ಸುಮ್ಮನಿರಲಾಗದ್ದು

ಚಿತ್ರ: ಆಂದ್ರಿ ತೇಗರ ಮಹರ್‍ದಿಕ

ಈಗಲೂ ನಡುರಾತ್ರಿ ಒಮ್ಮೊಮ್ಮೆ ಅದು ನೆನಪಾಯಿತೆಂದರೆ ನರ್ಮದಾ ಬೆಚ್ಚಿ ಬೀಳುತ್ತಾಳೆ. ಸಟ್ಟಕ್ಕನೆ ಎದ್ದು ಕುಳಿತು ಅಸ್ವಸ್ಥಳಾಗುತ್ತಾಳೆ. ಯಾರೊಡನಾದರೂ ಅದನ್ನು ಹೇಳಿಕೊಳ್ಳಬೇಕು ತಾನು ಕೂಡ. ಯಾರೊಡನೆ?

ಏನಿಲ್ಲ, ಅದೇ. ಆ ಹೆಂಗಸು ಅವತ್ತು ರೈಲು ಹೊರಡುವಾಗಲೇ ಹತ್ತಿ ಛುಪ್ಪನೆ ಕುಳಿತಿದ್ದಳಲ್ಲ ಅವಳು. ಬರೀ ಶಿಲೆಯಂತೆ ಇದ್ದಳು. ಕತ್ತಲೆಯಲ್ಲಿ ಕಂಡರೆ ಮೆಟ್ಟಿಬೀಳುವಂತೆ. ಆದರೆ ಕೆಟ್ಟವಳಂತೆ ಅನಿಸುತ್ತಿರಲಿಲ್ಲ…..ಈಗಲೂ ಅವಳನ್ನು ಕೆಟ್ಟವಳೆನ್ನುವುದು ಹೇಗೆ? ಅವತ್ತು ಅವಳು ಏನನ್ನೋ ಹೊಟ್ಟೆಯೊಳಗೆ ನುಂಗಿ ಕೈಕಟ್ಟಿ ಕುಳಿತವಳಾಗಿ ನಿಗೂಢ ಕಂಡದ್ದಂತೂ ಹೌದು.

ಒಳಗೆ ಹೋಗಿ ಕುಳಿತ ಮೇಲೆಯೂ ಗಂಡ ಹೇಳುತ್ತಲೇ ಇದ್ದ. “ನರ್ಮದಾ ಹೋದ ಕೂಡಲೇ ಟೆಲಿಗ್ರಾಂ ಕೊಡು.”

“ಹೂಂ.”

“ಬೇಡ. ತಲುಪುವವರೆಗೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಟೆಲಿಗ್ರಾಂ ಕೊಡುತ್ತಾ ಹೋಗು ಎಲ್ಲಿದ್ದೀ ಅಂತ.”

“ಹೂಂ!”-ನಗೆ ಇಬ್ಬರಿಗೂ. “ಮೊನ್ನೆ ಮೊನ್ನೆ ಮದುವೆಯಾದವರ ಹಾಗೆ ಮಾಡುತ್ತೀರಲ್ಪ್ಪ. ಅಷ್ಟಿದ್ದವರು ಒಬ್ಬಳನ್ನೇ ಕಳಿಸಬಾರದು. ಬನ್ನಿ ನೀವೂ.”

“ಇಲ್ಲ. ನೀನು ಹೋಗಿ ಬಾ. ಮಕ್ಕಳು ಬಿಡಲಿಲ್ಲ ಅಂತ ಕೂತುಕೋ ಬೇಡ. ಮದುಮಕ್ಕಳಿಗೆ ವಿಶಸ್ ತಿಳಿಸು.”-ಒಳಗಿದ್ದವ ಹೊರಗೆ ನಿಂತ. ಹೊರಗಿಂದ ಒಳಗಿಂದ ಎಲ್ಲ ಪ್ರೀತಿಯೇ ಆದವ. ಆತ ಹೊರಡುವ ವರೆಗೂ ಈ ಹೆಂಗಸು ತನ್ನ ಕಣ್ಣಿಗೆ ಬಿದ್ದೇ ಇರಲಿಲ್ಲ. ಬಿದ್ದಿದ್ದರೂ ತಾನಾಕೆಯ ಇರವನ್ನು ಅಷ್ಟು ತೀವ್ರವಾಗಿ ಗ್ರಹಿಸಿರಲಿಲ್ಲ.

