ಒಪೆರಾ ಹೌಸ್

ಚೌಪಾಟಿ ಸಮುದ್ರದಿಂದ ಕೂಗಳತೆ ದೂರದಲ್ಲಿರುವ ಒಪೆರಾ ಹೌಸ್ ಚಿತ್ರಮಂದಿರದ ಹಳೇ ಕಟ್ಟಿಗೆಯ ಚಿತ್ತಾರದ ಕಮಾನಿರುವ ಅಪ್ಪರ್ ಸ್ಟಾಲ್‍ನಲ್ಲಿ ಕೊನೆಯ ಆಟದ ನಂತರ ಕಸ ಹೊಡೆಯುತ್ತಿದ್ದಾಗ ಇಂದ್ರನೀಲನಿಗೆ ಸೀಟಿನ ಅಡಿಗೆ ಸಿಕ್ಕಿದ ಆ ಚೀಲ ತುಸು ಭಾರವೇ ಇತ್ತು. ವಾಡಿಕೆಯಂತೆ ಅವನು ಕಸಬರಿಗೆ ಅಲ್ಲೇ ಬಿಟ್ಟು ಚೀಲವನ್ನು ಹಿಡಿದು ಹೊರಗೆ ಓಡಿ ಬಂದ. ಸಾಮಾನ್ಯವಾಗಿ ಹೀಗೆ ಥೇಟರಿನಲ್ಲಿ ಸಾಮಾನು ಮರೆತವರು ಬಂದು ಹೊರಗಿನ ಆಫೀಸಿನ ಬಳಿ ಅಥವಾ ಗೇಟು ಬಂದಾಗಿದ್ದರೆ ಹೊರ ಗೇಟಿನ ಬಳಿ ಚೌಕೀದಾರನ ಬಳಿ ಕೇಳುತ್ತಾ ನಿಲ್ಲುವುದುಂಟು. ಆದರೆ ಕೊನೆಯ ಆಟ ಮುಗಿದು ಸಾಕಷ್ಟು ಹೊತ್ತಾಗಿದ್ದರಿಂದ ಪ್ರಾಂಗಣವೇ ನಿರ್ಜನವಾಗಿತ್ತು.

ವಾಹನಗಳ ಸಂಚಾರ ಎಷ್ಟೊಂದು ವಿರಳವಾಗಿತ್ತೆಂದರೆ ಒಪೆರಾ ಹೌಸ್‍ನ ಸರ್ಕಲ್ಲಿನಿಂದ ಐದೂ ಕಡೆ ಹೋಗುವ ದಾರಿಗಳು ಎಷ್ಟೋ ದೂರದ ತನಕ ನಿಚ್ಚಳವಾಗಿ ಭಯ ಹುಟ್ಟಿಸುವಷ್ಟು ಖಾಲಿಯಾಗಿ ಕಾಣುತ್ತಿದ್ದವು. ಯಾವುದೋ ಮಹಾ ಭೀತಿಯಿಂದ ಜನ ಶಹರವನ್ನು ತ್ಯಜಿಸಿ ಹೋದರೋ ಎಂಬಂತೆ ಅನಿಸುತ್ತಿತ್ತು. ಆದರೂ ನಿರ್ಜನ ಬೀದಿಯ ಎಲ್ಲಾ ದೀಪಗಳು ಮಾತ್ರ ಪ್ರಕರವಾಗಿ ಬೆಳಕು ಚೆಲ್ಲುತ್ತಿದ್ದವು. ಈ ಪ್ರಕಾಶಮಯವಾದ ನೀರವವನ್ನು ಭೇದಿಸುವಂತೆ ಆಗಾಗ ಕೆನಡಿ ಬ್ರಿಜ್ಜಿನ ಅಡಿಯಿಂದ ಲೀಕಲ್ ರೈಲಿನ ಸದ್ದು ಉರುಳಿ ಬರುತ್ತಿತ್ತು.

ಇಂದ್ರನೀಲ ಕೆಲಹೊತ್ತು ಗೇಟಿನ ಹೊರಗೇ ನಿಂತವನು ಮೆಲ್ಲಗೆ ಚೀಲವನ್ನು ಅಗಲಿಸಿ ನೋಡಿದ. ಅದರಲ್ಲೊಂದು ಥರ್ಮಾಸ್ ಫ್ಲಾಸ್ಕು ತೆಪ್ಪಗೆ ಕೂತಿತ್ತು. ಬೆಚ್ಚಗಿತ್ತು. ಅತ್ಯಂತ ತುರ್ತಾಗಿ ಯಾರನ್ನೋ ತಲುಪಬೇಕಾಗಿದ್ದ ವಸ್ತುವೊಂದು ಹಾದಿ ತಪ್ಪಿ ಕೈಲಿ ಸಿಕ್ಕಿ ಬಿದ್ದಿರುವಂತೆ ಇಂದ್ರನೀಲನಿಗೆ ತುಂಬ ಕಸಿವಿಸಿ ಆಯಿತು. ಸುಮ್ಮನೆ ನಿಂತು ಪ್ರಯೋಜನವಿಲ್ಲಿ ಎನಿಸಿ ಮರಳಿ ಆಫೀಸಿಗೆ ಬಂದು ಟಿಕೆಟ್ಟಿನ ಕೌಂಟರ್ ಬಳಿಯೇ ಇದ್ದ ಬ್ರಿಟಿಷ್ ಕಾಲದ ಕುಸುರಿಯ ಪುಟ್ಟ ಹಲಗೆಯ ಮೇಲೆ ಅದನ್ನಿಟ್ಟು, ಲಗುಬಗೆಯಿಂದ ಅಪ್ಪರ್ ಸ್ಟಾಲಿನ ತನ್ನ ಕಸ ಹೊಡೆಯುವ ಕೆಲಸ ಮುಗಿಸಿದ. ಬಾಲ್ಕನಿ, ಫೆಮಿಲಿ ಬಾಕ್ಸು ಎಲ್ಲವನ್ನು ಗುಡಿಸಿ ಬಂದ. ಇತರ ಮೂರ್‍ನಾಲ್ಕು ಜನ ಈಗಾಗಲೇ ಬಾಲ್ಕನಿಯ ಜಗುಲಿಯಲ್ಲಿ ತಮ್ಮ ಪುಟ್ಟ ಪುಟ್ಟ ಹಾಸಿಗೆ ಪಿಂಡಿಗಳನ್ನು ಬಿಡಿಸಿ ಒಂದು ಸುತ್ತು ರಮಿ ಆಡಲು ಕೂತಿದ್ದರು.

“ಬೇಗ ಬಾ, ಆಟಕ್ಕೆ ನಿನಗೂ ಎಲೆ ಹಂಚಲೇ” ಎಂದು ಕಟ್ಟಿಗೆಯ ವಿಶಾಲ ಪಾವಟಿಗೆಗಳನ್ನು ಧಡಧಡ ಇಳಿಯುತ್ತ ಬಂದ ಬಾಲೇಕರ ಸಂಗತಿ ತಿಳಿದಿದ್ದೇ `ನಿನಗೇ ಸಿಗುತ್ತದೆ ನೋಡು ಇಂಥದ್ದು, ಬರ್ತಾರೆ ಬಿಡು’- ಎಂದ. `ಮುಚ್ಚಿದ ಗೇಟು, ಕತ್ತಲು ನೋಡಿ ಅವರು ಪರತ್ ಹೋಗ್ಬಾರ್ದು ನೋಡು. ಒಂದು ತುಸು ಹೊರಗೆ ಹಾದು ಬರ್ತೇನೆ’- ಎಂದ ಇಂದ್ರನೀಲನಿಗೆ `ಬಂಗಾಲೀ ಬಾಬು, ಜಾಗರಣೆ ಮಾಡೋದಿಕ್ಕೆ ನೆಪ ಹುಡುಕುತ್ತಾ ಇವೇನ ನೀನು…..ಸರಿ. ಬೇಗ ಬಂದು ಮಲಗು ಬೇಕಿದ್ರೆ ಗೇಟಿನ ತೂಗಿ ಹಾಕಿ ಬಾ’ ಎಂದು ಛೇಡಿಸುತ್ತ ಭಾಲೇಕರ ಮುಖ್ಯ ದ್ವಾರದ ಗ್ರಿಲ್ ಬಾಗಿಲನ್ನು ಕರ್ಕಶವಾಗಿ ಹಾಕತೊಡಗಿದ. ಇಂದ್ರನೀಲ ಹೊರಗೆ ಬಂದು ಪ್ರಾಂಗಣದಲ್ಲಿಯ ಕಾರಂಜಿಯ ಸಿಮೆಂಟು ನವಿಲಿನ ಕತ್ತಿನ ಮೇಲೆ ಕೂರುತ್ತ ಹೊರಗಿನ ದೀಪ ಇರಲೋ ಮಾರಾಯ ಆರಿಸಬೇಡಾ’ ಎಂದು ಕೂಗಿದ.

ನೂರಾರು ವರ್ಷ ಇತಿಹಾಸವಿದ್ದ ಶಿಲ್ಪ ಚಿತ್ತಾರದ ಈ ಹಳೇ ಕಟ್ಟಡ ಈಗಾಗಲೇ ರಾತ್ರಿಯೊಡನೆ ಮಾತಿಗಿಳಿಯತೊಡಗಿದಂತಿತ್ತು. ಒಂದಾನೊಂದು ಕಾಲದಲ್ಲಿ ನೃತ್ಯ ರೂಪಕಗಳ ಮಂದಿರವಾಗಿದ್ದ ಒಪೆರಾ ಹೌಸ್ ಮೂಕಿ ಚಿತ್ರಗಳ ಕಾಲದಿಂದಲೇ ಚಿತ್ರಮಂದಿರ ಆಯಿತಂತೆ. ಅರಮನೆಯ ಮೇಲುಪ್ಪರಿಗೆಯಂತೆ ಇರುವ ಈ ಕಟ್ಟಡಗಳ ಒಳ ವಿನ್ಯಾಸಗಳೆಲ್ಲ ಸಿನಿಮಾ ನಡೆದಾಗ ಕತ್ತಲಲ್ಲಿ ಮುಳುಗಿರುತ್ತವಲ್ಲಾ ಎಂದು ಇಂದ್ರನೀಲನಿಗೆ ಖೇದವಾಗುತ್ತಿತ್ತು ಹೊಸದಾಗಿ ಬಂದಾಗ. ಸಾಮಾನ್ಯವಾಗಿ ಎಲ್ಲ ಚಿತ್ರಮಂದಿರಗಳ ಬಾಲ್ಕನಿ, ಬೆಂಗಡೆ ಮಾತ್ರ ಇದ್ದರೆ ಇಲ್ಲಿ ಬಾಲ್ಕನಿ ಮೂರೂ ಬದಿಯಲ್ಲೂ ಅರಮನೆಯ ಮೇಲುಪ್ಪರಿಗೆಯಂತೆ ಇತ್ತು.

