ಚರಾಸ್ತಿ

ಶೆಟ್ರು ಗುರುಶಾಂತಪ್ಪನ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಆ ಊರಿನ ಹತ್ತು ಸಾವರ ಮಂದಿ ಒಂದಲ್ಲಾ ಒಂದು ರೀತಿಯಲ್ಲಿ ಆತನ ಋಣದಲ್ಲಿ ಬಿದ್ದಿರುವರು. ಮೂಲಿಮನಿ ಸಿದ್ದಪ್ಪನಂಥೋರು, ಪಿಂಜಾರು ಇಬ್ಬಾಹಿಮನಂಥೋರು; ಪಾತರದ ಹನುಮಕ್ಕನಂಥೋರು…. ಹೀಗೆ ಇನ್ನೂ ಎಷ್ಟೋ ಮಂದಿ ಹತ್ತಿರಿಂದ ಸಾವಿರದವರೆಗೆ ಸಾಲ ಇಸಿದುಕೊಂಡುವರುಂಟು. ಗಂಡಬಿಟ್ಟ ಕಾಟಿನ ಹೆಂಗಸರು ಗುರುಸಾಂತಪ್ಪನ ದಯಿಯಿಂದ ಇನ್ನೊಬ್ಬ ಗಂಡನನ್ನು ಕೂಡಿಕೆ ಮಾಡಿಕೊಂಡು ನಾಕೈದು ಹೆತ್ತು ಸುಖವಾಗಿರುವುದುಂಟು. ‘ಹುಟ್ಟಿದ ಮಗ್ನೀಗೆ ನಿನ್ನೆಸ್ರು ಇಡಬೇಕು ನಮ್ಮಪ್ನೇ’ ಎಂದು ಕೈಕೈ ಹಿಚುಕುತ್ತ ಬೆಣ್ಣೆ ಹಚ್ಚುವ ಮಂದಿಯ ಮನ್ತೆನದ ಕೊಡುಕೊಳ್ಳೋ ವ್ಯವಹಾರದಲ್ಲಿ ಗುರುಸಾಮತಪ್ಪ ಕೈಹಾಕಿದನೆಂದರೆ ಆರು ಹನ್ನೆರಡಾಗಲೇಬೇಕು. ಈಗ್ಗೆ ಎರಡು ವರುಷದ ಹಿಂದೆ ಯುಗಾದಿ ಎಡಬಲ ಬಸಂದೇವರ ಗುಡಿಕಟ್ಟೆಗೆ ಅಟ್ಟ ಹಾಕಿ ಆಡಲಾಗಿದ್ದ ದುಶ್ಯಾಸನ ಕಥಿ ಎಂಬ ಬಯಲಾಟದಲ್ಲಿ ಸಾರಥಿ ಪಾರುಟು ಮಾಡಿದ್ದ ಸಾದರ ಮೂಗ ‘ಗುರುಸಾಂತಪ್ಪ ದೊರಿಯೇ ನಿನಗಾರು ಸರಿಯೇ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್’ ಎಂದು ಗತ್ತಿನಿಂದ ಧ್ವನಿ ಎತ್ತರಿಸಿ ಮಾತು ಕೊಸೆದಿದ್ದ. ಜನರು ಗೊಳ್ಳನೆ ನಗುತ್ತಿದ್ದಾಗಲೇ ‘ಪಟ್ಟಣ ಸೆಟ್ರು ಗುರು ಸಾಂತಪ್ಪೋರು ಹತ್ರುಪಾಯಿ ಕೊಟ್ಟಿರುತ್ತಾರೆ’ ಎಂದು ಮೈಕು ಸಾರಿತು. ಹೀಗೆ ಭಜನೆಯಿಂದ ಬಯಲಾಟದವರೆಗೆ; ಚಿನ್ನಿಕೋಲಿನಿಂದ ಹಿಡಿದು ಜಂಗೀ ಕುಸ್ತಿಯವರೆಗೆ ಏನೇ ನಡೆಯಲಿ ಅದಕ್ಕೆ ಗುರುಸಾಂತಪ್ಪನ ಅದ್ವರ್ಯವೇ ಬೇಕು.

ಇಂಥ ಶೆಟ್ರು ಗುರುಸಾಂತಪ್ಪನ ತಲೆಕೆಟ್ಟಿದೆ ಎಂದು ಜನ ಚಾದಂಗಡಿಗಳಲ್ಲಿ ಶರಣವ್ವನ ಖಾನಾವಳಿಗಳಲ್ಲಿ; ಎಂಕಟೇಶಿಯ ಹೇರುಕಟ್ಟಿಂಗ ಸೆಲೂನಿನಲ್ಲಿ; ಬಸ್ಸ್ ನಿಲ್ಲುವಲ್ಲ; ತಿಪ್ಪೆಯಲ್ಲಿ ಹೀಗೆ ಎಲ್ಲಿ ಬೇಕೆಂದರಲ್ಲಿ ಗುನುಗುತ್ತಿರುವರು. ಇದರಲ್ಲಿ ಎಷ್ಟು ಸುಳ್ಳೋ! ಎಷ್ಟು ನಿಜವೋ! ಬೆಂಕಿ ಇಲ್ಲದೆ ಹೊಗೆ ಬರುವುದಿಲ್ಲ; ಹೂಸು ಬಿಡದೆ ವಾಸನೆ ಬರುವುದಿಲ್ಲ. ರೊಕ್ಕದ ಮೇಲೆ ಬಿದ್ದು ಒದ್ದಾಡುತ್ತಿದ್ದ ಮನುಷ್ಯ ಶೆಟ್ರು ಗುರುಸಾಂತಪ್ಪ. ಅರ್ಧಾಣೆಗೆ ಬಾಳದ ಮಾನವನಿಗಿಂತ ಗಾಳಿಗೆ ಪುರ್‍ರನೆ ಹಾರಿಹೋಗುವ ರೂಪಾಯಿ ನೋಟೇ ಬದುಕಿನ ಊರುಗೋಲು ಎಂದು ನಿರ್ಧರಿಸಿದ್ದ ಗುರುಸಾಂತಪ್ಪ ಅಲಿಯಾಸ್ ಗುರಜ್ಜ ಕೊರೆದ ಗೆರೆಯನ್ನು ಯಾವ ಕಾರಣಕ್ಕೂ ಅಳಿಸಿದಾತನೆ ಅಲ್ಲ. ಇಂಥ ಮನುಷ್ಯನಿಗೆ ಹುಚ್ಚು ಹಿಡಿದೈತೆ ಎಂದರೆ ಸ್ವಲ್ಪ ಯೋಚಿಸಬೇಕಾದ ವಿಷಯವೇ ಆಗಿದೆ.

ಅಷ್ಟೇನು ಎತ್ತರವಲ್ಲದ ಸುಮಾರು ದಪ್ಪದೇಹ, ಬಹುಪಾಲು ಕೂದಲುದುರಿ ಮಿರಿಮಿರಿ ಮಿಂಚುವ ಗುಡಾಕಾರದ ತಲೆ, ದೊಣ್ಣೆಮೂಗಿನ ಕೆಳಗೆ ಒಗರು ಮೀಸೆ, ಮೇಲ್ದವಡೆಯಲ್ಲಿ ಐದು ಹಲ್ಲುಗಳು ಕೆಳದವಡೆಯಲ್ಲಿ ನಾಕು ಹಲ್ಲುಗಳು ಬಿಟ್ಟರೆ ಮತ್ತೊಂದು ಹಲ್ಲು ನಿಗೂಢ ಗವಿಯಂಥ ಬಾಯಿಯೊಳಗೆ ಉಳೀದಿರಲಿಲಲ. ಅಂಥಾದ್ದರಲ್ಲೂ ಕಟುಗು ರೊಟ್ಟಿ ಕಟುಂಕಟುಂ ಅಂತ ಕಡಿಯುತ್ತಿದ್ದ ಈ ಮನುಷ್ಯ ತಲೆಗೊಂದು ರುಮಾಲು ಸುತ್ತಿ, ಎಡಗೈಯ ಬೆರಳ ಸಂದಿಯಲ್ಲಿ ಕಾಳಹಸ್ತಿ ಬೀಡಿ ಸಿಕ್ಕಿಸಿಕೊಂಡು ಚಾವಡಿಯ ಬಯಲಿಗೆ ಬಂದ ಅಂದರೆ ಮುಗಿಯಿತು ‘ಎಜ್ಜಾ’ ಎನ್ನುವವರೆಷ್ಟೋ! ‘ಮಾವಾ’ ಎನ್ನುವವರೆಷ್ಟೋ! ಈಸೂರ ದೇವರ ಗುಡಿಯಲ್ಲಿ ದೀಪವಿದ್ದಿಲ್ಲ ಎಂದು ಹಾರಾಡಿದಾಗಂತೂ ಪೂಜಾರಿ ಮಲ್ಲಯ್ಯ ಮುಗುಳು ನಗುತ್ತಿದ್ದನೇ ಹೊರತು ಸಿಟ್ಟಗುತ್ತಿರಲಿಲ್ಲ. ‘ಏನೋ ಯಜಮಾನ ಮನುಷ್ಯಾ ಬಯ್ಕಳ್ಳೀ’ ಎಂದು ಸುಮ್ಮನಾಗಿ ಬಿಡುತ್ತಿದ್ದ. ಮಂದಿ ಎದುರು ಪ್ರೀತಿಯಿಂದ ಧಿಮಾಕು ತೋರಿಸುತ್ತಿದ್ದ ಶೆಟ್ರು ಗುರುಸಾಂತಪ್ಪಗೆ ಹುಚ್ಚು ಹಿಡಿದೈತಿ ಎಂದು ಮಂದಿ ಹಾಡಿಕೊಳ್ಳುತ್ತಿರುವವರಲ್ಲ ಇದರಲ್ಲಿ ಹಾಲೆಷ್ಟೋ? ನೀರೆಷ್ಟೋ?