ರೈಲು ಹೊರಟಿತು. ಆತ ಮರೆಯಾದ. ನರ್ಮದಾ ನಿಧಾನವಾಗಿ ತನ್ನ ಕಂಪಾರ್ಟ್‌ಮೆಂಟಿಗೆ ಹೊಂದಿಕೊಳ್ಳುತ್ತ ಸಾಮಾನುಗಳನ್ನು ಸೇರಿಸಿಡುತ್ತಾ ಇದ್ದಳು. ಆತ ಹೋದ ಮೇಲೆ ಸಹಜವಾಗಿ ಕವಿಯುವ ಖಾಲೀಪನವನ್ನು ಅನುಭವಿಸುತ್ತ ಮತ್ತು ಅದನ್ನು ಮೀರಿ ಯಥಾವತ್ತಾಗಲು ಯತ್ನಿಸುತ್ತ.

ಆಗಲೇ ಆ ಹೆಂಗಸು ಸರಿಯಾಗಿ ಕಾಣಿಸಿದ್ದು. ನೋಡುತ್ತ ನೋಡುತ್ತ ಆ ಕಣ್ಣುಗಳನ್ನು ಎಲ್ಲಿಯೋ ಕಂಡಿದ್ದೇನೆ ಎನಿಸಿತು. ಎಲ್ಲಿ ಕಂಡಿರಬಹುದು? ಯೋಚಿಸಿದಷ್ಟು ಕದಡಿದಂತಾಗಿ ಕಕ್ಕಾಬಿಕ್ಕಿಯಾದಳು. ಕಣ್ಣು ಅಂದರೆ, ಕಣ್ಣು ಅಲ್ಲ, ಕಣ್ಣಿನೊಳಗಿನ ದೃಷ್ಟಿ-ಪರಿಚಿತ. ಆದರೆ ಗುರುತಾಗುತ್ತಿಲ್ಲ. ಆಕೆ ಸ್ನೇಹದಿಂದ ನರ್ಮದಾಳನ್ನು ನೋಡಿ ನಕ್ಕಳು.

“ನಾನು ಒಬ್ಬಳೆ ಅಂತಿದ್ದೆ. ನೀವು ಸಿಕ್ಕಿದ್ದು ಒಳ್ಳೆಯದಾಯಿತು.”

“ನನಗೂ.” ಎಂದಳು ನರ್ಮದಾ. ಅವಳಿಗೆ ಹಾಗೇನು ಅನಿಸದಿದ್ದರೂ. ಅಭ್ಯಾಸಬಲ! ಆ ಹೆಂಗಸು ಸೀರೆಯುಟ್ಟಿದ್ದರೂ ಅದು ಸೀರೆಯಲ್ಲ ಎನ್ನುವಷ್ಟು ಬಿಗಿಯಾಗಿ ಕುಳಿತಿದ್ದಳು. ಅವಳ ಮೈಯೇ ಹಾಗೆ. ಅಡ್ಡ ಅಗಲ ಹಲಗೆಯಂತೆ. ಅಲ್ಲಿಯೂ ಆಕಾರವಿರಲಿಲ್ಲ.

“ಬಂದದ್ದು ನಿಮ್ಮ ಗಂಡನಾ?”

“ಹೂಂ.”

“ಊರಿಗೆ ಹೋಗುವುದ?”

“ಹೂಂ.”

“ಯಾಕೆ ವಿಶೇಷವಾ?”

ಮಕ್ಕಳು ಊರಿನಲ್ಲಿದ್ದಾರೆ. ಅಜ್ಜನ ಮನೆಯಿಂದಲೇ ಶಾಲೆಗೆ ಹೋಗುತ್ತಾರೆ. ಈಗ ರಜೆ. ಅವರನ್ನೇ ಕರೆಸಿಕೊಳ್ಳಬಹುದಿತ್ತು. ಆದರೆ ತಂಗಿಗೆ ಮದುವೆ. ಹಾಗಾಗಿ ಹೊರಟಿದ್ದೇನೆ. ಮಕ್ಕಳನ್ನು ಬಿಟ್ಟಿರುವುದು ಬಹಳ ಬೇಸರ. ನಿರ್ವಾಹವಿಲ್ಲ. ಅವರ ಎಜುಕೇಶನ್ ಹಾಳಾಗಬಾರದಲ್ಲ. ಇನ್ನೇನು ಮೂರು ವರ್ಷ. ಮತ್ತೆ ನಾವು ಊರಿಗೇ ಹಿಂತಿರುಗುವವರು. ಅಷ್ಟರವರೆಗೆ ತನ್ನ ತಾಯಿ ತಂದೆಯವರೊಡನೆ ಅವರು ಇರುತ್ತಾರೆ.