`ಮೌಸಂ’ `ಬಾಲಿಕಾಬಂಧು’ಗಳ ಸಿಲ್ವರ್ ಜುಬಲಿ ಇಂದ್ರನೀಲ ಬಂದ ನಂತರವೇ ಆದದ್ದು. ಆಗೆಲ್ಲ ಸಂಜೀವಕುಮಾರ, ಶರ್ಮಿಲಾ ಟಾಗೂರರನ್ನೆಲ್ಲ ಈ ಚಿತ್ತಾರದ ಉಪ್ಪರಿಗೆಯಲ್ಲೇ ನೋಡಿದ್ದ. ನಂತರ ಎಂದಿನಂತೆ ಚಿತ್ರ ಶುರುವಾದದ್ದೇ ಒಪ್ಪರಿಗೆಯ ಜತೆ ತಾರಗೆಗಳೂ ಕತ್ತಲೆಯಲ್ಲಿ ಮುಳುಗಿದವು. ಆದರೂ ಕತ್ತಲಲ್ಲಿ ಅಲ್ಲೇ ಮಿಕಿ ಮಿಕಿ ನೋಡುತ್ತಿದ್ದ. ಜುಬಲಿಗಳ ಹಂಗಾಮು ಮುಗಿದು ಚಿತ್ರಗಳು ಐವತ್ತು ದಿನ ಓಡುವುದೇ ಮಹಾ ಸಾಹಸ ಆಗತೊಡಗಿದಂತೆ ಒಂದು ಬಗೆಯ ವಿಷಣ್ಣ ಮಂಕು ಚಿತ್ತಾರಗಳಲ್ಲಿ ಕವಿಯತೊಡಗಿತು. ಎಷ್ಟು ಹೊಡೆದರೂ ಧೂಳು ಹೋಗುತ್ತಿರಲೇ ಇಲ್ಲ. ನಲ್ಲಿಗಳು ಸೋರತೊಡಗಿದವು. ಇಂಟರ್‍ವಲ್‍ನಲ್ಲಿ ಶೇರ್ ಮಾರ್ಕೆಟ್ಟಿನಂತೆ ಪಾಪ್‍ಕಾರ್ನ್ ಕೊಡಿ, ಸಮೋಸಾ ಕೊಡಿ, ಬಟಾಟೆ ವಡೆ ಕೊಡಿ ಎಂದು ನೋಟು ನಾಣ್ಯ ಹಿಡಿದು ಚೀರಾಡುವ ನೂರಾರು ಕೈಗಳ ಸಂತೆ ಆಗುತ್ತಿದ್ದ ಕೌಂಟರುಗಳು ಬಿಕೋ ಹೊಡೆಯುತ್ತಿದ್ದವು.

ಅಂಧೇರಿಯ `ಎಂಬರ್’ `ಆಸ್ಕರ್’ `ಮೈನರ್’ ತ್ರಿವಳಿ ಚಿತ್ರ ಮಂದಿರಗಳು ಒಂದು ಮುಂಜಾನೆ ಭಗ್ನಗೊಂಡು ಬೃಹತ್ ಶಾಪಿಂಗ್ ಮಳಿಗೆ ಆದ ಮೇಲಂತೂ ಇಂದ್ರನೀಲನ ಸಹವರ್ತಿಗಳೆಲ್ಲ ಬೇರೆ ಕೆಲಸಗಳನ್ನು ಹುಡುಕಿಕೊಂಡು ಒಬ್ಬೊಬ್ಬರೇ ಮರೆಯಾದರು. ಬಾಕ್ಸ್ ಆಫೀಸಿನ ತ್ರಿವಿಕ್ರಮನ್ ಇಂಗ್ಲಿಷ್ ಬರುತ್ತಿದ್ದುದರಿಂದ ಯಾವುದೋ ಮುಲಾಮಿನ ಸೇಲ್ಸ್ ಪ್ರತಿನಿಧಿ ಆದ. ಒಂದು ದಿನ ಅವನು ಇದೇ ಒಪೇರಾ ಹೌಸ್‍ನ ಎದುರಿನ ಪುಟ್‍ಪಾತಿನಲ್ಲಿ ನಿಂತು ಬರ ಹೋಗುವವರ ಹಣೆಗೆ, ಮೂಗುಗೆ `ತಗೊಳ್ಳಿ ಪುಕ್ಕಟ್ಟೆ ಸ್ಯಾಂಪಲ್ಲು, ತಲೆ ನೋವು ನೆಗಡಿ ಮಂಗಮಾಯ’ ಎಂದು ಪುಟ್ಟ ಬ್ಯಾಟರಿ ಚಾಲಿತ ಧ್ವನಿವರ್ಧಕದಲ್ಲಿ ಕೂಗುತ್ತಾ ಮುಲಾಮು ಹಚ್ಚುತ್ತ ನಿಂತುಕೊಂಡಿದ್ದ.

ಮೇಲುಪ್ಪರಿಗೆಯಲ್ಲಿ ನಿಂತಿದ್ದ ಇಂದ್ರನೀಲ ಮತ್ತು ಇತರ ಕೆಲಸಗಾರರನ್ನು ಅದೇ ಧ್ವನಿವರ್ಧಕದಲ್ಲಿ ಹೆಸರು ಹಿಡಿದು ಕೂಗಿ ಕತೆದಿದ್ದ. ಎಷ್ಟರಮಟ್ಟಿಗೆ ಅಂದರೆ `ಇಂದ್ರನೀಲಾ, ಎಷ್ಟು ಚೆಂದದ ಹೆಸರಿನ ನೀವು ಈ ಮುರುಕು ಮುದಿ ಥೇಟರಿನ ಜತೆಗೇ ಮುಳುಗಬಾರದು. ಬಾ ಹೊರಗೆ ಬಾ. ಬಂಡ್ಸಾ, ಭಾಲೇಕರ್, ಮಗನ್‍ಭಾಯ್ ನಾನೀಗ ಎಣಿಸುತ್ತೇನೆ…. ಹತ್ತು…. ಒಂಬತ್ತು…. ಎಂಟು….’ ಎಂದು ಕಟ್ಟಡದಲ್ಲಿ ಅವಿತ ಭಯೋತ್ಪಾದಕರನ್ನು ಹೊರಗೆ ಕರೆಯುವ ಇನ್‍ಸ್ಪೆಕ್ಟರನ ಹಾಗೆ ಕೂಗಿದ. ಎಲ್ಲರೂ ಇಳಿದು ಅವನ್ನ ಕಂಡರು. ಬಂಡ್ಸಾ ಅವನ ಜತೆಗೇ ನಡೆದುಬಿಟ್ಟ. ಯಾಕೋ ಧೈರ್‍ಯ ಸಾಲದೆ ಇಂದ್ರನೀಲ, ಮಗನ್‍ಭಾಯ್ ಮತ್ತು ಭಾಲೇಕರ ಇಲ್ಲೇ ಮುಂದುವರೆದರು.

ಉಳಿದವರೆಲ್ಲ ಬಾಲ್ಕನಿಯ ಜಗಲಿಯಲ್ಲಿ ಮಲಗುತ್ತಿದ್ದರೆ ಇಂದ್ರನೀಲ ವಿಶಾಲವಾದ ಕಟ್ಟಿಗೆಯ ಪಾವಟಿಗೆಗಳ ಹಿಂಭಾಗದ ವಿಶಾಲ ಪೊಳ್ಳಿನಲ್ಲಿ ಮಲಗುತ್ತಿದ್ದ. ವಾರಕ್ಕೊಮ್ಮೆ ಗಾಯ್‍ವಾಡಿ ಎದುರಿನ ಅನಂತಾಶ್ರಮ ಖಾನಾವಳಿಗೆ ಮೀನು ಊಟಕ್ಕಾಗಿ ಹೋಗುತ್ತಿದ್ದ. ಬೆಳಗಿಬ ಹೊತ್ತು ನಿಮ್‍ಕರ ಆರ್ಟ್ ಸ್ಟುಡಿಯೋದಲ್ಲಿ ಬೋರ್ಟ್ ಬರೆಯಲು ಹೋಗುತ್ತಿದ್ದ. ದೇವನಾಗರಿ ಲಿಪಿಗೆ ಬಂಗಾಲಿ ಲಿಪಿಯ ಚಿತ್ತಾರ ಕೊಟ್ಟು ಹೊಸ ರೀತಿಯಿಂದ ಆಕರ್ಷಕಗೊಳಿಸುತ್ತಿದ್ದ. ಅಲ್ಲಿ ಟ್ಯಾಕ್ಸಿಯವರೂ ಹಿಂದಿನ ಗಾಜಿನ ಮೇಲೆ ಏನಾದರೂ ಬರೆಸಿಕೊಳ್ಳಲು ಬರುತ್ತಿದ್ದರು. ರಾತ್ರಿ ಎಲ್ಲ ಶೋ ಮುಗಿದ ಮೇಲೆ ಸುಮ್ಮನೆ ಹಳದಿ ಬೆಳಕಿನ ಬೀದಿಗಳಲ್ಲಿ ನಡೆಯುತ್ತಿದ್ದ. ಆಗ ಅವನಿಗೆ ಈ ಶಹರ ಮಕ್ಕಳನ್ನು ತೊಡೆಯ ಮೆಲೆ ಮಲಗಿಸಿಕೊಂಡು ತಾನು ಮಾತ್ರ ಎಚ್ಚರದಿಂದ ಕಾಯುತ್ತ ಕೂತ ತಾಯಿಯಂತೆ ತೋರುತ್ತಿತ್ತು.

ಕೆಲವು ವರ್ಷಗಳ ಹಿಂದೆ ತನಗೆ ಇಪ್ಪತ್ತೈದು ವರ್ಷ ಆಗಿತ್ತು ಎಂದು ಅನಿಸುತ್ತದೆ ಹೊರತು ತಕ್ಷಣಕ್ಕೆ ಈಗ ಎಷ್ಟು ವಯಸ್ಸು ಅಂತ ಅವನಿಗೆ ಹೊಳೆಯುವುದಿಲ್ಲ. ಆದರೆ ಕೊನೆಯ ಆಟದ ನಂತರದ ಅಪರಾತ್ರಿಯಲ್ಲಿ ಮಾತ್ರ ಯಾವುದಕ್ಕೂ ವಯಸ್ಸೇ ಇಲ್ಲ ಅಂತನಿಸುತ್ತಿತು. ಈ ಒಣ ಕಾರಂಜಿಯಲ್ಲಿ ನೀರು ಚಿಮ್ಮಿ ಐದಾರು ವರ್ಷಗಳಾದವು. ಬಹುಶಃ `ಅಮಾನುಷಾ’ದ ನೂರನೇ ದಿನ ಕಾರಂಜಿ ಚಿಮ್ಮಿತ್ತು. ತನ್ನ ಬಂಗಾಲದ ನೆಚ್ಚಿನ ಹೀರೋ ಉತ್ತಮಕುಮಾರ ತನ್ನ ಹಿಂದಿ ಚಿತ್ರದ ಶತಮಾನೋತ್ಸವಕ್ಕೆ ಬಂದಿದ್ದ. ಆಗ ಕಾರಂಜಿಯ ಬುಡದಲ್ಲಿ ಬಣ್ಣದ ದೀಪ ಹಚ್ಚಿದ್ದರು. ಜೇಡ ಯಾವುದೇ ಆವೇಶ ಮಹತ್ವಾಕಾಂಕ್ಷೆ ಇಲ್ಲದೆ ಸುಮ್ಮನೆ ತನ್ನ ಬಲೆಯನ್ನು ಒಂದು ಕೇಂದ್ರದಿಂದ ನೇಯುವಂತೆ ಇಂದ್ರನೀಲ ಈ ಒಪೇರಾ ಹೌಸ್ ಕೇಂದ್ರದಿಂದಲೇ ತನ್ನ ಸಣ್ಣ ಸದ್ದಿಲ್ಲದ ವಿಶ್ವವನ್ನು ನೇಯ್ದುಕೊಂಡಿದ್ದ.

ರಾತ್ರಿಯ ಬೀದಿಗಳು, ಲೋಕಲ್ ರೈಲುಗಳು, ಕೆನಡಿ ಬ್ರಿಜ್ಜಿನಿಂದ ಕಾಣುವ ಗ್ರಾಂಟ್ ರೋಡಿನ ನಾಚ್‍ವಾಲಿಯರ ರಂಗುರಂಗಿನ ಪರದೆಗಳ ಖೋಲಿಗಳು, ಅನಂತಾಶ್ರಮದ ಮೀನು ರೈಸ್ ಪ್ಲೇಟು, ಸಿನಿಮಾ ಪ್ರಿಂಟಿನ ತಗಡಿನ ಊದಾ ಬಣ್ಣದ ಡಬ್ಬಗಳು….. ಹೀಗೆ ಈ ಬಲೆಯ ಎಳೆಗಳಿದ್ದವು. ಯಾವ ಕಾರಣಕ್ಕೂ ಈ ಬೆಚ್ಚಗಿನ ಬಲೆಯನ್ನು ಕದಡುವ ಆವೇಶ ಅವನಿಗೆ ಬಂದಿರಲಿಲ್ಲ. ಚಿತ್ರಮಂದಿರದಿಂದಾಗಿ ಆ ಇಡೀ ಪ್ರದೇಶಕ್ಕೇ ಒಪೇರಾ ಹೌಸ್ ಎಂಬ ಹೆಸರೇ ಬಂದಿದ್ದರಿಂದ, ಕ್ರಮೇಣ ಆ ಇಡೀ ಪ್ರದೇಶವೇ ತನ್ನ ಮನೆ ಎಂಬಂತೆ ಇಂದ್ರನೀಲ ಅದರಲ್ಲೇ ಹಣ್ಣಾಗಿದ್ದ.

