ಆ ಮರದ ಪೆಟ್ಟಿಗೆ ಕೊಡುತ್ತಿದೇನೆ ಎಂದಳು ಚಿತ್ತಿ. ಅದು ನಡುಮನೆಯ ಗೋಡೆಗೆ ತಾಕಿಕೊಂಡಿತ್ತು. ಅದರ ಮೇಲೆ ಒಂದು ಹಾಸು ಹಾಕಿದ್ದಳು; ಮಧ್ಯಮವರ್ಗದ ಮನೆಗಳ ಲಕ್ಷಣದಂತೆ.
ಎಲ್ಲ ಕೊಡುತ್ತಿದ್ದೇನೆ. ಬೇಡ ಅಂತ ಕಂಡದ್ದನ್ನೆಲ್ಲ ಬೇಕು ಬೇಕು ಎಂದು ಒಂದು ಕಾಲದಲ್ಲಿ ಒಟ್ಟು ಹಾಕಿದೆ. ಈಗ ಅಡಸರಣೆ ಎನಿಸುತ್ತಿದೆ. ಯಾರಿದ್ದಾರೆ ಮನೆಯಲ್ಲಿ? ಕಬ್ಬಿಣದ ಕಪಾಟು ಒಂದು ಸಾಕು ನನಗೆ ಎಂದಳು. ಆಚೆ ರಸ್ತೆಯಲ್ಲಿ ಸಂಜೀವಿ ಇದ್ದಾಳಲ್ಲ – ಅಪ್ಪಯ್ಯನ ಕಾಲದವಳು. ಇದನ್ನೊಂದು ತನಗೇ ಕೊಟ್ಟು ಬಿಡಿ, ಈಗ ಮಾಡಿಸುವುದು ಎಂದರೆ ಆಗದು ಅಂತ ಆಗಲೇ ಮಾತು ಹಾಕಿಬಿಟ್ಟಿದ್ದಾಳೆ. ಕೊಡುವ ಅಂದಿದ್ದೇನೆ. ಖಂಡಿತ ಅಂತೇನೂ ಹೇಳಲಿಲ್ಲಪ್ಪ. ನಿಂಗೆ ಬೇಕಾ? ಬೇಕಾದರೆ ತೆಗೆದುಕೊಂಡು ಹೋಗು ಅಜ್ಜಯ್ಯನ ಕಾಲದ ಪೆಟ್ಟಿಗೆ. ನಿನ್ನ ಮನೆಯಲ್ಲಿದ್ದರೆ ನನಗೂ ಸಮಾಧಾನ. ಅಂದಿಗರ ಮೆನಯಲ್ಲಿಯೆ ಇದ್ದರೆ ನಮ್ಮ ಹತ್ತಿರವೇ ಇದ್ದಂತೆ….. ಮಾಡಿಸಲು ಹೋದರೆ ಏನಿಲ್ಲವೆಂದರೆ ಸಾವಿರದ ಮೇಲೆಯೇ ಬೇಕು. ಅರ್ಧ ಕ್ರಯಕ್ಕೆ ಕೊಟ್ಟುಬಿಡುತ್ತೇನೆ. ನೀನೆಏ ತೆಗೆದುಕೊಳ್ಳುತ್ತಿಯಾದರೆ ಇನ್ನೂ ನೂರು ರೂಪಾಯಿ ಬಿಡುವ ಎಂದಳು. ಅರರೆ! ವ್ಯಾಪಾರವಾ? ಹಾಗಾದರೆ ನಾನು ನಿನ್ ರೇಟಿಗೆ ನೂರು ಸೇರಿಸಿಕೊಡುತ್ತೇನೆ – ಎಂದು ಕೈಬೀಸಿ ನಕ್ಕೆ. ಹುಬ್ಬು ಏರಿಳಿಸಿದಳು. ‘ವಹಿವಾಟು’ ಮಾಡುವ ಹುರುಪಿನಲ್ಲಿ ಇದ್ದಳು ಅವಳು. ನನ್ನ ತಮಾಷೆ ಹೇಗೆ ಕಂಡಿತೋ.
ಮನೆಗೆ ಬಂದು ದೊಡಮನೊಂದಿಗೆ ಹೇಳಿದೆ. ಚಿತ್ತಿ ಪೆಟ್ಟೆಗೆ ಮಾರುತ್ತಾಳಂತೆ. ತಕೋ, ನೂರು ರೂಪಾಯಿ ಬಿಟ್ಟು ಕೊಡುತ್ತೇನೆ ಎಂದಳು. ಹೋ, ನಾನು ನೂರು ರೂಪಾಯಿ ಜಾಸ್ತಿ ಕೊಡುತ್ತೇನೆ ಬೇಕಾದರೆ, ಆದರೆ ನನಗೆ ಅದು ಬೇಡವಲ್ಲ ಎಂದು ಹೇಳಿದೆ – ಅಂತೆಲ್ಲ. ದೊಡಮ – ನಾವು ಅಜ್ಜಿಗೆ ದೊಡಮ ಅಂತಲೇ ಕರೆಯುವುದು – “ಹ್ಞಂ!” ಅಂತ ಒಂದು ಕ್ಷಣ ಬಾಯಿ ಕಳೆದು ನಿಂತರು. ಕಡೆಗೆ “ಹೋಗ್. ಈಗ್ಲೇ ಹೋಯ್ ನೂರಲ್ಲ ಇನ್ನೂರು ಹೆಚ್ಚಿಗೆ ಕೊಟ್ಟಾರೂ ಅದನ್ನ ಸಾಗ್ಸ್ಕಂಡ್ ಬಾ. ಆ ತಲೆಕೆಟ್ಟದ್, ಯಾರಿಗಾದ್ರೂ ಕೈ ಪಗಾರ್‍ಸಿ ಬಿಡೂ” – ಎಂದು ಗಡಗುಟ್ಟು ಮಾಡಿದರು. ಅಲ್ಲ ದೊಡಮ, ಮಕ್ಕಳು ಶಾಲೆಯಿಂದ ಬರತ್ತವೆ ಈಗ. ನಾ ಹೋಗುವುದಿಲ್ಲ ಎಂದರೆ ಕೇಳಲಿಲ್ಲ. “ಮಕ್ಳನ್ ನಾನ್ ಕಂಡ್ಕಂತೆ. ನಿನ್ ಗಂಡ ಬಂದ್ರೆ ಕಾಪಿ ಮಾಡಿ ಕೊಟ್ರ್ ಸೈಯಲೆ. ತಿಂಡಿ ಏನಾರೂ ಮಾಡ್ತೆ ನಾನ್. ಮೊದ್ಲ್ ನೀನ್ ಹೋಗ – ಹೋಗ್ ಅಂದೆ!” – ಎಂದು ತಾಕೀತು ಮಾಡಿದರು. ಏನೋ ದೊಡಮ, ನೀವು ಯಾವಾಗಲೂ ಹೀಗೆಯೇ. ಈಗ ಎಂದರೆ ಈಗ ನಿತ್ತ ಮೆಟ್ಟಿನಲ್ಲಿ ಕೆಲಸ ಆಗಿಬಿಡಬೇಕು. ಏಳು ತಿಂಗಳೀಗೆ ಹುಟ್ಟಿದವರು ಎಲ್ಲೋ…. ಆ ಅಕ್ಕಳೆ ತುಂಬುವ ಮರದ ಪೆಟ್ಟಿಗೆ ಏನು ಈಗ ಹರ್‍ಕತ್ತಾ? – ಎಂದರೆ ಕುಳಿತುಕೊಳ್ಳಲಿಕ್ಕೇ ಬಿಡದೆ ಎಬ್ಬಿದರು. ಮತ್ತೆ ಕಾಲೆಳೆದುಕೊಂಡು ಚಿತ್ತಿ ಮನೆಗೆ ಹೊರಡೆ.