ಮುಪ್ಪಾನು ಮುದುಕ ಆಗಿರೋ ಹೊಸಮನಿ ಕೊಟ್ರಜ್ಜಗೆ ಶೆಟ್ರು ಗುರುಸಾಂತಪ್ಪನ ಪೂರ್ವಾಪರ ಗೊತ್ತು. ಮಾರಮ್ಮ ಬಂದು ಊರು ಸರ್ವನಾಶಣ ಆಗಿದ್ದ ಎಡಬಲ. ತಲೆಯ ಮೇಲೆ ಗೋಣಿಚೀಲ ಹೊತ್ತುಕೊಮಡು ಈಶಾನ್ಯಕ್ಕಿರುವ ಬೈರ ದೇವರ ಗುಡ್ಡದ ಕಿರುಕಾಲು ಹಾದಿಗುಂಟ ಈ ಗ್ರಾಮವನ್ನು ಪ್ರವೇಶಿಸಿದ ಈ ಯಜಮಾನ ಮನುಷ್ಯನ ಬಕ್ಕಣದಲ್ಲಿ ನೋಟುಗಳಿರಲಿಲ್ಲ, ಬೆಳ್ಳಿ ರೂಪಾಯಿಗಳಿರಲಿಲ್ಲ. ಈಶಾನ್ಯ ದಿಕ್ಕಿನ ಮೂಲಕ ಬಣಜಿಗನೊಬ್ಬ ಊರು ಪ್ರವೇಶಿಸಿದರೆ ಒಳ್ಳೆಯದಲ್ಲವೆಂದೋ, ಅಥವಾ ಗುರುಸಾಂತಪ್ಪನ ಮುತ್ತೈದೆ ಹೆಂಡತಿ ಗೌರಮ್ಮನ ದುಂಡುಮುಖದಲ್ಲಿ ಸಂತೋಷ ಮಾಸದೆ ಹಾಗೆ ನೆಲೆಸಲೆಂದೋ ಕುರುವತ್ತಿ ಸಿದ್ರಾಮಜ್ಜ ತನ್ನ ಬಜಾರದ ಮನೆಯಲ್ಲಿ ಇರಲಿಕ್ಕೆ ಕೊಟ್ಟಿದ್ದೂ ಅಲ್ಲದೆ ನಾಕು ಕಾಸು ಸಹಾಯ ಮಾಡಿ ಒಂಟಿಗಣ್ಣು ಶೀನಪ್ಪನ ಅಂಗಡಿಯಲ್ಲಿ ಲೇವಾದೇವಿ ಇಡಿಸಿದ್ದೂ ಉಮಟು. ದೇವರು ಕೊಟ್ಟು ಮರೆಯುತ್ತಾನೆಂಬುದು ಸುಳ್ಳಲ್ಲ (ಈ ಮಾತನ್ನು ನಿಲವಂಜಿ ನಿಂಗವ್ವ ಅವರಿವರ ಬಳಿ ದಿನಕ್ಕೆ ಹತ್ತು ಬಾರಿಯಾದರೂ ಆಡಿಕೊಳ್ಳುವುದುಂಟು). ಸಣ್ಣಗೆ ಕರಿದ ದಿನಿಸುಗಳ ಅಂಗಡಿಯನ್ನು ಕೊಟ್ರೇಶನ ಗುಡಿ ಎಡಕ್ಕೆ ಇಟ್ಟ ಗುರುಸಾಂತಪ್ಪನನ್ನು ಅದೃಷ್ಟ ಸಂಭೋಗ ಮಾಡಿತು. ಒಂದು ಎರಡಾಯಿತು, ಎಡರು ನಾಕಾಯಿತು, ನಾಕು ಹದಿನಾರಾಯಿತು. ಹಲ್ಲಿಗೆ ಹಸಿರು ನೀರು ಬಿಟ್ಟು ಹೊಟ್ಟೆ ತಂಗಲು ಬಟ್ಟೆ ಕಟ್ಟಿಕೊಂಡು ಹೆಂಡತಿಗಿಂತ ರೊಕ್ಕವನ್ನೇ ಪ್ರೀತಿಸುತ್ತಿದ್ದ ಈ ಮನುಷ್ಯನಿಗೆ ಕಾಲಾಂತರಲದಲ್ಲಿ ಐದು ಹೆಣ್ಣು ಸಂತಾನದ ನಂತರ ಆರನೇದಾಗಿ ಗಂಡು ಹುಟ್ಟಿತು. ಐದುಮಂದಿ ಹೆಣ್ಣುಮಕ್ಕಳನ್ನು ಬಳ್ಳಾರಿ ದೇಶದ ತುಂಗಭದ್ರಾ ನದಿಯ ಸರಹದ್ದಿನ ಐದು ಗ್ರಾಮಗಳಿಗೆ ಸುಲಭವಾಗಿ ಧಾರೆ ಎರೆದು ಕೊಟ್ಟು ಕನ್ಯಾಸೆರೆಯಿಂದ ಮುಕ್ತನಾಗಿರುವನು. ಈಗ ಅವರೆಲ್ಲರೂ ಒಂದರಿಂದ ನಾಕು ಮಕ್ಕಳವರೆಗೆ ತಾಯಂದಿರಾಗಿ ಇನ್ನೂ ಆ ದಿಸೆಯಲ್ಲಿ ಶ್ರಮಿಸುತ್ತಿರುವರು. ಬೊಚ್ಚಿಲು ಮಗಳು ಸಾಂತಕ್ಕನ ಹಿರೇಮಗಳು ಈರಮ್ಮನನ್ನು ತನ್ನ ಮಗ ಮರಿಬಸಪ್ಪನಿಗೆ ತಂದುಕೊಂಡು ವರ್ಷಗಳೇ ಕಳೆದಿವೆ. ಹರದಾರಿ ಗಾವುದ ದೂರದ ಹೆಣ್ಣು-ಗಂಡು ದೇವರು-ದಿಂಡಿರುಗಳಿಗೆ ಶ್ರದ್ಧಾಭಕ್ತಿಯಿಂದ ಹರಿಕೆ ಮುಡಿಪುಕಟ್ಟಿ ನಡೆದುಕೊಂಡರೂ ಗರ್ಭನಿಂತಿಲ್ಲ. ನಿಂತಿದ್ದರೂ ಮೂರು, ಐದು ತಿಂಗಳಲ್ಲಿ ಠಸ್ ಎಂದಿರುವವು. ಮಹಾಮಹಾ ಪಂಡಿತರಿಂದ ಯಂತ್ರ-ಮಂತ್ರ ಮಾಡಿಸಿ ಆಕೆಯ ರೆಟ್ಟೆಗೂ, ಸೊಂಟಕ್ಕೂ ಕಟ್ಟಿಸಿದ್ದಾಗಿದೆ. ಬಸಿರ ಹೊರೆಯೇ ತನ್ನ ಶರೀರದ ಅಂಗಾಂಗದ ತುಂಬ ಇದೆ ಎಂಬ ಭ್ರಮೆಯನ್ನು ಯಂತ್ರಗಳು ಈರಮ್ಮಗೆ ಮಾಡಿವೆ.

ಬೆಣ್ಣೆಹಳ್ಳಿ ಸೆಂಡ್ರಯ್ಯ ಮಂತ್ರಿಸಿಕೊಟ್ಟ ಹಿಡಿಗಾಯನ್ನು ತಲೆಬಾಗಿಲಿಗೆ ಕಟ್ಟಿ ಎರಡನೇ ವರ್ಷದಲ್ಲಿ ನಡೆಯುತ್ತಿದ್ದರೂ ಮಕ್ಕಳಾಗಿಲ್ಲವೆಂದು ಇನ್ನೊಂದು ಮದುವೆ ಮಾಡಿಸಬೇಕೆಂದರೆ ಈರಮ್ಮ ಸದ್ಯ ಮೊಮ್ಮಗಳು. ಚನಸೆಟ್ಟಿ ಹುಚ್ಚೀರಪ್ಪಗಿರೋ ಒಂತ್ತು ಮಕ್ಕಳ ಪೈಕಿ ಒಂದನ್ನು ದತ್ತು ತೆಗೆದುಕೊಳ್ಳಬೇಕೆಂಬ ಉದ್ದಿಶ್ಯದಿಮದ ಈ ಊರು ಮತ್ತು ಉಜ್ಜನಿ ಮಧ್ಯೆ ಹತ್ತಾರು ಬಾರಿ ತಿರುಗಾಡಿ ಮಾದಿಗರ ಲಸುಮ ಮಾಡಿದ ಚಪ್ಪಲಿ ಸರಿಸಿಕೊಮಡಿದ್ದೂ ಅಲ್ಲದೆ, ಅವಕ್ಕೆ ಸರತಿಗೆ ಪಾವಲಿಯಂತೆ ಹಲುಗಗೆ ಕೊಟ್ಟು ಏಳುಬಾರಿ ರಿಪೇರಿ ಮಾಡಿಸಿಕೊಂಡಿದ್ದ ಶೆಟ್ರು ಗುರುಸಾಂತಪ್ಪಗೆ ಹುಚ್ಚು ಹಿಡಿದೈತೆ ಎಂದು ಇತ್ತೀಚೆಗೆ ಊರುತುಂಬಾ ಗುಲ್ಲು.

