ಗೆಲುವೆನೆಂಬುವ ಭಾಷೆ

ಸಂಸಾರ ದಂದುಗದ ಹುರಿಹಂಚಿನಲಿ ಬೆಂದು
ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ
ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ
ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು

ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು
ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು?
ಭಾವಶುದ್ಧಿಯ ಪಡೆದು ಮಿಥ್ಯತೆಯ ಕನಸೊಡೆದು
ಸತ್ಯಶಿವ ಸೌಂದರ್ಯಗಳನರಿತು ಹಾಡುವುದು?

ಶರಣ ಸಂದೇಶದಪರಂಪಾರ ಜಲಧಿಯಲಿ
ಮುಳುಗಿ ಕಾಣಲ್ಲಿಹುದು ವಚನ ರತ್ನದ ರಾಶಿ;
ಬೆಳಗಿನೊಳಗಿನ ಮಹಾ ಬೆಳಗಿನಿಂದುದ್ಭವಿಸಿ
ಘೋಷಿಸುವದೊಂದು ನುಡಿ ನವಖಂಡ ಪೃಥ್ವಿಯಲಿ:

“ಎಲೆ ದೇವ ನಿನ್ನದಿದೆ ಕೊಲುವೆನೆಂಬುವ ಭಾಷೆ
ಆದರಿದೊ ಭಕ್ತನದು ಗೆಲುವೆನೆಂಬುವ ಭಾಷೆ”
*****