ಮತ್ತೆ ಬಂದೆಯಲ್ಲ ಹೆಣೆ, ಇದೇನು! – ಎಂಬಂತೆ ಆಶ್ಚರ್ಯ ನಿಂತಳು ಚಿತ್ತಿ. ಏನಿಲ್ಲ. ಕಾಪಿ ತಿಂಡಿಗೆ ನಿನಗೆ ಜೊತೆ ಕೊಡುವ ಅಂತ ಬಂದೆ ಎಂದು ನಕ್ಕೆ. “ಅದೀಗ್ ಕಾಣ್ ವಿಶ್ವಾಸ ಅಂದ್ರೆ. ಎಷ್ಟ್ ಲಾಕಾಯ್ತ್! ನೀನ್ ಹೋದ್ ಬೆನ್ನಿಗೇ – ಛೆ ಪತ್ರೊಡೆ ಬೇಯೂಕ್ ಹಾಕಿದ್ದೆ, ತಿಂದ್ಕಂಡೇ ಹೋಪುಕ್ ಹೇಳ್ಲಕ್ಕಿತ್ – ಅಂತೆಳಿ ಹೊಟ್ಟೆ ಉರ್‍ಕಂಡೆ. ಪ್ರೀತಿ ಅಂದ್ರೆ ಹ್ಯಾಂಗಿರತ್ ಕಂಡ್ಯಾ? ಹಗ್ಗ ಇಲ್ದೆ ಎಳ್ಕಂಡ್ ಬತ್ತ್” – ಅಂತೆಲ್ಲ ಹೇಳುತ್ತ. ಈಗ ಒಲೆಯಿಂದ ಇಳಿಸಿದೆನಷ್ಟೆ, ಬೆಣ್ಣೆ ಹಾಕಿಕೊಂಡು ಇಬ್ಬರೂ ತಿನ್ನುವ ಬಾ, ನೀನೀಗ ಬಂದಿರದಿದ್ದರೆ ನಾನೊಬ್ಬಳೇ ಕಾಲು ನೀಡಿಕೊಂಡು ಲಾಯ್ಕಸ, ಪಸಂದಸ ಅಂತ ಬೆನ್ನುತಟ್ಟಿಕೊಳ್ಳುತ್ತ ತಿನ್ನುತ್ತ ಇರಬೇಕಿತ್ತು. ಬಾ ಬಾ. ಎಂದು ಬಾಯಿ ತುಂಬ ಕರೆದಳು. ಇರುವುದು ಒಬ್ಬಳೇ. ಆದರೂ, ತಲೆಗೂದಲು ನೆರೆದು ಕೈಕಾಲು ಒಣಗಿ ಸೆಟಕೊಂಡಿದ್ದರೂ, ಈ ಮುದುಕಿ ಚಿತ್ತಿ ಉದಾಸೀನವಿಲ್ಲದೆ ತನಗಾಗಿಯೇ ಅಂತ ಇನ್ನೂ ಪತ್ರೊಡೆಯಂತಹ ತಿಂಡಿ ಮಾಡಿಕೊಂಡು ತಿನ್ನುತ್ತಾಳಲ್ಲ. ಇದು ಸ್ವಪ್ರೇಮವೆನ್ನಲೇ, ಜೀವನಪ್ರೀತಿಯೆನ್ನಲೇ…. ಎಲೆಸರದ ಮೇಲೆ ಘಮಗುಡುವ ಮೃದು ಬೆಂದ ಪತ್ರೊಡೆ ಹಬೆಯಾಡುತ್ತಿತ್ತು. ಬೆಣ್ಣೆ ಕರಗಿಸುತ್ತಿತ್ತು. ತಿನ್ನುತ್ತ ನಿಧಾನವಾಗಿ ಅಂದೆ – ಅಲ್ಲ, ನಾನು ಬಂದದ್ದು ಪೆಟ್ಟಿಗೆ ತೆಗೆದುಕೊಂಡು ಹೋಗಲಿಕ್ಕೆ. “ಹ್ಹುಂ!” – ಕಣ್ಣೇರಿಸಿದಳು ಚಿತ್ತಿ. ಅದೇನು ಅಷ್ಟು ಅರ್ಜೆಂಟು? – ಹೇಳಿದೆ. ಕೇಳಿದ್ದೇ ಕೋಪಾವಿಷ್ಠಳಾಗಿ ತಿನ್ನುವ ಕೈಯೆತ್ತಿ ತಿರುಗಿಸುತ್ತ – ನಾನು ಕೊಡೆ. ಏನೇ ಹೇಳಿದರೂ ಕೊಡೆ. ಓಹೋ ಅದಕ್ಕೋಸ್ಕರ ನಿನ್ನನ್ನು ಮುಂದೆಬಿಟ್ಟಳಾ! ಅದೇನು ಅವಳ ಅಪ್ಪನ ಆಸ್ತಿಯಂತೆ ಮಾಡೆದಳಾ ಆ ಬೋಸುಡಿ ರಂಡೆ?….. ಅವಳು ನಿನ್ನ ಮನೆಗೆ ಬಂದದ್ದೇ ನನಗೆ ಗೊತ್ತಿರಲಿಲ್ಲ. ತಿಳಿದಿದ್ದರೆ ನಾನು ನಿನ್ನ ಹತ್ತಿರ ಅದರ ಪ್ರಸ್ತಾಪವನ್ನೇ ಮಾಡುತ್ತಿರಲಿಲ್ಲ…. – ಹಾಗೆ ಹೀಗೆ ಅಂತೆಲ್ಲ ಕೂಗಾಡಿದಳು. ಚಿತ್ತಿಯ ಈ ಅವತಾರದ ಕುರಿತು ನಾನು ಕೇಳಿದ್ದರೂ ಕಂಡಿರಲಿಲ್ಲ. ಅವಳ ಆರ್ಭಟ ಕೇಳುವುದು ಬಿಟ್ಟು ನೋಡುತ್ತ ಕುಳಿತೆ. ಚಿತ್ತಿಗೂ ದೊಡಮನಿಗೂ ಆಗದ ಸಮಾಚಾರವೇನು ಹೊಸತಲ್ಲ. ಗೊತ್ತಿದ್ದೂ ದೊಡಮನ ಹೆಸರು ಹೇಳಿ ಪೆಟ್ಟಿಗೆ ಅರ್ಜೆಂಟು ತಿಳಿಸಿದ್ದು ನನ್ನ ತಪ್ಪು. ಸುಮ್ಮನೆ ಕೇಳಬಹುದಿತ್ತೇ? ಅದಕ್ಕೂ ಮುಂಚೆ ದೊಡಮನ ಹತ್ತಿರ ಚಿತ್ತಿ ಪೆಟ್ಟಿಗೆ ಕೊಡುತ್ತಿದ್ದಾಳೆ ಅಂತ ತಿಳಿಸಿದ್ದು ತಪ್ಪು. ಒಮ್ಮೊಮ್ಮೆ ಹೀಗೇ ಅಲ್ಲವೆ? ಗೊತ್ತಿದ್ದೂ ಹೆಡ್ಡು ಬೀಳುತ್ತೇವೆ. ಏನು ಮಾಡುವುದೆಂದು ತಿಳಿಯದೆ ಚಡಪಡಿಸುತ್ತೇವೆ. ಚಿತ್ತಿಯ ನಾಲಿಗೆ ಎಂದರೆ ಎದುರು ಕುಳಿತವರು ಮರ್ಯಾದೆ ಇದೆ ಅಂತಾದರೆ ಒಂದಕ್ಷರ ಮಾತಾಡಲು ಸಾಧ್ಯವಿಲ್ಲ ಅಂಥಾದ್ದು. ಅಂತೂ ಅವಳು ಸುಮ್ಮನಾದಾಗ ಮತ್ತೆ ಹೇಳಲು ಹೊರಟೆ – ಅಲ್ಲ ಚಿತ್ತೀ, ಅದು ನನಗೇ ಬೇಕು. ಯಾಕೆಂದರೆ…..
“ಯಾಕ್ಬೇಕ್ ಅಳೆ ನಿಂಗೆ? ಹ ಹ! ನಾ ನಂಬ್ಯೇ ಬಿಡುನ? ಬ್ಯೇಕಂಬ್ರ್! ಯಂತಕ್ ಅಕ್ಳೆ ಸಾಂಕುಕಾ? ಅಕ್ಳೆ ಪಿಷ್ಟೆ, ಅಕ್ಳೆ ಮೊಟ್ಟೆ ಎಲ್ಲ ಗೋರಿ ಚೀಲಕ್ ಹಾಕಿ ಏನ್ ರಪ್ತ್ ಮಾಡ್ತ್ಯಾ?…. ಗಂಡ ಅಂಥಾ ಚಂದದ್ ಮನಿ ಕಟ್ಟಿ ಕೊಟ್ಟಿದ! ಅಷ್ಟೆಲ್ಲ ನಮೂನಿ ಕಪಾಟು ಗಿಪಾಟು ಎಲ್ಲ ಮಾಡಿಕೊಟ್ಟಿದ. ಇದೊಂದು ಪೆಟ್ಟಿಗೆ ಕಡ್ಮೆ ಆಯ್ತಾ ಕಾಂತ್! ಹೋ ಅತ್ಲೆ!”
ಬಾಯಿ ಮೇಲೆ ಗಪ್ಪಂತ ಹೊಡೆದ ಹಾಗೆ ಮಾತು ಜಪ್ಪಿದಳು ಚಿತ್ತಿ. ನನ್ನ ಸುಳ್ಳು ತಿಳಿದಂತೆ. “ನಾ ಕೊಡೆ ಅಂದ್ನಲೆ. ಆ ಬ್ರಮ್ ದೇವ್ರ್ ಬಂದ್ ಹೇಳಿರು ಕೊಡೆ….. ಅವ್ಳಿಗ್ ಕೊಡೆ. ಹೇಳ್ ನಿನ್ನ್ ದೊಡಮನ್ ಹತ್ರೆ. ಹೀಂಗ್ಹೀಂಗ್ ಹೇಲಿಳ್ ಚಿತ್ತಿ ಅಂತೆಳಿ. ನಂಗೇನ್ ಹೆದ್ರಿಕಿ ಇಲ್ಲೆ” – ಅಂತೆಲ್ಲ, ಮತ್ತೂ ಬೇಡದಷ್ಟು ಆಕ್ರೋಶವಾಡಿದಳು. ಹಾಗಾದರೆ ನಾನು ಹೋಗುತ್ತೇನೆ ಎಂದೆ. “ಎಲ್ಲಿಗ್ ಹ್ವೋಪ್ದ್! ಪತ್ರೊಡೆ ಮುಗ್ಸಿ ಹೋಗ್” ಎಂದಳು, ನಿಟ್ಟಿನ ದನಿಯಲ್ಲಿಯೇ, ತನ್ನ ಸಿಟ್ಟು ದೊಡಮನ ಮೇಲೆ ನಿನ್ನ ಮೇಲಲ್ಲ ಎಂಬುದು ನನಗೆ ಸ್ಪಷ್ಟ ತಿಳಿಯುವಂತೆ ಕಣ್ಣುಮುಖ ಬಾಯಿ ಚಲನೆ ಸೇರಿಸಿ. ನಾನು ಅವಳ ಬಾಯಿಗೆ ಪೂರ್ತಿ ಹೆದರಿ ಹೋಗಿದ್ದೆ – ಮುಂಚಿನಿಂದಲೂ ನಾಲಿಗೆ ಎದುರಿಗೆ ದಂಗಾಗಿ ನಾಲಗೆ ಕಳೆಯುವವಳು.
