೋಡು ಬಾಯಿ ತುಂಬ ನಗೆ ತುಂಬಿಕೊಳ್ಳುತ್ತದೆ…. ಪಾಪದ ದೊಡಪ, ಇದ್ದ ದುಡ್ಡಲ್ಲೇ ಮರ್ಯಾದೆ ಮೆರೆಸಿದವರು!… ಕುಳಿತಿದ್ದಾರಲ್ಲ ಅಲ್ಲಿ, ನರಸಿಂಹನ ಪಟಾಕಿಗೆ ಬಾಯಿ ಕಳೆದುಕೊಂಡು, ಈಗಲೂ ಒಂದೂ ಮಾತಾಡದೆ; ಮಲಗಿರುವ ವಾಣಿಮಾಯಿಯನ್ನೇ ನೋಡುತ್ತ….)

ಈ ವಾಣಿಮಾಯಿ ಏನು ಮಾಡಿದಳು, ಮೆಟ್ಟು ತೆಗೆದು ಕಣ್ಣಿಗೆ ಬೀಳುವ ಜಾಗದಲ್ಲಿ ಇಟ್ಟಳು. ನರಸಿಂಹ ಮನೆಗೆ ಬಮದವನೇ ಕಂಡ. ತನ್ನ ಕಾಲಿನ ಮೆಟ್ಟು ಬೀಸಿ ಕಳಚುವ ನೆಪದಲ್ಲಿ ರಭಸದಿಂದ ಅವಳವನ್ನು ನೂಕಿ ಮೂಲೆಗೊತ್ತಿದ. ನಾವಿದನ್ನು ವಾಣಿಮಯಿಗೆ ವರದಿ ಮಾಡಿದೆವು.

ವಾಣಿಮಾಯಿ ಮೆಟ್ಟು ಧರಿಸಿ ಅವನ ಎದುರೆದುರೇ ಅಂಗಳ ತುಂಬ ಓಡಾಡಿದಳು. “ಓ!…. ಇದು ಕಚ್ತ್!…. ಇದ ಇದಾ…. ಮೆಟ್ಟು ಕಚ್ತದ್ ಕಾಣಿಯಾ….!” ಎಂದು ಸಂಭ್ರಮ ನಗುತ್ತ.

ಅಂದು ರಾತ್ರಿ ಮಲಗಿದ ವಾಣಿಮಾಯಿಗೆ ನಿದ್ದೆ ಬಾರ. ಮಲಗಿದಲ್ಲೇ ಜಾನಿಸಿದಳು. “ಆ ನರಸಿಂಹನ ನಂಬಗಾತಿಲ್ಲೆ. ದ್ವೇಸಲೆ ಅವ ಏನು ಮಾಡಗೂ ಹೇಸದವ. ಮೆಟ್ಟನ್ನು ಎಲ್ಲದರೂ ಕೆರೆ ಬಾವಿಗೆ ಬಿಸಾಕಿರೂ ಬಿಸಾಕಿದನೇ….” ಅದು ಚರ್ಮದ ವಸ್ತು. ಒಳಗೆ ತರುವಂತಿಲ್ಲ…. ಏನು ಮಾಡಬೇಕಾಯಿತು? ಕೊನೆಗೆ ಎಲ್ಲ ಮಲಗಿದ ಮೇಲೆ ಮೆಲನೆದ್ದು ಚಿಮಿಣಿ ದೀಪ ಹಿಡಿದು ಚಾವಡಿಗೆ ಹೋಗಿ (ಹಿಂದೆಯೇ ನಾವು!) ಅದನ್ನು ರಟ್ಟಿನ ಪೆಟ್ಟೆಗೆಯೊಳಗೆ ಮತ್ತೆ ಇರಿಸಿ ಸದ್ದಾಗದಂತೆ ತಂದು ಹಾಸಿಗೆಯ ಪಕ್ಕ ಗೋಡೆಗೆ ತಾಗಿಸಿಟ್ಟುಕೊಂಡಳು. ಅದಕ್ಕೂ ಕೂಡಿಯೇ ಹೊದಿಕೆ ಹಾಕಿಕೊಂಡಳು. ಅಯ್ಯಬ್ಬ ಎಂಬಂತೆ ದೀರ್ಘ ಉಸಿರುಬಿಟ್ಟಳು…. ಅವಳ ಅಷ್ಟು ಕೆಲಸ ಮುಗಿಯುವವರೆಗೂ ನನಗೂ ಎದೆ ಢವಗುಟ್ಟುತ್ತಿತ್ತು….. ಮತ್ತೆ ಗಾಢ ನಿದ್ದೆ ಆವರಿಸಿತು. ರಾತ್ರಿ ಎಷ್ಟು ಹೊತ್ತು ಕಳೆಯಿತೋ…..

