ದೀಪಾವಳಿ

ಹತ್ತಿರಿದ್ದರು ದೂರ, ಹೃದಯ ಗಹ್ವರದಲ್ಲಿ
ಮಿಣಿ ಮಿಣಿ ಎನುವ ಪಣತಿ,- ನಮ್ಮ ಜೀವದ ಗಣತಿ,
ಹೊಮ್ಮಿ ಹೊಡಕರಿಸಿದರೆ ಹೊಸ ಬೆಳಕಿನಾಕೃತಿ.
ಇಡಿಯ ವರುಷದ ಹರುಷ ಆಕಾಶಬುಟ್ಟಿಯಲಿ-
ಬಣ್ಣದೊಟ್ಟಿಲದಲ್ಲಿ ಕಣ್ಣು ತುಂಬುವ ಕಂದ.

ಎರೆ ಹೊಲದ ಎದೆ ಅರಳೆ-ಬೆಳ್ಳಿಯಾಯಿತು ಮಣ್ಣೆ,
ಹಗಲಿರುಳ ಗಾಣದಲಿ ಹಿಂಡಿ ಬಂದಿರುವೆಣ್ಣೆ-
ಲಕ್ಷದೀಪದ ಕುಡಿಗೆ ಬೆಳಕು-ಮುಡಿ, ಬಿಸವಂದ.
ಹಿಂದೆ ಚಾಚಿದ ನೆರಳು (ಬೆಳಕು ಬಾಚಿದ ಹೆರಳು)

ಕೈಗೆ ದೀಪವು ಸಿಗಲು ಕತ್ತಲೆಯ ಹುಡುಕುವರು.
ಚಿಗುರು-ಹೂ-ಹಣ್ಣುಗಳ ತಳದೊಳೆಲ್ಲಿಯೊ ಬೇರು.
ಆಚೆ ಹೊರಳಿದ ಪೃಥ್ವಿಗೋಳದ ಒಂದು ಹೋಳು.
ಕಲ್ಲಾಗಿ ನಿಂತಿರುವ ಹೆಣ್ಣು, ದೀಪದ ಮಲ್ಲಿ-
ಬಿಲ್ಲು ಬಾಣವ ತೊಟ್ಟು ಹೊರಟವನ ಗುರಿಯೆಲ್ಲಿ?
*****