ಮನೆಗೆ ಬಂದರೆ ದೊಡಮ ಗೇಟಿನ ಹತ್ತಿರವೇ ನಿಂತಿದ್ದರು. ಏನು? ಹಾಗೇ ಬಂದೆ? – ಎಂದರು ಪ್ರಮಾದವಾದಂತೆ. ಅರೆ! ಅವಳು ಕೂಡಲಿಲ್ಲ. ನಾನೇನು ಕಸಿದುಕೊಂಡು ಬರುವುದಾ? ಎಂದರೆ – ನನ್ನ ಹೆಸರು ಹೇಳಿದೆ ಹೋಲ್ಲ? ಹೇಗೆ ಕೊಟ್ಟಾಳು? ಮೂರು ದಾರಿ ಸೇರುವಲ್ಲಿ ಬಿದ್ದು ಸಾಯಲಿಕ್ಕೆ. ಹೋಗುವಾಗ ಹೇಳಬೇಕೆಂತ ಮಾಡಿದ್ದೆ, ನನ್ನ ಪ್ರಸ್ತಾಪ ತೆಗೆಯಬೇಡ ಅಂತ. ನಾನು ಮರೆತರೆ ನೀನೂ ಮರೆಯುವುದಾ? ಮಕ್ಕಳಿಗೆ ಸ್ವಲ್ಪ ಸೂಕ್ಷ್ಮಬೇಕು – ಎಂದು ಸುರುಮಾಡಿದರು. ಅಯ್ಯ ಒಟ್ಟಾರೆ ನಿಮ್ಮ ನಿಮ್ಮ ಜಗಳದಲ್ಲಿ ನನ್ನನ್ನು ಚಟ್ನೆ ಮಾಡಿ – ಎಂದೆ. ಓಹೋ, ಹಾಗಾದರೆ ಬೇಕಾದಷ್ಟು ಅಂದೇ ಕಳಿಸಿದಳು ಎನ್ನು – ಎಂದರು ಜಾಡು ಹಿಡಿದಂತೆ. ಹೋಗಲಿ ದೊಡಮ, ಆ ವಿಷಯ ಮರೆತುಬಿಡಿ. ಆ ಪೆಟ್ಟಿಗೆ ಬರುವುದು, ಅದರೊಟ್ಟಿಗೇ ಅಕ್ಕಳೆ ಮೊಟ್ಟೆ ಪಿಷ್ಟೆ ಎಲ್ಲ ಬರುವುದು, ಕೊನೆಗೆ ಇವರಿಗೆ ಸಿಟ್ಟು ಬರುವುದು – ಯಾವುದೂ ಬೇಡ. ಇಷ್ಟಕ್ಕೂ ಇವರನ್ನು ಒಂದು ಮಾತು ಕೇಳದೆ ತರುವುದೂ ಸರಿಯಲ್ಲ….
ಇದನ್ನು ಕೇಳಿದ್ದೇ ದೊಡಮ ಗಡಕ್ಕ ನಿಂತು…. “ಯಂತ? ಗಂಡ್ನ್ ಹತ್ರ ಕ್ಯೇಂಬದ್!! ಒಂದ್ ಇಷ್ಟ್ ಸಣ್ಣ್ ಪೆಟ್ಟಿಗೆ ತಪ್ಕೆ? ಅದೂ ನಿಮ್ಗಲ್ಲ, ನಂಗೆ! ಹೆಣೆ, ನೀನ್ ಸಂಸಾರ ಮಾಡಿದ್ಹಾಂಗೆ, ನಾನ್ ಕಂಡ್ಹಾಂಗೆ…. ಯಾಕೆ? ಅವ ದುಡ್ಡ್ ಕೊಡ್ಕಾತ್ ಅಂತೆಳಿ ಹೆದ್ರಿಯಾ? ಅವ ಕೊಡುದೇ ಬೇಡ. ನಾನ್ ಕೊಡ್ತೆ. ಮೊದ್ಲ್ ತಾ ಅದನ್ನ” – ಎಂದರು.
ಅಯ್ಯಬ್ಬ, ಈ ದೊಡಮನೂ ಏನು ಕಡಿಮೆ ಇಲ್ಲ ಅನಿಸಿತು…..
“ದುಡ್ಡಿನ ವಿಚಾರಕ್ಕಲ್ಲಪ್ಪ ಅಲ್ಲ. ಮತ್ತ್ ಹೋದ್ರೆ ಅವ್ಳ್ ಹಿಡಿಕಟ್ ಹಿಡ್ಕಂಡ್ ಪೂಜೆ ಮಾಡ್ತ್ಲ್ ಅಷ್ಟೆ…. ಇಷ್ಟಕ್ಕೂ ದೊಡಮ ಅದ್ಯಾಕೆ ನಿಮ್ಗೆ ಈಗ? ಅವ್ಳಾದ್ರೂ ಯಾಕ್ ಕೊಡತ್ತಿಲ್ಲೆ ಅಂತೆಳಿ ಹಟ ಮಾಡುದ್?”
ಅದಕ್ಕುತ್ತರಿಸದೆ ದೊಡಮ ಎಂದರು “ಅದನ್ನ್ ಹ್ಯಾಂಗಾರೂ ನಾನ್ ತರ್‍ಸ್ಕಣ್ದೆ ಬಿಡೆ”
****
ಇದು ಒಳ್ಳೆಯ ಹಟವಾಯಿತಲ್ಲ ಎಂದರು ಇವರು. ಪೆಟ್ಟಿಗೆ ವಿಚಾರ ಕೇಳಿ. ನಿಮಗೆ ಯಾಕಪ್ಪ ಎಲ್ಲ ಬಿಟ್ಟು ಆ ರಾಕ್ಷಸಿಯ ಪೆಟ್ಟಿಗೆ? ಅಷ್ಟು ಬೇಕಿದ್ದರೆ ನಾನು ಮಾಡಿಸಿ ಕೊಡುತ್ತೇನೆ. ದೊಡ್ಡ ಸಂಗ್ತಿಯ ಅದು? ಎಂದರೆ – ನೀನು ಮಾಡಿಸಿಗೀಡಿಸಿ ಕೊಡುವುದು ಬೇಡ. ನನಗೆ ಅದೇ ಪೆಟ್ಟಿಗೆ ಬೇಕು ಎಂದರು ದೊಡಮ. ಎದ್ದು ತನ್ನ ಕೋಣೆಗೆ ನಡೆದರು. ಅವರು ಹೋಗುವುದನ್ನೇ ನೋಡುತ್ತ ಇವರು ಪಿಸುವಾಗಿ – ಏನು? ಅದೇ ಪೆಟ್ಟಿಗೆ ಆಗಬೇಕು ಅಂತ ಹಟ ನಿನ್ನ ದೊಡ್ಡಮ್ಮನಿಗೆ? ಏನು ವಿಶೇಷವೋ….! ಅವರು ಕೇಳಿದ ರೀತಿ ಸರಿಯಾಗದೆ- ನಿಮಗೆ ಯಾಕೆ? ಎಂದರೆ. ಹೋಗಲಿ. ಚಿತ್ತಿಯಾದರೂ ಯಾಕೆ ಅದನ್ನು ಕೊಡಬಾರದು, ಎಂದರು. ಏನೋ. ನಿಮಗಾದರೂ ಯಾಕೆ ಅದೀಗ? ಎಂದೆ ನಾನೂ ಅದೇ ರಾಗದಲ್ಲಿ.