-ಎಲ್ಲ ಪ್ರಶ್ನೆಗಳಿಗನುಸಾರವಾಗಿ ಒಂದೊಂದೇ ಹೇಳುತ್ತ ಹೋದಳು ನರ್ಮದಾ. ಕೇಳುತ್ತಾ ಆ ಹೆಂಗಸು ತುಸು ಗೊಂದಲಗೊಂಡಳೆ? “ಪ್ರಪಂಚದಲ್ಲಿ ಇರುವುದು ಮೂವರೇ, ಸರಿಯಾಗಿ ನೋಡಿದರೆ. ಅಪ್ಪ, ಅಮ್ಮ, ಮಕ್ಕಳು-ಅಲ್ಲ?”- ಎಂದಳು. ಮಾತು ಆಡುತ್ತಲೇ ಇದ್ದರೂ ಮಾತಿನಲ್ಲಿ ಅವಳು ಇಲ್ಲದೆ ಬೇರೆಲ್ಲೋ ತಲೆಮರೆಸಿಕೊಂಡ ಹಾಗಿತ್ತು. ಒಟ್ಟಾರೆ ಮಾತಾಡುತ್ತ ಇರಬೇಕು. ಇಲ್ಲವಾದರೆ ರೈಲು ಓಡುವುದಿಲ್ಲ ಅಂತಂದುಕೊಂಡಂತೆ.

“ನಿಮ್ಮ ಗಂಡ ಟೆಲಿಗ್ರಾಂ ಕೊಡಲು ಹೇಳುವುದನ್ನು ಕೇಳಿದೆ.” ಎಂದು ನಕ್ಕಳು. ಸಂಕಟ ಮೆತ್ತಿದಂತಹ ನಗೆ! “ಎಷ್ಟು ಹೆದರಿಕೆ ಅಲ್ಲವ ಕೆಲವು ಗಂಡಸರಿಗೆ. ಏನೇ ಹೇಳಿ. ಇಂಡಿಯಾದಲ್ಲಿ ಮಾತ್ರ ಗಂಡಸರು ಹೆಂಗಸರನ್ನು ಮಗುವಿನಂತೆ ಪ್ರೀತಿಸುತ್ತಾರೆ. ಮತ್ತೆಲ್ಲೂ ಇಲ್ಲ…..ದುಷ್ಟ ಗಂಡಂದಿರ ವಿಚಾರ ಬಿಡಿ. ಅವರನ್ನು ಹೊರತುಪಡಿಸಿ…..”ಕೊನೆಯ ಸಾಲಿನಲ್ಲಿ ದುಃಖ ನಡುಗಿ ಕುಳಿತಿತ್ತು. ಅದನ್ನು ಗಮನಿಸಿಯೂ ನರ್ಮದಾ ನುಡಿದಳು. ಗುರುತೇ ಸಿಗದ ಕಣ್ಣುಗಳನ್ನು ತಾನು ಹುಡುಕುತ್ತಿರುವುದು ಅವಳಿಗೆ ತಿಳಿಯಬಾರದು ಎಂಬ ಹುನ್ನಾರದಲ್ಲಿ, ಮಾತಿಗೆ ಶರಣಾದಂತೆ. “ಹೌದು ಆತನಿಗೆ ನಾನು ಮಗು. ನನಗೆ ಆತ ಮಗು. ದಾಂಪತ್ಯವೆಂದರೆ ಹಾಗೇ ತಾನೆ? ಹೊಸದರಲ್ಲಿ ಗಂಡ-ಹೆಂಡತಿ-ಮಗು. ಮುಂದೆ ಅವರೇ ತಾಯಿ-ತಂದೆ-ಮಗು. ವಯಸ್ಸಾದಂತೆ ಅವರೇ ಅಜ್ಜ-ಅಜ್ಜಿ-ಮೊಮ್ಮಗು! ಉಳಿದ ಸಂಬಂಧಗಳೆಲ್ಲ ಬರುತ್ತವೆ ಕಳಚುತ್ತವೆ. ಹೊಸ ಸಂಬಂಧ ಹುಡುಕಿ ಮುಂದೆ ಸಾಗುತ್ತವೆ. ಆದರೆ ದಾಂಪತ್ಯ ಹಾಗಲ್ಲ. ಸಾವಿನ ತನಕ ಮುಂದುವರೆಯುತ್ತದೆ. ಒಬ್ಬರನ್ನೊಬ್ಬರು ಅರಿತುಕೊಂಡು, ಒಬ್ಬರ ಹೆಡ್ಡತನ ಬುದ್ಧಿವಂತಿಕೆಗಳನ್ನು ಇನ್ನೊಬ್ಬರು ಅರ್ಥ ಮಾಡಿಕೊಂಡು ಒಪ್ಪಿಕೊಂಡು ಕೊಡು ಕೊಳ್ಳುತ್ತ ನಡೆದರೆ….”ನರ್ಮದಾ ಪುಟ್ಟದೊಂದು ಭಾಷಣವನ್ನೇ ಮಾಡುತ್ತ ಅವಳ ಕಣ್ಣಿನೊಳಗೆ ಹುಡುಕಿದಳು. ಆದರೆ ಆ ದೃಷ್ಟಿಯನ್ನು ನೇರ ನೋಡಲು ಆಗುತ್ತಿರಲಿಲ್ಲ. ಅದು ಮನುಷ್ಯರನ್ನೇ ತಪ್ಪಿಸಿಕೊಂಡು ಓಡುವ ಹಾಗಿತ್ತು.