“ಅಯ್ಯೋ…. ದೊಡಮಾ…. ಸತ್ತೇ ಸತ್ತೇ…. ನಾ ಮುಗಿದುಹೋದೇ…. ದೊಡಪಾ….. ದೊಡಪಾ” ವಾಣಿಮಾಯಿ ಗಂಟಲುಗೆರಚಿ ಕೂಗಿದ್ದು ಕಿವಿಗಪ್ಪಳಿಸಿತು.

ನಾವೆಲ್ಲ ಧಿಗ್ಗನೆದ್ದೆವು. ದೊಡಮ ದೊಡಪ ಎಲ್ಲ ಓಡೆ ಬಂದರು. ನೋಡೆದರೆ ವಾಣಿಮಾಯಿಯ ಬಲಪಾದ ಹತ್ತಿ ಉರಿಯುತ್ತಿತ್ತು…. ತಾಪಕ್ಕೆ ಹೊರಳಿ ಹೊರಳಿ ಅಳುತ್ತಿದ್ದಳು ವಾಣಿಮಾಯಿ. “ಏನಾಯ್ತು…. ಹೆಂಗೆ ಆಯ್ತಿಯಾ…. ರಂಡೆ ಅಳಡಾ…. ಹೆಂಗೆ ಆಯ್ತು ಹೇಳೂ…. ಮಣೀ ನರಸಿಂಹಾ….”

“ಕರೆಯಳೇ… ಆ ಪಾಪಿನ ಕರೆಯಳೇ… ಅಯ್ಯೋ ನನ್ನ ತೆಗೆದ…. ದೊಡಪಾ…. ನನ್ನ ಕೊಂದ ಅವ…. ನನ್ನ ಸಮಾಧಿ ಮಾಡಿಯಾ…..” ಹೇಗೆ ಹೊರಳುತ್ತಿದ್ದಳು ವಾಣಿಮಾಯಿ ಬದುಕೇ ಸುರುಟಿಹೋದಂತೆ!

ಈ ಎಲ್ಲ ದುಃಖ ದಿಗ್ಭ್ರಮೆ ಸಂತೈಕೆಗಳ ನಡುವೆ, ನಾವೆಲ್ಲ ಉಸಿರು ನಿಂತುಹೋದವರಂತೆ ನೋಡುತ್ತಿರುವಾಗ…. “ಮತ್ತೆ, ಅವನ್ನ ಕರೆರಳಿಸಗೆ ಯಾಕೆ ಹೋಗ್ಗು ಇವಳು? ಗಂಡಸರ ಕೆರಳಿಸೆರೆ ಉಳಿತ ಬಾಬತ್ತು ಉಂಟಾ! ಅವಂಗೆ ಸರಿಕಟ್ಟಿ ಎದುರು ನಿಲ್ಲ್ತಿದ್ಲ್….. ಅವ ಮಾಡಿಯ ಬಗೆ…” ಎಂದದ್ದು – ಯಾರು?….

“ಆಯಿತಲ್ಲದ…. ಮೆಟ್ಟು ಮೆಟ್ಟು ಅಂದದ್…. ಇನ್ನು ಹಾಕಿಂತೆಲ್ಲಿಗೆ? ಕೈಗೆ ಹಾಕಿಣ್ಣಗು! ಇಲ್ಲ ಒಂದೇ ಕಾಲಿಗೆ ಹಾಕಿಂಡ್ ತಿರುಗಗು…. ಹೆಮ್ಮಕ್ಕಳು ಅತೀ ಆಸೆಪಟ್ಟರೆ ಹಂಗೇ ಆತು ಮತ್ತೆ….” ಎಂದದ್ದು – ನಕ್ಕದ್ದು ಯಾರು?

ಯಾರು ವಾಣೀಮಾಯೇ, ಯಾರು ನಿನಗೆ ನೆನಪುಂಟಾ?