ಹೀಗಾಗಿ ಈಗ ಈ ಕೊನೆಯ ಆಟದ ಅಪ್ಪರ್ ಸ್ಟಾಲ್‍ನ ಡಿ-ಐವತ್ತೇಳು ಸೀಟಿನಡಿಗೆ ಸಿಕ್ಕ ಈ ಥರ್ಮಾಸ್ ಫ್ಲಾಸ್ಕು ಅವನು ಎಣಿಸಿದ್ದಕ್ಕಿಂತ ಹೆಚ್ಚೇ ಅವನನ್ನು ಚುರುಕುಗೊಳಿಸಿತ್ತು. ಅದು ಹೊಸದಾಗಿ ಕೊಂಡುಕೊಂಡ ಪ್ಲಾಸ್ಕಾಗಿರಲಿಲ್ಲ. ಅದರ ಮುಚ್ಚಳದ ನಸು ಬಿಳಿ ಬಣ್ಣ ಹೊಳಪು ಕಳಕೊಂಡಿತ್ತು. ಹೀಗಾಗು ಅದು ಖಂಡಿತ ಅದರಲ್ಲಿ ಯಾರೋ ಯಾರೊಗಾಗೋ ತುಂಬಿಟ್ಟ ಪೇಯ ಇದ್ದಿರಬಹುದು. ಅದನ್ನೊಮ್ಮೆ ನೋಡಿಬಿಟ್ಟರೆ ಒಳ್ಳೆಯದೆ? ಅದು ನಾಳೆಯ ತನಕ ಹಾಳಾಗದೇ ಇರಬಹುದಲ್ಲವೆ? ಮುಚ್ಚಳ ತೆಗೆದರೆ ಅದು ಕೆಡಬಹುದೆ? ಇಂದ್ರನೀಲನಿಗೆ ಅದನ್ನು ತನ್ನ ಬಳಿ ಇಟ್ಟುಕೊಳ್ಳುವುದೇ ಒಳ್ಳೆಯದು ಎನಿಸಿತು. ನವಿಲಿನಿಂದ ಮೆಲ್ಲಗೆ ಎದ್ದು ಭಾಲೇಕರ ತನಗಾಗಿಯೇ ತುಸು ಬಿಟ್ಟಂತಿದ್ದ ಗ್ರಿಲ್‍ನ ಎಡೆಯಲ್ಲಿ ತೂರಿಕೊಂಡು ಹೋಗಿ ಬಾಕ್ಸ್ ಆಫೀಸಿನ ಬದಿಯಿಂದ ಆಚೀಲವನ್ನು ಎತ್ತಿಕೊಂಡ. ಖಂಡಿತ ಇದು ಯಾವುದೋ ಆಸ್ಪತ್ರೆಗೆ ಹೊರಟಿದ್ದ ಫ್ಲಾಸು. ಆದರೆ ಆಸ್ಪತ್ರೆಗೆ ಹೊರಟವರು ಪಿಕ್ಚರಿಗೆ ಯಾಕೆ ಬಂದರು? ಅಥವಾ ರಾತ್ರೆ ಆಸ್ಪತ್ರೆಯಲ್ಲಿ ಎಚ್ಚರಿರಬೇಕಾದ್ದರಿಂದ ತುಸು ವಿಶ್ರಮಿಸಲು ಬೇರೆಲ್ಲೂ ಜಾಗವಿರದೇ ಇಲ್ಲಿ ಬಂದು ಎರಡು ಗಂಟೆ ಕಾಲ ನಿದ್ರಿಸಿ, ಅವಸರದಲ್ಲಿ ಎದ್ದು ಹೊರಡುವಾಗ ಮರೆತು ಹೋದರೆ? ಇಂದ್ರನೀಲ ಫ್ಲಾಸ್ಕನ್ನು ಈಗ ಪೂರ್ತಿಯಾಗಿ ಚೀಲದಿಂದ ಹೊರಗೆ ಎತ್ತಿದ. ಅದರ ಪೂರ್ತಿ ಮೈತುಂಬಾ ಕಡುಗೆಂಪು ಇಸ್ಪೀಟು ಚೌಕದಂಥ ಡಿಸೈನು ಇತ್ತು. ಮೇಲಿನ ಬಿಳಿ ಟೊಪ್ಪಿಗೆ ಬಿಗಿಯಾಗಿತ್ತು. ಪುನಃ ಅದನ್ನು ಇಳಿಸುವ ಮುನ್ನ ಚೀಲದೊಳಗೆ ಇಣುಕಿದಾಗ ಅದರಲ್ಲಿ ಪುಟ್ಟ ಕಾಗದದ ಚೂರೊಂದಿತ್ತು. ಇಂದ್ರನೀಲ ಅದನ್ನು ತೆಗೆದು ಬೆಳಕಿನ ಸಮೀಪ ನಡೆದು ಓದಿದ. ಅದರಲ್ಲಿ ಮುರುಕು ದೇವನಾಗರಿಯಲ್ಲಿ ನಂದಾಬಾಯಿ, ಸೋನಾವಾಲ ಬಿಲ್ಡಿಂಗ್, ತಾಡದೇವ ಎಂದು ಬರೆದಿತ್ತು.

ತಾಡದೇವ ದೂರವಿಲ್ಲ. ಈ ಅಪರಾತ್ರಿಯಲ್ಲಿ ಸರಸರ ನಡೆದರೆ ಹದಿನೈದು ನಿಮಿಷದ ದಾರಿ. ಕೊಟ್ಟೇ ಬರುವಾ ಎಂದು ತನ್ನ ಕಿಸೆಯಲ್ಲಿ ಇದ್ದ ಟಾರ್ಚನ್ನು ತೆಗೆದು ಅದೇ ಚೀಲದೊಳಗೆ ಇನ್ನೇನು ಇಡಬೇಕು ಅಷ್ಟರಲ್ಲಿ ಮಗನ್‍ಬಾಯ್ ಧಡಧಡನೆ ಮೆಟ್ಟಿಲು ಇಳಿದು ಬಂದವನೇ `ನಡಿ ಆ ಅದೃಶ್ಯ ವಾರಸುದಾರನ ಹೆಸರಲ್ಲಿ ಒಂದೊಂದು ಕಪ್ ಕುಡಿದೇ ಬಿಡೋಣ’ ಎಂದು ಫ್ಲಾಸ್ಕನ್ನು ಕಸಿದುಕೊಂಡು ಧಡಧಡ ಮೇಲೆ ಓಡಿದ. ಕಟ್ಟಿಗೆಯ ಮೆಟ್ಟಿಲು ಶಬ್ದ ಈಗ ಇನ್ನೂ ಕರ್ಕಶವಾಗಿತ್ತು. `ಏ….ಏ….ಏ…. ನಿಲ್ರೋ’ ಎಂದು ಇಂದ್ರನೀಲನೂ ಅವನ ಬೆನ್ನ ಹಿಂದೆಯೇ ಓಡಿದ. `ಬೇಡಾ ಬಿಡ್ರೊ ಅದರಲ್ಲಿ ಮನೆ ವಿಳಾಸ ಇದೆ. ಯಾರಿಗೋ ಅರ್ಜೆಂಟ್ ಇರಬಹುದು…. ಕೊಟ್ಟು ಬಂದ್ ಬಿಡ್ತೀನಿ…. ದಯವಿಟ್ಟು ಕುಡೀಬೇಡಿ’ ಎಂದು ಗೋಗರೆಯುವಷ್ಟರಲ್ಲಿ ಭಾಲೇಕರ ಫ್ಲಾಸ್ಕನ್ನು ತೆರೆದು, ಅದರದೇ ಫ್ಲಾಸ್ಕಿನ ಲೋಟದಲ್ಲಿ ಬಗ್ಗಿಸಿ ಧತ್ ಎಂದು ತಲೆ ಬಡಿದುಕೊಂಡ. ಫ್ಲಾಸ್ಕಿನಲ್ಲಿ ಏನೂ ಇರಲಿಲ್ಲ. ಅದು ಖಾಲಿ ಆಗಿತ್ತು. ಅದರಿಂದ ತಣ್ಣನೆಯ ನಸುನಗುತ್ತಲೇ ಲೋಟದೊಳಗೆ ಸುರಿಯುತ್ತಿರುವಂತೆ ಇಂದ್ರನೀಲನಿಗೆ ಭಾಸವಾಯಿತು.

`ಹೆತ್ತೆರೀಕಿ, ಸುಮ್ಮನೆ ಈ ಅಪವೇಳೇಲಿ ಆಶಾಭಂಗ ಆಯ್ತು ನೋಡು’ ಎಂದ ಭಾಲೇಕರ-`ಪ್ಲೀಸ್ ಇಂದೂ, ಹ್ಯಾಗೂ ಫ್ಲಾಸ್ಕಿದೆ ಹೋಗಿ ಒಂದಿಷ್ಟು ಚಾ ತಗೊಂಬಾರೋ’ ಎಂದು ಗೋಗರೆದ. ವಿಧೇಯನಂತೆ ಇಂದ್ರನೀಲ ಫ್ಲಾಸ್ಕು ಹಿಡಿದು, ಕತ್ತಲು ಬೆಳಕುಗಳಲ್ಲಿ ಕೆತ್ತಿ ಮಾಡಿಟ್ಟಂತೆ ತೋರುತ್ತಿದ್ದ ಒಪೇರಾ ಹೌಸಿನಿಂದ ಗೇಟು ತಳ್ಳಿ ಹೊರಬಂದ. ಬಲಕ್ಕೆ ದೂರ ರಾಕ್ಸಿ ಸಿನೆಮಾದ ಎದುರು ಮೂರು ತಿಂಡಿ ಗಾಡಿಗಳು ಮಹಾ ಮೌನದಲ್ಲೇ ಏನೇನನ್ನೋ ಬೇಯಿಸುತ್ತಿದ್ದವು. ಅವು ಈಗ ಯಾರನ್ನೂ ಕೂಗಿ ಕರೆಯಬೇಕಾದ್ದೇ ಇರಲಿಲ್ಲ. ಬೇಕಾದವರು ತೆಪ್ಪಗೆ ಸ್ವಪ್ನದಲ್ಲಿ ಚಲಿಸುವವರಂತೆ ಅಲ್ಲಿ ತಲುಪಿ ದಣಿದ ಕಣ್ಣುಗಳಲ್ಲಿ ತಿನ್ನುತ್ತಿದ್ದರು. ಹಗಲಲ್ಲಿ ಎಲ್ಲಿ ಮಾಯವಾಗುತ್ತಾವೋ ಈ ಗಾಡಿಗಳು. ನಡುರಾತ್ರಿಯ ನಂತರ ಉದ್ಭವ ಮೂರ್ತಿಗಳಂತೆ, ಖಾಲಿ ರಸ್ತೆಗಳಲ್ಲಿ ಎದ್ದು ನಿಲ್ಲುತ್ತವೆ. ಒಪೆರಾ ಹೌಸ್‍ನ ಎದುರಿನ ಫುಟ್‍ಪಾತಿನಲ್ಲಿ ಮಲಗುವ ಜನ ಈಗಾಗಲೇ ತಮ್ಮ ತಮ್ಮ ನಿಗದಿತ ಸ್ಥಾನಗಳನ್ನು ಕೊಡವಿಕೊಂಡು ಹಾಸಿಕೊಳ್ಳುತ್ತಿದ್ದರು. ಇಲೆಕ್ಟ್ರಿಕ್ ಗ್ರಿಡ್ ಪಕ್ಕ ಮಲಗುವ ಸಪನ್ ` ಇಂದೂ, ಸಿಂಗಲ್ ಪಲ್ಟಿ ಮೊಟ್ಟೆ ತಿನ್ನೋಣವೇ?’ ಎಂದು ಕೂಗಿದ. ಇಂದ್ರನೀಲನೇನೋ ಮಹಾ ಕೆಲಸವಿದೆ ತಾಳು ಎಂಬಂತೆ ಕೈ ಬೀಸಿ ಬಿರಬಿರನೆ ಕೆನಡಿ ಬ್ರಿಜ್ಜಿನತ್ತ ನಡೆಯತೊಡಗಿದ. `ಈವತ್ತು ಯಾರು ಕರ್ದಿದಾರಪ್ಪಾ, ಪರ್ವಿನ್ ಬಾಬಿನೋ ಝೀನತ್ ಅಮಾನೋ?’ ಎಂದು ಸಪನ್ ಕೇಕೆ ಹಾಕಿ ನಗತೊಡಗಿದ.