ವೀರಬಸಪ್ಪಗೆ ಮದುವೆ ಮಾಡಿದ ಒಂದೆರಡು ವರ್ಷಗಳಲ್ಲಿ ಗುರುಸಾಂತಪ್ಪಗೆ ಮುಪ್ಪು ಬಂತೆಂಬುದು ನಿಜ. ಅದರ ಸ್ಪಷ್ಟ ಅರಿವು ಆತಗಾದದ್ದು ಸೊಂಟದ ಉಡಿದಾರಕ್ಕೆ ಸದಾ ಜೋತಾಡುತ್ತಿದ್ದ ಬೀಗದ ಕೈಗೊಂಚಲನ್ನು ಮಗನ ಸ್ವಾಧೀನಕ್ಕೆ ಒಪ್ಪಿಸಿದ ಮೇಲೆಯೇ! ಡಬ್ಬಿ ಅಂಗಡಿಯ ಹುಸೇನುಸಾಬಿ ಬಳಿ ಕಾಳಹಸ್ತಿ ಬೀಡಿ ಕೊಳ್ಳುವುದಕ್ಕೂ ಎರಡು ರೂಪಾಯಿ ಕೊಡೂಂತ ಕೇಳಬೇಕಾಗಿ ಬಂತಲ್ಲಾ ಎಂಬ ಕೊರಗು ಮೂಡಿದಾಗಲೆಲ್ಲ ಒಡಕು ಕನ್ನಡಿ ಅಳ್ಳಿನಲ್ಲಿ ನೋಡಿಕೊಂಡು ಮುಖದ ಸುಕ್ಕಿನ ಗೆರೆಗಳನ್ನು ಎಣಿಸುವನು. ನೂರಾರು ಸುಕ್ಕುಗಳಿಂದ ಮುದುಡಿದ ಮುಖ ಎಣ್ಣೆತೀರಿದ ದೀಪದ ಕುಡಿಯಂಥ ಮಂಕು ಕಣ್ಣುಗಳು, ನಿಟ್ಟುಸಿರು ಬಿಟ್ಟೂಬಿಟ್ಟೂ ಬಾಡಿದಂತೆ ಕಾಣುವ ಮೂಗು, ಹಣ್ಣಾದ ಮೀಸೆ ಇವೆಲ್ಲ ತನ್ನವರನ್ನು ತನ್ನಿಂದಲೇ ದೂರ ಇಟ್ಟಿರುವುದುಂಟು. ಬೀಗದ ಕೈಗೊಂಚಲು ಇಲ್ಲದೆ ಖಾಲಿ ನೆತ್ತಿಯ ಮೇಲೆ ಕೈ ಆಡಿಸುತ್ತ ಬಾಗಿಲು ದಾಟುವುದಕ್ಕೂ ಧೈರ್ಯ ಸಾಲದು, ಮೊಮ್ಮಗಳು ಈರಮ್ಮ ಮೂಗಗೆ ತಾನು ತಂದುಕೊಮಡಿರೋ ಹುಡುಗಿ, ಸದಾ ತನ್ನ ಕಣ್ಣುಗಳಿಂದ ಸೂಜಿ ಚಿಮ್ಮುವ ಆಕೆಯ ಕಣ್ಣುಗಳಲ್ಲಿ ಏನೋ ತುರಾತಿಗಡಿ, ಎಂಥದೋ ಸಂಚು ಇರಬೇಕು ಎಂದೂ ಆಕೆ ಸೋನಾಮಸೂರಿ ಅಕ್ಕಿ ಅನ್ನ ನೀಡಿ ಅದರ ಮೇಲೆ ಬೆಳ್ಳೊಳ್ಳಿ ಗಾತ್ರದ ಹೆಪ್ಪುಗಟ್ಟಿದ ತುಪ್ಪ ಸುರಿದ ನೆನಪೇ ಇಲ್ಲ. ಇವತ್ತು ಯಾಕೆ ಸುಡುವ ಅನ್ನದ ಮೇಲೆ ತುಪ್ಪ ಸುರಿದು ಅದು ಕರಗುವ ರೀತಿಗೆ ಬೆರಗಾದಳು ಎಂದು ಯೋಚಿಸ ತೊಡಗಿದಂತೆ ಗುರುಸಾಂತಪ್ಪನ ಮುಖದ ಸುಕ್ಕುಗಳಲ್ಲಿ ಮತ್ತಷ್ಟು ಕಣಿವೆಯ ಸಂದುಗಳು ಮೂಡುವವು. ಆಕೆಯ ಕರಾಮತ್ತಿನಲ್ಲಿ ಹೆತ್ತ ಏಕೈಕ ಪುತ್ರನೂ ಶಾಮೀಲಾಗಿರಬಹುದು…. ಆಗಿದ್ದರೆ….! ನಡುಕ ಹುಟ್ಟುವುದು, ಕಣ್ಣು ತುಂಬ ಕಪ್ಪು ಕವಿದು ದಾರಿಕಾಣದಾಗುವುದು. ಮೋಟುಗಲ್ಲು ಪಕ್ಕದ ಬೇವನಮರದ ಕೆಳಗೆ ಕಾಗೆಯೊಂದರ ಕಳೇಬರ ಕಾಣುವುದು. ಅಧೈರ್ಯ ಮತ್ತು ವಿಚಿತ್ರವಾದ ಆತಂಕದಿಂದ ಕಾಗೆಗಳ ಹಿಮಡು ಕರ್ಕಶವಾದ ಧ್ವನಿಹೊರಡಿಸುತ್ತ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿರುವುದು ಕಾಣಿಸುವುದು. ಕೂಡಲೆ ಕಾಗೆಯೊಂದು ಹಾರಿಬಂದು ಕಳೇಬರಕ್ಕೆ ಸಮನಾಗಿ ನಡೆದು ಹೋತ್ತುದ್ದ ಗುರುಸಾಂತಪ್ಪನ ಮುಖಕ್ಕೆ ರೆಕ್ಕೆಯಿಂದ ಗಾಳಿ ಬೀಸಿ ಹಾರಿಹೋಯಿತು. ಅದು ಹಾರಿಹೋಗಿ ಕುಂತ ಮರದ ಕೆಳಗೆ ಕಟ್ಟಿರುವ ಕಟ್ಟೆಗೆ ತಾನು ಕೊಟ್ಟಿರುವ ದೇಣಿಗೆ ನೆನಪು ಮಾಡಿಕೊಂಡು ನಿಟ್ಟುಸಿರು ಬಿಟ್ಟನು. ಇವೆಲ್ಲ ನೆನಪುಗಳಿಗೂ; ಸದ್ಯ ನಡೆಯುತ್ತಿರುವ ಅಪಶಕುನಗಳಿಗೂ ತಾಳೆ ಹಾಕಿ ನೋಡಿ ತನಗಿನ್ನು ಸಾವು ನಿಶ್ಚಿತ ಎಂದುಕೊಮಡು ಓಡುತ್ತಿರುವಂತೆ ಬೀಸು ಹೆಜ್ಜೆ ಹಾಕ ತೊಡಗುವನು. ತನ್ನಷ್ಟಕ್ಕೆ ತಾನೆ ಸಾಭಿನಯವಾಗಿ ಮಾತಾಡಿಕೊಳ್ಳುತ್ತ ಈ ಹಾದಿ ಬಿಟ್ಟು ಆ ಹಾದಿಗೆ; ಆ ಹಾದಿ ಬಿಟ್ಟು ಈ ಹಾದಿಗೆ ಅಪಘಾತ ಸಂಭವಿಸಬಹುದಾದ ಭಯದಿಂದ ನಡೆಯುವ ಗುರುಸಾಂತಪ್ಪನ ಅವಸರ ನೋಡಿದ ಕೆಲವರು ಈ ಮುದುಕನಿಗೆ ಹುಚ್ಚು ಹಿಡಿದಿರಬೇಕೆಂದು ಮಾತಾಡಿಕೊಂಡರು.

ಮೆಲ್ಲಗೆ ನಡೆಯಲಿಕ್ಕೂ ಆಗದೆ; ಜೋರು ನಡೆಯಲಿಕ್ಕೂ ಆಗೆ ತನ್ನ ಮುಖವನ್ನು ಪಬ್ಲಿಕ್ಕಿಗೆ ತೋರಿಸಲಿಕ್ಕೂ ಆಗದೆ, ಪೂರ್ತಿ ಮುಚ್ಚಿಕೊಳ್ಳಲಿಕ್ಕೂ ಆಗದೆ, ತೀರಾ ಅನಿಶ್ಚಿತವಾದ ಹೆಜ್ಜೆಗಳನ್ನು ಒಂದರ ಹಿಂದೆ ಒಂದರಂತೆ ಹಾಕುತ್ತ ಕೊಟ್ರೇಶನ ಗುಡಿ ಹಿಂದಿನಿಂದ ಹಾಯ್ದು ತುರುಕರ ಮಸೀದಿ ಮುಂದಿನ ಕಪ್ಪು ಅಂಗಳದಲ್ಲಿ ತೇಲಿದ ಗುರುಸಾಂತಪ್ಪನ ಹೊಟ್ಟೆಯಲಲ್‌ಇ ಕಲ್ಲುಹಾದಿ ಮೇಲೆ ಎತ್ತಿನ ಬಂಡಿ ಓಡುತ್ತಿರುವಂಥ ಸದ್ದು…. ದಡ್…. ದಡ್…. ಸದ್ದು, ಬಡ್ ಬಡ್ ಸದ್ದು…. ಬಿಸಿ ಅನ್ನ ತುಪ್ಪವನ್ನು ಸೊಸೆ ನೀಡಿದ್ದರ ಹಿನ್ನೆಲೆಯಲ್ಲಿ ಏನಾದರೂ ಕುಟಿಲತೆ ಇರಬಹುದೆಂಬ ಅನುಮಾನ ತೆರೆತೆರೆಯಾಗಿ ಮೂಡಿತು. ಕಾಡಿಗೆಗಣ್ಣ ಸೊಸೆ ಬಂದ ಆ ಮನೆಗೆ…. ಸರ್ವಜ್ಞ ಏನೋ ಹೇಳಿದ್ದಾನಲ್ಲಾ….. ನೆನಪಾಗಲೊಲ್ಲದೆ…. ಕೈ…. ಕಾಲು ನೋಡಿಕೊಂಡ…. ಅಂಗಿ ಎತ್ತಿ ಹೊಟ್ಟೆ ನೋಡಿಕೊಂಡ, ಸ್ವಲ್ಪ ಉಬ್ಬಿರುವಂತೆ; ಅನೇಕ ಇಲಿ, ಹೆಗ್ಗಣಗಳಿಂದ ತುಂಬಿರುವ ಗೋಣಿಚೀಲದಂತೆ ಕಂಡಿತು. ಮೊದಮೊದಲು ತಿಳಿ ನೀಲಿ ಬಣ್ಣದಂತೆ ಕಮಡ ಅದು ಕ್ರಮೇಣ ಅನೇಕ ಬಣ್ಣಗಳನ್ನು ಪ್ರಕಟಿಸಿತು. ಕಣ್ಣುಗಳು ಕೂಡ ಹಾಗೆಯೇ; ಈಗ ಕಂಡಿದ್ದನ್ನು ಇನ್ನೊಂದು ಸ್ವಲ್ಪ ಹೊತ್ತಿಗೆ ನೋಡುವುದು, ಮಾಗಿ ಕಾಲದ ಮಂಜು ಕವಿದಿರುವಂಥ ಅವುಗಳನ್ನು ಡಾಕ್ಟರಿಗೆ ಬಹಳ ಕಾಲದ ಹಿಂದೆಯೇ ತೋರಿಸಬೇಕಿತ್ತು. ತಮಟೆಯಾಕಾರವಾಗಿ ಕ್ರಮೇಣ ಕಂಗೊಳಿಸತೊಡಗಿದ್ದ ಹೊಟ್ಟೆಯನ್ನು ತಾನೇ ತನ್ನೆರಡು ಕೈಗಳಿಂದ ನಕ್ಕುನ…. ನಕ್ಕುನ್ನ…. ನರನರ ನಕ್ಕುನ್ನ…. ಅಂತ ಲಯಬದ್ಧವಾಗಿ ಬಡಿತು ಅಲ್ಲಿಂದ ಹೊರಟ ನಾದದ ಅಲೆಗಳಿಗೆ ಕಿವಿ ಚಾಚಿ ಶಬ್ದದ ಆಚೆಗಿನ ಸತ್ಯದ ಬೆಂಬತ್ತಿ ದಾರಿ ತಪ್ಪಿಬಿಟ್ಟ, ಪರಿಣಾಮವಾಗಿ ನಗು ಬಂತು…. ನಕ್ಕ…. ನಗುವಿನ ಒಳಕೋಣೆಯಲ್ಲಿ ಅಡಗಿರುವ ನೋವು ಅರ್ಥಮಾಡಿಕೊಳ್ಳಲಾರದೆ ನರಳಿದ್ದ. ನರಳುವಿಕೆಯಲ್ಲಿಯೂ ಖಾನಾವಳಿಯ ಬೋರ್‍ಡು ಕಣ್ಣಿಗೆ ಕುಕ್ಕಿತು, ತಾನು ಬಾಕಿ ಕೊಡದಿದ್ದರೆಲ್ಲಿ ಶರಣವ್ವ ಖಾನವಳಿ ಇಡುತ್ತಿದ್ದಳೆಂಬ ಸಂಶಯ ಹೆಮ್ಮೆಯಾಗಿ ಮರುರೂಪ ಪಡೆಯಿತು. ರಂಗದಲ್ಲಿ ಗೆರೆಗಳು ಮಾಸಿದ್ದ ಅಂಗಳದಲ್ಲಿ ನಿಂತಿದ್ದ ಗುರುಸಾಂತಪ್ಪ. ಎರಡು ದಿನಕ್ಕೊಮ್ಮೆಯಾದರೂ ಖಾನಾವಳಿಯ ಗಲ್ಲಾಪೆಟ್ಟಿಗೆ ಗಾತು ಶರಣಮ್ಮನ ದಷ್ಟಪುಷ್ಟವಾದ ದೈತ್ಯ ಎದೆಗಳನ್ನು ನೋಡುತ್ತ ಎರಡು ಗಳಾಸು ಒಗ್ಗರಣೆ ಹಾಕಿದ ಮಜ್ಜಿಗೆ ಕುಡಿದೇ ನಿಶೆ ಏರುತ್ತಿದ್ದ ಆ ದಿನಗಳು ಎಲ್ಲಿ ಹೋಗಿವೆ ಈಗ! ಜೀವ ಇಲ್ಲದ ರೊಕ್ಕದಿಂದ ಶರಣವ್ವನಂಥ ಸಣ್ಣ ಬದುಕುಗಳನ್ನು ತನಗೆ ಬೇಕಾದ ರೀತಿಯಲ್ಲಿ ಆಟ ಆಡಿಸಿದ್ದ ಆ ದಿನಗಳು ಎಲ್ಲಿ ಹೋಗಿವೆ ಈಗ?