“ಹ್ಞಾಂ! ಗಂಡನನ್ನು ನೆನೆದು ರೆಪ್ಪೆ ಒದ್ದೆಯಾಗಿಬಿಟ್ಟಿತಲ್ಲ!…..ನನಗೂ ಹೀಗೆಯೇ. ಒಳ್ಳೆಯದನ್ನು ನೆನೆದರೆ ಸಾಕು. ಕಣ್ಣೀರು ಬಂದಾಯಿತು. ತೀರ ಕೆಟ್ಟದ್ದನ್ನು ನೆನೆದರೂ. ನಮ್ಮ ಅಮ್ಮ ಬೆಳೆಸಿದ್ದೇ ಅಷ್ಟು ಕೋಮಲವಾಗಿ. ಯಾಕೆ?…ಅಮ್ಮನನ್ನು ನೆನೆದರೆ ಸಾಕು, ಇಲ್ಲಿ ನೋಡಿ!”-ಹನಿದು ನಿಂತ ಎಲ್ಲಿಯೂ ಏನನ್ನೂ ದಿಟ್ಟಿಸಿ ನೋಡಲಾರದ ಕಣ್ಣು. ಈ ಕಣ್ಣುಗಳನ್ನು ತಾನು ಎಲ್ಲಿಯೋ ನೋಡಿದ್ದೇನೆ. ನರ್ಮದಾ ಮತ್ತೆ ಚಡಪಡಿಸಿದಳು. ಹೆಂಗಸು ತನ್ನ ತಾಯಿಯ ಕತೆಯನ್ನು ಹೇಳಿದಳು.