ಫ್ಲಾಸ್ಕು ಖಾಲಿ ಇದ್ದುದರಿಂದ ಎದೆಯ ಮೇಲಿಂದ ಭಾರವೊಂದು ಇಳಿದ ಹಾಗೆ ಆಗಿದ್ದರೂ, ಇನ್ನಾವುದೋ ಬಗೆಯ ತಳಮಳ ಹಠಾತ್ತನೆ ಇಂದ್ರನೀಲನಲ್ಲಿ ಉಲ್ಬಣಗೊಂಡಂತಾಗಿತ್ತು. ಕೆನಡಿ ಬ್ರಿಜ್ಜಿನ ಏರಿನಿಂದ ಯಾಕೋ ಹಿಂತಿರುಗಿ ನೋಡಿದ. ಒಪೆರಾ ಹೌಸ್ ತುಂಬ ಹತಾಶವಾಗಿ, ಅದರಲ್ಲೀಗ ಮಗನ್‍ಭಾಯ್ ಮತ್ತು ಭಾಲೇಕರ್ ಇದ್ದಾರೆ ಎನ್ನುವುದು ಸುಳ್ಳು ಅನಿಸುವಂತೆ ಕಾಣುತ್ತಿತ್ತು. ಹಗಲಲ್ಲಾಗಿದ್ದರೆ ಬಾನಿಗೆ ತೋರುವ ಅದರ ಬುರುಜುಗಳು ಈಗ ಕತ್ತಲಲ್ಲಿ ಕರಗುತ್ತಿದ್ದವು. ಕೆನಡಿ ಬ್ರಿಜ್ಜಿನ ಬದಿಯ ಕಟ್ಟಡದ ರಂಗಬಿರಂಗಿ ಕಿಟಕಿಗಳಿಂದ ಸಾರಂಗಿ ಮತ್ತು ಗೆಜ್ಜೆಗಳ ಅಲೆಗಳು ಸುಳಿದುಬರುತ್ತಿದ್ದವು. ಕಳೆದ ವಾರ `ಹೈವಾನ್’ ಚಿತ್ರದ ಮ್ಯಾಟನಿಗೆ ಬಂದಿದ್ದ ಅಲ್ಲಿಯ ಹುಡುಗಿಯರು `ಏನು ಇಂದೂ, ಥೇಟರು ಮುಚ್ತಾರಂತೆ ಹೌದೇನೋ. ನಮ್ಮದೂ ಹಾಗೆಯೇ. ಈ ಹಾಡು ಕುಣಿತ ಎಲ್ಲಾ ಈಗ ಯಾರಿಗೆ ಬೇಕು ಹೇಳು. ಮುಂಬಯಿಯ ಗಲ್ಲಿ ಗಲ್ಲಿಗಳಲ್ಲಿ ಈಗ ಡ್ಯಾನ್ಸ್ ಬಾರ್‍ಗಳು ಆಗ್ತಾ ಇವೆ. ಎಲ್ಲ ಅಲ್ಲೇ ಹೋಗ್ತಾರೆ. `ಪಾಕೀಜಾ’ ಉಮ್ರಾನ್ ಜಾನ್’ `ಮುಗಲ್ ಏ ಅಜಮ್’ ಹಾಡುಗಳು ಯಾರಿಗೂ ಬೇಕಿಲ್ಲ. ಕೈಲಿ ಅಷ್ಟೊಂದು ಕಾಸಿಲ್ಲದ ಮುದಿ ಸೇಠ್‍ಗಳು ಮಾತ್ರ ಇಲ್ಲಿಗೆ ಬರ್‍ತಾರೆ’ ಎಂದು `ಸಡೇಲಾ ಪಿಕ್ಚರು ತೋರಿಸ್ತೀರಪ್ಪಾ ನೀವು’ ಎಂದು ಹೋಗಿದ್ದರು.

`ಟೈಮ್ ಪಾಸ್ ಮಾಡಬೇಕೂಂತ ಇದ್ರೆ ಬಾ ನಮ್ಮ ಕೋಠಿಗೆ’ ಎಂದು ಸಾವಲಿ ಹೇಳಿದ್ದಳು. ಬೆಳ್ಳಗಿನ ಹುಡುಗಿ ಅವಳು. ಸಾವಲಿ ಅಂತ ಯಾಕೆ ಕರೀತಾರೋ ಆ ಹುಡುಗಿಯರು ಹಗಲಲ್ಲಿ ಅಕ್ಕಿ ಆರಿಸುತ್ತ ಅಥವಾ ಫುಟ್‍ಪಾತಿನಲ್ಲಿ ಟೊಮೋಟೋ ಪಾಲಿಗೆ ದರ ಮಾಡುತ್ತ ಇರುತ್ತಾರೆ. ಟೈಮ್‍ಪಾಸ್ ಅಂತ ಸಾವಲಿ ಹೇಳಿದ ಶಬ್ದ ಯಾಕೋ ಇಂದ್ರನೀಲನ ಜತೆಗೇ ಉಳಿದು ಬಂದಿದೆ. ಬೆಳೆದೂ ಬಂದಿದೆ. ವಿಕ್ಟೋರಿಯಾ ಟರ್ಮಿನಸ್‍ನಲ್ಲಿ ಅಥವಾ ರಾಜಾಭಾಯಿ ಟಾವರ್‍ನಲ್ಲಿ ಇರುವ ಬೃಹತ್ ಗಡಿಯಾರದಲ್ಲಿ ಢಣ ಢಂಗುರವಾಗಿ ಕಾಣುವ ಟೈಮ್‍ಗೂ ಈ ಟೈಮ್ ಪಾಸ್‍ಗೂ ಅಂಥ ಸಂಬಂಧ ಇಲ್ಲ. ತನ್ನ ಹೊಟ್ಟೆಗೆ ಕಟ್ಟಿಕೊಂಡು ಪುಟ್ಟ ಗೋಲ ಬುಟ್ಟಿಯಲ್ಲಿ ಪಿರಮಿಡ್ಡಿನಂತೆ ಕಡಲೆ, ಶೇಂಗಾ ಬೀಜಗಳನ್ನು ಪೇರಿಸಿಕೊಂಡು ಹಗಲಿಡೀ ಇಲ್ಲಿ ಅಲೆಯುವ ಚನಾವಾಲಾ ಕೂಡ `ಟೈಂ ಪಾಸ್….ಟೈಂ ಪಾಸ್….ಎಂಟಾಣೆ ಯಲ್ಲಿ ಟೈಂ ಪಾಸ್’ ಎಂದು ಜನರನ್ನು ಕರೆಯುತ್ತಲೇ ಇರುತ್ತಾನೆ. ಅವನ ಬುಟ್ಟಿಯಲ್ಲಿಯ ಬೀಜಗಳ ಮೇಲೆ ಅವನೊಂದು ಪುಟಾಣಿ ಅಗ್ಗಿಷ್ಟಿಕೆಯ ಮಡಿಕೆಯನ್ನೂ ಇಟ್ಟುಕೊಂಡಿರುತ್ತಾನೆ. ಅದರೊಳಗೆ ನಿಗಿನಿಗಿ ಕೆಂಪಗೆ ಹೊಳೆಯುವ ಕೆಂಡಗಳಿರುತ್ತವೆ. ಆ ಪುಟಾಣಿ ಮಡಿಕೆಯ ಸುತ್ತಲೂ ತೂತುಗಳಿವೆ. ಅದನ್ನು ಆರದಂತೆ ಅವನು ನೋಡಿಕೊಳ್ಳುತ್ತಾನೆ. ಆ ಬಿಸಿ ಮಡಿಕೆಯನ್ನು ತನ್ನ ಕಡಲೆ ಶೇಂಗಾದ ಹಾಸಿನ ಮೇಲೆ ಸರದಿಯಂತೆ ಇಡುತ್ತಾ ತನ್ನ ಸರಕನ್ನು ಬಿಸಿ ಬಿಸಿಯಾಗಿ ಜನರ ಟೈಂ ಪಾಸ್‍ಗೆ ಸಜ್ಜುಗೊಳಿಸುತ್ತಾನೆ. ಮೊದಮೊದಲು ಕೊನೆಯ ಆಟದ ಇಂಟರ್‍ವಲ್‍ಗೆ ತಪ್ಪದೇ ಪ್ರಾಂಗಣಕ್ಕೆ ಬರುತ್ತಿದ್ದ. ಈಗ ಆತ ಬರುತ್ತಿಲ್ಲ.

ಆ ಅಲೆಮಾರಿಯ ಆ ಪುಟ್ಟ ಅಗ್ಗಿಷ್ಟಿಕೆ ಯಾವಾಗಲೂ ಇಂದ್ರನೀಲನ ಮನಸ್ಸಿಗೆ ಬರುತ್ತದೆ. ಬಾಲ್ಯದಲ್ಲಿ ಅಮ್ಮ ಹೊತ್ತಿಸಿದ್ದ ಒಲೆಯಂತೆ ಅದು ವಿಚಿತ್ರವಾದ ಬಿಸಿಯನ್ನು ಅವನಲ್ಲಿ ಎಬ್ಬಿಸುತ್ತದೆ. ಒಲೆ ಹೊತ್ತಿಕೊಂಡಾಗ ಅಮ್ಮನ ಮುಖವೂ ಬೆಳಗುತ್ತಿತ್ತು. ನಿದ್ದೆಯಿಂದ ಎಬ್ಬಿಸಲ್ಪಟ್ಟಂತಿದ್ದ ಆ ಮುಖ ನಿರ್ವಿಕಾರವಾಗಿ ಹೊತ್ತಿಕೊಂಡಿರುತ್ತಿತ್ತು. ಇಂದ್ರನೀಲನಿಗೆ ಇಂಥ ಅಗ್ಗಿಷ್ಟಿಕೆಗಳು ವಿಚಿತ್ರ ಮೈ ಮರೆವನ್ನು ಕೊಡುತ್ತವೆ. ಅದಕ್ಕೆ ಅವನು ಲಾಂಡ್ರಿ ಬಬನ್ ಬೆಳ್ಳಂಬೆಳಿಗ್ಗೆ ಫುಟ್‍ಪಾಥಿನ ಮೇಲೆ ಗೋಣಿಚೀಲ ಹಾಸಿ ತನ್ನ ಹಳೇ ಇಸ್ತ್ರಿ ಪೆಟ್ಟಿಗೆಗೆ ಕೆಂಡವನ್ನು ಸುರಿದು ಗಾಳಿ ಹಾಕುವುದನ್ನು ನೋಡುತ್ತಾ ಕೂರುತ್ತಾನೆ. ತಾನೂ ಗಾಳಿ ಹಾಕುತ್ತಾನೆ ಆ ಬಿಸಿ ಆ ಮೈಮರೆವು ಅದೇ ಟೈಮ್ ಪಾಸ್, ನಿಜವಾದ ಟೈಂಪಾಸ್, ಹಾಗಿದ್ದರೆ ಈ ಫ್ಲಾಸ್ಕು, ತಣ್ಣಗೆ ಖಾಲಿ ಇರುವ ಈ ಫ್ಲಾಸ್ಕು ಈ ಅಪರಾತ್ರಿಯಲ್ಲಿ ಏನು ಹೇಳುತ್ತಿದೆ.