ಆತ್ಮ ಸಂತೃಪ್ತಿಗಾಗಿ ಶ್ರಾವಣಮಾಸದಲ್ಲಿ ಗಚ್ಚನಮಠದಲ್ಲಿ ಕೂತು ಶಿವಮೂರ್ತಿಗಳ ಬಾಯಿಂದ ಶಿವಲೀಲಾ ವಿನೋದ ಕೇಳಿದ್ದು ಉಮಟು. ತನ್ನೊಳಗೆ ಮಾಯೆಯೋ? ಮಾಯೆಯೇ ತನ್ನೊಳಗೋ? ಎಂಬ ಸಂದಿಗ್ಧ ಪ್ರಶ್ನೆಗಳನ್ನು ತಲೆಯಲ್ಲಿಟ್ಟುಕೊಂಡು ಮೇಲೊಂದು ರುಮಾಲು ಸುತ್ತಿ ಮತ್ತೊಮ್ಮೆ ಮಠದ ಕಡೆಗೆ ಸುಳಿಯದೆ ಆಸ್ಪತ್ರೆ ಕಡೆ ಹತ್ತಾರು ಬಾರಿ ಕಾಲು ಹಾಕಿದ್ದ. ನರಸು ಕಾಂಪೋಡರಾದಿಯಾಗಿ ಡಾಕುಟರಿಗೆಲ್ಲ ರುಗುಸಾಂತಪ್ಪನ ದೈಹಿಕ ಸಮಸ್ಯೆಯ ತಳ ಬುಡ ಅರ್ಥವಾಗದೆ ಆತನ ಮಾನಸಿಕ ಹೊಯ್ದಾಟಗಳನ್ನು ಅರ್ಥಮಾಡಿಕೊಂಡು ಆತಗೆ ಅರ್ಥವಾಗದ ಭಾಷೆಯಲ್ಲಿ ತಾವಾಡಿಕೊಮಡು ನಗಾಡಿದ್ದರು ವ್ಯಂಗ್ಯವಾಗಿ. ಆರಕ್ಕೇರದೆ ಮೂರಕ್ಕಿಳಿಯದೆ ನಿನ್ನನ್ನು ನೀನೇ ಸೃಷ್ಟಿಸಿಕೊಂಡು ನರಳುತ್ತಿರುವ ಗುರುಸಾಂತಪ್ಪನೇ ನಿನಗೇನು ಆಗಿಲ್ಲ ಎಂದು ಡಾಕ್ಟರರೂ ನಿಷ್ಠುರವಾಗಿ ಆಸ್ಪತ್ರೆಯ ಇವರೆಲ್ಲ ತನ್ನ ಮಗ, ಸೊಸೆಯ ಕಾರಾಸ್ಥಾನದಲ್ಲಿ ಶಾಮೀಲಾಗಿರುವರೆಂಬ ಸಂದೇಹ ಮೂಡಿತು. ತನ್ನಂತೆ ಅಂಗಿಯನ್ನೆಂದೂ ತಿರುಗಾಮರುಗಾ ಉಟ್ಟಿರದಿದ್ದ; ತನ್ನ ವಾರಿಗೆಯವನೇ ಆದ ಕಂಪ್ಲಿ ಶಿವಲಿಂಗಪ್ಪಗೆ ತನ್ನ ಮಗ, ಸೊಸೆ ತನ್ನ ವಿರುದ್ಧ ನಡೆಸಿರುವ ಪಿತೂರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದ ಮೂರು ನಾಲ್ಕು ದಿನಗಳ ಹಿಮದೆಯೇ. ಮೇಲ್ದವಡೆಯಲ್ಲೂ ಕೆಳದವಡೆಯಲ್ಲೂ ಅನೇಕ ಹಲ್ಲುಗಳು ಉದುರಿ ತುಟಿಯ ಸೌಭಾಗ್ಯವನ್ನೇ ಹಾಳು ಮಾಡಿರುವುದಾಗಿ ವ್ಯಥಿತನಾಗಿರುವ ಗುರುಸಾಂತಪ್ಪ ‘ಡ’ ಕಾರವನ್ನು ‘ಚ’ ಕಾರವಾಗಿಯೂ ‘ಕ’ ಕಾರವನ್ನು ‘ಲ’ ಕಾರವಾಗಿಯೂ ಮಾರ್ಪಡಿಸಿ ನಿರರ್ಗಳವಾಗಿ ಮಗನ ವಿರುದ್ಧ ಆಪಾದನೆಗಳು ಸುರಿ ಮಳೆಯನ್ನೇ ಕರೆವನು. ಈತನ ಈ ವಾದ ವೈಖರಿಯನ್ನು ಕೇಳುವುದಕ್ಕೂ ಯೋಗಾನುಯೋಗವಾಗಿ ಕಾಲ ಕೂಡಿಬರಬೇಕು.

ತನಗೆ ವಯಸ್ಸಾಗಿದ್ದು ತಮ್ಮ ಮನೆದೇವರು ತನಗೆ ಮಾಡಿದ್ದ ದೊಡ್ಡ ಮೋಸ ಎಂದು ಮಣ್ಣೆತ್ತಿನ ಅಮವಾಸೆಯಿಂದ ದಿನಕ್ಕೊಮ್ಮೆಯಾದರೂ ಅಂದುಕೊಳ್ಳುವ ಶೆಟ್ರು ಗುರುಸಾಂತಪ್ಪ ತನ್ನ ಪ್ರತಿ ಮಾತುಗಳನ್ನು ಯಾರೂ ಯಾವ ಕಾರಣಕ್ಕೂ ಉಪೇಕ್ಷೆ ಮಾಡಲಾರರೆಂದೇ ತನ್ನಷ್ಟಕ್ಕೆ ತಾನೇ ತಿಳಿದುಕೊಂಡಿದ್ದ. ಆದ್ದರಿಂದ ಕೆಲವರಾದರೂ ಗುರಜ್ಜ ಮತ್ತು ಆತನ ಮಗ ಮೂಗ; ಆತನ ಸೊಸೆ ಈರಮ್ಮನವರ ನಡುವೆ ಮಧುವಾದ ಸಂಬಂಧ ಪುನಃ ಸ್ಥಾಪಿಸುವುದಕ್ಕಾಗಿ ಬಹಳಷ್ಟು ಪ್ರಯತ್ನಿಸಿ ವಿಫಲರಾಗಿದ್ದರು. ತಮ್ಮ ಸಾಕು ನಾಯಿ ಈಯ್ದಿದ್ದ ನಾಕು ಕುನ್ನಿಗಳನ್ನು ಗಂಡನ ತಂದೆಯಾದ ಮುದುಕ ಕುತ್ತಿಗೆ ಹಿಚುಕಿ ಸಾಯಿಸಿದ್ದು ನ್ಯಾಯವೇ ಎಂದು ಈರಮ್ಮ ಇಟ್ಟ ಪ್ರಶ್ನೆಗೆ ಉತ್ತರ ಕೊಡುವ ತಾಕತ್ತು ಮುಗನಳ್ಳಿ ಮಠದ ಶಂಭಯ್ಯನವರಿಗೆ ಬಂದಿರಲಿಲ್ಲ.

