ಬೇಲಿಯ ಮೇಲಿನ ನೀಲಿಯ ಹೂಗಳು

ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ

ಮುಂಜಾವದಲಿ ಬೇಲಿತುಂಬ ನೀಲಿಯ ಹೂವು
ಜೀವನೋತ್ಸಾಹದಲಿ ಎದೆದುಂಬಿಸುವ ರೂಹು!

ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ

ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿ
ತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!
(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು)

ಎಲ್ಲ ಒಂದೇ ಅದಕೆ-ತೋಟ ಬೇಲಿಯಕಳ್ಳಿ
ಬಿಸಿಲು ಬಲಿಯುವ ಮುನ್ನ ಬಗೆಗೊಂಡ ಸೌಜನ್ಯ

ಮುಖವ ಸಣ್ಣದು ಮಾಡಿ ಮುದುಡಿಕೊಂಡಿರೆ ಜೀವ
ಬರಿಯ ನೆನಪಿಗೆ ಉಳಿದ ದೇಟಿಗಂಟಿದ ಹೂವ

ಬದಿಬದಿಗೆ ನಾಳೆಯರಳುವ ಮೊಗ್ಗೆ ಮೂರ್‍ಧನ್ಯ!

ವಿಮಲ ಕೋಮಲ ಕಾಂತಿಯೊಗುಮಿಗುವ ಚೈತ್ಯಾಕ್ಷಿ
ಅದೊ ಅಲ್ಲಿ ಇದೊ ಇಲ್ಲಿ ಪ್ರತ್ಯಕ್ಷ ಸುಮಸಾಕ್ಷಿ!

ಕೀಲಿಕರಣ: ಎಂ ಎನ್ ಎಸ್ ರಾವ್
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