ನನ್ನವಳೀ ಶರದೃತು

ನನ್ನವಳೀ ಶರದೃತು-
ನನ್ನೆದಯೊಳೋಲಾಡಿದವಳು.
ಅವಳ ಕಾಲಂದಿಗೆಯ ಹೊಳೆವ ಗೆಜ್ಜೆಗಳು
ನನ್ನ ನರನರಗಳಲಿ ಝಣಿರು ಝಣಿರು!

ಅವಳ ಮಂಜಿನ ಮುಸುಕು
ಪಟಪಟಿಸಿತೆನ್ನುಸಿರೊಳು.
ನನ್ನ ಕನಸುಗಳಲ್ಲಿ
ಅವಳ ತಲೆಗೂದಲಿನ ಮೃದುಲ ಸೋಂಕು.

ನನ್ನ ಬಾಳನು ತುಡಿದು ಕಂಪಿಸುವ ಎಲೆಗಳಲಿ-
ಎಲ್ಲೆಡೆಗು ಹರಡಿರುವಳು.
ನೀಲ ಬಾನಿಂದವಳ ನಗುವ ಕಣ್ಣುಗಳು
ತಮ್ಮ ಬೆಳಕನು ಕುಡಿದವೆನ್ನದೆಯೊಳು.
*****
Lober’s Gift – 57