– ೧ –
ಕಲಾಕ್ಷೇತ್ರದ ಕೌಂಟರು, ಗೇಟಿನಲ್ಲಿ
ಪ್ರೇಕ್ಷಕರ ತಕ್ಕ ಸೀಟಿನಲ್ಲಿ
ಪ್ರತಿಷ್ಠಾಪಿಸುವ ಲಗುಬಗೆಯಲ್ಲಿ
ಬೆಂಗಳೂರನ್ನೇ ಹೊತ್ತ ಸೋಗಿನಿಂದ,
ಕಾಲ್ಗೆಟಿಸಿದ ನಗೆಯಿಂದ,
ಆತ್ಮೀಯರಾಗುತ್ತಾರೆ –
ಸ್ವಯಂಸೇವಕ ಸಂವೇದಕ ಗಿಳಿಗಳು;
ಸ್ವದೇಶಿ ನಾಲಗೆಯ ವಿದೇಶಿ ಉಚ್ಚಾರಣೆಯ
ಸ್ವಾತಂತ್ರ್ಯೋತ್ತರ ವಿಚಿತ್ರ ತಳಿಗಳು –
‘ಹಲೋ’ ಅನ್ನುತ್ತಾರೆ ಗುರುತಿದ್ದರೆ,
ದುರುಗುಟ್ಟುತ್ತಾರೆ ಮರೆತಿದ್ದರೆ.
ಬಿಷಪ್ ಕಾಟನ್ನಿನ ಬಾಬ್‌ಕಟ್ಟಿನ ಪೊಗದಸ್ತು ಬೇಬಿಗಳು –
ಎನಿಡ್ ಬ್ಲೈಟನ್ನಳ ಕಥೆಯ ಸ್ಕರ್ಟ್ ಹಿಡಿದು ಜಿಗಿದಾಡಿ
ಮೌಂಟ್ ಕಾರ್ಮಲ್ಸಿಗೆ ತಲಪಿ, ಹರಗಿದ ಹೊಲಗಳಾಗಿ
ಮುಂಗಾರಿನೈನೀರನೆರೆದುಕೊಳ್ಳುವ ಹೊತ್ತಿಗೆ
ಆಗುತ್ತಾರೆ ಹಾಡ್ಲಿ ಛೇಸನ ವಿಲಾಯಿತಿ
ಹೀರೋಗಳ ಗುತ್ತಿಗೆ.
ಮೈ ತಿಳಿದಾಗ ಸಂಸ್ಕೃತಿಯ ಸ್ವಂತ ಸೂರುಗಳನ್ನ,
ಆರ್ಯಾವರ್ತತೆಯ ಹಚ್ಚನೆಯ ಬೇರುಗಳನ್ನ
ಹುಡುಕುತ್ತಾರೆ ನಾಟಕ, ನಾಟ್ಯಗಳಲ್ಲಿ;
ಚಲಚ್ಚಿತ್ರೀಯ ಸಂಗೀತದ ಅಚ್ಚ ಜಾನಪದ ಗೀತೆಗಳಲ್ಲಿ.
– ೨ –
ಫ್ಯಾಕ್ಟರಿ ಡೈರೆಕ್ಟರೊ, ಮಿಲ್ಲಿನ ಮ್ಯಾನೇಜರೊ ಡ್ಯಾಡಿ-
ಕಳಚಿ ದಿನನಿತ್ಯದ ಫೋನ್, ಫೈಲುಗಳ ಬೇಡಿ
ಸಂಜೆ ಸೆಂಚ್ಯುರಿ ಕ್ಲಬ್ಬಿನ ವಿಸ್ಕಿ, ಬಿಲಿಯರ್ಡ್ಸ್ ಹೊಕ್ಕರೆ
ಮನೆಯ ಜ್ಞಾಪಿಸಬೇಕ್ಯ್ ಕೋಳಿಗಳು ಹಾಡಿ.