ಫ್ಲಾಸ್ಕೇ ಅವನನ್ನು ನಡೆಸುತ್ತಿದೆಯೋ ಎಂಬಂತೆ ಇಂದ್ರನೀಲ ಕೆನಡಿ ಬ್ರಿಜ್ಜಿನ ಪಕ್ಕದ ಮೆಟ್ಟಿಲುಗಳನ್ನು ಇಳಿದು ರಸ್ತೆ ಬದಿಯ ಚಾಯ್‍ವಾಲಾನ ಬಳಿ ಹೋಗಿ ನಿಂತ. ನೀಲಿ ಜ್ವಾಲೆಯ ಹೂಗಳ ಮೇಲೆ ಕುದಿಸಿ ಅವನು ಆಕಾಶದ ಎತ್ತರದಿಂದ ಸೋಸಿ ಫ್ಲಾಸ್ಕನ್ನು ತುಂಬಿಸುವುದನ್ನೇ ನೋಡಿದ. ಇಲ್ಲಿಂದೆದ್ದ ಚಾ ಪರಿಮಳ ಹಳದಿ ಬೆಳಕಿನೊಂದಿಗೆ ಬೆರೆತು ರಾತ್ರಿಯನ್ನು ಹಸನುಗೊಳಿಸುತ್ತಿತ್ತು. ಚಾಯ್‍ವಾಲ ರಾತ್ರಿಯ ಮೈದಡವುವ ತಾಯಿಯಂತೆ ಇದ್ದ ಬಿಸಿ ಫ್ಲಾಸ್ಕು ಎತ್ತಿಕೊಂಡು ಇಂದ್ರನೀಲ ಈಗ ಕೋಠಿಯ ಹುಡುಗಿಯರ ಕಣ್ಣಿಗೆ ಬೀಳಬಾರದೆಂಬ ಎಚ್ಚರದಲ್ಲಿ ಸರ ಸರ ಕೆಳ ಗಲ್ಲಿಯಲ್ಲೇ ನಡೆಯತೊಡಗಿದ. ಮತ್ತೆ ಮತ್ತೆ ಕತ್ತು ಹೊರಳಿಸಿ ಮೇಲಿನ ಮಜಲಿನ ಬಣ್ಣದ ಕಿಟಿಕಿಗಳೆಡೆ ನೋಡುತ್ತ ನಡೆಯುತ್ತಿದ್ದವನನ್ನು `ಪಕಡ್‍ಲಿಯಾ’ ಎಂಬ ಹೆಣ್ಣು ಕೇಕೆ ಹಠಾತ್ತನೆ ನಿಲ್ಲಿಸಿತು. ಸಾವಲಿ ಮತ್ತು ಗೆಳತಿಯರು ಎದುರಿದ್ದರು. ಜತೆಗೊಬ್ಬ ಅವರ ಕಾವಲುಗಾರ ಠೊಣಪನೂ ಇದ್ದ. ಈ ಹುಡುಗಿಯರನ್ನು ಕಪ್ಪು ಕನ್ನಡಕದ ಕಾರುಗಳು ಎತ್ತೊಯ್ಯಬಾರದೆಂದು ಅವನು ಸದಾ ಅವರ ಮೇಲೆ ನಿಗರಾನಿ ನಡೆಸುತ್ತಾನೆ. ಪಿಕ್ಚರು ನೋಡಲು ಬಂದಾಗಲೂ ಅವನ ಜತೆಗೇ ಬರುತ್ತಾರೆ. ಅವರು ಸಾವಲಿ ಕೈಯಲಿ ರಿವಾಲ್ವರ್ ಇರುವಂತೆ ಅಭಿನಯಿಸುತ್ತ ಇಂದ್ರನೀಲ ಎದೆಗೇ ಗುರಿಯುಟ್ಟು `ಹ್ಯಾಂಡ್ಸ್ ಅಪ್-ಬೇಗ ಹೂಂ ನಮ್ಮ ಇಲಾಖೆಯಿಂದ ಈ ನಡುರಾತ್ರಿಯಲ್ಲಿ ಚಾಯ್ ಸ್ಮಗ್ಲಿಂಗ್ ಮಾಡ್ತಿದೀಯಾ ಕೊಡು ಇಲ್ಲಿ ಮಾಲು’ ಎಂದು ಕಿಲಿಕಿಲಿಸುತ್ತ ಫ್ಲಾಸ್ಕು ತಗೊಂಡು ಅವಳ ಕಟ್ಟಡವನ್ನು ಹೊಕ್ಕಿಬಿಟ್ಟಳು. ಉಳಿದ ಹುಡುಗಿಯರೂ ಅವಳ ಹಿಂದೆ ಓಡಿದರು. `ಥರ್ಮಾಸ್ ಬೇಕಿದ್ದರೆ ನೀನೂ ಬಾ’ ಎಂದೊಬ್ಬಳು ಕೂಗಿದಳು. ನಿರುಪಾಯನಂತೆ ಇಂದ್ರನೀಲ ನಸುನಗುತ್ತ ಅವರ ಹಿಂದೆ ನಡೆದ.

ಅದೂ ಕೂಡ ಬಹುಶಃ ಒಪೆರಾ ಹೌಸ್‍ನಷ್ಟೇ ಹಳತಾಗಿದ್ದು ವಿಕ್ಟೋರಿಯನ್ ಪಳಿಯಿಳಿಕೆಯಂಥ ಕಟ್ಟಡ. ಮೇಲಿನ ಮಜಲುಗಳಲ್ಲಿ ನಾಚ್ ಗಾನಾದ ಕೋಣೆಗಳು. ಮೇಲಿರುವ ಮೆಟ್ಟಿಲುಗಳು ಆರಂಭವಾಗುವ ಬಿಂದುವಿನಲ್ಲೆ ಬಲಕ್ಕೊಂದು ಕೋಣೆ. ಅದರಲ್ಲೇ ಹುಡುಗಿಯರ ಜಂಟಿ ಬಿಡಾರ. ಸಿಂಗಾರವಿಲ್ಲದೆ, ಮೇಲಿಂದ ಮೇಡಂರ ನಿಖರವಾದ ಬುಲಾವ್ ಬರದೆ ಇವರ್‍ಯಾರೂ ಮೇಲೆ ಹೋಗುವಂತಿಲ್ಲ. ಹುಡುಗಿಯರೆಲ್ಲ ಅಲ್ಲೇ ಚೆಲ್ಲಾಪಿಲ್ಲಿಯಾಗಿ ಕೂತರು. ಒಳಗಿಂದೊಬ್ಬಳು ಕಿವಿ ಮೂಗು ಮೊಂಡಾಗಿದ್ದ ನಾಲ್ಕಾರು ಕಪ್ಪುಗಳನ್ನು ತಂದಳು. ಸಾವಲಿ ಎಲ್ಲದರಲ್ಲೂ ಚಾ ಬಗ್ಗಿಸತೊಡಗಿದಳು. ಮೊದಲ ಗುಟುಕು ಹೀರುತ್ತಿದ್ದಂತೆ ಹುರುಪಿನ ಅಲೆಯೊಂದು ಎಲ್ಲೆಲ್ಲೂ ಉಕ್ಕತೊಡಗಿತು.

`ಇಂದೂ ಮದ್ಯಾಹ್ನ ಮೀನು ಹುರಿದಿದ್ದೆವು. ರಾವುಸ್ ಮೀನು ತಿಂತೀಯಾ’ ಎಂದೊಬ್ಬಳು ಕೇಳಿದಳು. ಬೇಡ ಎಂದ. `ಮರಾಠಿ ಜನರ ಹಾಗೆ ಮೇಲು ಮೇಲಿಂದಲೇ ಯಾಕೆ ಕೇಳ್ತೀ. ಕೊಡು ತಿಂತಾನೆ. ಮನೆಯಲ್ಲಿ ಮಾಡಿದ್ದು ಅವನಿಗೆಲ್ಲಿ ಸಿಗಬೇಕು ಹೇಳು’ ಎಂದಳು ಮತ್ತೊಬ್ಬಳು. ಅದಕ್ಕೆ ಸಾವಲಿ `ವ್ಹಾರೇ ಗರತೀ ಯಾರು ನಿನ್ನ ಗಂಡ ತಂದುಕೊಟ್ಟನಾ ಮೀನು? ಗಂಡ ಬರಲಿಲ್ಲವೇನೇ ಇನ್ನೂ ಆಫೀಸಿನಿಂದಾ?’ ಎಂದು ಛೇಡಿಸಿದಳು. ಅದಕವಳು `ಯಾಕೇ ಸಾವಲೀ, ನಿನ್ನ ಅತ್ತೆಯ ಕತೆ ಏನೇ ಮಾರಾಯ್ತೀ. ಅವಳು ಉಂಡ ಹೊರತು ನೀನು ಉಣ್ಣುವಂತಿಲ್ಲ ಹೌದೇನೇ’ ಎಂದು ಮರು ಛೇಡಿಸಿದಳು. ಉದ್ದನೆಯ ಕೋಲು ಮುಖದ ಯಾಸ್ಮಿನ್-ಪಾಪ ನನ್ನ ಗಂಡ ದುಬಾಯಿಯಿಂದ ಈಗಷ್ಟೇ ಬಂದಿದ್ದಾನೆ ನೋಡೆ’ ಎಂದು ಇಂದ್ರನೀಲನ ಗದ್ದದ ಮೇಲೆ ಕೈಬೆರಳಾಡಿಸಿದಳು. ಕಚಗುಳಿ ಆದಂತೆ ಇಂದ್ರನೀಲ ಕತ್ತು ಮಡಿಸಿ ಅಲ್ಲಾಡಿಸಿ-`ಸಾಕು ಸಾಕು ನಿಮ್ಮ ನಖರಾ. ಕೊಡಿ ನನ್ನ ಫ್ಲಾಸ್ಕು’ ಎಂದು ಎದ್ದು ನಿಂತ. `ಏ ಗಂಡಾ, ನನಗೆ ಟೂ ಇನ್ ವನ್ ತರಲಿಲ್ಲವೇನೋ…. ಚೈನಾ ಸಿಲ್ಕ್ ತರಲಿಲ್ಲವೇನೋ’ ಎಂದು ಸಾವಲಿ ಈಗ ಬೆನ್ನು ಬಿದ್ದಳು. ಚೂಟಿ ಪದ್ಮಿನಿ `ಸೀರೆ ಗೀರೆ ಬೇಡಾ, ನನಗೆ ಫಾರೆನ್ ಚಡ್ಡಿ ಬೇಕು. ಅದರಲ್ಲಿ ಕಸೂತಿ ಹೂ ಎಲ್ಲಾ ಇರ್ತದೆ. ಕುಣೀವಾಗ ನಾನು ಹೀಗೆ ಘಾಗ್ರಾ ಮೇಲೆಳೆದು. ಆ ಹೂವನ್ನು ಛಕ್ಕಂತ ತೋರಿಸ್ತೀನಿ’ ಎಂದು ತನ್ನ ಘಾಗ್ರಾವನ್ನು ಮೆಲ್ಲಗೆ ಸ್ಲೋ ಮೋಶನ್‍ನಲ್ಲಿ ಎಂಬಂತೆ ಮೇಲೇರಿಸತೊಡಗಿದಳು. ಇಂದ್ರನೀಲ `ಬಾಪ್‍ರೇ’ ಎಂದು ಕೂಗಿ ಫ್ಲಾಸ್ಕನ್ನು ಎತ್ತಿಕೊಂಡು ಹೊರಗೋಡಿದ.

