ನೆನೆವುದೊಂದಗ್ಗಳಿಕೆ

ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ

ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ
ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ

ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ-
ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ.

ಬಲಿದಾನದಿತಿಹಾಸ ರಕ್ತಸಂಪುಟಮಾಗಿ
ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ

ಹೊಳೆದಿಹಿರಿ; ಕಲ್ಪಂಗಳುರುಳಿದರು ಕೇಡಿಲ್ಲ.
ಫಲವಿತ್ತು ಮರೆಯಾದ ಪುಷ್ಪಗಳ ಮರೆಯುವರೆ?

ನಮ್ಮ ಕೈಗಿತ್ತಿರುವ ನಾಡಗುಡಿ ತೊರೆಯುವೆವೆ?
ಹೆಂಬೇಡಿಯಾಗಿ ನಮ್ಮೀ ಬದುಕ ಹೊರೆಯುವೆವೆ?

ಇಲ್ಲಿಲ್ಲ! ನವಯುಗದ ಭೀಮ ಸತ್ಯಕಾಮರ;
ದಾರಿದೋರಿರಿ ನಾಡ ಸಂತುಷ್ಟಿಸಂಪದಕೆ,
ಹೆಜ್ಜೆ ಹೆಜ್ಜೆಗೆ ನಿಮ್ಮ ನೆನೆವುದೊಂದಗ್ಗಳಿಕೆ.
*****