ತನ್ನ ತಾಯುಯೇನು ಜಗತ್ತಿನ ಉಳಿದ ತಾಯಿಯರಿಗಿಂತ ಭಿನ್ನವೇನಲ್ಲ. ಎಷ್ಟು ಕಷ್ಟವಾದರೂ ಸರಿಯೆ, ಮಕ್ಕಳನ್ನು ಬೆಳೆಸಿ ದೊಡ್ಡ ಮಾಡಿ ನೆಲೆ ಮುಟ್ಟಿಸುವ ಛಲದ ತಾಯಂದಿರು ಎಲ್ಲೆಲ್ಲಿಯೂ ಇದ್ದಾರೆ. ಅವರ ಕಷ್ಟಗಳ ವಿವರಗಳೇ ಮಾನವಕುಲದ ಇತಿಹಾಸವೆಂದರೂ ಒಂದು ರೀತಿಯಲ್ಲಿ ಸರಿಯಷ್ಟೆ? ತನ್ನ ತಂದೆ ಬೇಗ ತೀರಿಕೊಂಡರು. ತಾಯಿ ಅನಾಥೆಯಾದಳು. ವರ್ಣಿಸಲು ಹೋದರೆ ಮುಗಿಯದಂತಹ ಕಷ್ಟಪಟ್ಟು, ಮಗಳನ್ನು ಮನುಷ್ಯಳನ್ನಾಗಿ ಮಾಡಿ, ಮದುವೆ ಮಾಡಿ ದೂರ ಕಳಿಸಿಕೊಟ್ಟಳು….ಕಡೆಯ ಕಾಲದಲ್ಲಿ ತನ್ನ ಗಂಡನ ಊರುಮನೆಯಲ್ಲಿರುವ ಪ್ರಾಪರ್ಟಿಯಲ್ಲಿನ ಒಂದು ಪುಟ್ಟ ಮನೆಯಲ್ಲಿ ಮಲಗಿಬಿಟ್ಟಿದ್ದಾಳೆ. ಏಳಲಿಕ್ಕೂ ಆಗದೆ! ತಾನು, ತನ್ನ ಗಂಡ, ಮಕ್ಕಳು ಎಲ್ಲ ದೂರದಲ್ಲಿ. ತಾನೀಗ ಬರುತ್ತಿರುವುದೇ ತಾಯಿ ಇರುವ ಊರಿನಿಂದ.

-ತಾಯಿಯನ್ನು ಬಿಟ್ಟು ಯಾಕೆ ಹೋಗುವುದು.

ನಿರ್ವಾಹವಿಲ್ಲ. ತನ್ನ ಗಂಡನಿಗೆ ಅವಳಿದ್ದರೆ ಸರಿಹೋಗುವುದಿಲ್ಲವಂತೆ. ತಾಯಿ ಮುದುಕಿ. ಸ್ವಭಾವತಃ ಸ್ವಲ್ಪ ಪಿರಿಪಿರಿ. ತಾನೇನೋ ಸಹಿಸಬಹುದು. ಆತ? ಅಷ್ಟೇ ಅಲ್ಲ, ತಾಯಿಯೇ ಊರು ಬಿಟ್ಟು ಬರಲಿಕ್ಕೆ ಒಪ್ಪುವುದಿಲ್ಲ. ಸಾಯುವ ಕಾಲ. ಬೆಳೆದ ನೆಲ….ಇತ್ಯಾದಿ ಉಂಟಲ್ಲ. ಎಂತಲೇ ತಾನು ಪ್ರತೀ ಎರಡು ತಿಂಗಳಿಗೊಮ್ಮೆ ಹದಿನೈದು ದಿನ ಊರಿನಲ್ಲಿ. ಆಕೆಗೆ ಬೇಕಾದ್ದನ್ನೆಲ್ಲಾ ಒದಗಿಸಿಕೊಟ್ಟು ಮತ್ತೆ ಗಂಡನ ಬಳಿಗೆ ಮರಳುವುದು. ತಾಯಿಗೆ ಒಬ್ಬ ನರ್ಸ್ ಇಟ್ಟಿದ್ದೇನೆ. ನೋಡಿಕೊಳ್ಳುತ್ತಾಳೆ. ಮೂರು ವರ್ಷವಾಯಿತು.

ಜಗ್ಗಾಡಿ ಸೋತು ಕುಳಿತಂತಹ ಹೆಂಗಸು. “ಪಾಪ. ಒಳ್ಳೆಯ ಪಚೀತಿ ನಿಮ್ಮದು” ಎಂದರೆ “ಹ್ಞಾಂ. ಫಚೀತಿ ಅಂತ ಹೇಗೆ ಹೇಳುವುದು. ಒಟ್ಟು….”-ನಿಟ್ಟುಸಿರು. ಆದರೂ ಅವಳ ದೃಷ್ಟಿ ಏಕೆ ತಪ್ಪಿಸಿಕೊಳ್ಳುತ್ತಿದೆ. ಏನನ್ನೋ ಬಚ್ಚಿಟ್ಟುಕೊಂಡಂತೆ. ಬಯಲು ಮಾಡದೆ ಸುಖವಿಲ್ಲವೆಂದು ಕೂಗಿ ಹೇಳಿದಂತೆ. ಬಯಲು ಮಾಡಲು ನೆಲೆ ಹುಡುಕುತ್ತ ಅಲೆದಾಡಿದಂತೆ…..!