ಎಲ್ಲರೂ ಖುಷಿಯಿಂದ ನಕ್ಕರು. ಸಾವಲಿ `ಚಾಯ್‍ವಾಲಾನ ಹತ್ತಿರ ಮತ್ತೆ ತುಂಬಿಸಿಕೊಂಡು ಹೋಗೋ ನಮ್ಮ ಲೆಕ್ಕಕ್ಕೆ. ದುಡ್ಡು ಕೊಡಬೇಡಾ….’ ಎಂದು ಕೂಗಿದಳು. ಇಂದ್ರನೀಲ ವಿಧೇಯನಂತೆ ಮತ್ತೆ ಚಾ ತುಂಬಿಸಿಕೊಂಡ. ಚಾಯ್‍ವಾಲಾ ನಗುತ್ತ `ಹರಾಮಿ ಹುಡುಗೀರು ಹಣ ಅವರ ಹತ್ರ ಇಸ್ಕೋತೇನೆ ನೀನು ಹೋಗು’ ಎಂದ. ಇಂದ್ರನೀಲ ತಣ್ಣನೆಯ ಗಾಳಿಯಲ್ಲಿ ಬಿಸಿ ಫ್ಲಾಸ್ಕನ್ನು ಎದೆಗೊತ್ತಿಕೊಂಡು ಒಪೆರಾ ಹೌಸ್‍ನೆಡೆಗೆ ನಡೆದ.

ಫ್ಲಾಸ್ಕಿನಿಂದ ಅವನಿಗೆ, ಸಾವಲಿ ಮತ್ತು ಸಖಿಯರ ದನಿಗಳು ಕೇಳಿಸತೊಡಗಿದವು. ಮಕ್ಕಳು ಮನೆ ಆಟ ಆಡುವಂತೆ ಅವರು ಅವರದೇ ರೀತಿಯಲ್ಲಿ ಆಡಿದ ಸುಳ್ಳು ಸಂಸಾರದ ಆಟದ ಸ್ವರಗಳು ಬಿಸಿಬಿಸಿ ಇದ್ದವು. ಅದೆಲ್ಲವೂ ಈ ಫ್ಲಾಸ್ಕಿನಲ್ಲಿದೆ. ಚನಾವಾಲಾನ ಪುಟ್ಟ ಅಗ್ಗಿಷ್ಟಿಕೆ, ಚಾಯ್‍ವಾಲಾನ ಸ್ಟೋವಿನ ಸದ್ದಿನ ಹಿನ್ನೆಲೆಯ ನರೆಗೂದಲ ನಗು, ಬಬನ್‍ನ ಇಸ್ತ್ರಿಯ ಕೆಂಡ-ಎಲ್ಲವೂ ಇದರಲ್ಲಿದೆ. ಇದನ್ನು ಬೇಗ ಬೇಗ ಒಪೆರಾ ಹೌಸ್‍ನ ನೀರವಕ್ಕೆ ರವಾನಿಸಬೇಕು ಎಂಬಂಥ ಅವಸರದಲ್ಲೇ ಓಡುತ್ತ ಗೇಟು ತಳ್ಳಿ ಒಣ ಕಾರಂಜಿಯ ಮಬು ನವಿಲುಗಳನ್ನು ದಾಟಿ, ಧಪ ಧಪ ಮುಖ್ಯ ಪಾವಟಿಗಳನ್ನು ಏರುತ್ತ ಬಾಲ್ಕನಿಯನ್ನು ಜಗುಲಿಯನ್ನು ತಲುಪಿದ.

ನೋಡಿದರೆ. ತಮ್ಮ ಆಟ ಮುಗಿಸಿ ಮಗನ್‍ಲಾಲ ಮತ್ತು ಭಾಲೇಕರ ಅದಾಗಲೇ ಉರುಳಿ ನಿದ್ದೆಯಲ್ಲಿದ್ದರು.

ಅವರು ಈಗಷ್ಟೇ ಮಲಗಿರಬಹುದು ಎಂದು `ಏ…ಏ… ಮಲಗೇ ಬಿಟ್ರೇನ್ರೋ…. ಗರಂ ಗರಂ…. ಚಾಯ್ ಬಂತು….ಏಳಿ….ಏಳಿ….’ ಎಂದು ಮೆಲ್ಲನೆ ಉಸುರಿ ನೋಡಿದ. ಇಲ್ಲ ಅವರ ಮೈಮೇಲೆ ಇಡೀ ಲೋಕಲ್ ರೈಲು ಹಾದು ಹೋದರೂ ಏಳಲಾರದಷ್ಟು ಆಳವಾದ ನಿದ್ರೆಯಲ್ಲಿದ್ದರು.

ಮಗನ್‍ಲಾಲನ ಒಂದು ಕಾಲಂತೂ ತಾನೇ ಅದುರಿಕೊಳ್ಳುತ್ತಿತ್ತು. ಪಾಪ, ಅವರೇ ತರ ಹೇಳಿದ್ದು. ಅವರಿಗಾಗೇ ತಂದದ್ದು. ಕುಡಿಯದೇ ಮಲಗಿಬಿಟ್ಟರಲ್ಲ. ಇನ್ನು ನಾಳೆ ತನಕ ಇದು ಹಾಳಾಗುತ್ತದೆ ಎಂದು ಅವರನ್ನು ಅಲುಗಿಸಲು ಮುಂದಾದ. ಕೈ ಮತ್ತೆ ಹಿಂಜರಿಯಿತು. ಪಾಪ ತುಂಬಾ ದಣಿದಿದ್ದಾರೆ. ಮಗನ್‍ಲಾಲನಂತೂ ಇಡೀ ದಿನ ಕತ್ತೆಯ ಹಾಗೆ ದುಡಿಯುತ್ತಾನೆ. ಕಳೆದ ವಾರದಿಂದಂತೂ ಎಂತೆಂಥದ್ದೋ ಉದ್ದದ ಕೋಲು ಕಸಬರಿಗೆ ತಂದು ಏಣಿ ತಂದು, ವೇಳೆ ಸಿಕ್ಕಾಗಲೆಲ್ಲಾ ಇಡೀ ಒಪೇರಾ ಹೌಸಿನ ಫ್ಯಾನುಗಳನ್ನು, ಹಳೇಕಾಲದ ವರ್ಣ ರಂಜಿತ ತೂಗು ದೀಪಗಳನ್ನು ಸಾಫು ಮಾಡುತ್ತಿದ್ದಾನೆ.

`ಸಿನಿಮಾ ನೋಡಿದವರೆಲ್ಲ ತಮ್ಮ ತಮ್ಮ ಮನೇಲಿ ಹೋಗಿ ಮಜಾ ಮಾಡ್ಕೊಂಡಿದ್ದಾರೆ. ಸಿನಿಮಾದವರೂ ಮಜಾ ಮಾಡ್ಕೊಂಡಿದಾರೆ….. ನೀನ್ಯಾಕೆ ಒದ್ದಾಡ್ತೀ? ಸಾಕು ಬಾ’ ಎಂದರೆ `ಛೆ…. ನಮ್ಮ ಮನೆಯಪ್ಪಾ ಇದು. ಇದನ್ನು ನಾವು ಚೆನ್ನಾಗಿಡದೆ ಇನ್ಯಾರು ಚೆನ್ನಾಗಿಡಬೇಕು. ಅಮಿತಾಬಚ್ಚನ್ ಬರ್‍ತಾನಾ ಈ ಬುರುಡೆ ಉಜ್ಜೋಕೆ? ಆಂ?’ ಎಂದು ಜಬರಿಸಿ, ತುಟಿಯನ್ನು ವಾರೆ ಮಾಡಿ ಕಚ್ಚಿ ಹಿಡಿದು ತನ್ಮಯನಾಗಿ ಹಳೇ ಕಾಲದ ಕುಸುರಿ ಕಾಜಿನ ದೀಪದ ಬುರುಡೆಗಳನ್ನು ಉಜ್ಜುತ್ತಲೇ ಇರುತ್ತಾನೆ. ಭಾಲೇಕರನೋ ಸ್ವತಃ ಬಡಿಗತನವೂ ಬರುತ್ತಿದ್ದರಿಂದ ಮುಂಜಾನೆಯಿಂದ ಮಧ್ಯಾಹ್ನದ ಶೋ ಶುರುವಾಗೋ ತನಕ, ಮೂಳೆ, ಸುತ್ತಿಗೆ, ಕರಗಸ, ಪ್ಲಾಸ್ಟಿಕ್ ವಸ್ತ್ರ, ದಬ್ಬಣ ಇಟ್ಟುಕೊಂಡು ಮುರುಕು ಸೀಟುಗಳನ್ನು ರಿಪೇರಿ ಮಾಡುತ್ತಲೇ ಇರುತ್ತಾನೆ. ಸ್ಪಂಜುಗಳಿಲ್ಲದ ಕುರ್ಚಿಯೊಳಗೆ ಟೇಲರ್ ಅಂಗಡಿಯ ಚಿಂದಿ ಬೂಸಾ ತುರುಕುವ ಐಡಿಯಾ ಅವನದೇ…. ಐಡಿಯಾ ಕೊಟ್ಟ ತಪ್ಪಿಗೆ ಅದನ್ನು ಅನುಷ್ಠಾನಕ್ಕೆ ತರುವ ಪ್ರಾರಬ್ಧವೂ ಅವನದಾಯಿತು. ಇಂದ್ರನೀಲ ಸೇರಿಕೊಳ್ಳುವ ಮೊದಲಿನಿಂದಲೂ ಇದ್ದವರು ಅವರು. ಇಬ್ಬರಿಗೂ ಪ್ರಾಜೆಕ್ಯನ್ ರೂಮಿನ ಉಸ್ತುವಾರಿಯೂ ಗೊತ್ತು.

ಉರುಳಿದ ಮರಗಳಂತೆ ದಣಿದು ಬಿದ್ದಿರುವ ಇಬ್ಬರನ್ನೂ ಎಬ್ಬಿಸುವುದು ನಿರ್ದಯ ಅನಿಸಿದರೂ ಅವರ ಹಂಬಲ ಈಡೇರಿಸದಿರುವುದು ಇನ್ನೂ ಕಟುವಾಗಬಹುದು ಅನಿಸಿ `ಚಾಯ್ ಚಾಯ್ ಗರ್ಮಾ ಗರಂ ಚಾಯ್’ ಎಂದು ಇಂದ್ರನೀಲ ಒಮ್ಮೆಗೇ ಕೂಗಿಕೊಂಡ. ಧಡಕ್ಕನೇ ಇಬ್ಬರೂ ಎದ್ದು ಕೂತರು. ನಿದ್ದೆ ಮತ್ತು ಎಚ್ಚರದ ನಡುವಿನ ಒಂದು ಬಗೆಯ ಪೆದ್ದು ನಗುವನ್ನು ಕೊಟ್ಟವರೇ ಬೆಳಗಾಗಿ ಹೋಯಿತು. ತಮ್ಮ ತಮ್ಮ ಕೆಲಸಕ್ಕೆ ತಡವಾಗಿ ಹೋಯಿತು-ಎಂಬಂತೆ ಭಯದಲ್ಲಿ `ಛೆ…ಛೆ….ತಡವಾಗಿ ಹೋಯ್ತು’ ಎಂದು ಎದ್ದು ನಿಂತು ಹಾಸಿಗೆ ಮಡಿಸತೊಡಗಿದರು. ಇಂದ್ರನೀಲ `ಏ…ಏ…ಈಗಿನ್ನೂ ಎರಡೂವರೆ, ಇನ್ನೂ ನಾಲ್ಕು ತಾಸು ಮಲಗೋದಿದೆ’ ಎಂದದ್ದೇ ಕುಸಿದು ಕೂತರು. ಕೌಂಟರಿನಿಂದ ಎರಡು ಗ್ಲಾಸು ತಂದು ಚಹಾ ಸುರಿಯುವತನಕ ವಿಧೇಯ ಬಾಲಕರಂತೆ ಮಂಕು ಕಣ್ಣಿನಲ್ಲಿ ಕಾಯುತ್ತಿದ್ದರು. ಬಿಸಿ ಬಿಸಿ ಚಾ ಕುಡಿದವರೇ `ಕ್ಯಾ ಬಾತ್ ಹೈ’ ಎಂದು ಉದ್ಗರಿಸಿ `ವಾಹ್ ಮಜಾ ಬಂತು’ ಎಂದು ಚಾದರವನ್ನು ಎಳೆದುಕೊಂಡು ಮಲಗಿ ಎರಡೇ ನಿಮಿಷದಲ್ಲಿ ಗೊರಕೆ ಹೊಡೆಯತೊಡಗಿದರು. ಅವರಿಬ್ಬರ ತಲೆಯ ಮೇಲ್ಗಡೆ ಇದ್ದ ಫ್ಲಾಸ್ಕು ಇಬ್ಬರನ್ನೂ ಕಾಯುತ್ತ ಕೂತಂತೆ ಕಾಣುತ್ತಿತ್ತು.

