ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ!
ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ
ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ-
ಇಲ್ಲದಿರೆ ಎಂದೆಂದು ಈ ಪತನ ಈ ನೋವೆ.
ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ-
ಧಾರಕರ, ಮಾರಕರ, ಜಾತಿಮತ ಲುಬ್ಬಕರ.
ನೀನೊಮ್ಮೆ ಸಿಡಿಲಾಗಿ ಗರ್ಜಿಸಲು ಅಂತಹರ
ಪಾಡೇನು? ನಿನ್ನ ಮೊಗ ಮಗುದೊಮ್ಮೆ ಸಂತೋಷ
ಲಹರಿಯಲಿ ತೇಲುವುದ ಕಾಂಬೆವೇ? ನವವೇಷ
ಧಾರಿಣಿಯೆ, ನುಡಿ ಶಿಲ್ಪ ಸಂಸ್ಕೃತಿಯ ರೂಪಿಣಿಯೆ
ಕವಿವರ್ಯ ಧರ್ಮಾತ್ಮ ಧೀರಗುವರರ ತಾಯೆ
ಉಕ್ಕುತಿಹುದಿಂದಿದೋ ಒಕ್ಕೊರಲಿನುದ್ಘೋಷ;
ಎಂದು ಸಿರಿಗನ್ನಡದ ನಾಡಿನೇಕೀಕರಣ-
ಅಂದು ನವಭಾರತದ ಬಾಗಿಲಿಗೆ ತೋರಣ.
*****