ನಾಯಿ ಬೇರೆ ಅಲ್ಲ; ಗುರುಸಾಂತಪ್ಪ ಬೇರೆ ಅಲ್ಲ ಹಾಗಿತ್ತು ಅವರಿಬ್ಬರ ಸಂಬಂಧ. ಸ್ವತಃ ಆತನೇ ಅದಕ್ಕೆ ಹಾಲು ಅನ್ನ ಹಾಕಿ ಪ್ರೀತಿಯಿಂದ ಬೆಳೆಸಿದ್ದ ಸಬೂಳನೆ ದೇಹದ ನಾಯಿಯದು, ಅದು ಪ್ರತಿದಿನ ಸಂಜೆ ಮುದುಕನ ಮುಂಗೈ ನೆಕ್ಕಿ ಆತಗೆ ಆತನ ಹೆಂಡತಿಯನ್ನು ಜ್ಞಾಪಿಸಿ ಋಣ ತೀರಿಸುತ್ತಿತ್ತು. ಒಮ್ಮೊಮ್ಮೆ ಅಂಗಾಲನ್ನೂ ಸಹ. ಬುಧವಾರವೋ; ಗುರುವಾರವೋ ಮಗನ ಬಳಿ ಜಗಳ ತೆಗೆದಿದ್ದ “ಲೇ ನೀನು ನಿನ್ನೆಂಡ್ತಿ ತಿಂಥಿರೋದು ನನ್ ಸ್ವಯಾರ್ಜಿತ ಆಸ್ತಿನ… ಊರ ಮುಂದಿನ ಹತ್ತೆಕರೆ ಫಲವತ್ತಾದ ಎರೆ ಹೊಲವನ್ನು ಕಟುಗರ ಇಟೋಬ್ಗೆ ಕೇವಲ ನಾಕೂವರೆ ಸಾವ್ರಕ್ಕೆ ಮಾರಿ ದೂರ…. ಬಹುದೂರ….. ಕಾಶಿಗೋ, ಕೇದಾರಕ್ಕೋ ಹೋಗಿ ಬಿಡ್ತೀನಿ” ಇಂಥದೊಂದು ಬೃಹತ್ತಾದ ಯೋಜನೆ ಹಾಕಿದ್ದು; ಅದನ್ನು ಕಾರ್ಯ ರೂಪಕ್ಕೆ ತರಲು ಹರಲಿರುಳು ಪ್ರಯತ್ನಿಸಿದ. ಈ ಪ್ರಸ್ತಾವನೆಯನ್ನು ಕೇಳಿದೋರೆಲ್ಲ “ಮುದುಕ ನಿನ್ತಲೆ ನೆಟ್ಟಗೈತೋ ಇಲ್ಲೊ…. ಇರೋ ಹೊಲಾ ಗದ್ದೆಮಾರಿ ಮಗ್ನ ಕೈಗೆ ಚಿಪ್ಪು ಕೊಡಬೇಕಂತೆ ಮಾಡಿದ್ದೀಯಾ? ಮಗಾ ಸೊಸೆ ನಿನಗೇನು ಕಡಿಮೆ ಮಾಡ್ಯಾರ. ಚಲು ಚಲೋದು ಮಾಡಿಸ್ಗೆಂಡುಂಡು ಸುಖವಾಗಿದ್ದು ಸಾಯಬಾರ್ದೆ” ಎಂದು ಏರು ಧ್ವನಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು. ತನ್ನ ಜನರೇ ತನ್ನ ಆಶೆಗೆ ವಿರುದ್ಧ ಮಾಡಾಡಿದಾಗ ಗುರುಸಾಂತಪ್ಪ ತಾನೇ ಏನು ಮಾಡಿಯಾನು? ಸ್ವಯಾರ್ಜಿತ ಚರಾಸ್ತಿಗೂ ಸ್ಥಿರಾಸ್ತಿಗೂ ನಡುವೆ ಅಂತರ ಇರುವಂತೆಯೇ ತನ್ನ ಹಾಗೂ ತನ್ನ ಮಗನ ನಡುವೆ ವ್ಯತ್ಯಾಸವನ್ನು ಗುರುತಿಸುವ ಯತ್ನ ಮಾಡುವನು. “ಅಪ್ಪಾ ನೀಯಾಕ ಹಿಂಗ ತಲಿ ಕೆಟ್ಟವನಂತೆ ಆಡ್ತಿ… ನನ್ಗೆ ಬಹಳ ದುಕ್ಕ ಆಗತೈತಿ” ಎಂದು ದೈನ್ಯಾವಸ್ಥೆಯಿಂದ ನುಡಿವ ಮಗನ ಕೆನ್ನೆಗೆ ಎರಡು ಬಿಗಿಯಲಿಕ್ಕೆ ಸಾಧ್ಯವೇ! ಅವನಾದರೋ ತನಗಿಂತ ಎರಡಕ್ಷರ ಕಲಿತಿರುವ ಹೆಂಡತಿಗೆ ಗುಲಾಮ, ಆಕೆ ಏನು ಮಹಾ ಘನಸ್ಥೆ? ಒಳಗೊಳಗೇ ಅದು ಇದು ತವರುಮನೆಗೆ ಗುಟ್ಟಾಗಿ ಸಾಗಿಸುತ್ತಿರುವುದೂ ಅಲ್ಲದೆ ತನಗೆ ಸಹಾಯ ಮಾಡಬಹುದಾದವರನ್ನು ಮನೆಗೆ ಕರೆಕಳಿಸಿ ಒಂದು ಕಪ್ ಚಹಾ ಕೊಟ್ಟು ತನ್ನ ವಿರುದ್ಧ ಎತ್ತಿ ಕಟ್ಟುತ್ತಿರುವುದನ್ನು ಸಹಿಸಿಕೊಮಡಿರುವುದು ಹೇಗೆ ಸಾಧ್ಯ? ಬಗೆಹರಿಯಲಾರದ ಸಮಸ್ಯೆಗಳನ್ನು ತಲೆ ಮೇಲೆ ಹಾಕ್ಕೊಂಡು ಖಿನ್ನನಾಗಿ ಒಂದು ಮೂಲೆಯಲ್ಲಿ ಕನ್ನಡಿಗೆದುರಾಗಿ ಕೂತು ತಲೆಯ ಒಂದೊಂದೆ ನೆರೆ ಕೂದಲ್ಲನು ನಿರ್ದಯನಾಗಿ ಕಿತ್ತು ಚೆಲ್ಲುತ್ತಿದ್ದ ಗುರುಸಾಂತಪ್ಪ ಅವತ್ತೆಲ್ಲ ಒಂದು ತುತ್ತು ಅನ್ನ ಸಹ ಮುಟ್ಟಲಿಲ್ಲ. ಒಡಲು ತುಂಬ ಅಮರಿದ ಹಸಿವೆಯ ಉರಿ ತಾಳಲಾರದೆ ಎದ್ದು ಸರಸರ ಹೋದವನೆ ನಾಕು ನಾಯಿಕುನ್ನಿಗಳ ಕತ್ತು ಹಿಚುಕಿ ಸುಂದರ ರಂಗದಲ್ಲಿ ಇದ್ದ ಅಂಗಳಕ್ಕೆ ಎಸೆದಿದ್ದ. ‘ಈ ಮರಿ ನನ್ಗೆ ಬೇಕು, ಆ ಮರಿ ನನ್ಗೆ ಬೇಕು’ ಎಂದು ಅವರಿವರು ಕೇಳಿದಾಗ “ಇವೇ ಹೊಟ್ಯಾಗ ಹುಟ್ಟಿದ ಮಕ್ಳೂಂತ ತಿಳ್ಕೊಂಡು ಸಾಕ್ತೀನ್ರವೋ…. ಅವ್ನು ಮಾತ್ರ ಯಾರ್‍ಗೂ ಕೊಡಲ್ಲ” ಎಂದು ಕಡ್ಡಿ ಮುರಿದಂತೆ ನುಡಿದಿದ್ದ, ಅವುಗಳ ಹಲ್ಲು ಬಲಿತ ಮೇಲೆ ಕದ್ದೊಯ್ದು ಸಾಕಿದರಾಯ್ತೆಂದು ಅಯ್ನಳ್ಳಿ ನಾಗ; ಈರಪಾಕ್ಸಿ ಅಂಥೋರು ಒಳಗೊಳಗೇ ಲೆಕ್ಕಹಾಕಿದ್ದರು. ಆದರೆ ಅಂಥವರೇ ತಮ್ಮ ನಾಯಿಕುನ್ನಿಗಳು ತಮ್ಮೆದುರೇ ವಿಲವಿಲನೆ ಒದ್ದಾಡಿ ಸತ್ತದ್ದನ್ನು ನೋಡಿ ಕಂಡಿತವಾಗಿ ಗುರಜ್ಜಗೆ ಹುಚ್ಚು ಹಿಡಿದೈತೆ ಎಂದು ಪರಿಭಾವಿಸದೆ ಇರಲಿಲ್ಲ. “ಏನಜ್ಜಾ ನೀ ಹಿಂಗ್ ಮಾಡೋದಾ! ಇದ್ರಿಂದ ನಿನ್ ಆತ್ಮಕ್ಕೆ ಶಾಂತಿ ಸಿಕ್ತಾ!” ಎಂದು ಭೂತದಯೆ ಇರುವವರು ಕೇಳಿದಾಗ “ನಾನು ಸಾಕಿ ಬೆಳೆಸಿದ್ದು…. ನಾ ಹೆಂಗಾರ ಸಾಯಿಸ್ತೀನಿ ಯಾರಲೇ ನೀವು ಕೇಳ್ಯಾಕೆ…. ಯಾರು ಬರ್‍ತೀರಿ ಬರ್‍ರಲೇ ಒಂದು ಕೈ ನೋಡೇ ಬಿಡ್ತೀನಿ” ಎಂದು ಮುದುಕನ ಸೆದ್ದೊಡೆದು ಗುಡುಗಿದ್ದ. ಆದರೆ ಯಾರು ತಾನೆ ತಯಾರಾದಾರು ಮುದುಕನ ಕೂಡ ಕುಸ್ತಿ ಆಡಲು!