ದೀಪದ ಸಮೀಪ ಹೋಗಿ ಇಂದ್ರನೀಲ ಮತ್ತೊಮ್ಮೆ ವಿಳಾಸದ ಚೀಟಿ ನೋಡಿದ. ಈ ರಾತ್ರಿಗೂ ಆ ವಿಳಾಸಕ್ಕೂ ಸಂಬಂಧವೇ ಇಲ್ಲ ಈ ಒಪೇರಾ ಹೌಸಿಗೂ ಆ ವಿಳಾಸಕ್ಕೂ ಸಂಬಂಧವೇ ಇಲ್ಲ. ಈ ಇವರ ಗಾಢ ನಿದ್ರೆಗೂ ಆ ವಿಳಾಸಕ್ಕೂ ಸಂಬಂಧವಿಲ್ಲ. ಸಾವಲಿ ಮತ್ತು ಸಖಿಯರ ಬಿಡಾರಕ್ಕೂ ಆ ವಿಳಾಸಕ್ಕೂ ಸಂಬಂಧವಿಲ್ಲ. ಚನಾವಾಲಾನ ಅಗ್ಗಿಷ್ಟಿಕೆಗೂ ಆ ವಿಳಾಸಕ್ಕೂ ಸಂಬಂಧವೇ ಇಲ್ಲ. ಹೌದು ಆ ವಿಳಾಸಕ್ಕೆ ಅರ್ಥ ಬರಬಹುದಾದದ್ದು ಹಗಲಿನಲ್ಲಿ ಮಾತ್ರ, ಹಗಲಿನಲ್ಲಿ ಅಂಗಡಿಗಳು, ಬ್ಯಾಂಕುಗಳು ತಮ್ಮ ಷಟರ್‍ಗಳನ್ನು ಎತ್ತಿದಾಗ, ಜನ ಇಸ್ತ್ರಿ ಉಡುಪುಗಳನ್ನು ಹಾಕಿ ಸಂಚರಿಸಲು ತೊಡಗಿದಾಗ ಆ ವಿಳಾಸಕ್ಕೆ ಜೀವ ಬರುತ್ತದೆ. ಅದು ಹೊಸ ಜಾಗದಲ್ಲಿ ಇರುತ್ತದೆ. ಬೇರೆ ಮೂಲೆಯಲ್ಲಿ ಇರುತ್ತದೆ. ಬಾಗಿಲು ತೆರೆದವರು `ಏನಾಗಬೇಕಿತ್ತು?’ ಎಂಬ ಕಣ್ಣಿನಿಂದ ನೋಡುತ್ತಾರೆ. ಥ್ಯಾಂಕ್ಯೂ ಅನ್ನುತ್ತಾರೆ. ಎಲ್ಲಾ ಹಗಲಿನಲ್ಲಿ. ಹೌದು ಈಗ ಎಲ್ಲಿಯೂ ಒಯ್ಯಲಾಗದು ಇದನ್ನು. ಈಗ ಈ ಫ್ಲಾಸ್ಕೂ ಇಲ್ಲೇ ಇರಬೇಕು. ಈ ಇಡೀ ಒಪೇರಾ ಹೌಸಿನ ಜೀವದಂತೆ. ಇವರಿಬ್ಬರ ನಿದ್ರೆಯನ್ನು ಕಾಯುತ್ತ. ಈ ಚಿತ್ತಾರದ ಹಳೆ ಕಟ್ಟಿಗೆಯ ಉಪ್ಪರಿಗೆಗಳ ಜತೆ ಮಾತನಾಡುತ್ತ. ಹರಿದ ವಿಶಾಲ ಬೆಳ್ಳಿ ಪರದೆಯನ್ನು ಹೊಲಿಯುತ್ತ, ಅದರ ತೇಪೆಗಳನ್ನು ಮರೆಸುತ್ತ, ಸಾವಲಿಯ ಕರಗಿದ ಕಾಡಿಗೆಯ ಗೆರೆಗಳನ್ನು ಸರಿಪಡಿಸುತ್ತ, ಅಗ್ಗಿಷ್ಠಿಕೆಯ ಗಡಿಗೆಗೆ ಉಸಿರನ್ನೂದುತ್ತ….

ಕೂತಲ್ಲೇ ಒರಗಿದ ಇಂದ್ರನೀಲ ಕಣ್ತೆರೆದಾಗ ಬೆಚ್ಚಿಬಿದ್ದ, ಉರಿಯುವ ಹೊಸ ಹಗಲೊಂದು ಎಲ್ಲ ಕಿಟಿಕಿಗಳನ್ನು ಸೀಳಿ ಎರಗಿ ವ್ಯಗ್ರ ಚಿರತೆಯಂತೆ ಖಾಲಿ ಥೇಟರಿನಲ್ಲಿ ಓಡಾಡುತ್ತಿತ್ತು. ಎಲ್ಲೂ ಯಾರೂ ಇರಲಿಲ್ಲ. ಪ್ಲಾಸ್ಕು ನಿಸ್ತೇಜವಾಗಿ ಬಿಸಿಲು ಕೋಲಿನಲ್ಲಿ ಮೀಯುತ್ತಿತ್ತು. ಅದನ್ನೆತ್ತಿಕೊಂಡು ಪ್ರಾಂಗಣಕ್ಕೆ ಬಂದ. ಅಲ್ಲಿ ತುಂಬ ಜನ ಸೇರಿದ್ದರು. ಮಗನ್‍ಭಾಯಿ ಏದುಸಿರಿನಲ್ಲಿ ಏನನ್ನೋ ಕೂಗಿ ಹೇಳುತ್ತಿದ್ದ. ಅವನು ವಿಚಿತ್ರವಾಗಿ ಅಳುತ್ತಿರುವಂತೆಯೂ ಭಾಸವಾಗುತ್ತಿತ್ತು. ಭಾಲೇಕರ ಇತ್ತ ಓಡಿ ಬಂದವನೇ `ಇಂದೂ, ಸರ್ವನಾಶವಾಯಿತು. ಒಪೇರಾ ಹೌಸ್ ಈವತ್ತಿನಿಂದ ಮುಚ್ಚುತ್ತಿದ್ದಾರಂತೆ. ಮುಗೀತು. ಗಂಟು ಕಟ್ಟು ಇನ್ನು. ಗೇಟಿಗೆ ಬೀಗ ಹಾಕಿದ್ದಾರೆ. ಇಲ್ಲ ಇದನ್ನು ಕೆಡವಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡ್ತಾ ಇಲ್ಲ. ಏಕೆಂದರೆ ಇದು ಐತಿಹಾಸಿಕ ವಾಸ್ತು ಶಿಲ್ಪದ ಕಟ್ಟಡವಂತೆ, ಸ್ಮಾರಕವಂತೆ, ಇದನ್ನು ಹೀಗೆ ಮಾಡ್ತಾರಂತೆ. ನಾವೆಲ್ಲಿ ಹೋಗೋದೋ….. ಈವತ್ತಿನಿಂದ’ ಎಂದು ಇಂದ್ರನೀಲ ಕೊರಳಿಗೆ ಜೋತುಬಿದ್ದು ಬಿಕ್ಕತೊಡಗಿದ.

ಹೊಸದೊಂದು ಹಗಲುಗನಸಿನಂಥ ಈ ಕ್ಷಣಗಳಿಂದ ತನಗೇನೂ ಆಘಾತವೇ ಆಗುತ್ತಿಲ್ಲವಲ್ಲ ಎಂದು ಇಂದ್ರನೀಲ ಬೆಚ್ಚಿಬಿದ್ದ. ಏರುತ್ತಿರುವ ಬಿಸಿಲಲ್ಲಿ ಎಲ್ಲರೂ ಹಣ್ಣು ಮುದುಕರಂತೆ ಕಾಣುತ್ತಿದ್ದರು. ಕಾರಂಜಿಯ ನವಿಲು ವಿಕಾರವಾಗಿತ್ತು. ಅದರ ಕಣ್ಣಿನ ಜಾಗದಲ್ಲಿದ್ದ ಗಾಜಿನ ಗೋಲಿ ಚೆಕ್ಕೆ ಎದ್ದು ಒಡೆದುಹೋಗಿತ್ತು. ನಿನ್ನೆ ತನಕ ನಡೀತಿದ್ದ ಸಿನಿಮಾದ ಪೋಸ್ಟರುಗಳಲ್ಲಿಯ ಚಿತ್ರಗಳೆಲ್ಲ ಇಂದಿನಿಂದ ಮುಕ್ತಗೊಂಡ ಖುಷಿಯಲ್ಲಿದ್ದಂತೆ ತೋರುತ್ತಿದ್ದವು. ಇಬ್ಬರು ಪೋಲೀಸರು ಬೀಗ ಹಾಕಿದ್ದ ಗೇಟಿನ ಎದುರು ಅಂಗೈಯಲ್ಲಿ ತಂಬಾಕು ಅರೆಯುತ್ತ ನಿಂತಿದ್ದರು. ಮಗನ್‍ಭಾಯಿ ಅಲ್ಲಿಂದಲೇ `ಇಂದೂ…..ಹೋಗಿ ಗರ್ಮಾಗರಂ ಚಾಯ್ ತಗೊಂಬಾ. ನಮ್ಮ ಬರ್ಬಾದಿಯ ಖುಷೀಲಿ ಎಲ್ರೂ ಒಟ್ಟಾಗಿ ಕುಡಿಯೋಣ’ ಎಂದು ಸಿಟ್ಟಿನಿಂದ ಚೀರಿದ.