****
“ಅದಾ? ನಾ ಹೇಳ್ತೆ” – ಎಂದಳು ಸುನಂದಕ್ಕ ಮುಂಗೈಗೆ ಬಂದ ಬಳೆಗಳನ್ನು ಮೇಲೆ ಸರಿಸಿಕೊಳ್ಳುತ್ತು. ಕಾದಂಬರಿ ಗೀದಂಬರಿ ಓದಿಓದಿ ರಾಶಿ ಮಾಡುವ ಸುನಂದಕ್ಕ ಎನು ಹೇಳಿದರೂ ಬೇಗ ನಂಬಿಕೆಯೇ ಬರುವುದಿಲ್ಲ. ಒಂದು ಸಣ್ಣ ಜೀರಿಗೆಯಂತಹ ಘಟನೆಯನ್ನು ಒಳ್ಳೇ ಪುಸ್ತಕ ಭಾಷೆಯಲ್ಲಿ ರಮ್ಯ ಮಾಡಿ ಹೇಳುವಲ್ಲಿ ಅವಳನ್ನು ಬಿಟ್ಟರಿಲ್ಲ. ಅವಳು ಹೇಳಿದ್ದು ಏನೆಂದರೆ – ದೊಡಮನಿಗೆ ಅವರ ಮಾವನ ಮಗನನ್ನು ಮದುವೆಯಾಬೇಕಂತ ಇತ್ತು. ಆ ಪೆಟ್ಟಿಗೆಯೂ ಅವನದೇ. ಪುಸ್ತಕ ಇಟ್ಟುಕೊಳ್ಳಲು ಮಾಡಿಸಿದ್ದು. ಈ ಚಿತ್ತಿಗೆ ಅಷ್ಟರೊಳಗೆ ಮದುವೆಯಾಗಿದ್ದರೂ, ಅವನ ಮೇಲೆಯೇ ಕಣ್ಣು. ಅವ ದೊಡಮನನ್ನೇ ಇಷ್ಟಪಡುವುದನ್ನು ಕಂಡು ಹೊಟ್ಟೆ ಗಿಮಚಲು. ಎಷ್ಟೆಂದರೆ ಒಂದು ದಿನ ಅವರಿಬ್ಬರು ಆ ಪೆಟ್ಟಿಗೆ ಮೇಲೆ ಕುಳಿತು ಮಾತಾಡುತ್ತಿರುವಾಗ ಓಡಿ ಹೋಗಿ ಅಜ್ಜಯ್ಯನ ಹತ್ತಿರ “ಆ ಪೆಟ್ಟಿಗೆ ಮೇಲೆ ಅವು ಲವ್ ಮಾಡ್ತ ಕೂತಿದೋ. ನಾನ ಹೇಳಿರೆ ನಂಬ್ಲಿಲ್ಲೆ ನೀವು. ಕಾಣಿ ಬನ್ನಿ ಸ್ವತಾ” – ಎಂದು ಚಾಡಿ ಚುಚ್ಚಿದಳು. ಅಜ್ಜಯ್ಯನೇ? “ಮನೇನ ಸೂಳೇಗೇರಿ ಮಾಡತ್ತಾ ಈ ಹೆಣ್ಣು” ಎಂದು ದೊಡಮನನ್ನು ಜಡೆ ಹಿಡಿದು ದರದರ ಎಳೆದುಕೊಂಡು ಹೋಗಿ ಹೊಡೆದು ಬಡಿದು, “ಅಯ್ಯಬಾ, ಅಜ್ಜಯ್ಯನ್ ಸಿಟ್ಟಂದ್ರೆ ಒಂದಿನಕ್ಕಿಳಿಯುವಂಥದಾ? ಹುಲಿ! ಹುಲಿ ಹಾಂಗಿನವ್ರ್…. ನಾಕ್ ದಿನ ಮನಿಯಗೆ ಒಬ್ರ್ ಒಂದ್ ಉಸ್ರ್ ತೆಗ್ದಿದ್ರೆ ಹೇಳ್” – ಎಂದು ಸುನಂದಕ್ಕೆ ಮೇವಾಡದ ರಾಣನನ್ನು ನೆನೆಯುವಂತೆ ಅಜ್ಜಯ್ಯನ ಸಿಟ್ಟನ್ನು ನೆನೆದಳು. ಮುಂದೇನಾಯಿತು ಎಂದರೆ, ಮುಂದೆ ಆ ಮಾವನಮಗ ಮದರಾಸಿಗೆ ಓದಲು ಹೋದ. ಹೋಗುವಾಗ ಈ ಪೆಟ್ಟಿಗೆ ನಿನಗೆ, ನನ್ನ ನೆನಪಿಗೆ ಎಂದು ದೊಡಮನಿಗೆ ಕೊಟ್ಟು ಹೋದ. ಆದರೆ ಈ ಚಿತ್ತಿ ಗಂಡ, ಸತ್ತು ಈಗ ಎಲ್ಲಿದ್ದಾನೋ, ಅದನ್ನ ಹೇಳದೆ ಕೇಳದೆ ತನ್ನ ರೂಮಿನೊಳಗೆ ಎಳೆದುಕೊಂಡು ಹೋಗಿಬಿಟ್ಟ. ಇಷ್ಟೂ ಸಾಲದೆ, ಮದರಾಸಿಗೆ ಹೋದ ಮಾವನಮಗ ವಾಪಾಸು ಬರುವುದರೊಳಗೆ ಅಜ್ಜಯ್ಯ ದೊಡಮನಿಗೆ ಬೇರೆ ಕಡೆ ಮದುವೆ ಮಾಡಿಸಿಬಿಟ್ಟರು….
ಕಡೆಗೂ ದೊಡಮ ಮಾವನಮಗನನ್ನು ಮದುವೆಯಾಗಲು ಆಗದೇ ಹೋದದ್ದನ್ನು ಈಗ ನಡೆದದ್ದೋ ಎಂಬಂತೆ ನೆನೆದು ಕಣ್ಣಲ್ಲಿ ನೀರು ತಂದುಕೊಂಡಳು ಸುನಂದಕ್ಕ. ಅವಳು ಹಾಗೆಯೇ. ಪ್ರೀತಿಮಾಡುವವರು ಮದುವೆಯಾಗಿಲ್ಲವೆಂದರೆ ದುಃಖಪಡುವವಳು. ಪ್ರೀತಿಸಲಿಕ್ಕೆ ತನಗೆ ಯಾರೂ ಸಿಗಲಿಲ್ಲ ಎಂಬ ಸಂಕಟದಲ್ಲಿಯೇ “ನೋಡುವ ಶಾಸ್ತ್ರ”ದಲ್ಲಿ ಮದುವೆಯಾದಳು. ಕಥೆಗಳನ್ನು ಅವುಗಳಲ್ಲಿನ ದುರಂತ ನಾಯಕಿ ತಾನೇ ಎಂಬಂತೆ ಓದುವವಳು. ಸುನಂದಕ್ಕ ಹೇಳುತ್ತ ಹೇಳುತ್ತ ಬಾಯಲ್ಲಿಯೇ ಕಾದಂಬರಿ ಬರೆಯತೊಡಗಿದಾಗ ನಾನಲ್ಲಿಂದ ಜಾಗ ಖಾಲಿ ಮಾಡಿದೆ.
…..ದೊಡಮನದು ತೊಟ್ಟಿಲ ಮದುವೆ ಅಂತ ಕೇಳಿದ್ದೆನಲ್ಲ! ಸುನಂದಕ್ಕ ಅಷ್ಟೆಲ್ಲ ಹೇಳುವಾಗ ನನಗೆ ಯಾಕೆ ಇದೆಲ್ಲ ನೆನಪಿಗೆ ಬರಲಿಲ್ಲ, ಕೇಳಬೇಕಿತ್ತು. ಕೇಳದೆ ಅವಳ ವಾಗ್ಝರಿಯಲ್ಲಿ ತೆಲಿಹೋಗಿದ್ದೇ ಭರ – ಎಂದುಕೊಳ್ಳುತ್ತಾ, ಸುನಂದಕ್ಕ ಸಿಕ್ಕಿದಳು ದೊಡಮ. ಅದು ನಿಮ್ಮ ಪೆಟ್ಟಿಗೆಯಂತೇ. ಆ ಚಿತ್ತಿ ಗಂಡ ಅದನ್ನು ನಿಮ್ಮಿಂದ ಕಸಿದು ತನ್ನ ಕೋಣೆಗೆ ಸಾಗಿಸಿದನಂತೇ….
ಮುಂದರಿಯುವ ಮೊದಲೇ ದೊಡಮ – ಆ ಹನ್ನೆರಡಾಣೆ ಎಲ್ಲಿ ಸಿಕ್ಕಿತು ನಿನಗೆ?….? ಅದರ ಮಾತು ಕಟ್ಟಿಕೋ ನೀನೂ. ಹೋಕಿಲ್ಲದ ಅರೆಮರಲು…. ಇವತ್ತಾದರೂ ಹೋಗು. ಪೆಟ್ಟಿಗೆ ತೆಗೆದುಕೊಂಡು ಬಾ – ಎಂದರು. ದೊಡಮ, ಇಲ್ಲ ದೊಡಮ, ಒಂದು ಸಲ ಹೇಳಿದೆನಲ್ಲ. ಆ ಚಿತ್ತಿ ಬಾಯಲ್ಲಿ ನನಗೆ ಬೇಯಲು ಸಾಧ್ಯವಿಲ್ಲ ಅಂತ….