*
*
*

ಹೊತ್ತು ಓಡಿದಂತೆ ರೈಲು ಓಡುತ್ತಿತ್ತು. ರೈಲು ಓಡಿದಂತೆ ಓಡುವ ಯೋಚನೆಗಳಿಗಂತೂ ಹಳಿಯೇ ಇರುವುದಿಲ್ಲ. ಕೊನೆಕೊನೆಗೆ ಎಲ್ಲ ಬಗೆಯ ಯೋಚನೆಗಳೂ ಸೇರಿ ಕಲಸುಮೇಲೋಗರವಾಗಿ ನಿದ್ದೆ ಸೋರಿ ಹೋಗಿ….

ಧಿಗ್ಗನೆದ್ದು ಕುಳಿತಳು ನರ್ಮದಾ. ನೋಡಿದರೆ, ಪಕ್ಕದಲ್ಲೇ ಆ ಹೆಂಗಸು! ಅಮ್ಮಾ….! ಭೀತಿಯಿಂದ ನಡುಗಿ ಉದ್ಗಾರ ಒತ್ತಿಟ್ಟುಕೊಂಡು “ಏನು, ಏನು ಬೇಕಿತ್ತು?”

ಹೆಂಗಸು ಮಾತಾಡಲಿಲ್ಲ. ಕುಳಿತೇ ಇದ್ದಳು. ಕರಿಯ ಶಿಲೆಯೊಂದು ಕಣ್ಣು ಪಿಳಿಪಿಳಿಗುಡುತ್ತ ಮಂಕು ಕುಳಿತಂತೆ. “ಏನು?…” ನರ್ಮದಾ ಅವಳನ್ನು ಅಲ್ಲಾಡಿಸಿ ಮತ್ತೆ ಕೇಳಿದಳು. ಆಕೆ ಮುಖ ಎತ್ತಿದಳು….ಆ ದೃಷ್ಟಿ ಛೆ! ಎಲ್ಲಿ ಕಂಡಿದ್ದಿರಬಹುದು? ಪಠ್ಯದಲ್ಲಿ? ಬಾಲ್ಯದಲ್ಲಿ ಕಂಡದ್ದು ಎಲ್ಲೆಲ್ಲಿ ಹೇಗೆ ಹೇಗೆ ಎದ್ದು ಬರುತ್ತದೆ ಅಂತ ಹೇಳಲಿಕ್ಕೆ ಬರುವುದಿಲ್ಲ. ಅದು ರಾಜನ ಕಿವಿ ಕತ್ತೆ ಕಿವಿ ಎಂದು ಹೇಳಿದ ಅಗಸನ ಹೆಂಡತಿಯ ಕಣ್ಣಲ್ಲವೆ? ಒಳಗಿರುವುದನ್ನು ಹೇಳಲಾರದೆ ಬಳಲಿದ ಕಣ್ಣುಗಳು? ಅವಳ ಹೊಟ್ಟೆಯ ಕಡೆಗೆ ನೋಡಿದರೆ ಅದೂ ಉಬ್ಬರಿಸಿಕೊಂಡಿರುವಂತೆ ಕಂಡಿತು. ಹೇಗಿದ್ದರೂ ಉಬ್ಬರಿಸಿಕೊಂಡಂತೆ ಕಾಣುವ ಸ್ಥೂಲತನದ ಹೊಟ್ಟೆ ಅದು.

ಜೋರಾಗಿ ನಕ್ಕಳು ನರ್ಮದಾ. “ಅಬ್ಬ. ನಿಮ್ಮನ್ನು ನೋಡಿ ಆ ಕಣ್ಣುಗಳನ್ನು ಎಲ್ಲಿಯೋ ನೋಡಿದ್ದೆ ಅಂತಲೇ. ಕಡೆಗೆ ನೋಡಿದರೆ ಅವು….ನಾನು ಮಕ್ಕಳಾಟಿಕೆಯಲ್ಲಿ ಓದಿದ ಕತೆಯದು.”

