ಕೊನೆಯ ಎಚ್ಚರಿಕೆ !


ಏಸುಕ್ರಿಸ್ತ ಏಸು ಬುದ್ಧ
ಏಸು ಬಸವ ಬಂದರೂ,
ತಮ್ಮ ಅಂತರಂಗವನ್ನೆ
ಲೋಕದೆದುರು ತೆರೆದರೂ
ನಶ್ವರದಲಿ ಈಶ್ವರನನು
ಕಂಡು ಜಗದ ಕಲ್ಯಾಣಕೆ
ಎದೆಯ ಪ್ರಣತಿ ಜ್ಯೋತಿಯಲ್ಲಿ
ದಯೆಯ ತೈಲವೆರೆದರೂ,
ಪುಣ್ಯ ಪುರುಷ ಗಾಂಧಿ ತಂದೆ
ನೆತ್ತರಲ್ಲಿ ನಾಂದರೂ

ನೀನು ಮಾತ್ರ ಬೋರ್ಕಲ್ಲೆಲೆ ಪೆಡಂಭೂತನಂತಿಹೆ!
ಮತ್ತೆ ಹೊಲಸು ಕೆಸರಿನಲ್ಲೆ ಮತ್ತನಂತೆ ಬಿದ್ದಿಹೆ;
ತೊಳೆದು ಹೋಗಲಿಲ್ಲವಿನ್ನು ನಿನ್ನ ಮನದ ಮೈಲಿಗೆ
ಬರುವದಿಲ್ಲೆ ನಾಚಿಗೆ?

ಮೇಲೆ ಅಹಾ! ಥಳಕು ಬೆಳಕು
ಒಳಗಸಹ್ಯ ಕೊಳಚೆ ಕೊಳಕು
ದುರಾಚಾರ ದುರುದ್ದೇಶ
ದುರ್ನೀತಿಯ ಹೊಲೆಯಿದೆ;
ಡಾಂಭಿಕತೆಯ ಮುಸುಗಿನಲ್ಲಿ
ಬೂಟಾಟಿಕೆಯಾಟವಲ್ಲಿ;
ನೀತಿಯೆಂಬ ಹೆಸರಿನಲ್ಲಿ
ಹುಚ್ಚು ಹೊಳೆಯ ಹಸುರಿನಲ್ಲಿ
ಅಹಂಕಾರ ಹೂಂಕಾರವ-
ಗೈವ ದುರುಳ ಕರುಳಿನಲ್ಲಿ
ಮೋಸವಲ್ಲಿ ನೆಲಸಿದೆ!
ಬಲ್ಮೆ ಸುಲಿಗೆ ನಡೆಸಿದೆ!
ಗುಣವಿಹೀನ ನಿನ್ನ ರೂಪ
ಬಿಸಿಲ ತಾಪ, ವಿಷದ ಕೂಪ
ರೊಚ್ಚಿಗೆದ್ದು ಕೊಡಲು ಶಾಪ
ಅಯ್ಯೊ ಪಾಪ ಎನಿಸಿದೆ.

ನಗುವ ಹುವ ಹೊದರಿನಲ್ಲಿ ಹಾವು ಹುತ್ತ ಕಟ್ಟಿದೆ
ವಿಷದ ಹೊಗೆಗೆ ದೀನ ಜನರ ಉಸಿರು ಕಟ್ಟಿ ಬಿಟ್ಟಿದೆ
ಎತ್ತ ನೋಡಿದತ್ತ ಕುತ್ತು ಕಾಲು ಕೆದರಿ ನಿಂತಿದೆ
ಕರುಣೆಯೊಡಲು ಕುಸಿದು ಬಿದ್ದ ಜ್ವಾಲಾಮುಖಿಯಂತಿದೆ!


ದೊಡ್ಡ ಜನರ ದೊಡ್ಡಸ್ತಿಕೆ
ಹೊಗಳು ಭಟರ ಡಬಡ್ಡಳಿಕೆ
ಅನ್ಯಾಯದ ದಬ್ಬಾಳಿಕೆ
ಹೇಳು ಕ್ರೂರಿ ಏತಕೆ?
(ಸ್ವಲ್ಪ ಜನರ ಸಂತೋಷಣಕೆ!)
ನರಗೆ ನರನ ರಕ್ತ ರುಚಿಯೆ?
ಶೋಷಣೆಯಿದು ನಿನಗೆ ಶುಚಿಯೆ?
ಹೇ! ಸಮಾಜಪಾತಕಿ
ಕಪಟ ವೇಷ ನರ್ತಕಿ!
ನಿನ್ನ ಲಾಸ್ಯ ಹಾಸ್ಯದಲ್ಲಿ
ಕುಡಿತ ಮೆರೆತ ಕೇಕೆಯಲ್ಲಿ
ಉದರಭರಣಕಾಗಿ ಹರಣ
ಕೊಡುವ ಈ ದುರಂತ ಮರಣ
ಚರಮ ಗೀತ ಕೇಳದೆ?

