ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ –
ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು.
ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು :
ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು –
ಎಂಥ ಇಕ್ಕಟ್ಟಿನಲ್ಲು ಹೊರಬರುತ್ತದೆ ತುರಾಯಿ ಹಚ್ಚಿಕೊಂಡು.
ಗುಡ್ಡ-ಮರಡಿ-ಬಯಲು ಸ್ವಂತ ಸಾಮ್ರಾಜ್ಯ
ಹಿತ್ತಿಲದ ಮಾತು ಗೊತ್ತೇ ಇದೆ ;
ಅಂಗಳದ ಅಂಗುಲಂಗುಲ ಕೂಡ ಅದರದೇ ಗುತ್ತಿಗೆ.
ಹೂದೋಟದಲ್ಲಿ ಹೇಳಿಕಳಿಸಿದ ಹಾಗೆ ಹೊತ್ತಿಗೆ
ಮೊದಲೇ ಬಂದೆ ಡೇರೆ ಹೊಡೆದು ತಳವೂರುತ್ತದೆ-
ನೀರೆರೆದು ಬೆಳೆಸಿದ ಹೂವಿನ ಗಿಡಕ್ಕೆಸೆದು ಸವಾಲು ;
ಬೀಜದ ಕಸುವೋ, ಮಣ್ಣಿನ ಹಸಿವೋ –
ಮುಸುಗುಡುತ್ತದೆ ದನ ಮೇದು ಹೋದ ಮೇಲೂ.
ಕರುಣೆ ತೋರದೆ ಕುರುಪಿಯಿಂದ ಕೆತ್ತಿ ಕೆತ್ತಿ ತೆಗೆದು
ಹೊರಗೊಗೆದು ಹಸನಾಯಿತೆಂದು ಉಸಿರು ಬಿಡು –
ವಷ್ಟರಲ್ಲೇ ಕಷ್ಟದ ಮರುದಿನದ ಮುಖದಂತೆ
ಬ್ಲೇಡಿಗೆ ತಯಾರು. ನೀವಾರು, ನಿಮ್ಮ ಹೆಸರೇನು
ಕಸುಬಾವುದು-ಐದೆಸೆಯೆಲ್ಲ ಅದಕೆ ಗೊತ್ತು
ಕರಿಕೆ : ಕಜ್ಜಿಯ ತುರಿಕೆ, ಹುಲ್ಲು : ಕಾಮನಬಿಲ್ಲು
ಕಣ್ಮುಚ್ಚಿ ಬಿಟ್ಟೇ –
ಬಿಡುತ್ತದೆ ಬಾಣ : ಹೇಳಿ ಎಲ್ಲೆಲ್ಲ ಅದರ ತಾಣ?
ಇರಬಹುದು ಬಂಡೆಗಲ್ಲಿನ ಬೋಳುತಲೆ ಅಲ್ಲಲ್ಲಿ. ಅದರ
ತಳದಲ್ಲಿ ಮೆತ್ತಗೆ ಮಲಗಿರುತ್ತದೆ, ಪರೀಕ್ಷಿಸಿ ನೋಡಿ.
ಬೇಲಿದಾಟಿ ಒಳಗೆ ನುಗ್ಗುತ್ತದೆ ; ಕಾಲಕೆಳಗೇ ಬಂದು
ಜಗ್ಗುತ್ತದೆ. ಲಾನಿನ ಕ್ರಾಪು ಕತ್ತರಿಸಿದಾಗ ಮಗ್ಗುಲದಲ್ಲಿ
ಹಿಗ್ಗುತ್ತದೆ ; ಬರುಬರುತ್ತ ಒಗ್ಗಿ ಹೋಗುತ್ತದೆ.
ಮಳೆಗೆ ಹುಲ್ಲು ಮೊಳೆಯುವುದು ಮೂಲ ಪ್ರವೃತ್ತಿ, ನಿಸರ್ಗ.
ಕಳೆತೆಗೆದು ಬಿತ್ತಿ ಬೆಳೆಯುವದು ನಾಗರಿಕ ಮಾರ್ಗ.
ಮರುಭೂಮಿಯ ಮಾತುಬೇರೆ ; ಅಲ್ಲಿ ಮಳೆಯೂ ಇಲ್ಲ.
ಆದರೂ ದೂರ ಅಲ್ಲೊಂದು ಓಯಾಸಿಸ್ಸು ಉಂಟಲ್ಲ ಮಾರಾಯರೆ –
ಅದಕ್ಕೇ ಅಲ್ಲಿ ಒಂಟೆ ಮಲಗಿ ಮೆಲುಕಾಡಿಸುವದು.
*****
೧೯೮೦