ನರ್ಮದಾ ನಕ್ಕ ರಭಸಕ್ಕೆ ಆಕೆಯೂ ನಗಬೇಕಿತ್ತು. ನಗು ಬರದೆಯೂ ನಗುವ ಅಭ್ಯಾಸವಿರುತ್ತದೆಯಲ್ಲ ಎಲ್ಲರಿಗೂ, ಹಾಗೆ. ಆದರೆ ಅಂತಹ ಅಭ್ಯಾಸ ದಾತಿದ ಒಂದು ಸ್ಥಿತಿಯಲ್ಲಿ ಮೈಮರೆತು ಕುಳಿತಂತೆ ಇದ್ದಳು ಅವಳು. ಥಟ್ಟನೆ ನರ್ಮದಾಳ ಕೈಹಿಡಿದು “ನಾನು ಹೇಳಿಬಿಡುತ್ತೇನೆ….ಹೇಳಿಯೇ ಬಿಡುತ್ತೇನೆ. ಎಲ್ಲ ಹೇಳಿಬಿಡುತ್ತೇನೆ…” ಎಂದು ಬಿಕ್ಕಲು ಸುರುಮಾಡಿದಳು.

“ಯಾಕೆ?…..ಏನು?”

“ಹೇಳಿದರೆ….ಯಾರಿಗೂ ಹೇಳುವುದಿಲ್ಲ ಅಂತ ಮಾತು ಕೊಡಿ. ಇಲ್ಲ ನಾನಿದನ್ನು ಮನೆಯಲ್ಲೂ ಹೇಳಲಾರೆ. ಗಂಡನೊಡನೆಯೂ…”

ನರ್ಮದಾ ಮಾತನಾಡದೆ ಅವಳನ್ನು ನೋಡುತ್ತಲೇ ಕುಳಿತಳು. ವರ್ಷಗಳಿಂದ ಎರಡೆರಡು ತಿಂಗಳಿಗೊಮ್ಮೆ ಮಾಡಿದ ಓಡಾಟ ಅವಳನ್ನು ಕಂಗಾಲುಗೊಳಿಸಿದಂತೆ ಇತ್ತು. ಓಡಾಟದ ಹಿಂದೆ ಎರಡು ಮನಸ್ಸುಗಳ ನಡುವಣ ಓಡಾಟ. ಈಚೆಯಿಂದಲೂ ಕಡಿಯಲಾರದ ಆಚೆಯಿಂದಲೂ ಕಡಿಯಲಾರದ ಕೊಂಡಿಯಾಗಿ ಸುಸ್ತುಸವೆದು ಕುಳಿತಿರುವ ಹೆಂಗಸು. ಏನು ಹೇಳಿಯಾಳು? ತಾನಿನ್ನು ತಾಯಿಯನ್ನು ತನ್ನ ಬಳಿ ಕರೆದೊಯ್ಯುವುದೇ ಸರಿ. ನರ್ಸ್ ಮೇಲೆ, ಅದೂ ಅವಳನ್ನು ಸಹಿಸದ ಅಳಿಯನ ಆಸ್ತಿಯಲ್ಲಿನ ಮನೆಯಲ್ಲಿ ಅವಳನ್ನು ಬಿಟ್ಟು ಬರುವಾಗ ಕರುಳು ಬೆಂದು ಹೋಗುತ್ತದೆ ಅಂತಲೇ? ಅವಳು ಬಂದರೆ ಸಿಡಿಸಿಡಿಗೊಳ್ಳುವ ಗಂಡ ತನ್ನನ್ನು ಏನು ಪ್ರೀತಿಸಿಯಾನು ಅಂತಲೇ ಅಥವಾ ತಾಯಿಯನ್ನು ಹೀಗೆ ಏಕಾಂಗಿಯಾಗಿ ಬಿಟ್ಟು ತಾವು ಪ್ರತ್ಯೇಕ ಇರುವುದನ್ನು ಗಮನಿಸುವ ಮಕ್ಕಳು ನಾಳೆ ತಮಗೆ ಏನು ಮಾಡಿಯಾವು ಎಂಬ ಭೀತಿಯೇ? ಇಲ್ಲ, ಇವು ಯಾವುವೂ ಆ ಕಣ್ಣುಗಳ ಗಾಢತೆಗೆ ಹೊಂದುವುದಿಲ್ಲ.

