ಬೇರೊಬ್ಬ

ಸುಲಭ ಲಭ್ಯವಾದ ಯಾವ ‘ಹು ಈಸ್ ಹು’ನಲ್ಲಾದರೂ
ಅವನ ಮಾಹಿತಿ ಸಿಗುತ್ತದೆ:

ಬಾಲ್ಯದಲ್ಲಿ ಕ್ರೂರಿಯಾದ ಅಪ್ಪನ ಶಿಕ್ಷೆ ಸಹಿಸಲಾರದೆ ಅವನು
ಪರಾರಿಯಾದದ್ದು
ಭಿಕಾರಿಯಾಗಿ ಅಲೆದದ್ದು, ನರಳಿದ್ದು
ಯೌವನವಿಡೀ ಹಗಲಿರುಳು ದುಡಿದು, ದಣಿದು, ಗೆದ್ದು ಖ್ಯಾತನಾಗುತ್ತ ಆಗುತ್ತ
ಸಮಾಜಕ್ಕೆ ಮಾದರಿಯಾದ ಘನವಂತನಾದದ್ದು.

ಮತ್ತೇನು ಮಾಡಿದ ಹೇಳಬೇಕಾಗಿಲ್ಲ,
ಮಾದರಿಯಾದವನು ಮಾಡಬೇಕಾದ್ದನ್ನೆಲ್ಲ ಅವನು ಮಾಡಿದ
ನದಿದಂಡೆಯ ಮೇಲೆ ಗಾಳಹಾಕಿ ಕೂತು ಮೀನು ಹಿಡಿದ
ಅಕ್ಕಪಕ್ಕದವರಂತೆ
ರಜೆಯಲ್ಲಿ ಅಪಾಯ ಲೆಕ್ಕಿಸದೆ ವರ್ಷಕ್ಕೊಮ್ಮೆ ನರಿಗಳ ಬೇಟೆಯಾಡಿದ
ತಲೆ ಸುತ್ತಿದರೂ ಹೊಸ ಬೆಟ್ಟಗಳ ಶಿಖರ ಹತ್ತಿದ.

ಅವನೇ ಪತ್ತೆ ಮಾಡಿ ಹೆಸರು ಕೊಟ್ಟ ಸಮುದ್ರದ ತೀರದ ಜಲರಾಶಿಯೂ
ಒಂದು ಇದೆ.

ಆಮೇಲೆ ಇವನ ಬಗ್ಗೆ ನಡೆದ ಸಂಶೋಧನೆಯಲ್ಲಿ ಹೊಸ ದಾಖಲೆ ಸಿಕ್ಕಿದೆ
ಪ್ರಣಯದಲ್ಲಿ ಘಾತನಾಗಿ ಇವನು
ನಮ್ಮಂತೆ ನಿಮ್ಮಂತೆ
ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜ.
ಇನ್ನೂ ಮುಖ್ಯವಾಗಿ ಸಂಶೋಧನೆಯಲ್ಲಿ ತಿಳಿಯುವುದೆಂದರೆ,
ಸಂಶೋಧಕರಿಗೇ ಅಚ್ಚರಿಯಾಗುವಂತೆ
ನಿಟ್ಟುಸಿರಿಡುತ್ತ ಅವನು ಹಂಬಲಿಸಿದ್ದು ಮಾತ್ರ ಬೇರೊಬ್ಬನಂತಾಗಲು

ಒಂದು ಸರಳವಾದ ಮನೆ
ಇಲ್ಲಿ ತನ್ನ ಪಾಡಿಗೆ ತಾನಿರುವ ಬೇರೊಬ್ಬ
ನಿತ್ಯದ ನಿರ್ವಹಣೆಗೆ ಅಗತ್ಯವಾದ ಬಡಿಗೆ ಕೆಲಸ, ಕಿಟಕಿ ಬಾಗಿಲುಗಳಿಗೆ ಬಣ್ಣ ಹಚ್ಚುವ ಕೆಲಸ, ವಿದ್ಯುತ್‌ ಉಪಕರಣಗಳ ದುರಸ್ತಿ ಕೆಲಸ, ಅಡುಗೆಮನೆಯ ಚಾಕು ಚೂರಿಗಳನ್ನು ಹುಷಾರಾಗಿ ಉಜ್ಜಿ ಹರಿತ ಮಾಡುವ ಕೆಲಸ, ಸವೆದ ಪ್ಯಾಂಟುಗಳಿಗೆ ಸೂಜಿಯಲ್ಲಿ ನೀಟಾಗಿ ತೇಪೆ ಹಾಕುವ ಕೆಲಸ-ಇತ್ಯಾದಿಗಳನ್ನು ಖುಷಿಯಲ್ಲಿ ಸಿಳ್ಳೆ ಹಾಕುತ್ತ ನಾಜೂಕಾಗಿ ತಾನೆ ಮಾಡಿಕೊಳ್ಳುತ್ತಾನೆ. ಕೈದೋಟದಲ್ಲಿ ಕಳೆ ಕೀಳುತ್ತಲೋ, ಸಸಿ ನೆಡುತ್ತಲೋ, ಅದು ಇದು ಮಾಡುತ್ತ ಹೊತ್ತು ಕಳೆಯುತ್ತಾನೆ. ಏನೂ ಮಾಡದೆ ಸುಮ್ಮನೆಯೂ ಇರುತ್ತಾನೆ.

ತನಗೆ ಬಂದ ಉದ್ದುದ್ದನೆಯ ಮೆಚ್ಚುಗೆಯ ಪತ್ರಗಳನ್ನು ಓದಿ ಕೆಲವಕ್ಕೆ
ಉತ್ತರ ಬರೆಯುತ್ತಾನೆ.
ಆದರೆ ಇವನ್ನು ಜೋಪಾನ ಮಾಡಲು ಹೋಗುವುದಿಲ್ಲ.
*****
(ಡಬ್ಲ್ಯು.ಹೆಚ್. ಆಡೆನ್ ಪದ್ಯವೊಂದನ್ನು ಆಧರಿಸಿ, ಮೂಲ: Who’s Who)