ಇಂದ್ರನೀಲ ಒಪೇರಾ ಹೌಸಿನ ಎಡಭಾಗದ ಲೋಹದ ಸುರುಳಿ ಏಣಿಯ ಪಕ್ಕದ ಕಿರುಬಾಗಿಲಿನತ್ತ ನಡೆಯುತ್ತ- ಭಾಲೇಕರನಿಗೆ `ಬೇಗ ಬಂದೆ’ ಎಂದು ಬಗ್ಗಿ ಹೊರಬಂದು ಹಗಲಿನ ಎದೆಯ ಮೇಲೆ ನಡೆಯತೊಡಗಿದ. ಹಗಲಲ್ಲಿ ವಿಳಾಸ ತಪ್ಪಲಿಲ್ಲ. ಗಂಗಾ ಜಮುನಾ ಅವಳಿ ಥೇಟರುಗಳ ಎದುರಿನ ಸೋನಾವಾಲಾ ಬಿಲ್ಡಿಂಗ್‍ನ ಒಂದು ಕೋಣೆಯ ವಸಾಹತುಗಳಲ್ಲಿ ಒಂದಾದ ಡಿ ಐವತ್ತೇಳು ಬಾಗಿಲು ತೆರೆದುಕೊಂಡಿತ್ತು. ಇರುವ ಹತ್ತು ಚದುರಡಿಯಲ್ಲೇ ಒಂದು ಮಂಚ, ಟೀಪಾಯಿ, ಮೂಲೆಯಲ್ಲಿ ಹೊಲಿಗೆ ಯಂತ್ರ, ಎರಡು ಕಬ್ಬಿಣದ ಕುರ್ಚಿ. ಒಂದು ಮಡಿಸಿಟ್ಟ ಆರಾಮ ಕುರ್ಚಿ, ಕಪಾಟು, ಅಡಿಗೆ ಕಟ್ಟೆ, ಡ್ರಮ್ಮುಗಳ ನಡುವೆ ಕಣ್ಣು ಸಣ್ಣ ಮಾಡಿಕೊಂಡು ಅಕ್ಕಿ ಆರಿಸುತ್ತಿದ್ದ ಹಣ್ಣುಗೂದಲ ಮಹಿಳೆ ಎದ್ದುನಿಂತಳು.

ಫ್ಲಾಸ್ಕು ಹಿಡಿದು ನಿಂತ ಇಂದ್ರನೀಲನನ್ನು ನೋಡಿದವಳೇ…. `ಬಾ ಬಾ ಆನಂದ ಅಲ್ವೇನೋ ನೀನು… ಪುಟಾಣಿ ಆಗಿದ್ದಾಗ ನೋಡಿದ್ದೆ. ನಮ್ಮ ಪಕ್ಕದಲ್ಲೇ ಇರ್ತಿದ್ರಿ ನೀವು ಆಗ. ಬಾ ಬಾ ಕುತುಕೋ…. ಯಾಕಪ್ಪಾ ಥರ್ಮಾಸು ವಾಪಸ್ ತಗೊಂಬಂದೆ. ನಿನ್ನ ತಾಯಿಗೆ ನನ್ನ ಮೇಲೆ ಇನ್ನೂ ಬೇಜಾರಿದೆಯಾ…. ನೋಡು ನೋಡು… ಕೂತುಕೋ ನನಗೆಲ್ಲಾ ತಿಳೀತದೆ. ಅರ್ಥ ಮಾಡ್ಕೊಳ್ತೀ ನೀನು….ನನ್ನ ಪತಿ ನೀನು ಅವರನ್ನ ದಯಾ ಕಾಕಾ ಅಂತ ಕರೀತಿದ್ದೆ ದಯಾ ಕಾಕಾ ಖಾಯಿಲೆ ಬಿದ್ದಿದ್ದಾಗ ಆಸ್ಪತ್ರೇಲಿ ತುಂಬಾ ದಿನ ಇದ್ದರು. ಆಗಲೂ ಹೀಗೇ ಕಷ್ಟಾನೇ ಇತ್ತು. ಹಾಲು ಗಂಜಿ ತೆಗೆದುಕೊಂಡು ಆಸ್ಪತ್ರೇಗೆ ಹೋಗೋದಕ್ಕೆ ನನ್ನ ಹತ್ರ ಥರ್ಮಾಸು ಇರ್ಲಿಲ್ಲಾ. ನಿನ್ನ ಅಮ್ಮ, ಕುಂದಾತಾಯಿ ಅಂತ ಕರೆಯೋದು ನಾನು ಅವಳನ್ನ- ತಕ್ಷಣ ನಿನ್ನ ಮನೇಲಿದ್ದ ಥರ್ಮಾಸನ್ನು ಆಮೇಲೆ ವಾಪಾಸು ಕೊಡಿ ಅಂತ ದೊಡ್ಡ ಮನಸು ಮಾಡಿ ಕೊಟ್ರು. ದಯಾ ಕಾಕಾ ಅಸ್ಪತ್ರೆಯಿಂದ ಮನೆಗೆ ಬರಲೇ ಇಲ್ಲ. ಖೊಟ್ಟಿ ನಶೀಬು ನನ್ನದು. ಅಂಬ್ಯುಲೆನ್ಸ್‍ನಲ್ಲೇ ತಂದು ಮುಖ ತೋರಿಸಿ ತಗೊಂಡು ಹೋಗಿಬಿಟ್ರು. ಒಬ್ಬಳೇ ಏನೇನು ಮಾಡಲಿ ನಾನು. ನಿಮ್ಮ ಥರ್ಮಾಸು ಮರಳಿಸಬೇಕಿತ್ತು ಆಗಲಿಲ್ಲ. ಸೂತಕದ ಮನೆಯಿಂದ ಥರ್ಮಾಸು ತಿರುಗಿ ಕಳಿಸಿದ್ರೆ ನಿಮ್ಮ ಮನೇಲಿ ತಗೊಂಡಾರೋ ಇಲ್ವೋ ಅಂತ ಹಿಂಜರಿಕೆ ಆಯ್ತು. ಕುಂದಾತಾಯಿ ಅರ್ಥ ಮಾಡಿಕೊಳ್ತಾಳೆ ಅಂತ ಸುಮ್ಮನಿದ್ದೆ. ಆಮೇಲೆ ಎಷ್ಟೋ ಸಲ ಕುಂದಾತಾಯಿ ಇಲ್ಲಿಗೆ ಬಂದು ಹೋದಳು. ಆದರೆ ಅದರ ಪ್ರಸ್ತಾಪ ಮಾಡಲಿಕ್ಕೆ ಮನಸ್ಸೇ ಬರಲಿಲ್ಲ. ಆಮೇಲೆ ನೀವು ಮನೆ ಬದಲಾಯಿಸಿ ಹೋಗಿಬಿಟ್ರಿ. ಪತ್ತೇನೇ ಉಳಿಲಿಲ್ಲ. ಆದರೆ ಆಮೇಲೆ ಯಾರೋ ಹೇಳಿದರು. ಕುಂದಾತಾಯಿ ಇಲ್ಲೆಲ್ಲಾ `ನಂದಾಬಾಯಿಗೆ ಕಷ್ಟಕ್ಕಾಗಲಿ ಅಂತ ಕೊಟ್ಟ ಥರ್ಮಾಸನ್ನು ತಾನೇ ಇಟ್ಟುಕೊಂಡುಬಿಟ್ಟಳು- ಎಂದು ಹೇಳುತ್ತಿದ್ದಳಂತೆ. ಕೇಳಿ ಬೇಜಾರಾಯ್ತು. ನೀವು ಎಲ್ಲಿದ್ದೀರಂತಲೇ ಗೊತ್ತಾಗಿರಲಿಲ್ಲ. ನಿನ್ನೆ ಪರುಳೇಕರ್ ಅಕಸ್ಮಿಕ ಸಿಕ್ಕಿದವರು ಹೇಳಿದರು. ಕುಂದಾತಾಯಿಗೆ ಜೋರು ಹುಷಾರಿಲ್ಲ. ಭಾಟಿಯಾ ಆಸ್ಪತ್ರೇಲಿ ಇದಾರೆ ಅಂತ. ಸಂಕಟಾ ಆಗಿ ಹೋಯ್ತು. ಮತ್ತೇನು ಸಹಾಯ ಮಾಡಬಲ್ಲೆ ನಾನು. ಇದು ಆ ಥರ್ಮಾಸಲ್ಲ, ಬೇರೆ ಫ್ಲಾಸ್ಕು. ನನ್ನ ತಂಗಿ ಬಿಟ್ಟು ಹೋಗಿದ್ದು. ದಾರೀಲಿ ಹೋಗುತ್ತಿದ್ದ ಒಬ್ಬ ಸೋದರನಿಗೆ ವಿನಂತಿಸಿಕೊಂಡೆ- ಹೋಗಿ ಭಾಟಿಯಾ ಆಸ್ಪತ್ರೇಲಿ ಕುಂದಾ ಘೋಗ್ರೆ ಅನ್ನೋ ಪೇಶೆಂಟ್‍ಗೆ ಕೊಡು ಅಂತ… ಇಷ್ಟೇ….ಆನಂದಾ….ನಂದೇನು ದುಷ್ಟ ಇರಾದೆ ಇಲ್ಲೊ ಇದರಲ್ಲಿ….ಯಾಕೆ ಪರತ್ ತಗೊಂಡು ಬಂದ್ಯೋ…. ಹೇಗಿದಾಳೋ ಕುಂದಾತಾಯಿ?- ಎಂದು ಉಕ್ಕಿ ಉಕ್ಕಿ ಪೇಲವವಾಗಿ ಅಳತೊಡಗಿದಳು.

`ಇಂದಿನಿಂದ ಎಲ್ಲಾ ಆಟಗಳು ರದ್ದಾಗಿವೆ’ ಎಂದು ಬೋರ್ಡು ಬರೆದು ಒಪೆರಾ ಹೌಸಿನ ಕಟಾಂಜನ ಉದ್ದಾಕ್ಕೂ ಹತ್ತಾರು ಪೋಸ್ಟರುಗಳನ್ನು ಹಚ್ಚಿ ಅರ್ಥವಾಗದ ಮೌನದಲ್ಲಿ ಸುಸ್ತಾಗಿ ಕೂತಿದ್ದ ಮಗನ್‍ಭಾಯಿ, ಫ್ಲಾಸ್ಕನ್ನು ಹಿಡಿದುಕೊಂಡು ಕಿರು ಗೇಟಿನಲ್ಲಿ ಬಗ್ಗಿ ಒಳಗೆ ಕಾಲಿಡುತ್ತಿದ್ದ ಇಂದ್ರನೀಲನನ್ನು ನೋಡಿದ್ದೇ `ಹೇ….ಚಾಯ್ ಬಂತೂ’ ಎಂದು ಕೂಗಿದ. ತನ್ನನ್ನು ಸಮೀಪಿಸುತ್ತಿದ್ದವರನ್ನು ಕಿಂಚಿತ್ತೂ ಗಮನಿಸದೆ, ಉಕ್ಕಿ ಬರುವ ಉಮ್ಮಳವನ್ನು ಕಷ್ಟದಿಂದ ತಡೆದುಕೊಳ್ಳುತ್ತ, ಇಂದ್ರನೀಲ ಫ್ಲಾಸ್ಕನ್ನು ಭಾಲೇಕರನ ಕೈಗೆ ಕೊಟ್ಟು, ಮೆಟ್ಟಿಲೇರಿ ಪಾವಟಿಗೆಗಳ ಹಿಂದಿನ ತನ್ನ ಮೂಲೆಗೆ ಹೋಗಿ ಕೂತುಕೊಂಡ. ಆಗಷ್ಟೇ ಅಲ್ಲಿ ಬಂದಂತಿದ್ದ ಬಿಸಿಲ ಕೋಲೊಂದು ಅವನನ್ನೇ ನೋಡುತ್ತಿತ್ತು. ಇಡೀ ಒಪೆರಾ ಹೌಸನ್ನೇ ತಬ್ಬಿ ಮುದ್ದಿಸುತ್ತಿದ್ದ ಬಿಸಿಲು ತನ್ನನ್ನೂ ಸಂತೈಸಲು ಒಳತನಕ ಬಂತಲ್ಲಾ ಅನಿಸಿ ಅದನ್ನೇ ನಿಟ್ಟಿಸುತ್ತ ಬೆರಳುಗಳಿಂದ ಮೆಲ್ಲಗೆ ಸೋಕಿದ ಒಪೆರಾ ಹೌಸಿನ ಒಳಗೆ ಅವಿತುಕೊಂಡಿದ್ದ ರಾತ್ರಿಯೊಂದು ಆ ಬಿಸಿಲಕೋಲಿನಲ್ಲಿ ಮೆಲ್ಲಗೆ ಹಗಲಿನಲ್ಲಿ ಬೆರೆಯತೊಡಗಿತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.