ಮುದ್ದು ಮಕ್ಕಳಿಗೊಂದು ಕವಿತೆ

ನೀಟಾಗಿ ಪುಟು ಪುಟು ಎಳೆ ಕ್ರಾಪು ಬಾಚಿ
ಪೌಡರು ಘಮ ಘಮಿಸುವ ಪುಟಾಣಿ ಮಕ್ಕಳೇ
ಖುಷಿಯಾಗುತ್ತದೆ ನಿಮ್ಮ ಕಂಡು
-ನಿಮ್ಮ ಹಾಗೆಯೇ ನಾನೂ ಇದ್ದೆನಲ್ಲಾ
ತಕ್ಷಣ ನೋಯ್ದು ಕಹಿಯಾಗುತ್ತದೆ ಮನ
-ನನ್ನ ಹಾಗೆಯೇ ಮುಂದೆ ನೀವೂ ಆಗುವಿರಲ್ಲಾ

ಏಕೆ ಮಕ್ಕಳೇ ಪಾಪ
ನಿಮಗೇನು ಗೊತ್ತು ನಿಮ್ಮ ಹುಟ್ಟಿನ ತಡ
ನಿಮಗೇನು ಗೊತ್ತು ನೀವಪ್ಪಳಿಸಲ್ಪಟ್ಟ
ನದಿಯೇ ಇಲ್ಲದ ದಡ
ನಿಮ್ಮ ಪುಟ್ಟ ದೃಷ್ಟಿಗೆ ಈ ನಾನು
ನನ್ನವರು ಎಷ್ಟು ವಿಶಾಲ ತಾನೆ
ನಿರ್‍ಭೀತ ನಿಮ್ಮ ನಿಲುವುಗಳಿಗೆ ಈ ಎಲ್ಲ ನಕಾಶೆ ಗುಡ್ಡ
ಕೊಳ್ಳ ಕಾಲುವೆ ಕಾಡು ಕೇವಲ ಹಿನ್ನೆಲೆ ತಾನೆ
ತಾನೇ ತಾನಾಗಿ ಬೃಹದಾಕಾರಕ್ಕೆ ಬೆಳೆಯುವ
ಪ್ರಶ್ನೆಗಳ ಮೇಲೆ ನಿಮ್ಮ
ಪುಟ್ಟ ಸಾಕ್ಸುಗಳೊಳಗಿನ ಬಿಳಿ ಎಳೆ ಮೀನು
ಪಾದಗಳ ಗುರುತು ಮೂಡುವುದಿಲ್ಲ ಮಕ್ಕಳೇ
ಪ್ರಶ್ನೆ ಕೇಳಲು ನೀವು ಕೈಯೆತ್ತಿ ಒಮ್ಮೆ
ಎಲ್ಲ ಕೈಗಳ ಎಳೆಮೊಗ್ಗು ಬೆರಳು
ಕೂಡಿ ಚಂದದ ಮಲ್ಲಿಗೆ ರಾಶಿ
ಒಮ್ಮೆ ಅತ್ತುಬಿಡಿ ದೇಶಕ್ಕಾಗಿ – ಹಾ ಹಾ
ಆ ಎಸಳು ತುಟಿಯಿಂದ ಪಟ ಪಟ ಹುಡಿ
ಉದುರುವ ಚಂದ್ರ ಸೂರ್‍ಯ ನಕ್ಷತ್ರ
ಬೆಳ್ಳನೆ ಹಾಲು ಬೆಳದಿಂಗಳು
ಮೈಕಿಗೆ ಬಾಯಿ ಕೊಡಿ ನೋಡುವಾ-
ತಿಳಿ ತಿಳಿ ತೊದಲು ದೃಷ್ಟಿ ಭಾಷೆ ಎಷ್ಟು ಹಿತದರಳು
ಹಸಿವೆಗೆ ಹಾರ್‍ಲಿಕ್ಸು
ಅತ್ತರೆ ಚಾಕಲೇಟು – ಮತ್ತೆ ಮುತ್ತಿನೋಕುಳಿ
ಅರಿವೇ ಇಲ್ಲದ ಕೋಶಾವಸ್ಥೆ