ಜಬರ್‍ದಸ್ತಾಗಿ ಬದುಕಿದ್ದ ಮನುಷ್ಯನಾದ ಗುರುಸಾಂತಪ್ಪನ ಬೆನ್ನ ಹಿಂದಿನ ಅಂಗಿ ಹರಿದಿತ್ತು. ಬೆನ್ನಲ್ಲಿ ಕಿತ್ತುತ್ತಿರುವಂಥ ನೋವು ಮುಖದಗೆರೆಗಳಿಗೆ ವಿಶೇಷ ಸೊಬಗು ಕೊಟ್ಟಿತ್ತು. ಪ್ರತಿ ಮಂಗಳವಾರ ಮೊಮ್ಮಗಳ ಒತ್ತಾಯಕ್ಕೆ ಧೋತರ ಬಿಟ್ಟು ಉಡುತ್ತಿದ್ದ. ಬಚ್ಚಲ ಮನೆಯಿಂದ ಹಿಡುದು ಅಡುಗೆ ಮನೆಯವರೆಗೆ ಇದ್ದ ಕೆಲವು ಸಂದೇಹಗಳನ್ನು ಮಗಳಾದ ಸಾಂತವ್ವನ ಮುಂದಿಟ್ಟು ಈರಮ್ಮ ತನಗೆ ಬಿಸಿ ಬಿಸಿಯಾದ ಅನ್ನ ನೀಡಿ ವೇಲೆ ತುಪ್ಪ ಸುರಿದಿದ್ದರ ಹಿನ್ನೆಲೆಯನ್ನು ಹೆತ್ತಾಕಿಯಾದ ನೀನಾದರೂ ಹೇಳಲೇಬೇಕೆಂದು ಒತ್ತಾಯಪಡಿಸಿದ್ದ. ಚರಾಸ್ತಿ, ಸ್ಥಿರಾಸ್ತಿ ಎರಡೂ ತನ್ನ ಸ್ವಯಾರ್‍ಜಿತ, ಪ್ರತಿಯೊಂದು ತನ್ನ ದುಡಿಮೆಯ ಪ್ರತಿಫಲ ಎಂಬುದನ್ನು ಪ್ರಮಾಣೀಕರಿಸಿ ಹೇಳಿದ್ದ. ಯಾವ ಆಸ್ತಿಯನ್ನು ಯಾವ ಇಸವಿಯಲ್ಲಿ ಕೊಂಡದ್ದು, ಯಾವ ಆಸ್ತಿ ಕೊಂಡಾಗ ಯಾರು ಹುಟ್ಟಿದರು ಇತ್ಯಾದಿ ವಿವರಗಳನ್ನು ಪ್ರತಿವಾದದ ಸಂದರ್‍ಭದಲ್ಲಿ ತಪ್ಪದೇ ಕೊಡುತ್ತಿದ್ದ. ಮೂಗ ಬಸಪ್ಪನ ಬಸಿರಲ್ಲಿ ತನ್ನ ಹೆಂಡತಿ ಗೌರಮ್ಮ ಅನುಭವಿಸಿದ ಬೇನೆಯನ್ನು ಹೇಳುವಾಗ ಕಣ್ಣಲ್ಲಿ ನೀರು ತಂದುಕೊಂಡ ಗುರುಸಾಂತಪ್ಪ. ಎರಡು ತಿಂಗಳ ಹಿಂದೆ ತನಗೆ ಏಳು ತಿಂಗಳಲ್ಲಿ ಗರ್‍ಭಪಾತವಾದದ್ದರ ಬಗ್ಗೆ ಹೇಳಬೇಕೆಂದಿದ್ದ ಶಬ್ದಗಳು ಒಡಲು ಕೆಚ್ಚಿನಲ್ಲಿ ಬೇಯುತ್ತಿದ್ದರೂ ಸಹ ತಂದೆಯ ಪ್ರತಿಮಾತುಗಳನ್ನು ಸಮಾಧಾನದಿಂದ ಕೇಳಿದ್ದ ಸಾಂತಕ್ಕ, ಗಂಡನು ಹಾಕಿದ್ದ ಗೆರೆಯನ್ನೂ ಎಂದೂ ದಾಟಿ ಗೊತ್ತಿರದಿದ್ದ ಸಾಂತಕ್ಕ ತನ್ನ ತವರು ಮನೆಯ ಹೆಣ್ನಾಯಿಯನ್ನು ನೆನಪುಮಾಡಿಕೊಂಡು ಸೆರಗಿನ ಮರೆಯಲ್ಲಿ ಕಣ್ತುಂಬ ನೀರು ತುಂಬಿಕೊಂಡಳು. ನಾಯಿಕುನ್ನಿಗಳನ್ನು ಕೊಂದ ಪಾಪದ ತಂದೆಯ ಮಗಳಾದ ತನ್ನ ಹೊಟ್ಟೆಯಲ್ಲಿ ಗರ್‍ಭ ನಿಲ್ಲುವುದೋ, ಇಲ್ಲವೋ, ಅಂತೂ ತಂದೆ ರೌರವ ನರಕಕ್ಕೆ ಹೋಗುವುದನ್ನು ನೆನೆಸಿಕೊಂಡು ಗದ್ಗದಿತಳಾದಳು.

ಸ್ವಯಾರ್‍ಜಿತ; ಪಿತ್ರ್‍ಆರ್‍ಜಿತ ಮತ್ತು ಚರಾಸ್ತಿ ಸ್ಥಿರಾಸ್ತಿ ಎಂಬೀ ನಾಲ್ಕು ಪದಗಳ ಆಳ ಅಗಲ ತೆಗೆದುಕೊಳ್ಳಲು ಹೋರಾಟ ನಡೆಸಿದ್ದ ಶೆಟ್ರು ಗುರುಸಾಂತಪ್ಪಗೆ ಮಕ್ಕಳು ಮರಿಗಳೆಲ್ಲ ಮಾಯೆ ಅಥವಾ ಮಗನೆಂಬ ಶತೃ ಬುದ್ಧಿಪೂರ್‍ವಕವಾಗಿ ಎಪ್ಪಾ ಉಂಡ್ಯ; ನೀರು ಕುಡಿದ್ಯಾ; ಮಲಿಕ್ಕೆಂಡ್ಯಾ ಇತ್ಯಾದಿ ಕ್ಷೇಮ ಸಮಾಚಾರ ವಿಚಾರಿಸಿದಾಗ ಗುರುಸಾಂತಪ್ಪಗೆ ಎಲ್ಲಿಲ್ಲದ ಸಿಟ್ಟು ವಕ್ಕರಿಸಿ “ನಾಟ್ಕ ಆಡ್ತೀ ಯಾವ್ದೇ ನಾಟ್ಕ ಒಂದ್ ವಯಸ್ನಾಗೆ ನಾನೂ ನಾಟ್ಕ ಆಡದಿದ್ದರ ಎಲ್ಲಿ ಇಷ್ಟೊಂದು ಆಸ್ತಿ ಸಂಪಾದಿಸಿದ್ದೆ ಕಣ್ಲೆ ಬೇಕೂಫಾ” ಎಂದು ಗಟ್ಟಿಯಾಗಿ ಅಂದುಬಿಡುತ್ತಿದ್ದ. ಒಂದೊಂದು ರೂಪಾಯಿ. ಸಂಪಾದಿಸುವಾಗ ತಾನು ಗಿರಾಕಿಗಳಿಂದ ಅನುಭವಿಸಿದ ಅವಮಾನ; ಒಳಗೊಳಗೇ ಅವರು ಕೊಟ್ಟಿರಬಹುದಾದ ಶಾಪಗಳೆಲ್ಲವನ್ನೂ ಸಹಿಸಿಕೊಂಡು ಊರಲ್ಲಿ ತಾನು ಗಟ್ಟಿಕುಳವಾದದ್ದರ ಬಗ್ಗೆ ನೋವಿನಿಂದಲೇ ನುಡಿದುಬಿಡುತ್ತಿದ್ದ. ನಾಚಿಕೆ ಮಾರಿದ ಮೇಲೆ ತಾನೆ ಹಣ ಹಳ್ಳವಾಗಿ ಹರಿದುಂದು ತನ್ನ ಕಬ್ಬಿಣ ಪೇಟಾರಿಯನ್ನ ಅನೇಕ ರೂಪದಲ್ಲಿ ತುಂಬಿದ್ದು, ಒಂದೊಂದು ಖೋಲಿಗೂ ಒಂದೊಂದು ಬೀಗ ಜಡಿದು ಅದರ ಕೈಗೊಂಚಲನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಝಣ್ ಝಣ್ ಹೆಜ್ಜೆ ಹಾಕುತ್ತ ಕೊಟ್ರೇಶನ ಗುಡಿ ಬೀದಿಯಲ್ಲಿ ಬಂದಾಗ ಜನರೆಲ್ಲ ಕೊಡುತ್ತಿದ್ದ ಗೌರವದ ಬಗ್ಗೆ ವಿವರಿಸುತ್ತಿದ್ದ. ತಾನು ಸಂಪಾದಿಸಿದ ಆಸ್ತಿಯೆಲ್ಲ ಚರಾಸ್ತಿಯಾಗಿ ತಾನೀಗ ಸ್ಥಿರಾಸ್ತಿ ಯಾಗಬೇಕಾಗಿ ಬಂದಿತಲ್ಲ ಎಂಬ ಒಂದು ಸಂಕಟ ಗುರುಸಾಂತಪ್ಪನ ಒಡಲಲ್ಲಿ ಮೊಟ್ಟೆ ಇಡುತ್ತಿತ್ತೆಂಬುದು ನಿಜ. ಮುಳ್ಳುಕಂಟೆ ಲಾಂಟಾನ ಪೊದೆಗಳಿಂದ ತುಂಬಿ ಹೋಗಿದ್ದ ತೋಟದ ಹೊಲ ನೋಡಿದಾಗ ಆತಗೆ ಸಹಜವಾದ ಸಿಟ್ಟು ಬಂದಿತ್ತು. ಪಾತರದ ಎಂಕಟಿಯ ಅತ್ತೆ ಹನುಮವ್ವ ಅದೇ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಎಂದಿನಿಂದ ಸತ್ಯವೋ ಅಂದಿನಿಂದಲೇ ತೋಟದ ಹೊಸ ಅಲಕ್ಷೆಗೀಡಾಗಿತ್ತು.. ಹನುಮವ್ವನ ಪಿಶಾಚಿ ಹೊಲದ ಪ್ರತಿಯೊಂದು ಗಿಡದ ಮೇಲೆ ಕಿಡಿ ಕಿಡಿ ಹಾರುತ್ತ ಅಲೆದಾಡುತ್ತದೆ ಎಂಬ ಗುಲ್ಲು ಹಬ್ಬಿದಂದಿನಿಂದ ಅಲ್ಲಿ ಕೆಲಸಕ್ಕೆ ಬರಲು ಎಲ್ಲರೂ ಹೆದರುತ್ತಿದ್ದರು. ಹಾಗೆ ಸುದ್ದಿ ಹುಟ್ಟಿಸಿದವರ ಬಗ್ಗೆ; ಹೆದರುವವರ ಬಗ್ಗೆ ಗುರಜ್ಜಗೆ ಒಂದು ರೀತಿಯ ಸಿಟ್ಟು. (ಆಸ್ತಿ ಸ್ವಯಾರ್‍ಜಿತವಾಗಿದ್ದರೂ ಸಹ ಪಿತ್ರಾರ್‍ಜಿತವಾದ ಈ ದೇಹವನ್ನು ಯಾಕೆ ಇಟ್ಟುಕೊಳ್ಳಬೇಕೆಂದು ಯೋಚಿಸಿ ಗುರುಸಾಂತಪ್ಪ ಒಮ್ಮೆ ಅದೇ ತೋಟದ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲನಾದ ಎಂದ ಸಂಗತಿ ಜಗಜ್ಜನಿತು.)