ಅಂಜುಬುರುಕರೆಂದು ಕಪ್ಪೆ ಚೆಲ್ಲಿ ಮೋಜು ನೋಡುವೆ
ಮುಗ್ಧ ಕುಸುಮಕೋಮಲೆಯರ ರುಂಡಮಾಲೆ ಸೂಡುವೆ!
ನಿಷ್ಕಲ್ಮಷ ಎದೆಗಳನ್ನೆ ಹತ್ತಿ ತುಳಿದು ಹಿಂಡುವೆ
ಧೀರರೆಂದು ಕಂಡು ಬರುವ ಮೊದಲೆ ಜೀವ ಹೀರುವೆ!

ಕೈಯ ತುತ್ತು ಕಸಿಯುವೆ
ಮತ್ತೆ ಹಲ್ಲು ಮಸೆಯುವೆ
ಪದೇ ಪದೇ ಅದೇ ರೀತಿ
ಅದೇ ನೀತಿ ಎನ್ನುವೆ,
ಹಳಸಿ ಹೋದ ತತ್ತ್ವಗಳನೆ
ಮೆದುಳಿನಲ್ಲಿ ತುರುಕುವೆ,
ಎಂದಿನಂತೆ ನಿನ್ನ ಭೂಮ
ಹೊಟ್ಟೆ ಹೊರೆದುಕೊಳ್ಳುವೆ!


ಹಗಲು ಇರುಳು ಅರಳು-ಮರಳು
ಇದ್ದು ಬಿದ್ದ ಜೀವಕುರುಲು!
ನಿನಗೆ ಹಿಡಿದ ಒಳರೋಗಕೆ
ಸೂಜಿ ಮದ್ದು ಸಾಲದು!
ಬೇಕು ಅದಕೆ ಮಾಚಿಕಿತ್ಸೆ
ಒಲ್ಲೆನೆಂದರಾಗದು!
ಉಸ್ಸೆನ್ನುವ ಜನದುಸಿರಿಗೆ
ಬುಸ್ಸೆನ್ನುತ ಹಡೆಯನೆತ್ತಿ
ಕಚ್ಚಿ ವಿಷವ ಕಾರುವೆ!
ಹಾಲನುಣಿಸಿ ಹಿತದ ಮಾತ
ಹೇಳಿದವರ ಮರೆಯುವೆ
ಧರ್ಮಾಂಧರ ಹಣವಂತರ
ಬೆನ್ನು ಕಟ್ಟಿ ಗುಣವಂತರ
ಬಡಿವ ಭೂತ ಬೆಂತರ!
ರಕ್ತ ಕೋಡಿ ಹರಿಸಿದೆ,
ಮಂತ್ರದರ್ಥವರಿಯದಯ್ಯೊ
ಮೂಢ ಸಂತೆ ನೆರೆದಿದೆ!
ಮಡಿಯ ಮಾಡಿ ಉಡುವೆನೆಂದು
ಬೊಗಸೆ ನೀರು ಸುರುವಿ ಕೊಳಕು
ಪಂಚೆ ತೊಳೆದ ಮಾತ್ರಕೆ
ಅಚ್ಚ ಹಸನುಗೊಳಿಸದಿರಲು
ಮನಕೆ ಶುಭ್ರವೆನಿಸದಿರಲು
ಮಡಿಯಾಯಿತೆ ಪೂಜೆಗೆ?
ಅದರೊಳುಳಿದ ಜಿಡ್ಡಿನಂತೆ
ನೀನು ಕೂಡ ಮಡ್ಡನಂತೆ
ತಿಳಿಯೊ ಮೊದಲು ತತ್ತ್ವವ
ಅದರ ಮೂಲ ಸತ್ತ್ವವ!