“ವಾಣಿಮಾಯಿ ವಾಣಿಮಾಯಿ” ನನ್ನ ಸ್ವರ ನನಗೇ ಕೇಳಿಸುತ್ತಿರಲಿಲ್ಲ. ವಾಣಿಮಾಯಿಯ ಬದುಕಿನ ಯಾವ ಅಧ್ಯಾಯ ನೆನೆಯಲು ಹೋದರೂ ಹೀಗೇ, ಕತ್ತಿನಲ್ಲಿ ದಣಿವು ಕಟ್ಟಿಕೊಳ್ಳುತ್ತದೆ. ಶಬ್ದಗಳೆಲ್ಲ ಮಾಯವಾಗುತ್ತವೆ.
*
*
*
ಗಂಟೆ ಎಂಟಾಯ್ತು. ಬೇಗ ಒಂದು ಊಟ ಮುಗಿಸುವ ಎಂದು ಎಲ್ಲ ಎದ್ದು ಒಳಗೆ ಹೋದರು. “ನಾನು ಆಮೇಲೆ” ಎಂದೆ. ನಾನು ಹಾಗೆಂದದ್ದು ಕೇಳಿ, ಕುರ್ಚಿಯಿಂದ ಎದ್ದ ನರಸಿಂಹ ಮತ್ತೆ ಕುಳಿತ! “ನರಸಿಂಹ ನೀ ಹೋವು. ಅವಳು ಸುಖಲೆ ಸಾಯಲಿ” ಎನ್ನಬೇಕೆನ್ನಿಸಿತು. ಆದರೆ ಒಂದು ಶಬ್ದ ವಿನಿಮಯಕ್ಕೂ ಅವನ ಮುಖ ನೋಡಬೇಕೆಂದೆನಿಸುವುದಿಲ್ಲ. ಅವನೇ ಮಾತಾಡಲು ಯತ್ನಿಸಿದಂತೆ ನಾನು ಉತ್ತರವನ್ನೇ ಕೊಡದೆ ವಾಣಿಮಾಯಿಯ ತಲೆಯನ್ನು ಮೃದುವಾಗಿ ನೇವರಿಸುತ್ತ ಕುಳಿತೆ. ಸಾಕಾಗಿ ಸುಮ್ಮಗಾದ. ಇಷ್ಟರವರೆಗಲ್ಲ, ಈಗ, ಉಳಿದವರೆಲ್ಲ ಇಲ್ಲದ ಈ ಮೌನದಲ್ಲಿ ನನಗವಳು ಹತ್ತಿರವೇ ಇದ್ದಾಳೆ ಅನ್ನಿಸಿತು. ಬಾಗಿ “ವಾಣಿಮಾಯಿ, ನಾನು…. ನಿನ್ನ ವಸಂತಿ…. ಗುರ್‍ತ ಸಿಕ್ಕಿಲ್ಲಯಾ?….” ಎಂದೆ. ಹೀಗೆ ಹೇಳುತ್ತಾ ತಲೆ ನೇವರಿಸುತ್ತಾ ಇದ್ದಂತೆ –

ಕಣ್ಣು ಅರೆತೆರೆದಳು ವಾಣಿಮಾಯಿ!
ತುಟಿ ಅಲ್ಲಾಡಿಸಿದಳು.

“ಯಾರೂ…?” ಎಂದಳೇ? ನಾನು “ನೀನೇ ಹೇಳು ಕಾಂಬ” ಎಂದೆ. ಸಣ್ಣಗೆ ಹೌದೋ ಅಲ್ಲವೋ ನಗುತ್ತಾ “ವಸಂತಿ ಅಲ್ದ?” ಎಂದಳೇ? “ಅಯ್ಯೋ ವಾಣಿಮಾಯೀ!!” ಕಣ್ಣೀರು ಧುಮ್ಮಿಕ್ಕಿತು. ಆಗ ನರಸಿಂಹ ಗಟ್ಟಿಯಾಗಿ ಒಳಗಿನವರಿಗೆಲ್ಲ ತಿಳಿಯುವಂತೆ “ಹೋ ಎಚ್ಚರ ಬಂತು! ಎಚ್ಚರ ಬಂತಲ್ಲ! ಇನ್ನು ಆಯುಸ್ಯಕ್ಕೆ ಅಡ್ಡಿಲ್ಲೆ”…. ಎಂದ. ಎನ್ನುತ್ತ ಎನ್ನುತ್ತ ಅವಡುಗಚ್ಚಿಕೊಂಡು ಬೀಗದ ಕೈಯನ್ನು ಅವಳ ಚ್ಞೋಂಟು ಅಂಗಾಲಿನತ್ತ ತರಲು ಸನ್ನದ್ಧನಾಗುತ್ತಿರುವುದನ್ನು ಕಂಡವಳೇ ನಾನು ಗಕ್ಕನೆ ಧಾವಿಸಿ ಅವನ ಕೈಯಿಂದ ಅದನ್ನು ಕಸಿದು ಕಿಟಕಿಯ ಹೊರಗೆ ಬೀಸಿ ಬಿಸಾಕಿದೆ…. “ಹ್ಹ…. ಏನು ಏನಿಯ?” ಎಂದು ಆತ ತಬ್ಬಿಬ್ಬು ನಿಲ್ಲುತ್ತಿರುವಾಗ “ಯಾರದು?” ತೊದಲಿದಳು ವಾಣಿಮಾಯಿ. ರೋಷದುರಿಯಲ್ಲಿ “ಅವನೇ” ಎಂದೆ.