ವಕೀಲರನ್ನು ಕಂಡು ತನ್ನ ಆಸ್ತಿಯ ಮೇಲೆ ತನಗಿರುವ ಹಕ್ಕನ್ನು ಪುನಃ ಸ್ಥಾಪಿಸಬೇಕೆಂದು ಮುದುಕ ನಿರ್‍ಧರಿಸಿ ವೆಂಕಟೇಶ್ವರ ಹೇರ್ ಕಟಿಂಗ್ ಸಲೂನಿನ ತಿರುಗುವ ಕುರ್‍ಚಿಯಲ್ಲಿ ಕೂತು ಹಜಾಮರ ಎಂಟೇಶಿಯ ಬಳಿ ವಕೀಲರ ಬಗ್ಗೆ, ಕಾನೂನುಗಳ ಬಗ್ಗೆ ಚರ್‍ಚಿಸಿದ್ದ. ಇದರಿಂದಾಗಿ ಹಜಾಮರ ಎಂಟೇಶಿ “ಎಮ್ರಾ ಈ ಮುಸಲೋಡು ಇಲಾಗ ತಲ ತಿಂಟುನ್ನಾಡು” ಎಂದು ಯೋಚಿಸಿ, ಒಂದು ದಿನ “ಧಣಿ ಕತ್ತಿ ಮೊಂಡೈತಿ ಸೇವಿಂಗ್ ಮಾಡಾಕಿಲ್ಲ. ಎಂದು ಬಿಟ್ಟ. ಇನ್ನೂ ಗಲಾಟೆ ಮಾಡಿದಾಗ ನೀವೇನು ಪುಗಸಟ್ಟೆ ಸಾಲ ಕೊಟ್ಟಿರಾ, ಬಡ್ಡಿ ತಿಂದಿಲ್ಲಾ. ಹಳೆಬಾಕಿ ಎಲ್ಡೂವರೆ ಕೊಡ್ರಿ ಸೇವಿಂಗ್ ಮಾಡಿಸಿಗಳ್ರಿ; ನಾವೇನು ಹೆಂಡ್ರುಮಕ್ಳು ಹೊಟ್ಗೇನು ತಿಂಬೇಕು” ಎಂದು ಎಂಟೇಶಿ ಧೈರ್‍ಯದಿಂದ ಉತ್ತರಿಸಿಬಿಟ್ಟ. ತನಗೆ ಯಕಶ್ಚಿತ್ ಹಜಾಮನಿಂದ ಅವಮಾನವಾಯಿತಲ್ಲ ಎಂದು ಮಮ್ಮಲನೆ ಮರುಗುತ್ತ ಕೂಡುವ ಬದಲು ಗುರುಸಾಂತಜ್ಜ ಕೂಡಲೆ ಅಂಗಳಕ್ಕೆ ಕುಪ್ಪಳಿಸಿ ಸಿಕ್ಕ ಎರಡು ಕಲ್ಲುಗಳನ್ನೆತ್ತಿ ರೊಯ್ಯನೆ ಸಲೂನಿನ ಕನ್ನಡಿಗಳಿಗೆ ಅಪ್ಪಳಿಸಿಬಿಟ್ಟ. ಅವು ಡೊಳ್ಳನೆ ಚೂರು ಚೂರಾದವು. ಅಷ್ಟರಲ್ಲಿ ಪ್ರೇಕ್ಷಕರಾಗಿ ಉಳಿದಿದ್ದ ಜನ ಹಜಾಮನ ಪಾಲಿಗೆ ಆಪದ್ಭಾಂದವರಾಗಿ ಧಾವಿಸಿದರು. ಇನ್ನೂ ಕೆಲವರು ಗುರಜ್ಜನನ್ನು ಸಂತೈಸಿದರು. ಇಲ್ಲದಿದ್ದರೆ ದೊಡ್ಡ ರಾದ್ಧಾಂತವೇ ಆಗಿಬಿಡುತ್ತಿತ್ತು.

ಹೀಗೆ ಹೀಗೆ……ಹೀಗೆ… ಘಟನೆಗಳ ಮೇಲೆ ಘಟನೆಗಳು. ತನ್ನ ವಿಲಕ್ಷಣವಾದ ನಡವಳಿಕೆಗಳಿಂದಾಗಿ ಶೆಟ್ರು ಗುರುಸಾಂತಪ್ಪ ಕೆಲವರಿಗೆ ಅರೆಹುಚ್ಚನಾಗಿಯೂ, ಕೆಲವರಿಗೆ ಅವಧೂತನಾಗಿಯೂ ಕಾಣಿಸಿದನು. ಹಜಾಮರನ್ನು ವಕೀಲರೆಂತಲೂ; ವಕೀಲರನ್ನು ಹಜಾಮರೆಂತಲೂ ಸಂಭೋದಿಸಲಾರಂಭಿಸಿದ್ದ ಮುದುಕ ಗುರಜ್ಜ “ಗುರುವಿನ ಕೂಡಿದನೇ ಅರುವಿನ ಮನೆಯಲ್ಲಿ…” ಎಂದು ತನ್ಮಯತೆಯಿಂದ ಹಾಡು ತಿದ್ದುದುಂಟು. ತಾನು ಸಂಪಾದಿಸಿದ ಆಸ್ತಿಯನ್ನು ತಾನು ಅನುಭೋಗಿಸುತ್ತೇನೆಯೋ! ಅಥವಾ ಗಚ್ಚಿನ ಮಠಕ್ಕೆ ದಾನ ಮಾಡುತ್ತೇನೆಯೋ… ಸಂಪಾದಿಸುವಾಗ ಯಾರೂ ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲಿಲ್ಲ ಎಂದು ವಾದಮಾಡಿ ಬುದ್ಧಿ ಹೇಳಲು ಬಂದ ಮಕ್ಕಳ ಬಾಯಿ ಮುಚ್ಚಿಸುತ್ತಿದ್ದನು. ನಗಂದಿಮೇಲೆ ಬೆಕ್ಕು ಒಂದೇ ಸಮನೆ ಅರಚುತ್ತಿದ್ದದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ “ಚರಾಸ್ತಿ ಬಿಟ್ಕೊಟ್ಟೇನಾದ್ರೂ ಸ್ಥಿರಾಸ್ತಿ ಮಾತ್ರ ಬಿಟ್ಟುಕೊಡಾಕಿಲ್ಲ” ಎಂದು ಈರಮ್ಮಗೆ ಕೇಳಿಸುವಂತೆ ಗಟ್ಟಿಯಾಗಿ ಹೇಳಿ ಎರಡು ದಿನಗಳಾಗಿದ್ದವು.

“ಹೊಟ್ಗೆ ಕಡ್ಮೆ ಮಾಡ್ಕೊಂಡು ಆಸ್ತಿ ಮಾಡೋನು ನಾನು, ಅದನ್ ಏನು ಬೇಕಾದ್ರು ಮಾಡ್ತೀನಿ, ಅದನ್ ಕೇಳ್ಯಾಕ್ ಅವನ್ಯಾರು… ಗಂಡ್ಸಾಗಿದ್ರೆ ಅವ್ನೂ ಆಸ್ತಿ ಮಾಡ್ಲಿ ಬ್ಯಾಡಂತಿನಾ” ಎಂದು ಎಂದೋ ಬೀದಿಪಾಲಾಗಿ ಇವತ್ತೋ ನಾಳೆಯೋ ಅಂತ ಮುಗಿಲಿಗೆ ಮುಖಮಾಡಿ ಗಾಂಜಾದ ಅಮಲಿನಲ್ಲಿ ಕೂತಿದ್ದ ನಾಗಜ್ಜಗೆ ಕೇಳಿಸುವಂತೆ ಹೇಳಿದ. “ಈ ಹೆಂಡ್ರ ಮಕ್ಕು ಆಸ್ತಿಗೀಸ್ತಿ ಎಲ್ಲ ಮಾಯೆ ಅಂತ ನಾನಿನ್ಗೆ ಎಷ್ಟು ಸಾರಿ ಹೇಳಬೇಕೋ ಹುಚ್ಚಾ. ಈ ದೇಹಾ ಅನ್ತಕ್ಕಂತ ಚರಾಸ್ತಿ ಇದಕ್ಕೆ ಸ್ಥಿರಾಸ್ತಿ ಎಂದು ಸುಡ್ಗಾಡ್ನಲ್ಲಿ ನಾಕೈದು ಮೊಳ ಜಾಗಮಾತ್ರ. ಇವೆಲ್ಡು ಸೇರೋವರ್‍ಗೂ ಬಡುದಾಡ್ತಿರ್‍ತೀವಿ, ಸೊನ್ನೆ ಸೊನ್ನೆ ಸೇರೋವರೂ ಅಷ್ಟೆ!” ಎಂದು ತತ್ವಜ್ಞಾನಿಯಂತೆ ನುಡಿದ ನಾಗಜ್ಜ ಹಿಂದೊಮ್ಮೆ ಗವಾಯಿಗಳ ಕಂಪನೀಲಿ ಸೊಗಸಾಗಿ ದಿಲ್‌ರುಬಾ ಬಾರಿಸುತ್ತಿದ್ದ ಕಲಾವಿದ. ಆತನ ಮಾತನ್ನು ಅನುಷ್ಠಾನಕ್ಕೆ ತರಲು ಗುರುಸಾಂತಜ್ಜನೇನು ಹರಿವಾಣದ ರಾಮಲಿಂಗಾವಧೂತರಿಂದ ದೀಕ್ಷೆ ಪಡೆದಿರುವಾತನೇನಲ್ಲ. ‘ಮಾಯೆ’ ಎಂಬ ಕರ್‍ಣ ಕಠೋರವಾದ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳಲಿಕ್ಕೂ ತಯಾರಿರದಿದ್ದ ಗುರುಜ್ಜಗೆ ಹುಚ್ಚು ಹಿಡದೈತಿ ಎಂದು ಇತ್ತೀಚೆಗೆ ಊರು ತುಂಬ ಬಾರೀ ಸುದ್ದಿ.

