ನಿತ್ಯೋತ್ಸವ

– ೧ –

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ –
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ.

– ೨ –

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ –
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ…..

– ೩ –

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಹಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ –
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ…..
*****
ಕೀಲಿಕರಣ: ಶ್ರೀನಿವಾಸ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.