ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು
ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ
ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ
ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು
ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ.
ಅರೆ, ಎಂದು ಒಂದು ಕ್ಷಣ ಆಶ್ಚರ್ಯಪಟ್ಟೆ,
ಆಲೋಚಿಸಿದೆ;
ನೆರಳು ನನ್ನ ಮರದ್ದು, ನಿಲ್ಲಿಸಬೇಡಯ್ಯ ಕಾರು
ಅಂದರೆ ತಪ್ಪೆ?
ಅದರ ನೆರಳಲ್ಲಿ ನಿಂತಿದ್ದರಿಂದ ಆ ಕಾರು
ನನ್ನದೆಂದರೆ ತಪ್ಪೆ?
ದಬಾಯಿಸಿದರೆ ಅವ ಹೀಗೆ: ಬೆಪ್ಪೆ,
ತೆಂಗು ನಿನ್ನದಿರಬಹುದು, ಅದರ ನೆರಳು ನಿನ್ನದ?
ದಿನ ಬೆಳಗಾದರೆ ಗರಿಗಳಲ್ಲಿ ಅರಳುವ ಹಕ್ಕಿ ನಿನ್ನದ?
ಅದರ ಕಿಚಪಿಚ, ಅಲೆಯುವ ಹವೆ, ಹೊಳೆಯುವ ಕಿರಣ,
ತೂಗುವ ಚಂದ್ರ – ನಿನ್ನದ?
ಇದು ಸಾರ್ವಜನಿಕ ರಸ್ತೆ – ನಿಲ್ಲಿಸಲು,
ಅಲ್ಲಿ ಚೆಲ್ಲಿದ ನೆರಳೂ ನನ್ನದೆನ್ನಲು ಹಕ್ಕುಂಟು.
ಆಲದೆ, ನೆರಳ ನೆಪದಿಂದ ವಾಹನ ನಿಲ್ಲುತ್ತೆ,
ಹಾಗಾಗಿ ಸಂಚಾರಕ್ಕೆ ಅಡಚಣೆ, ಕತ್ತರಿಸು
ಮರವನೆಂದರೆ ಎಲ್ಲಿದೆ ನನ್ನಲಿ ಜವಾಬು?
ಕ್ಷಣ, ದಿಗಿಲಾಗಿ
ಕಾರಲ್ಲಿ ಯಾರೂ ಇಲ್ಲದ್ದು ಖುಷಿಯಾಗಿ
ನೆರಳ ನೋಡದೆ
ಬರೀ ಕಾರಿನಂದವ ಮೆಚ್ಚುತ್ತ ಸರಸರ ಒಳಗೆ ನಡೆದೆ.
*****