ಕೋಳಿ ಕೂಗುವ ಮುನ್ನ

ರಕ್ತ ಕುಡಿಯುವ ಪಾತರಗಿತ್ತಿಗಳು
ಹಣ್ಣಾಗಿ ತೊಳೆ ತೊಳೆ ಚಿಗುರಿ
ಬೆವರುತ್ತಲೇ ಧಗೆಯುಂಡು
ಧಾವಿಸುವ ಬಣ್ಣಗಳು ಕಣ್ಣು ತುಂಬ.
ಒಂದರ ಮೇಲೊಂದು ಧಬ ಧಬ ಬಿದ್ದ
ಹಾಡಿಸುವ ತಂತು-ಮೋಹಿಸುವ ವೈವಾಟು
ಕಾಲು ಕೈ ಹಿಂಡಿ ನೂಲೆಳೆವ
ಹಂಜಿ ಹಿಂಜರಳೆ:
ನಾಲ್ಕನೆಯತ್ತೆಯ ಮಧ್ಯಾಹ್ನ ಮೂರು ಗಂಟೆಯ
ಮೂಲೋದ್ಯೋಗ ಕ್ಲಾಸು.
ಮುಗಿಲಿನಷ್ಟೇ ಶುಭ್ರ ನೀಲಿ ನಿಚ್ಚಳ-ಎಲ್ಲ
ಕುಕ್ಕರುಗಾಲಿನ ಮೊಲ
ಬೆಯ್ಯುತ್ತ ತೇಗುತ್ತ
ನೆನಪುಗಳ ಮೆಲುಕಾಡಿ ಸೋತು ಕೈ ಕರೆವ
ತಿರುವುಗಳು ಮೂಲೆಗಳು… ನೋಡಿದಲ್ಲಿ.
ಪಟಪಟಿಸುವ ಪ್ರಾಯಕ್ಕೆ
ನಿಗುರಿರುವ ಮೊಗ್ಗೆ-ಹೂ
ಮಿಲನ ಸಂದೇಹದ ಮೇಲೆ ಕೇಶರದ ಕೆಕ್ಕರು ತಲೆ
….ನಿಮಿಷ ನಿಮಿಷದ ಹೈಜಂಪ್.
ಕೊಂಬಿಟ್ಟು… ಒತ್ತಿಟ್ಟು… ಉದ್ಧಾರದವಲಕ್ಕಿ ಕಲಿಸಿ
ಕೊತಕುದಿಯುವ ಲಾರ್‍ವಾ-ಎಳೆದಷ್ಟೇ ಬಿರುಸು.
ಯಾವುದೋ ಮರುಭೂಮಿ… ಯಾವುದೋ ಓಯಸಿಸ್….
ತರತರದ ತೆರನಾಗಿ ಇರುತಿಹನು ಹಟಯೋಗಿ,
ಬಾರಮ್ಮ… ಬಾ ಹೆಣ್ಣೇ… ಬಾಯಿಲ್ಲಿ… ಬಿಚ್ಚಿಲ್ಲಿ
ಸಾಯಿಲ್ಲಿ-ಉದ್ಗಾರಗಳು ಕಣೇ ಇವು
-ಸ್ವಂತ ಹೇಸಿಕೆಗಳು
ಮುಚ್ಚಿಕೊಳ್ಳಲು ನಿಂತು… ಬಾಯ್ದಿಡುವ…
ಗಿಂಜುವ ಹಲ್ಲು ಅಂಜುವ ಬಾಲವಾಟಿಕೆಗಳು.
ಸಂಬಂಧ ಮಾಲೆಗಳ ಗಬ್ಬಗೊಳಿಸಿ
ಬಿಳಿನುಣುಪು ಹೊಟ್ಟೆ ಸಡಿಲಾಗಿ ಸವರಿ
ಕೆಳಗಿಳಿದ ಕೈ-ಕಿರಗಣೆಯ ಸಾಮ್ರಾಜ್ಯ
ಬಿಟ್ಟೆ ಬಿಟ್ಟೆ… ಬಿಟ್ಟೇ ಬಿಟ್ಟೇ….
ಉದ್ದಿನ ಮೂಟೆ ಉ…ರು…ಳೇ… ಹೋಯ್ತೆಽ.
ತಿರುತಿರುಗಿ ಕರಗದೆ ಕುಳಿತ ಗ್ಲಾಸಿನಾಳದ ಉಪ್ಪು
ತಪ್ಪಿಸಿದರೂ ಬಾ ಎಂಬ
ಛಾತಿ ಹಿಡಿತದ ಛಾಯೆ-
ಗಾಜಿಸುವ ಸುಖ ಸಂಪತ್ತು-ತೆಕ್ಕೆ ರಾ-
ರಾಜಿಸುವ ಸಿದ್ಧಕೋಳಗಳು.
ಸೂರ್‍ಯ ಕುದಿಯುವ ಉಸುಕಿನ ಗುಂಟ
ಸರ ಸರ ಗೀರಿ
ಮಟ… ಮಟ… ಮಧ್ಯಾಹ್ನಿಸುವ ಶಂಕದ ಹುಳ.
ಅಟ್ಟದ ಮೇಲಿದ್ದ ಭಸ್ಮ-ಜನಿವಾರ-ಕೌಪೀನಗಳ
ಕೊಳಕು ಪಂಜಿಯ ನೆರಳ ಮಬ್ಬಿನೊಳಗಿಂದ
ಜೇಡ ತಡವರಿಸುತ್ತ
ಏಣಿಯಿಳಿದಾಗ
ಜಾರುವ ನೆನಪುಗಳು ಕಾಲ ಕೆಳಗೆ-
ಕಾಲಿಟ್ಟ ತೇಪೆಯ ಜತೆಗೇ ಸ್ರವಿಸುವ ಶಬ್ದಗಳು
ದ್ರವಿಸುವ ಮಾಂಸಲ ಬೆರಳು
ಹಳದಿಯಾಗಿರಬೇಕೆ ಮುಪ್ಪಿನಳತೆಯ ಸಾವು?
ಚುಕ್ಕಿ ತತ್ತರಿಸುವ ಥರ ಬೆಳಗುಂಜಾಮದ ಕರ್‍ಣ
-ಕಠೋರ ಬಿರಿಯುತ್ತಿರುವ ಚಂಡೆ ಚರ್‍ಮ.
ಕೋಳಿ ಕೂಗುವ ಮುನ್ನ-
ಕಾಣಲಿದೆ ನಗ್ನರೇಖೆ…. ಬೆಳೆಯಲಿದೆ ಉಬ್ಬು ತಗ್ಗು…
ಭಾಷೆಯುದ್ರೇಕದ ಮೇಲೆ ಮುಗಿಯಲಿದೆ ಶಿಲ್ಪ.
ಆದರೆ ಅಯ್ಯೋ….
ಅಪ್ಪಿತಪ್ಪೆಲ್ಲಾದರೂ ಸೂರ್‍ಯ ತಲೆಯೆತ್ತಿದರೆ
ಇದ್ದ ಸುತ್ತಿಗೆ, ಚಾಣ-ಇದ್ದ ಸ್ಥಿತಿಯಲೇ ಬಿಟ್ಟು
ಓಡಿ ಹೋಗಲಿಕುಂಟು….
ಈ ನೆಲದಾಳದಲ್ಲಿದ್ದೇ ಮಳೆಗರೆವ
ಆ ಪಾತರಗಿತ್ತಿಗಳೇ ತುಂಬಿರುವ
ಬೃಹತ್‌ ಕೆರೆಗೆ-ಸಂತತಿಯ ಕರೆಗೆ.
*****