ಗೃಹ ಪ್ರವೇಶದ ಉಡುಗೊರೆ

– ೧ –

ವರ್ಷಗಳ ಹಿಂದಿನ ನಮ್ಮ ಗೃಹ ಪ್ರವೇಶದ ದಿವಸ
ಕನಿಷ್ಠರ ವರಿಷ್ಠರು ಎಂಬ ಫರಕಿಲ್ಲದೆ ನಂಟರಿಷ್ಟರು
ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು
ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು.
ಕರೆಯೋಲೆಯಲ್ಲಿ ಬೇಡವೆಂದಿದ್ದರೂ-
ಕಣ್ಣು ಕುಕ್ಕುವ ರಂಗುರಂಗಿನ ಪ್ಯಾಕೆಟ್ಟುಗಳ
ಸಲ್ವಾರ್ ಕಮೀಜ್ ತೊಟ್ಟು
ಸೂಚಿಸದೆ ಲವಲೇಶವೂ ಗುಟ್ಟು
ಮರೆಮಾಚಿದ ಮಿಠಾಯಿ, ಪುಷ್ಪಗುಚ್ಛ, ಕಪ್ಪು ಸಾಸರ್ ಸೆಟ್ಟು,
ಗಡಿಯಾರ, ಬಟ್ಟೆಬರೆ
-ತಂದಿತ್ತರು ಇನ್ನು ಏನೇನೋ ಪ್ರೀತಿಯುಡುಗೊರೆ.

ಮಾರನೆಯ ದಿನ ಮಿಠಾಯಿಯ ಆಯುಷ್ಯ
ಮುಗಿದಿತ್ತು ಬಾಯಿಗಳ ಬೇಟೆಗೆ;
ಅದರ ಮರುದಿನ ಬಸವಳಿದ ಹೂ ಬುಕೆ,
ಕಾಲ ಕ್ರಮೇಣ ಒಡೆದ ಕಪ್ಪು ಬಸಿಗಳ ಚಕ್ಕೆ
ಪಾವ್ತಿಯಾದವು ಬೀದಿ ತೊಟ್ಟಿಯ ಹರಿಶ್ಚಂದ್ರ ಘಾಟಿಗೆ;
ಗಡಿಯಾರ ಗತಿಗೆಟ್ಟು ಉಪೇಕ್ಷೆಗೊಳಗಾಗಿ,
ವಸ್ತ್ರ ಹರಿದು ನಿರುಪಯೋಗಿ-
ವರ್ಗವಾದವು ಹಿಂಮನೆಯ ಹೆಳವ ಕಪಾಟಿಗೆ;
ಇದೇ ತರಹ
ಇನ್ನಿತರ ಕಾಣಿಕೆಗಳ ಕಥೆ ಸಹ.

– ೨ –

ಅಷ್ಟೇನೂ ಗುರುತಿಲ್ಲದ ನನ್ನ ಕವನಾಭಿಮಾನಿಯೋರ್ವ
ಬೆಲೆ ಕೊಟ್ಟು ಕೊಳ್ಳದ, ಎಂದೇ ಬೆಲೆ ಕಟ್ಟಲಾಗದಪೂರ್ವ
ಉಡುಗೊರೆಯೊಂದ ಅಂಜುತ್ತಲೇ ಕೊಟ್ಟ,
ಕಾಗದದ ವರ್ಣರಂಜಿತತೆಯಿಂದ ಅಡಗಿಸಿಡದೆ ಒಳ ಗುಟ್ಟ.
-ಅರ್ಥಾತ್, ನಿತ್ಯ ಮಲ್ಲಿಗೆ ಹಂಬಿನೊಂದು
ಕಡ್ಡಿಯ ತಂದು ಗೇಟ ಬಳಿ ನೆಟ್ಟ.

ಇಂದಿಗೂ ಒಳ ಹೊರಗೆ ಹಿತಮಿತ ಗಮಗಮ,
ವಿದೇಶಿ ಅತ್ತರಿಗೆ ಸಮ;
ನೋಟಕ್ಕೆ ಹಬ್ಬದೂಟ ಚಿಕ್ಕೆ ಹೂ ಹೊರೆ;
ಅವನೀಗ ಆಗಿದ್ದರೂ ಕಣ್ಮರೆ.
*****

ಕೀಲಿಕರಣ: ಶ್ರೀನಿವಾಸ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.