“ಹೇಳಿ ಅಡ್ಡಿಲ್ಲ. ಏನೇ ಇರಲಿ ಅದು, ಹೇಳಿ. ಹೇಳಿಕೊಂಡು ನೀವು ಹಗುರಾಗುತ್ತಿರಿ ಅಂತನಿಸಿದರೆ ಹೇಳಿಬಿಡಿ. ನೀವು ಯಾರೆಂತ ನನಗಂತೂ ಗೊತ್ತಿಲ್ಲ. ನಾನು ಯಾರೊಡನೆಯೂ ಹೇಳುವುದಿಲ್ಲ.”

“…ಕೇಳಿದರೆ ಏನು ಹೇಳುತ್ತೀರೋ. ಗೊತ್ತಾಯಿತಾ ನಿಮಗೆ…ರಕ್ತದ ವಾಸನೆ ಬರುತ್ತದಾ, ನನ್ನ ಮೈಯಿಂದ?…ಕೇಳಿ! ಈ ಸಲ ಊರಿಗೆ ಹೋದವಳು ಅಮ್ಮನನ್ನು ಮುಗಿಸಿಬಿಟ್ಟೆ. ಕೊಂದೆ….ಕೇಳುತ್ತಿದ್ದೀರ…ನಾನೇ ಕೊಲೆ ಮಾಡಿದೆ. ಮಲಗಿದ್ದಾಗ ಕತ್ತು ಒತ್ತಿ…ಸುಟ್ಟು ಎಲ್ಲ ಮುಗಿಸಿ ಬಂದೆ. ಇನ್ನು ನಾನು ಊರಿಗೆ ಬರಬೇಕಿಲ್ಲ. ಇಲ್ಲಿ ಯಾರೂ ಇಲ್ಲ… ಅಮ್ಮ, ನನ್ನನ್ನು ಕ್ಷಮಿಸುತ್ತಾಳೆ. ಮಾಡಿದ್ದು ಸರಿಯಾಯಿತು ಎನ್ನುತ್ತಾಳೆ. ಖಂಡಿತ, ಅಲ್ಲ?”

“ಹ್ಞಂ!”

“ಹೇಳಿ….ನಾನು ಯಾರನ್ನು ಕೊಲ್ಲಬೇಕಿತ್ತು ಅವಳನ್ನು ಬಿಟ್ತರೆ. ನನ್ನನ್ನೇ? ನನ್ನ ಗಂಡನನ್ನೇ-ಅಥವಾ ಯಾರನ್ನು?”

ಯಾವ ಊರೋ. ರೈಲು ನಿಂತಿತ್ತು. ಯಾವುದೋ ದೂರದೂರಿನಲ್ಲಿ ಇಳಿಯುವವಳು ತಾನು ಎಂದು ಹೇಳಿಕೊಂಡಿದ್ದ ಆ ಹೆಂಗಸು ಮಾತಾಡದೆ ಅಲ್ಲಾದದೆ ಬೆಪ್ಪುಗಟ್ಟಿ ಕುಳಿತಿದ್ದ ನರ್ಮದೆಯನ್ನು ಬಿಟ್ಟು ದಢದಢನೆ ಇಳಿದು ಹೋಗಿಬಿಟ್ಟಳು. ಕತ್ತಲು ಇನ್ನೂ ಇರುವಾಗಲೇ.

ಬಾಗಿಲು ಶಬ್ದವಾಯಿತು. ಮತ್ತೆ ಬಂದಳೇ? ನರ್ಮದಾ ಬೆಚ್ಚಿ ನೋಡಿದರೆ ಯಾರೋ ದಂಪತಿಗಳು. ಕೈಯಲ್ಲಿ ಮಗುವನ್ನೆತ್ತಿ ಮುದ್ದು ಮಾಡುತ್ತ ಒಳಗೆ ಬರುತ್ತಿದ್ದರು. ಮುದ್ದಾದ ಒಂದು ಪ್ರಪಂಚವನ್ನೇ ಕಂಕುಳಲ್ಲೆತ್ತಿಕೊಂಡು ಬರುವ ಹೆಮ್ಮೆಯಂತೆ….

ನರ್ಮದಾ ಸಣ್ಣಗೆ ಚೀರಿ ಕಿಟಿಕಿಯ ಸರಳನ್ನು ಗಟ್ಟಿಯಾಗಿ ಆಧರಿಸಿಕೊಂಡಳು.

ರೈಲು ಓಡುತ್ತಿತ್ತು ರಾಕ್ಷಸನಂತೆ ಊಳಿಡುತ್ತಾ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