– ೧ –
ಅಮೇರಿಕ ಅಮೇರಿಕ
ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ
ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ
ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ
ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ
ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ –
ಲಿಂಕನ್ ಕೆನಡಿ ಕಿಂಗರ ಚಹರೆಗಳ ಕಂಡು
ನುಡಿ ಎಡವಿ ಕೈಮುಗಿದು ಬೆಪ್ಪಗಾಗುತ್ತೇನೆ.
ಕಮ್ಯುನಿಸ್ಟ್ ನಾಜಿಗಳ ತುಳಿವ ಹುಲು ನೆವದಲ್ಲಿ
ಲೈಫ್ ಟೈಮುಗಳ ದ್ವಾರ ಸ್ವಪ್ರತಿಷ್ಠೆಯ ನೀನು
ಮೈಥುನಿಸಿದಾಗೆಲ್ಲ ಕ್ಯಾಕರಿಸಿ ಉಗಿದು ವೋಡ್ಕಾ ಹೀರಿ
ಕ್ಯಾಸ್ಟ್ರೊ ಡಿಗಾಲ್ ಹೋಚಿಮಿನ್ ನಾಸೆರರ ಜೊತೆ
ಹರಟುತಿರುವಾಗ –
ಚೀಣ ಪಾಕ್ ದಾಳಿಗಳ ಚೂರಿ ಸ್ಮೃತಿಯನು ತಿವಿದು
ಆರು ಸಾವಿರ ಮೈಲಿಯುದ್ಧದಭಯದ ನಿನ್ನ
ಸ್ನೇಹ ಹಸ್ತವ ಕಂಡು ತೆಪ್ಪಗಾಗುತ್ತೇನೆ.
– ೨ –
ಸಭ್ಯತೆಯ ಧ್ವಜವನಂಪೈರ್ ಸ್ಟೇಟು ಕಟ್ಟಡದ ಮೇಲೆ ತೂಗಿಸಿದಾಗ,
ನೈಟ್‌ಕ್ಲಬ್ಬು ಬೀಚಿನಲಿ ಗಂಡಲೆವ ಕಣ್ಣುಗಳ ನಾಟ್ ನಾಟ್ ಸೆವೆನ್ನುಗಳ
ಹಾಲಿವುಡ್ ಬೀಟ್ ಟ್ವಿಸ್ಟು ಕ್ಯಾನ್‌ಕ್ಯಾನು ರೋಗಿಗಳ ಮಾನಸಿಕ
ಲಾಗಗಳ
ಗಾಂಜ ಮಾರೀವಾನ ಎಲ್ಲೆಸ್ಡಿ ಪಿಲ್ಲುಗಳ ಹಾಗೆ ಎಪ್ಫೆಲ್ಲುಗಳ
ತೀಟೆಗಳ ಕಳ್ಳಕೂಟಗಳ ಗಳಿಗೆಗಿಪ್ಪತ್ತೈದು ಸೋಡಚೀಟಿಗಳ
ಕಂಡು ಕೈ ಚಪ್ಪಾಳೆ ತಟ್ಟಿ ಲೋಕಕ್ಕಿವನು ಸಾರುವಾಸೆ –
ಲೋಕದೆಡೆ ಮೊಗಮಾಡಿ ಬೆಂದಿರುಹಿ ನಿನ್ನತ್ತ
ನಿಂತ ದೇವಿ ಲಿಬರ್ಟಿಯನ್ನು ತಿರುಗಿಸಿ ಹಿಂದೆ
ನಿನ್ನೆದೆಯ ಸ್ಲಮ್ಮುಗಳ ನೀಗ್ರೊ ಹೇರ್ಲಮ್ಮುಗಳ
ಕಡೆಗವಳ ದಿಟ್ಟಿಯನು ಹರಿಸುವಾಸೆ –
ಹುಟ್ಟುಹಬ್ಬಕೆ ಹಸುಳೆಗೆಂದು ನಿನ್ನವರೀವ
ಟಾಮಿಗನ್ನಿನ ಕೊಡಿಗೆಗಳ ಬಿಸುಡಿ, ಬೈಬಲ್ಲು
ಗೀತೆ ಖುರ್‌ಆನುಗಳ ನೀಡುವಾಸೆ –
ನಿನ್ನವರ ಮಲಗೆದ್ದ – ಬೆಡ್‌ಶೀಟು – ಮೊಗಗಳಿಗೆ
ಪ್ರಾಚ್ಯಋಷಿಗಳ ತೇಜ ತೊಡಿಸುವಾಸೆ –
ಜಾನ್ಸನಿನ ಹಣೆಯಲ್ಲಿ ಗೆರೆಯಾದ ಉಬ್ಬುಗಳ
ಬಿಗಿದಿರುವ ಹುಬ್ಬುಗಳನಿಸ್ತ್ರಿಗೊಳಿಸುತ, ತುಟಿಗೆ
ನೆಹರು ರೋಜದ ನಗೆಯ ತೀಡುವಾಸೆ.