****
ಶಾಮಜ್ಜಯ್ಯನ ಮನೆಗೆ ಮಹಾಲಯದ ದಿನ ಹೋದಾಗ “ಹೆಣೇ, ಆ ಚಿತ್ತಿ ಪೆಟ್ಟಿಗೆ ಮಾರುಕೆ ಹೋರ್‍ಟಿದ್ಲಂಬ್ರಲೆ! ಹೊಟ್ಟಿಗ್ ಕಡ್ಮಿ ಆಯ್ತಾ ಯಂತ ಅಂಬ್ರ್?” – ಎಂದು ಹಿಲುನಗೆಯಾಡಿದಳು ಕಲ್ಯಾಣಿ. “ನಿನ್ ದೊಡಮ ತ್ಯೆಕಣ್ಕ್ ಅಂತೆಳಿ ಮಾಡಿದ್ಲಂಬ್ರಲೇ! ನೀನ್ ಹೋಯಿ ಕ್ಯೆಂಡ್ ಚಂದ ಬೈಸ್ಕಂಡ್ ಬಂದೆ ಅಂಬ್ರಲೇ…..!” – ಎಂದು ರಾಗವೆಳೆದಳು. ಪ್ರಪಂಚದಲ್ಲಿ ಇದಕ್ಕಿಂತ ಮುಖ್ಯ ಸುದ್ದಿಯೇ ಇಲ್ಲದಿದ್ದರೆ ಹೇಗೆ, ಅದು ತನಗೆ ಮಾತ್ರ ತಿಳಿದಿದ್ದರೆ ಹೇಗೆ – ಅಂತಹ ಗತ್ತಿನಲ್ಲಿ! ಅರೆ! ಇವಳಿಗೆ ಹೇಗೆ ಗೊತ್ತಾಯಿತೋ! ಕೇಳಿದರೆ ತುಟಿ ವಾರೆ ತಿರುಗಿಸಿ “ಹ್ಞಂ! ನಂಗ್ ಗೊತ್ತಾಗ್ದೆ!” – ಎಂದಳು. ಏನು ಅರ್ಥವೋ! ನಾನು ಸುಮ್ಮನಾದೆ. ನಾನು ಸುಮ್ಮನಾದರೂ ತಾನೇ ನನ್ನ ಹೆಗಲು ಮುಟ್ಟಿ “ಇಗಾ, ಮೊದ್ಲೇ ಹ್ಯೇಳ್ತೆ. ಮನಿಗ್ ತಕಂಡ್ ಹೋಯಿ ಇಟ್ರೆ ಅದ್ರಿಂದ ಹೈಣದ್ ವಾಸ್ನೆ ಬಕ್ಕ್.” – ಎಂದಳೂ. ನಾನೊಮ್ಮೆ ನಿಮಿಟಿ ಕುಳಿತೆ. “ಯಂತ ಯಂತ! ಹೆಣದ್ ವಾಸ್ನೆಯ! ಹಾಂಗಂದ್ರೆ?” – “ಅದ್ ಹಾಂಗೆ. ಇವತ್ಬೇಡ. ಒಂದಿವ್ಸ ಬತ್ತೆ. ಎಲ್ಲ ಕತಿ ಹ್ಯೇಳ್ತೆ.”
– ಎಂದವಳು ಮತ್ತೆ ತಾನು ಏನೂ ಮಾತೇ ಆಡಿಲ್ಲವೆಂಬಂತೆ ಮುಖ ಮುಂದೆ ನೀಡಿಕೊಂಡು, ನೆರಿಗೆ ಎತ್ತಿ ಮೇಲೆ ಸಿಗಿಸಿಕೊಳ್ಳುತ್ತಾ, ಕಾಲುಂಗುರ ಝಿಣಿಮಿಣಿ ಸದ್ದು ಕುಣಿಸುತ್ತಾ ಒಳಗೆ ನಡೆದಳು. ಇವಳು ಏನು ಹೇಳುತ್ತಿದ್ದಾಳೆ ಅಂತಲೇ ತಿಳಿಯದೆ, ಯಾರ ಹತ್ತಿರ ಪ್ರಸ್ತಾಪಿಸಿದರೂ ಅದು ಮತ್ತೊಂದೇ ರೂಪ ತಳೆಯಬಹುದೆಂಬ ಆತಂಕದಿಂದಲೂ ಯೋಚನೆಯಲ್ಲಿ ಮುಳುಗಿಹೋದಾಗ ಮೂಲೆಯಲ್ಲಿ ಕಾಲು ನೀಡಿ ಕುಳಿತು ಬೆನ್ನು ತೂಗಿ ಆನೆಯಾಡುತ್ತ ಕಣ್ಣು ಮಿಟಿಮಿಟಿ ಬಿಡುತ್ತ ಮುಚ್ಚುತ್ತ ಕುಳಿತಿದ್ದ ನಾಗತ್ತೆ ಬಗ್ಗಿ “ಹೆಣೆ, ನಂಗ್ಯೆಲ್ಲ ಕ್ಯೇಂತ್ – ಆ ಕಲ್ಯಾಣಿ ಸುಟ್ಹೆಣ್ಣ್ ಹ್ಯೇಳಿದ್. ಯಂತ ಅಂಬ್ರ್ ಆ ಬಿಕ್ನಾಸಿಗೆ. ನಾಲಿಗೆಗ್ ಎಲ್ಬಲ್ಯಾ ಕಾಂತ್. ಅದ್ ಹ್ಯೇಳಿದ್ನೆಲ್ಲ ತಲೀಗ್ ತೆಕಂಡ್ ಬಿಶಿ ಮಾಡ್ಕಂಬೇಡ. ತೆಳಿತಾ?…. ಆಯ್ತ್ ಹ್ವೋಯ್ತ್ ಅಂತೆಳಿ ಇಲ್ಲೆ ಇವ್ಕೆ. ಹುಗ್ದ್ ಹೆಣ ಮ್ಯಾಲೆತ್ತಿ ಚಂದ ಕಾಂಬ್ ಜಾತಿ” – ಎಂದು ಮುಖ ಮುರಿದರು. ತಲೆಯ ಮೇಲಿನ ಸೆರಗು ಸರಿಸಿ ತುರಿಸಿಕೊಂಡು ನನ್ನನ್ನು ನೋಡಿ ಧೈರ್ಯದ ನಗೆ ನಕ್ಕರು. ಮರುಕ್ಷಣವೇ ಪಟಕ್ಕ ನಗೆ ನಂದಿಸಿಕೊಂಡು ನನ್ನನ್ನು ನೋಡಿ ಧೈರ್ಯದ ನಗೆ ನಕ್ಕರು. ಮರುಕ್ಷಣವೇ ಪಟಕ್ಕ ನಗೆ ನಂದಿಸಿಕೊಂಡು “ಹಂಗರ್ ಪೆಟ್ಟಿಗಿ ಮಾರ್‍ಕಂಡ್ ತಿಂತ್ಲಂಬ್ರಾ ಚಿತ್ತಿ, ಕುಂಟಿ ಮೇಲ್ ಹೋಪ್ ಕಾಲಕ್ಕೆ? ಕೊಂಬಿನ್ ಸ್ವೋಂಟೆ. ನಿನ್ ದೊಡಮಂಗಾರೂ ಯಾಕಂಬ್ರ್ ಅವ್ಳ್ ಹ್ಯೇಲ್?”
“ಯಂತ ಅಂಬ್ರ್ ಯಂತ ಅಂಬ್ರ್” – ಎನ್ನುತ್ತ ಬಂದ ನಾಲ್ಕಾರು ಮಂದಿಗೆ ನಾಗತ್ತೆ ಕಾಲು ನೀವಿಕೊಳ್ಳುತ್ತ ಕಗ್ಗಂಟೊಂದನ್ನು ಬಿಡಿಸಿ ನೇರ ನೀವಿದಂತೆ ಸುದ್ದಿ ತಿಳಿಸಿದಾಗ
“ಹೋ! ಅದಿನ್ನೂ ಇತ್ತಂಬ್ರ? ಮುರ್‍ದ್ ಒಲೆಗ್ಗಿಲೆಗ್ ತುಂಬಿ ಆಯ್ತ್ ಅಂತೆಳಿ ಮಾಡಿದ್ದೆ….”
“ಪುಕ್ಸಟೆ ಕೊಡ ಅವ್ಳ್…. ಎಷ್ಟ್ ಹೇಳುಳೊ….”
“ನಮ್ಮನಿ ಅಟ್ಟದ್ ಮೇಲೂ ಹಾಂಗಿಂದೇ ಒಂದ್ ಪೆಟ್ಟಿಗಿ ಇತ್ತ ಕಾಣತ್ತ್. ಒಳ್ಳೆ ನೈ….ಸ್ ಆಯಿ, ಕೆಂಪ್ ಕೆಂಪ್ ಆಯಿ. ನಂಗ್ ಹಂಬ್ಲೇ ಹೋಯಿದಿತ್ ಕಂಡ್ಯಾ?….. ಮನೀಗ್ ಹೋಯಿ ಹುಡ್ಕಕ್”
“ಹ! ನಿನ್ ದೊಡಮಂಗೆ ಯಾಕಂಬ್ರ್ ಅದ್?”
“ಬೇಕಂದ್ರೆ…. ಚಿತ್ತಿ ಕೊಡ್ಕಾಯ್ತಲೆ!”
“ಯಾಕೆ! ಕ್ವೊಡ್ದೆ ಯೇನ್?”