ಇನ್ನು ಮಮ್ಮಿ: ಸೋಫಾದ ಮೆತ್ತನೆಯಲ್ಲಿ ಹಗಲ ಭಾಗಿಸುತ್ತ,
ಕಮರ್ಷಿಯಲ್ ಸ್ಟ್ರೀಟಿನಂಗಡಿಗಳ ಲೋಹಚುಂಬಕ ದೀಪ್ತಿ ಸುತ್ತ
ಪಾತರಗಿತ್ತಿಯಲೆದು, ಮಾತು ನಗೆಯಷ್ಟೆ ಕೊಳ್ಳುತ್ತ,
ಮೆಲ್ಲಲಾರದೆ ಸೌಖ್ಯ,
ಮಂಚಕ್ಕೆ ಮೈಚಾಚಿ ಕಾಮ ಫುಲ್‌ಸ್ಟಾಪಿರದ ದೀರ್ಘವಾಕ್ಯ.
-ಇಂಥವರ ಅಪರೂಪದ ಫಲಗಳಿವು;
ಪರ ಬೀಜ ಕನಸಿ, ಸಸಿ ನಿಗುರದ ಹತಾಶ ನೆಲಗಳಿವು;
ಫರಂಗಿ ಅಕ್ಷರಾಭ್ಯಾಸ ಮಾಡಿ ನಾರಂಗಿ ಪಡೆಯಬಯಸುವ
ನಿಷ್ಫಲ ಛಲಗಳಿವು.
– ೩ –
ತೆರೆ ಸಂಕುಚಿಸಿ ಸಭಾಂಗಣ ಕತ್ತಲಿಸಿದಾಗ
ಪ್ರೇಕ್ಷಕರ ಲಕ್ಷ್ಯಕ್ಕೆ ನಾಟಕ, ನಾಟ್ಯ, ಸಂಗೀತ ಬೆಸೆದು
ನೇಪಥ್ಯದಲ್ಲೊ, ಗೇಟಿನ ಮೂಲೆಯ ಅರೆಗತ್ತಲಲ್ಲೊ,
ಕಣ್ಣಲ್ಲೆ ನೇಗಿಲ ಹೂಡುವ ಪಡ್ಡೆ ಹೈದರ ಜೊತೆ
ಪಿಸಿಪಿಸಿ ಚಿಲಿಯುವ, ಮೈ ತಾಕಿಸುವ,
ಕುಚಾಯಿಸುವ
ಸ್ವಸಮಾರಂಭ ಆರಂಭಿಸುತ್ತಾರೆ.
ಕಾರ್ಯಕ್ರಮದ ಮೊದಲಲ್ಲಿ
ಸಮಸ್ತ ಉತ್ಸಾಹ ಮುಖಕ್ಕೆ ಹೇರಿಸಿಕೊಂಡವರು,
ಮುಗಿದಾಗ, ಮಂದಿ ಒಬ್ಬೊಬ್ಬರೆ ಕರಗಿದಾಗ,
ಬರಿದಾದ ರಂಗದ ಖಾಲಿ ಮೌನಗಳನ್ನ
ಗಂಟೆ ಮಾತ್ರದ ಸಂಸ್ಕೃತಿಯ ಉದುರು ಪಕಳೆಗಳನ್ನ
ಗೆರೆಗೊಂಡ ನೋಟದಲಿ ತುಂಬುತ್ತ
ಕೌಂಟರು, ಗೇಟು, ಪ್ರೇಕ್ಷಕರ ಸೀಟಲ್ಲಿ
ನಿಧಾನ ಚೆಲ್ಲುತ್ತಾರೆ;
ತಮ್ಮ ಅಳತೆಗೆ ತಕ್ಕ ಬಾಣ ದಕ್ಕದೆ ಕೊನೆಗು
ಅನಾಥ ಬಿಲ್ಲಾಗುತ್ತಾರೆ.
*****
ಕೀಲಿಕರಣ: ಶ್ರೀನಿವಾಸ