ಗುಟುಕು ಜೀವ ಮಾತ್ರ ಇದೆ ಎಂದುಕೊಂಡೆದ್ದ ವಾಣಿಮಾಯಿಯ ಕಣ್ಣು ವಿಚಿತ್ರ ರೀತಿಯಲ್ಲಿ ಚಲಿಸಿತು… ನನ್ನನ್ನು ಕರೆದಂತಾಯಿತು. ಬಗ್ಗಿ “ಏನು ವಾಣಿಮಾಯೇ?” ಎಂದರೆ “ಅವಂಗೆ ಹತ್ತಿರ ಬಪ್ಪುಗೆ ಹೇಳ್.” – ಎಂದು ಕನವರಿಸಿದಂತಾಯಿತು. ಹೌದೋ ಅಲ್ಲವೋ ಸಂಶಯದಲ್ಲಿ ಯೋಚಿಸುತ್ತ ನಿಂತವಳಿಗೆ ಅರೆಗಣ್ಣಿನಲ್ಲಿಯೇ ಸನ್ನೆ ಮಾಡಿದಂತಾಯಿತು. ಏನೂ ಮನಸ್ಸಿಲ್ಲದೆ, ಮೆಲ್ಲಗೆ “ನರಸಿಂಹ, ನಿನ್ನ ಕರೆದ ಹಂಗಾಯತ್ತು.” – ಎಂದೆ. ಕೆಟ್ಟ ಹುರುಪಿನ ನರಸಿಂಹ ಇಳಿಮೇಸೆಯುದ್ದಕ್ಕೂ ನಕ್ಕ. “ಹಂಗಾದ್ರೆ ಸಾಯ್ತ ಗಳಿಗೆಲೆ ರಾಜಿಯಾತ ಇಲಾರಿಯ?” ಎಂದು ಮತ್ತಷ್ಟು ನಕ್ಕ. ನಿಂತಲ್ಲಿಂದ ಮುಂದೆ ಬಂದು ಬಾಗಿ “ಏನಿಯ? ಏನಾರೂ ಹೇಳಗೆ ಇದ್ದರೆ ಹೇಳಿಬಿಡ್…. ಮತ್ತೆ ತೀರಿದ ಮೇಲೆ….” ಇನ್ನೇನು ಹೇಳಲಿದ್ದನೋ –

ತೀರಾ ಅನಿರೀಕ್ಷಿತವಾಗಿ, ವಿದ್ಯುತ್ ಸಂಚಾರವಾದಂತೆ ವಾಣಿಮಾಯಿಯ ಬಲಗಾಲು ಮೆಲ್ಲನದುರಿತು. ಸರಕ್ಕನೆ ಮೇಲೆದ್ದು ಅವನ ಮುಖ ಜಜ್ಜುಳಿಯಾಗುವಂತೆ ಬೀಸಿ ಅಪ್ಪಳಿಸಿ ನಡುಗುತ್ತ ವಿರಮಿಸಿತು. ವಾಣಿಮಾಯಿ ಪೂರ್ತಿ ಎಚ್ಚರಾದಂತೆ ಕಣ್ಣುಬಿಟ್ಟಳು. ಈ ಅನಿರೀಕ್ಷಿತಕ್ಕೆ ಕನಸಲ್ಲೂ ಸಿದ್ಧವಿರದಿದ್ದ ನರಸಿಂಹನ ವಿಕಾರ ಕನಿಗೆ ಏನು ಏನೆಂದು ಒಳಗಿಂದ ಎಲ್ಲ ಓಡಿಬರುವುದರೊಳಗೆ ರಕ್ತ ಚಿಮ್ಮುವ ಮೂಗುಬಾಯನ್ನು ಒತ್ತಿಕೊಂಡು ಆತ ಹೊರಗೋಡಿದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