“ಕ್ವೊಡ್ಲಿ ಮೊದ್ಲ್. ಅದ್ರ್ ಮೇಲ್ ಹೇಳ್ವೆ”
……ಅಯ್ಯಬಯಬಯಬ. ಮಲಯದ ದಿನ ಪಿಂಡ ಸ್ವೀಕರಿಸಲು ಪ್ರೇತಾತ್ಮಗಳೆಲ್ಲ ನರೆಯುತ್ತವೆ ಅಂತ ಕೇಳಿದ್ದು ಸ್ಮರಣೆಗೆ ಬಂತು. ಮಾತಿನ ಮೇಲೆ ಮಾತು ಆಗುತ್ತಿರುವಂತೆಯೇ ಅಲ್ಲಿಗೆ ಕಮಲಚಿಕ್ಕಿ ಬಂದಳು. ಮನೆಯಿಂದ ಹಿಡಿದುಕೊಂಡು ಬಂದಿದ್ದ ಹಾಲುಮೊಸರನ್ನು ಒಳಗೆ ಕಳಿಸಿದಳು. “ಏನು ಭಾರೀ ಚರ್ಚೆಬಿದ್ದಿತ್ತಲೆ!” ಎನ್ನುತ್ತಾ ಕುಳಿತಕೊಂಡಳು. ಬಾಯಾರಿಕೆ ಕುಡಿಕುಡಿಯುತ್ತಾ ಆಲಿಸಿದಳು. ಕೊನೆಯ ಗುಟುಕನ್ನು ನುಂಗುನುಂಗುತ್ತಲೇ ಲೋಟವನ್ನು ಕೆಳಗಿಟ್ಟು ಒಂದು ಕ್ಷಣವೂ ತಡೆಯದೆ ಸುರುಮಾಡಿದಳು-
ಅವಳ ಅತ್ತೆ ಇದ್ದಾಗ ಹೇಳಿದ್ದಂತೆ, ಆ ಪೆಟ್ಟಿಗೆ ಅಜ್ಜಯ್ಯನ ಅಪ್ಪ ಮಾಡಿಸಿದ್ದು, ಬೆಳ್ಳಿಪಾತ್ರೆ ಇಡಲಿಕ್ಕೆ ಅಂತ. ಹಿತ್ತಿಲಲ್ಲೇ ಇದ್ದ ಸಾಗುವಾನಿಮರ ಕಡಿಸಿ. ಆಗ ವೆಂಕ ಎಂಬ ಬಡಗಿ ಇದ್ದನಂತೆ. ದಿನಕ್ಕೆ ಎಂಟಾಣೆ ಮಜೂರಿಗೆ. “ಆಗ್ಳಿಕ್ಕೆಲ್ಲ ಅಷ್ಟಕ್ಕೂ ಕಷ್ಟವಲೇ…….!” ಕಮಲಚಿಕ್ಕಿಯ ಪೀಠಿಕೆಯೇ ದೊಡ್ಡದ್ದು. ಸಾಗಲಿ ಮುಂದೆ ಹೋಗಲಿ ಎಂದು ನೂಕಿದರೂ ಸಾಗದು ಮುಂದೆ ಹೋಗದು.
ಎಲ್ಲಿಗೇ ಹೋಗಲಿ, ಮನೆಗೆ ಬಂದ ಕೂಡಲೇ ಹೋದಲ್ಲಿ ನಡೆದದ್ದನ್ನು ದೊಡಮನ ಹತ್ತಿರ ಹೇಳಬೇಕು. ಇದನ್ನೂ ಎಲ್ಲ ಹೇಳಿದೆ. ಕೇಳುತ್ತ ಹೂಂಗುಡುತ್ತ ನಗೆ ಬೆರೆಸಿಕೊಂಡು ಕುಳಿತಿದ್ದವರ ಬಳಿ – ಯಂತ ದೊಡಮಾ, ಆ ಕಲ್ಯಾಣಿ ಹೀಗೆ ಹೀಗೆ ಹೇಲಿದಳಲ್ಲ ಎಂದರೆ ದೊಡಮ –
“ಯಾರ್? ಆ ‘ಕಲ್ಯಾಣೀ ನೀ ಕುಣೀ ಕುಣೀ’ಯ? ಪೋಂಕೆಲ್ಲೊ. ಅವು ಕತೆ ಕಟ್ಟಿ ಏನೂ ಹೇಳ್ತೊ, ನೀನ್ ನಂಬ್. ಅವ್ಕ್ ಕೆಲ್ಸ ಇಲ್ಲೆ ಅಂದ್ರೆ ನಿಂಗೂ ಇಲ್ಯ?…. ಈಗ್ ಅದೆಲ್ಲ ಬೇಡ. ಮೊದ್ಲ್ ಹೋಗ್. ಹೋಯಿ ಆ ಪೆಟ್ಟಿಗೆ ತಕಂಬಾ. ಹ್ಯಾಂಗಾರೂ ಮಾಡಿ ತಕಂಬಾ.” – ಎಂದರು.
“ಇಲ್ಲ ದೊಡಮಾ. ಅದ್ ಅಪ್ದಲ್ಲ. ನೀವ್ ದೂಡಿರೂ ನಾ ಹೋತ್ತಿಲ್ಲೆ” ಎಂದೆ.
****
ಹೋಗಲಿ. ಚಿತ್ತಿ ಹತ್ತಿರವೇ ಇನ್ನೊಮ್ಮೆ ಹೋಗಿ ಇದೆಲ್ಲ ಏನು? ನೀನಾದರೂ ಏಕೆ ಕೊಡುವುದಿಲ್ಲ? ದೊಡಮನಿಗಾದರೂ ಅದರ ಮೇಲೆ ಯಾಕೆ ಅಷ್ಟು ವಾಂಛೆ? ಅಂತ ಹೆದರಿ ಹೆದರಿ ಕೇಳಿದರೆ “ನನ್ನತ್ರ ಯಂತ ಕ್ಯೇಂತ್ಯಾ? ಹೋಗ್ ನಿನ್ ದೊಡಮನ್ ಹ್ವೊಕ್ಡೇ ಕ್ಯೇಂಡ್ಕೊ. ಸುಭಗ್ತಿ ಇದ್ಲಲೆ! ಅಂದಿಂದಿಂದಿಗೂ ಹೊಟ್ಟೆಕಿಚ್ ಕಾರಿ ಕಾರಿಯೇ ದೊಡ್ಡವ್ಳಾದವ್ಳು…. ಅದನ್ ಮಾರಿ ಇನ್ನಿಲ್ಲೇ ಅನ್ಸದಿರೆ ನನ್ ಹೆಸ್ರ್….” ಈ ತಾಟಕಿ ಹತ್ರ ಮತ್ತೆ ಬಂದೆನಲ್ಲ! ಅಯ್ಯೊ ರಾಮ.
ಅಲ್ಲ – ಸತ್ಯಕ್ಕೂ ಆ ಪೆಟ್ಟಿಗೆ ಸುತ್ತ ಏನಿರಬಹುದು? – ಎಂದೆ, ಹೆಂಗಸರಿಗೆ ಬೇರೆ ಕಸುಬೇನು? ನಮಗೆ ಇಂತಹದೆಲ್ಲ ಮನಸ್ಸಿಗೇ ಬರುವುದಿಲ್ಲ ಎಂದು ದೊಡ್ಡಸ್ಥಿಕೆಯಾಡಿದರು ಇವರು.
ನಾನು ಅದನ್ನಲ್ಲ ಕೇಳಿದ್ದು, ಆ ಪೆಟ್ಟಿಗೆ ವಿಷಯ – ಅಂದೆ.
ಅದೆಲ್ಲ ಎನು ಗೊತ್ತಾ, ಹಿಂದಿನ ಕಾಲದಲ್ಲಿ ಹೆಂಗಸರಿಗೆ ಅವರದ್ದು ಅಂತ ಏನಿತ್ತು? ಮುಟ್ಟಾದವರ ಮೂಲೆ ಬಿಟ್ಟರೆ? ಬಹುಶಃ ಅಜ್ಜಯ್ಯ ಈ ಪೆಟ್ಟಿಗೆ ಮಾಡಿಸಿದಾಗ ತನಗೆ ಬೇಕು ತನಗೆ ಬೇಕು ಅಂತ ಎಲ್ಲ ಗಲಾಟೆ ಮಾಡಿರಬೇಕು. ಕಡೆಗೆ ಅದು ಚಿತ್ತಿಗೆ ಹೋಗಿರಬೇಕು. ಆಗ ದೊಡ್ಡಮ್ಮನಿಗೆ ಬೇಸರವಾಗಿ, ಜಗಳವೂ ಆಗಿರಬಹುದು….. ಆ ಜಗಳ, ಆಸೆ,,,,,
ಶ್ಶಿ ಶ್ಶಿ ‘ಹಿಂದಿನ ಕಾಲದಲ್ಲಿ’ ಎಂದು ಆರಂಭಿಸಿದಾಗಲೇ ನಿಮ್ಮ ವಾದ ಬಿದ್ದು ಹೋಯಿತು ಬಿಡಿ.
ನಕ್ಕರು.
ನಗಬೇಡಿ. ವಿಕಾರ ಕಾಣುತ್ತೀರಿ. ಯಾಕೆಂದರೆ ನಗೆ ಚಂದ ಕಾಣುವುದು ಕಾರಣ ಚೆನ್ನಾಗಿದ್ದರೆ ಮಾತ್ರ.
ಸಿಟ್ಟು ನೋಡು ಸಿಟ್ಟು! – ಮತ್ತೆ ಗಟ್ಟಿಯಾಗಿ ನಕ್ಕರು.
ಅಬ್ಬ! ನಗುವ ಗಂಡಸು ಎಷ್ಟು ಕರ್ಕಶ – ಎಂದು ಕಣ್ಣು ಮುಚ್ಚಿಕೊಂಡೆ.
“ಕಿವಿ ಮುಚ್ಚಿಕೋ” ಎಂದರು. ಕ್ರಿಯೆಯನ್ನು ಮಾತಿಗೆ ತಕ್ಕ ತಿದ್ದುವವರಂತೆ.
ಎದ್ದು ಸೀದ ದೊಡಮನ ಹತ್ತಿರ ಬಂದೆ. ಬಂದು ನೋಡಿದರೆ ದೊಡಮ ಹಾಸಿಗೆಯಲ್ಲಿ ಕಾಲಮೇಲೆ ಸುಮ್ಮನೆ ಹೊದೆವಸ್ತ್ರ ಎಳೆದುಕೊಂಡು ಕುಳೀತೇ ಇದ್ದರು.
