ಅಪ್ಪನ ಬಿಗಿ
ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ
ಅವ ಬಿಡಲಿಲ್ಲ
-ವೆಂದಲ್ಲ ನಾ ಹಿಂತೆಗೆದದ್ದು
ಅದಿಲ್ಲದಿರೆ
ಅವನ ಕಳೆಯೋ
ಕತ್ತಲ ಹೊಳೆಯೋ
ಗೊತ್ತಾಗುವಂತಿರಲಿಲ್ಲ.
ಅದೊಂದು ದಿನ ಬರಲಿಕ್ಕುಂಟು
ನಮ್ಮ ಮನೆ ಆತನ ಕಳಕೊಂಡು
ಬಿಕ್ಕಿ ಬಿಕ್ಕಿ ಅಳಲಿಕ್ಕುಂಟು
ಆಗ ಅದಕ್ಕೆ ಸರಿ
ಯಾಗುವ ಪರಿ
ಯಲ್ಲಿ ನಾ ಕಾಲ ಹೊಂದಿಸುವದುಂಟು
ಆದರೆ ದಿನ ನೂಕು
ವದೂ ಒಂದು ಜೋಕಾದ
ಈ ಇಲ್ಲಿ ಮಡಿಕೆಗಳಲ್ಲಿ
ನಾ ಬೆಳೆಯುವುದೆಂದೋ
ಒಂದೊಂದೇ ಮೆಟ್ಟಿಲ ಮೇಲೂ
ತಲಾ ಬೆಲೆಗಳನಿಟ್ಟು
ಕಾವು ಕೂರುವದೆಂದೋ
ಎಂದೆಲ್ಲ ಚಿಂತೆ ತುರಿಸುವ ವೇಳೆ
ಆಷಾಢದ ಮಳೆ
ತುಟುತುಟಿಸುವ ಥರ
ಬಂತೋ ಬಂತು ನಾ ಹುಟ್ಟಿದಾಗಲೇ ಅಪ್ಪ
ನನ್ನ ಮತ್ತವನ ಚಪ್ಪಲಿಗಳ
ಅದಲು ಬದಲಿಸಿದ-ಸಮಾಚಾರ
ಹಾ ಎನುವುದರೊಳಗೇ
ಹೊಂದಾಣಿಕೆ ಮರೆತುಬಿಟ್ಟೆ.
*****