ಅಧಿಕಾರದ ಅಮಲಿನಲ್ಲಿ
ಮೂಢ ಜನರ ಬೆಂಬಲದಲಿ
ಹೆಸರು ಪಡೆವ ಹಂಬಲದಲಿ
ಅರಿಯದಂಥ ಕುನ್ನಿಗಳನು
ನುಂಗಿ ನೀರು ಕುಡಿದಿಹೆ!
ತೀರಲಿಲ್ಲ ಆ ಪಿಪಾಸೆ
ಟೊಣೆಯುತಿರುವ ಈ ದುರಾಶೆ-
ವಿಶ್ವಪ್ರೇಮ ದಿವದ ಬಯಕೆ-
ಗೆಲ್ಲ ಕೀಲಿ ಜಡಿದಿಹೆ!
ನೊಂದರೂನು ಕರುಣೆ ಬಂದು
ಪರಿಪರಿಯಲಿ ಹೇಳುವೆ;
ಕೇಳಲಾರೆಯಾದರಿನ್ನು
ಭೀಮಗದೆಯನೆತ್ತುವೆ!
ನೂರು ದೂರು ಕೇಳುತಿರುವೆ
ನಿತ್ಯ ನಾನೆ ನೋಡುತ್ತಿರುವೆ

ಇನ್ನು ಬರಿದೆ ತಾಳಬಹುದೆ ಇಂಥ ನರಕಯಾತನೆ
ಕಣ್ಣಮುಂದೆ ನಡೆಯುತ್ತಿರಲು ಋತದ ಶಿವದ ಭರ್ತ್ಸನೆ!
ಎನಿಸು ಕಾಲ ನಡೆಸಬಹುದು ಘೋರ ಆತ್ಮವಂಚನೆ
ಅದಕೆ ಕೊಡುವೆನಿಂದು ಕೊನೆಯ ಎಚ್ಚರಿಕೆಯ ಸೂಚನೆ;

ಹರೆಯದೇರು ಗರುವದಲ್ಲಿ
ಉದ್ರೇಕದ ಮಬ್ಬಿನಲ್ಲಿ
ಕೈಲಾಗದ ಕನಸನುಂಡು
ಮೈಯನೆಲ್ಲ ಪರಚುತಿರುವೆ
ಕನಲಿ ಕೆಂಡವಾಗುತ್ತಿರುವ
ಅಪ್ರಬುದ್ಧ ಬುದ್ಧಿಹೀನ-
ನೆಂದು ಹಳಿಯಬಹುದು, ತುಳಿಯಬಹುದು ಆದರೆ-
ಅರಿವು ಮರವೆಯಾದರೂ
ನಾವು ನೀವು ಅಳಿದರೂ
ಉಳಿದೆವೆಂದು ತಿಳಿದರೂ

ಸತ್ಯವೊಂದು ನಿತ್ಯವಾಗಿ ಗೆಲ್ಲುವದೋ ಬಾಳನು!
ಪಂಜು ಹಿಡಿದು ಹೊರದೆಗೆವುದು ಕೆಟ್ಟ ಕೀಳು ಕಿಲುಬನು!
ಪಾಳ್ಮಸಗಿದ ನೆಲದೊಳಂದು ಮಾಮಸಕವೆ ನಡೆವುದು
ಭೂತ ವರ್ತಮಾನ ನಡೆದ ಕಥೆಯನಲ್ಲ ಪೇಳ್ವುದು.

ಹೊಸತು ಬಾಳ ಹೊಸತಿಲಲ್ಲಿ ಅದೋ ಯುವಕ ವೃಂದವು
ಕೋಟಿ ಹೃದಯ ನಾಟಿ ತಂತ್ರಿ ಮೀಟಿ ಬರುವ ಬಯಕೆಯು
ಒಳಗೆ ಕುದ್ದು ಕುದ್ದು ಅದನೆ ಮೆದ್ದ ಉಗಿಯ ಶಕ್ತಿಯು

ಬೆಂಕಿಯಾಗಿ ಚಿಮ್ಮಿ ನಿನ್ನ
ಜ್ವಾಲೆಯಾಗಿ ಸುಡುವ ಮುನ್ನ
ಒಳಗು ಹೊರಗನೆಲ್ಲವಿಂದೆ
ತೊಳೆದುಕೋ ಸಮಾಜವೆ!
ಧ್ಯೇಯವಾದಿಗಳನು ತುಳಿಯೆ
ನಿನ್ನ ನೀನೆ ಕೊಂದುಕೊಳುವೆ
ಸುಟ್ಟು ಬೂದಿಯಾಗುವೆ!

ಕೆಲವು ಕಾಲ ಮೆರೆಯಬಹುದು ನಿನ್ನ ಉಬ್ಬಿದಬ್ಬರ
ಇಂದು ಕಟ್ಟು ಕಟ್ಟಳೆಗಳ ನಿಗಳ ಕಳಚು ಚಚ್ಚರ!
ಮಸೆದ ಗಂಡುಗೊಡಲಿ ಕೆರಳಿ ಕೊಟ್ಟ ಕೊನೆಯ ಎಚ್ಚರ!
ಎನಿತೊ ಕಾಲ ಮಣಸನರೆದ ತಲೆಯ ತಿಂದ ಬೆಂತರ!
*****