“ಯಂತ ದೊಡಮಾ? ಮನ್ಕಂತಿಲ್ಯಾ?”
“ಮನ್ಕಂತೆ ಮಗ. ಆ ಪೆಟ್ಟಿಗಿ ತಪ್ಪುಕೇ ಆಯ್ಲಿಲ್ಯಲೆ. ಅದೇ ಜಾನ”
“ಹೋಯ್ಲಿ ಬಿಡಿ ದೊಡಮ. ಇವ್ರ್ ಹೇಳಿದ್ ಹಾಂಗೆ ಅಂಥದ್ದೇ, ಅದ್ಕಿಂತ್ಲೂ ಊಂಚಿಂದ್ ಬೇಕಾರೆ ಮಾಡ್ಸವ. ಅದ್ಕೇನಾಯ್ಕ್?”
“ಶ್ಶೆ. ನೀ ಮಾಡ್ಸಿ ಕೊಡ್ವೆ ಮಗ. ಆರೆ ಅದ್ ಆ ಪೆಟ್ಟಿಗಿ ಆತ್ತಾ ಹೇಳ್” – ಎಂದರು ದೊಡಮ.
****
ಕುಳಿತಲ್ಲೆ ಪೆಟ್ಟಿಗೆ ದೊಡ್ಡದಾಗುತ್ತಾ ಇತ್ತು.
ಅವತ್ತು ದೊಡಮ ದೇವಸ್ಥಾನಕ್ಕೆ ಹೋಗಿದ್ದಾಗ ತಿಮ್ಮಪ್ಪಣ್ಣಯ್ಯ ಬಂದ. ಅದೂ ಇದೂ ಮಾತಾಡುತ್ತ ದೊಡಮ ಇಲ್ಲ ಅಂತ ಗೊತ್ತಿದ್ದೂ ಖಾತ್ರಿ ಮಾಡಿಕೊಳ್ಳುವಂತೆ ಆಚೀಚೆ ನೋಡಿದ. ಹತ್ತಿರ ಬಂದು ಆಪ್ತರಂತೆ ಕಿವಿಯತ್ತ ಬಗ್ಗಿ ಪಿಸುವಾಗಿ ಕೇಳಿದ.
“ಹೌದನಾ? ಆ ಚಿತ್ತಿ ಪೆಟ್ಟಿಗಿ ಮಾರ್‍ತಲಂಬ್ರ್?”
“ಹೂಂ.”
“ಅದು ಯಂಥಾ ಪೆಟ್ಟಿಗಿ ಅಂತೀ…” – ಎಂದು ಸುರು ಮಾಡುತ್ತಲೇ.
“ನಂಗ್ ಕ್ಯೇಂಡ್ ಕ್ಯೇಂಡ್ ಸಾಕಾಯ್ತೋ….” – ಎಂದು ಕೂಗಿದೆ. ದೊಡ್ಡದಾಗಿ ನಕ್ಕ. ನಿಲ್ಲಿಸಲಿಲ್ಲ ಬದಲು.
“ಹೌದ! ಮತ್ತೆ ಅದೇನ್ ಸಾಮಾನ್ಯ ಪೆಟ್ಟಿಗಿಯಾ? ಒಂದೇ ಒಂದ್ ಶಾಂಪಲ್ ಹೇಳ್ತೆ ಕ್ಯೇಣ್.” – ಎನ್ನುತ್ತ ಮುಂದುವರಿಸಿದ.
-ಅಜ್ಜಯ್ಯನ ಸೂಳೆ ಗೊತ್ತುಂಟಲ್ಲ ನಿಂಗೆ? ಅದೇ, ಸೂರು! ಒಂದು ಸಲ ಅಜ್ಜಿ ಹೆರಿಗೆಗೆ ಹೋದಾಗ ಅವಳು ಮೇಳ ಮಾಡಿಕೊಂಡು ಬಂದಳು. ಅದೇ ಹೊತ್ತಿಗೆ ಸರಿಯಾಗಿ ಅಜ್ಜಯ್ಯನ ಭಾವನೆಂಟನೂ ಏನೋ ಕೆಲಸದ ಮೇಲೆ ಅಲ್ಲಗೇ ಬಂದುಬಿಡಬೇಕೇ? ಅಜ್ಜಯ್ಯ ಏನು ಮಾಡಿದರು, ಸೂರುವನ್ನು ಈ ಪೆಟ್ಟಿಗೆಯೊಳಗಿಟ್ಟು ಚಿಣಕ ಹಾಕಿದರು. ಬನ್ನಿ ಬನ್ನಿ ಭಾವಯ್ಯಾ ಎಂದು ಭಾವನೆಂಟನನ್ನು ಕರೆದರು. ಅವ ಬಂದ. ಗಂಡಸರು ನೋಡು, ಮಾತಾಡುತ್ತ ಮಾತಾಡುತ್ತ ಹಾಗಿಂದ ಹಾಗೇ ಹೊರಗೆ ಹೊರಟುಬಿಟ್ಟರು. ಪೆಟ್ಟಿಗೆಯೊಳಗಿನ ಭೂತದ ನೆನಪೇ ಹೋಗಿ. ಇದನ್ನೆಲ್ಲ ಚಿತ್ತಿ ನೋಡುತ್ತ ಇದ್ದಳು ಬಲ್ಯ. ಅವರೆಲ್ಲ ಹೋಗಲಿಕ್ಕೂ ಸೂರು ಕೂಗಿ ಬೊಬ್ಬೆ ಹಾಕಿ, ಪೆಟ್ಟಿಗೆ ಬದಿಯೆಲ್ಲ ಬಡಿದು ಬಡಿದು ಇಷ್ಟಾದರೂ – ಚಿತ್ತಿ ಅಲ್ಲಾಡಿದರೆ ಹೇಳು! ಅಷ್ಟೊತ್ತಿಗೆ ದೊಡಮ ಎಂತಕ್ಕೋ ಅಲ್ಲಿಗೆ ಬಂದವಳು ಚಿಣಕ ತೆಗೆದು ಅವಳನ್ನು ಹೊರಗೆ ಮಾಡಿ…..
“ಹ್ಯಾಂಗಿದ್ಲಂತೆ ಆ ಸೂರು! ಒಳ್ಳೆ ಕೆಂಪ್ ಬಿಳಿ ಕೆಂಪ್ ಬಿಳಿ ಸಿಡೀತಿದ್ಲ್…. ಹೆಂಗ್ಸ್ ಅಂದ್ರೆ ಹೆಂಡ್ತೆ ಸಮೆತ ಹಾಂಗಿರ. ಅಂಥಾ ಹೆಂಗ್ಸ್!” – ನಿಮಿಷ ಸುಮ್ಮನಾಗಿ ತಿಮ್ಮಪ್ಪಣ್ಣಯ್ಯ ಯೋಚಿಸಿದಂತೆ ನಿಂತು ನೋಡಿದ “ಅಲ್ಲ, ಸೂಳೀರ್ ಜಾತಿಗೆ ಆ ನಮ್ನೆ ಬಣ್ಣ, ಹೆಂಗ್ಸ್ತನ ಎಲ್ಲ ಎಲ್ಲಿಂದ ಬತ್ತೋ ದೇವ್ರೆ” –
ಇಷ್ಟೆಯಾ? ಇಷ್ಟು ಹೇಳಲಿಕ್ಕೆ ಇವ ಯಾರೂ ಇಲ್ಲ ಅಂತ ಗಟ್ಟಿಮಾಡಿಕೊಂಡು ಬಗ್ಗಿ ಪಿಸುವಾಗಬೇಕ?….ಥೂ. ಕೆಲವು ಗಂಡಸರೇ ಹೀಗೆ. ತೀರಾ ಹತ್ತಿರ ಬಂದು ಮಾತಾಡುವುದಪ್ಪ. ಹಿಂದೆ ಹಿಂದೆ ಸರಿದ ಹಾಗೂ ಮುಂದೆ ಮುಂದೆ ಬರುತ್ತ. ಆ ತಿಮ್ಮಪ್ಪಣ್ಣಯ್ಯ ಅಂತೂ ಒನ್ನಮುನೆ ಕೆಟ್ಟ ವಾಸನೆ – ಎಂದೆ ಇವರ ಬಳಿ. ಆದರೆ ಕಲ್ಯಾಣಿ ಹೆಣದ ವಾಸನೆ ಹೊಡೆಯಲಿಲ್ಲವೆ ನಿನಗೆ ಅವನ ಮಾತಲ್ಲಿ? ಅದಾಶ್ಚರ್ಯ! ಸೂರು ಪೆಟ್ಟಿಗೆಯಿಂದ ಜೀವಂತ ಹೋದಳಂತ ಏನು ಗ್ಯಾರೆಂಟಿ? – ಎಂದರು.