ನಿಮ್ಮ ಕಣ್ಣುಗಳೊಳಗೆ ಏನು ನಡೆದಿಲ್ಲ
ಯಾಕೆ ನಡೆದಿಲ್ಲ
ಸದ್ಯ ನಿಮ್ಮ ನೋಟದ ನೇರ ಇನ್ನೂ ಒಡೆದಿಲ್ಲ
ಶಿಸ್ತಾಗಿ ಶಾಲೆಗೆ ಹೋಗುತ್ತೀರಿ ಅರ್‍ಧ ಮರ್‍ಧ
ಕಲಿಯುತ್ತೀರಿ ನಿಮ್ಮ ಅಮ್ಮ ಅಪ್ಪ
ನೆರೆ ಹೊರೆಯಲ್ಲಿ ಕಚ್ಚಾಡಿ ನಿಮ್ಮ ಕೊಂಡಾಡಿ
ನೀವು ನಿದ್ದೆ ಹೋದ ಮೇಲೆ ಮೆತ್ತಗೆ ಎದ್ದು
ಒಟ್ಟಿಗೇ ಮಲಗುತ್ತ – ಬ್ಯಾಂಕಲ್ಲಿ ನಿಮ್ಮ ಖಾತೆಗೆ ಜಮಾ ಮಾಡಿ
ಮಾಡಿ ಸುಸ್ತಾಗುತ್ತಿರುವಾಗಲೇ
ಈ ಹವೆಗೆ ನಿಮ್ಮ ಪುಪ್ಪಸಗಳು ಅರಳಿಕೊಳ್ಳುತ್ತವೆ.
ನೀವು ಬೆಳೆದುಬಿಟ್ಟಿರುತ್ತೀರಿ ಮಕ್ಕಳೇ ನಿಮಗದು ಗೊತ್ತಾಗುವುದಿಲ್ಲ
ಇಂದಿನ ಇರುವೆಗಳೇ ಅಂದು ಚೇಳಾಗಿರುತ್ತವೆ
ಇಂದಿನ ಎರೆಹುಳುಗಳೇ ಅಂದಿನ ಹಾವಾಗಿರುತ್ತವೆ

ಆಟ ಆಡಿ ಮಕ್ಕಳೇ
ಗುಬ್ಬಿಗೂಡು ಅದೂ ಇದೂ ಆಟ ಆಡಿ
ಒಬ್ಬ ಮರಿ ಬ್ಯಾಟ್ಸ್‌ಮನ್ ಒಬ್ಬ ನರಿ ಸ್ಟೇಟ್ಸ್‌ಮನ್
ಒಬ್ಬ ನಟಿ ಒಬ್ಬ ನಟ ದಾರಿ ಕಳೆದ ಗಾಳಿಪಟ
ಈಗಲೇ ಎಲ್ಲವನ್ನು ತಮಾಷೆ ಎಂದುಕೊಂಡು
ಆಡಿಕೊಳ್ಳಿ ಮಕ್ಕಳೇ

ಇಂದಿನ ಈ ತೆಂಗು ಕಂಗು ಹೊಟ್ಟೆ ಟೊಪ್ಪಿಗೆ
ಇವೆಲ್ಲ ಒಮ್ಮೆ ನಿಮ್ಮ ಹಾಗೇ ಇದ್ದವು
ಈ ಗಂಟಲುನರಗಳು ಗದ್ದುಗೆ ಪಾದಗಳು ಘಟಾನು
ಘಟಿಗಳು ಎಲ್ಲ ಒಮ್ಮೆ ನಿಮ್ಮ ಹಾಗೇ ಇದ್ದವು
ಅಂತೆಯೇ
ನಿಮ್ಮನ್ನು ನೋಡುತ್ತಿರುವಂತೆ ನನಗೆ ಹೆದರಿಕೆ ಆಗುತ್ತದೆ
ಈ ನಿರ್‍ಲಿಪ್ತ ಅತೀತ ಅತೀಂದ್ರಿಯ ಖುಷಿಗೆ
ಅಸೂಯೆ ಆಗುತ್ತದೆ.

ಈ ಪುಟ್ಟ ಪುಟ್ಟ ತೊಂಡೆ ಬೆರಳು ಸೌತೆ ಕೈ ಕಾಲು
ಬೆಳೆದು ಬಿರುಸಾಗಿ ಈ ಜೀವ ರಸ
ಚಿಮ್ಮುವ ಗಲ್ಲಗಳು ಒಣಗಿ ಗೆರೆಸುಕ್ಕು ಮೂಡಿ
ಧೀರ ಗಂಭೀರ ಮೀಸೆ ಗಡ್ಡಾದಿಗಳ
ಎಂತೆಂಥದೋ ಕಳೆಗಳ ಒಡೆಯರಾಗಿ
ಅಪ್ಪಂದಿರಾಗಿ ಥೇಟು ಅಪ್ಪಂತರಾಗಿ
ವಸ್ತುಗೆ ಮೀರಿದ ಭಾವ ಹೊತ್ತು ಮೆರೆಯಲಿದ್ದೀರಿ
ಆ ನಿಮ್ಮ ಘೋರ ಕವಿಸಮಯಗಳನ್ನು ಊಹಿಸಲಾರೆ

ಬನ್ನಿ ಮಕ್ಕಳೇ
ನೀವು ಹೀಗೆಯೇ ಖಾಯಂ ಇದ್ದುಬಿಟ್ಟಿದ್ದರೆ!
-ಎಂದುಕೊಳ್ಳುತ್ತ ಒಟ್ಟಾರೆ
ಖುಷಿಯಿಂದ ಮುತ್ತಿಡುತ್ತೇನೆ
ಈ ಇಂದಿನ ಹಗಲು ಇರುಳಾಗುವದರೊಳಗೇ
*****