– ೩ –
ಅಮೇರಿಕ, ಅಮೇರಿಕ
ನಿನ್ನ ಬಲದ ಬಡಾಯಿ ಕೊಚ್ಚುತಿರುವಾಗೆಲ್ಲ
ವಿಯಟ್ನಾಮಿನಲಿ ರಾಷ್ಟ್ರೀಯ ವೀರ ದಳ ಮೊರೆದೆದ್ದು
ತಿಗಣೆಯುಜ್ಜುತ್ತಿರುವ ಹರಯದುತ್ಸಾಹಗಳ
ಸರ್ಕಾರಗಳ ಮುರಿದು, ನಿಲಿಸಿ ಹೌದಪ್ಪಗಳ
ಹೆಣಗಿ ಸೋಲುತ್ತಿರುವ ಸಿ.ಐ.ಎ., ಸಂಸ್ಥೆಗಳ
ಏರಿದೊಡನೆಯೆ ಬಿದ್ದು ಮಣ್ಣಾದ ಕ್ಷಿಪಣಿಗಳ,
ಚಂದಿರನ ಏಣಿಗಳ
ಕಡೆ ನಿನ್ನ ಕಿವಿ ಹಿಂಡಿ ತಿರುಗಿಸಲೆ ಎಂದಾಗ
ಗೋಧಿಯ ಋಣ, ಪಿ.ಎಲ್.೪೮೦ರ ಹಣ,
ವಿದೇಶಾಂಗ ನೀತಿ ಕಟ್ಟುವುದು ಬಾಯ.
– ೪ –
ನಿನ್ನ ಸಮಕಿನ್ನೊಂದು ರಾಷ್ಟ್ರವಿಲ್ಲದ್ದನ್ನ
ಆನೆ ಬಿದ್ದರೂ ಕುದುರೆಯಷ್ಟು ಅನ್ನುವುದನ್ನ
ನುಂಗಿ, ತುಟಿಗಳ ಹೊಲಿದು ಸುಮ್ಮನಾಗುತ್ತೇನೆ;
ನಿನಗೆ ಬಾಗುತ್ತೇನೆ.
ಸದ್ದಿರದೆ ಸುದ್ದಿಯಲಿ ನನ್ನ ಕಬಳಿಸುತಿರುವ
ನಿನ್ನ ಉತ್ಕರ್ಷಕ್ಕೆ ಕರುಬಿ ಹಳಿದಾಗೆಲ್ಲ –
ನನ್ನ ಕಡು ದಾರಿದ್ರ್ಯ
ಜನಸಂಖ್ಯೆ
ಭೂಗೋಳ
ನಾಲಗೆಯ ನಿಲಿಸುತ್ತವೆ;
ತಾಳ್ಮೆ ಪಾಠವನೆನಗೆ ಕಲಿಸುತ್ತವೆ.
*****