ಏನು ಪತ್ತೇದಾರಿ ಬರೆಯುತ್ತೀರ? ಅವ ಹೇಳಿದ ಕತೆ ಅಜ್ಜಯ್ಯನದಲ್ಲ. ತಿಪ್ಪಮಾವಯ್ಯಂದು. ಹೇಳಿದರೆ ಇನ್ನೂ ಒಂದು ಅರ್ಧ ಗಂಟೆ ಸಮರ್ಥನೆ ಮಾಡಿಕೊಳ್ಳುತ್ತ ನಿಲ್ಲುತ್ತಾನೆ ಅಂತ ನಾನು ಹೇಳಲಿಲ್ಲ. ನೀವು ನೋಡಿದರೆ! ಅದಕ್ಕೂ ಇದಕ್ಕೂ ಹೊಲಿಗೆ ಹಾಕಲು ಹೋಗಬೇಡಿ…. ಹ್ಞಂ!
****
ಚಿತ್ತಿ ಪೆಟ್ಟಿಗೆ ಕೊಟ್ಟೂ ಆಗಿರಬಹುದು.
ದೊಡಮನಿಗೆ ಅದರ ನೆನಪೇ ಹೋಗಿರಬಹುದು – ಅಂತ ಎಣಿಸಿದ್ದರೆ, ಒಂದಿನ ದೊಡಮ ದೇವಸ್ಥಾನಕ್ಕೆಂದು ಹೋದವರು ವ್ಯಾನಿನಲ್ಲಿ ಹಿಂತಿರುಗಿದರು. ನೋಡಿದರೆ ಅದರಲ್ಲಿ ಪೆಟ್ಟಿಗೆ! ಅದನ್ನಿಳಿಸಿಕೊಂಡು “ಹೇಗೆ! ತಂದೇ ಬಿಟ್ಟೆನಲ್ಲ!” ಎಂಬಂತೆ ನೋಡಿದರು. ನಾನು ಆಶ್ಚರ್ಯ ನಿಂತೇ ಇದ್ದಂತೆ, ಹೊರಡುತ್ತಿದ್ದ ವ್ಯಾನಿನವರನ್ನು ಮತ್ತೆ ಕರೆದು ಅದನ್ನೆತ್ತಿಸಿ ತಾನು ಮಲಗುವ ಕೋಣೆಗೆ ಸಾಗಿಸಿದರು. ಅದರ ಮೇಲೆ ಒಂದು ಟೇಬಲ್ಕ್ಲಾತನ್ನು ಕೊಡವಿ ಹಾಸಿದರು, ಕುಳಿತುಕೊಂಡರು.
“ಯೇನ್ ಬೇಜಾರಾಯ್ತ ಹೆಣೆ, ಬೇಡ ಅಂದ್ರೂ ತಂದೇ ಬಿಟ್ರ್ ದೊಡಮ ಅಂತೆಳಿ?…. ಹೆದ್ರ್ ಬೇಡ. ಗಂಡ ಬೈದ್ರೆ ನಾ ಹೇಳ್ತೆ ಅವಂಗೆ. ಈ ಪೆಟ್ಟಿಗಿ ಬರ್‍ದೆ ನಂಗ್ ನಿದ್ದಿ ಬತ್ತಿರ್‍ಲಿಲ್ಲ….”
“…. ಇಷ್ಟ್ ದಿನವೂ ಮಾರ್‍ದೆ ಕೂತ್ಕಂಡ್ಲ ಚಿತ್ತಿ?”
“ಹಾಂಗೇಯಲೆ!”
“ಯಾಕೊ?”
“ಯಾಕೊ”
“ಮತ್ತ್ ಹ್ಯಾಂಗ್ ತಂದ್ರಿ ಈಗ?…. ನೀವೇ ಅಲ್ಲಿಗ್ ಹೋದ್ರಿಯ?”
“ಆ ಹೋಕ್ಕಿಲ್ಲವ್ಳ್ ಮನಿಗ್ ಹೋಯೇಬಿಡನ ನಾನ್? ಅದೇ ಆ ಸಂಜೀವಿಗೆ ನೀನೆ ತಕೊ. ಎಷ್ಟಕ್ಕೇ ತಕೋ. ನೀ ಕೊಟ್ಟದ್ರ್ ಎರ್‍ಡ್ ಪಟ್ಟ್ ನಾ ಕೊಡ್ತೆ. ಅದನ್ನ್ ಮಾತ್ರ ನಂಗೇ ಕೊಡ್ಕ್ ಅಂದೆ. ಅವ್ಳ್ ಹತ್ರ ನಂಗೆ ಅಂತೆಳಿ ಬಾಯ್ ಬಿಟ್ರೆ ಪೆಟ್ಟಿಗೆ ಸಿಕ್ಕ. ಹಾಂಗೊಂದ್ ಮಾಡ್ಬೇಡ ಅಂದೆ. ಅಕ್ಕ್ ಅಂದ್ಲ್…. ಪೆಟ್ಟಿಗಿ ಗೆದ್ಕಂಡೇ ಬಂದ್ಲ್. ಅವ್ಳ್ ಮಕ್ಳೇ ವ್ಯಾನಿಗ್ ಹಾಕಿ ಕಳ್ಸಿಯೊ. ನೀನೇ ಕಂಡ್ಯಲೆ.”
“ಅಯ್ಯೊ ದೊಡಮ. ಚಿತ್ತಿ ಎಲ್ಲಾರು ನಮ್ಮನಿಗ್ ಬಂದಾವಾಗ ಇದ್ ಅವ್ಳ್ ಕಣ್ಣಿಗ್ ಬಿದ್ರೆ?”
“ನಾನಿಪ್ಪಲ್ಲಿವರೆಗೆ ಅವ್ಳ್ ಬತ್ತಿಲ್ಲೆ. ನಾ ಹೋಪ್ಸಮಿಗೆ ಇದನ್ ತೆಕಂಡೇ ಹೋತೆ. ಬಿಟ್ ಹೋಪ್ನ?”
****
ಓ…. ಕೋಲೆಗಿಲೆ ಹೆಣ ರಕ್ತ ಪ್ರೇಮದ ಪೆಟ್ಟಿಗೆ ಬಂತಾ! – ಎಂದು ನಕ್ಕರು ಇವರು. ಟೇಬಲ್ ಕ್ಲಾತ್ ಎತ್ತಿ ಸವರಿ ನೋಡಿ “ಆದ್ರೂ ನಿಮ್ ಸಾಹಸ ಸಾಕ್ ದೊಡಮ. ಪೆಟ್ಟಿಗಿ ಲಾಯ್ಕಿತ್ತ್ ಎಲ್ಲ ಸಮ. ಅರೆ ಇದೆಲ್ಲ ಪ್ರಯೋಜ್ನ ಇಲ್ಯೆ. ಇಲ್ ಕಾಣಿ, ಈ ಚಡಿ ಕಾಣಿ….” – ಅಂತೆಲ್ಲ ವಿಮರ್ಶೆಗೆ ತೊಡಗಿದರೆ ಅದರ ಗೊಡವೆಯೇ ಇಲ್ಲದಂತಿದ್ದರು ದೊಡಮ.
ಅವತ್ತು ರಾತ್ರಿ ಕೆಲಸ ಮುಗಿಸಿ ಅವರ ಹತ್ತಿರ ಹೋದೆ. ಹಾಸಿಗೆ ಬಿಡಿಸಿಕೊಂಡೂ ಮಲಗದೆ ಎತ್ತಲೋ ಜಾನದಲ್ಲಿದ್ದಂತೆ ಕುಳಿತಿದ್ದರು.
“ಇನ್ನಾದ್ರೂ ನಿದ್ದಿ ಮಾಡ್ಲಕ್ಕಲೆ ದೊಡಮ.” ಎಂದೆ.
“ಬತ್ತಿಲ್ಲೆ ಕಾಣ್.”
“ಪೆಟ್ಟಿಗೆ ಬಂದ್ ಮೇಲೂ!”
“……….”
“ದೊಡಮ”
“……….”
“ಓ ದೊಡಮಾ”
“ಓ…”
ಮೆಲ್ಲ ಕೇಳಿದೆ, “ಅಲ್ಲ, ಈ ಪೆಟ್ಟಿಗೆ ಯಾಕ್ ದೊಡಮ ನಿಮ್ಗೆ? ಯಾಕ್ ಅಷ್ಟ್ ಆಸೆ ಪಟ್ರಿ?”
ದೊಡಮ ಸರಕ್ಕ ನನ್ನತ್ತ ತಿರುಗಿದರು.
ದುಃಖ ಆರ್ತತೆ ಸಿಟ್ಟು ಕಿರಿಕಿರಿ ಧೃತಿ ಎಲ್ಲವೂ ಕಲಸಿದಂತಹ ದೃಷ್ಟಿಯಲ್ಲಿ –
“ಅಯ್ಯೋ…. ಹಂಗರ್ ನಾನೊಂದ್ ಪೆಟ್ಟಿಗಿ ಆಸೆ ಪಟ್ರೂ ಯಾಕ್ ಯೇನ್ ಯತ್ತ ಅಂತೆಲ್ಲ ಪ್ರಪಂಚಕ್ಕಿಡೀ ಸಾರ್‍ಕಾ? ಅದೇನ್ ಹಂಗರ್ ಅಷ್ಟ್ ಆಸೆ ಪಡುಕೂ ನಾನ್ ಹೇಳ್ಕಾ…. ಕೇಣ್ಕಾ… ಡಂಗ್ರ ಹೊಡಿಕಾ?….” – ಒಳದನಿಯಲ್ಲಿ ಉದ್ದ ಕೂಗಿದರು.
ನನಗೆ ರಪ್ಪಂತ ಕೆನ್ನೆಗೆ ಹೊಡೆದಂತಾಯಿತು.
*****
