ಪೂರ್ವ ದಿಙ್ಮಂಡಲದಿ ಪುಣ್ಯವವತರಿಸುತಿದೆ-
ಪೂರ್ಣ ಚಂದ್ರೋದಯದ ರೂಪದಲ್ಲಿ;
ಪೂರ್ಣತೆಯು ಸಂಪೂರ್ಣ ಸಾಕಾರಗೊಳ್ಳುತಿದೆ-
ಪೌರ್ಣಿಮೆಯ ಪೂರ್ಣೇಂದು ವೇಷದಲ್ಲಿ.
ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ
ಬುರುಬುರನೆ ಮೇಲೆದ್ದ ಗುಳ್ಳೆಯಂತೆ,
ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ
ತಪಗೊಂಡ ಮೌನವ್ರತಧಾರಿಯಂತೆ.
ಹೊನ್ನ ಕೇದಗೆ ಹುಡಿಯ ಇಡಿಕಿರಿದು ತುಂಬಿರುವ
ಹೊಂಗನಸು ಹೂತಿರುವ ಭರಣಿಯಂತೆ,
ದುಂಡುಮೊಗ ಸುಂದರನು, ಮೂಡಿರುವ ಚಂದಿರನು-
ಬಾನು ಬುವಿಗಳ ಬಯಕೆ-ಹಣ್ಣಿನಂತೆ.
ಆನಂದ ನಂದನನೊ, ಚಂದನದಿ ಮಿಂದವನೊ
ಉದಯಗಿರಿ ಹೊಂದೇರನೇರಿದವನು;
ನಂದನದ ವನದಲ್ಲಿ ಹೂವಾಗಿ ಬೆಳೆದವನೊ
ಒಡಲಲ್ಲಿ ಸುಧೆಯನ್ನು ತುಂಬಿದವನು.
ಮಂದಹಾಸದ ಚಂದ್ರಹಾಸ ತನಿವೆಳಕಾಗಿ
ಮೆಲ್ಲ ಮೆಲ್ಲನೆ ಇಳಯನಪ್ಪುತಿಹುದು;
ಬನ, ಬಯಲು, ಗಿರಿಸಾನು, ಊರು, ದೂರದ ಕಾನು
ಮಧುಕುಡಿದು ಮತ್ತೇರಿ ಮಲಗಿರುವವು.
*****