ಗುರುಜ್ಜನ ಹೆಂಡತಿ ಗವುರಮ್ಮ ಅಪರೂಪಕ್ಕೆ ಗಂಡು ಹಡೆದಾಗಿನ ಮಾತು ಊರಿನ ಹಲವರಿಗೆ ಗೊತ್ತಿದೆ. ಬದುಕಿನ ಎಲ್ಲಾ ಒಳಹಾದಿಗಳಿಂದ ಹಣ ಸಂಗ್ರಹಿಸುತ್ತಿದ್ದ; ಸಂಗ್ರಹಿಸಿದ ಹಣದಿಂದ ಚಿನ್ನವನ್ನೂ; ಹೊಲ-ಮನೆ ಮಾಡುತ್ತಿದ್ದ ಗುರಜ್ಜ ಹುಟ್ಟಿದ ಮಗನನ್ನು ಶತಾಯುಷಿ ಮಾಡುವುದು ಹೇಗೆ ಎಂದು ಅವರಿವರ ಬಳಿ ಚರ್‍ಚಿಸಿದ. ಅಭಿಮನ್ಯು; ಮಾರ್‍ಕಂಡೇಯ ಇತ್ಯಾದಿ ಪುರಾಣ ಪ್ರತೀಕಗಳನ್ನು ನೆನೆದು ವಿಹ್ವಲನಾದ. ಹಣ ಸಂಪಾದಿಸಲು ಅಗತ್ಯವಾದ ಒಣ ಜಾಣತನ ಮಗನಿಗೆ ಬೇಕಿರಲಿಲ್ಲ. ಬೇಕಾಗಿರೋದು ಆಸ್ತಿಯನ್ನು ಜೀವನ ಪರ್‍ಯಂತರ ಅನುಭೋಗಿಸಿ ತನ್ನ ಉದ್ದೇಶವನ್ನು ಈಡೇರಿಸುವ ದಿಸೆಯಲ್ಲಿ ಮಗನ ದೇಹದ ಬೆಳವಣಿಗೆಯನ್ನು ರೂಪಿಸುವುದು. ಕತ್ತೆ ಹಾಲು ಕುಡಿಸಲು ಕಾರ್‍ಯೋನ್ಮುಖನಾದ, ಹಾಲು ತಂದು ಕೊಡಲು ಅಗಸರ ಸಾಂಬಿಯನ್ನು ಗೊತ್ತುಮಾಡಿದ, ಒಂದಕ್ಕೆ ಐದಾರರಷ್ಟು ಜಗ್ಗಿ ತಂದುಕೊಡುತ್ತಿದ್ದ ಹಾಲನ್ನು ಖುದ್ದ ಗುರುಸಾಂತಪ್ಪನೇ ಮಗನಿಗೆ ಕುಡಿಸುತ್ತಿದ್ದ. ಹೆಗಲಿನಿಂದ ನೆಲಕ್ಕೆ ಇಳಿಯದೆ, ಬೆಳೆದ ಮಗನನ್ನು ಶಾಲೆ ಹೇಗೆ ಕಳಿಸಿಯಾನು? ದಡ್ಡ ಹಾಗೂ ಶತಾಯುಷಿ ಗಂಡನನ್ನು ಪೋಷಿಸಲು ಉಳಿದ ವ್ಯವಹಾರಗಳನ್ನು ನೋಡಿಕೊಳ್ಳಲು ಅಕ್ಷರಸ್ಥ ಹುಡುಗಿಯನ್ನು ತಂದು ಮದುವೆ ಮಾಡಿದರಾಯ್ತೆಂದು ಸ್ನಿರ್ಧರಿಸಿದ. ಅದರಂತೆಯೆ ಸಾಂತಕ್ಕನ ಆರನೆ ಇಯತ್ತೆ ಕಲಿತ ಮಗಳು ಈರಮ್ಮನನ್ನು ಒಂದು ಶುಭ ಮುಹೂರ್‍ತದಲ್ಲಿ ಮನೆ ತುಂಬುಸಿಕೊಂಡಿದ್ದ. ಅದೇ ಮೊಮ್ಮಗಳು ತನ್ನ ವಿರುದ್ಧ ತನ್ನ ಗಂಡನನ್ನು ಮಸೆದು ಇಟ್ಟಿರುವಳೆಂದರೆ ಗುರುಸಾಂತಜ್ಜಗೆ ಹುಚ್ಚು ಹಿಡಿಯದಿದ್ದೀತೆ! ಗುರುಸಾಂತಪ್ಪಗೆ ಕಾರುಣ್ಣಿವಿ ಅಂದರೆ ಭಲೆ ಇಷ್ಟ. ಮಳೆಗಾಲದ ಪ್ರಾರಂಭದ ದಿನಗಳಲ್ಲಿ ರಾತ್ರಿಯ ಕತ್ತಲು ಮುಗಿಲಿಗೇ ವರ್‍ಗವಾಗಿರುವ ರೀತಿಯಲ್ಲಿರುತ್ತದೆ. ಕಾರುಣ್ಣುವಿ ದಿನ ಮೋಡಗಳಾಚೆ ಪೂರ್ಣ ಚಂದ್ರ ಅವಿತು ಬೆಳದಿಂಗಳು ಮೋಡಗಳ ಕಣಿವೆಗಳನ್ನು ಸುತ್ತಿಬಳಿಸಿ ಭೂಮಿಗೆ ತಲುಪಿ. ಸಕಲ ಜೀವರಾಶಿಗೆ ಆನಂದವನ್ನು ಕೊಡುವ ರೀತಿಗೆ ಮರುಳಾಗಿರುವ ಗುರುಸಾಂತಪ್ಪ ತನ್ನ ಹರೆಯದ ದಿನಗಳಲ್ಲಿ ಮಾಳಿಗೆ ಮೇಲೆ ಹೋಳಿಗೆ ಮಾವಿನಹಣ್ಣಿನ ಶೀಕರಣಿ ಪಟ್ಟಾಗಿ ಹೊಡೆದು, ಧರ್‍ಮಪತ್ನಿ ಗೌರಮ್ಮನನ್ನು ಕೋಳಿ ಕೂಗುವಮಟ ಗೋಳಾಡಿಸುತ್ತಿದ್ದನೆಂಬ ಸತ್ಯ ಬಲ್ಲ ಅಗಸರ ಭರಮ್ಯಾ ‘ಮಾ ರಸಿಕ’ ಎಂದು ಈಗಲೂ ಉದ್ಗರಿಸುವುದುಂಟು, ಆದರೆ ಕಾಲ ಬದಲಾಗಿ ಅದೇ ಕಾಲ ಗೌರಮ್ಮನನ್ನು ತನ್ನಿಂದ ಕಸಿದುಕೊಂಡಿದ್ದೂ ಅಲ್ಲದೆ ಮಗ ಸೊಸೆ ತನ್ನ ಮೂಗಿನ ನೇರದ ಹಾದಿಯಲ್ಲಿ ಸುಖವಾಗಿ ಬದುಕುತ್ತ ಹರೆದವರ ಪೈಕಿ ಹರೆಯದವ ನಾಗಿರಬೇಕೆಂಬ ಕನಸು ಕಾಣುತ್ತಿದ್ದ ತನ್ನ ದೇಹದ ಮೇಲೆ ಅದೇ ಕಾಲ ದಾಳಿ ನಡೆಸಿ ಪಂಚೇಂದ್ರಿಯಗಳನ್ನು ಮಂಕುಗೊಳಿಸಿರುವುದು, ಚರ್ಮವನ್ನು ಸುಕ್ಕುಗಟ್ಟಿಸಿರುವುದು, ಕೈಕಾಲುಗಳ ಶಕ್ತಿಯನ್ನು ಕುಂದಿಸಿರುವುದು ಮತ್ತು ತನ್ನ ಸೊಂಟದಲ್ಲಿ ಲಾಂಛನಪ್ರಾಯವಾಗಿ ನೇತಾಡುತ್ತಿದ್ದ ಬೀಗದ ಕೈ ಗೊಂಚಲನ್ನು ತನ್ನಿಂದ ಕಿತ್ತು ಹೆಂಡತಿಯ ಗುಲಾಮನಾಗಿ ಕುಣಿವ ಮಗನ ಹಳೇ ಉಡಿದಾರವನ್ನಲಂಕರಿಸಿರುವುದು ಈ ಎಲ್ಲ ದ್ವಂದ್ವಗಳ ನಡುವೆಯೂ ಸುಖವಾದ ನಿದ್ರೆ ಮುಗಿಸಿ ಆ ದಿನ ಬೆಳಿಗ್ಗೆ ತನ್ನ ಮನೆ ದೇವರಾದ ಮರಬದ ಈರಣ್ಣನನ್ನು ನೆನೆಯುತ್ತ ಎದ್ದ. ಪಾದರಸಕ್ಕಿಂತಲೂ ಚುರುಕಾಗಿ ಅಡುಗೆ ಮನೆ ಒಳಹೊರಗು ಏನು ಮಾಡ್ತಿ ಈರವ್ವಾ; ಏನು ಬಿಡ್ತೀ ಈರವ್ವಾ ಅಂತ ವಿಚಾರಿಸುತ್ತ ತನಗೆ ಪ್ರಿಯವಾದ ಹೋಳಿಗೆ, ಕಣಿವೆಹಳ್ಳಿ ಮಾವಿನಹಣ್ಣಿನ ಸೀಕರಣೆಯನ್ನು ಸೊಸೆ ಅಥವಾ ಮೊಮ್ಮಗಳು ಮಾಡುತ್ತಿರುವುದನ್ನು ನೆನೆದು ರೋಮಾಂಚನಗೊಂಡು ಸಂತೋಷಗೊಂಡು ಉಬ್ಬಿಹೋಗಿ ಮಾವಿನ ತೋಪಿನಿಂದ ಎಲೆ ಕಿತ್ತು ತಂದು ಪೋಣಿಸಿ ಮನೆಯ ಎರಡೂ ಬಾಗಿಲುಗಳಿಂಗ ತೋರಣವನ್ನು ಕಟ್ಟಿ ಮೂರು ಮಾರು ದೂರ ನಿಂತು ನೋಡಿ “ನಂ ಗೌರಿ ಇದ್ರೆ ನೋಡಿ ಎಷ್ಟು ಸಂತೋಷ ಪಡ್ತಿದ್ಳೂಂತ” ಆತ ಉದ್ಗರಿಸಿದ್ದನ್ನು ನಾಲ್ಕು ಜನ ಕೇಳಿಸಿ ಕೊಂಡು, ಗುರುಸಾಂತಪ್ಪ ಇನ್ನಾದ್ರು ಸರಿಹೋಗ್ಲಿ ದೇವ್ರ್‍ಏ ಎಂದುಕೊಂಡಿದ್ದರು ಪರಸ್ಪರ. ಸೊಸೆಯಾದ ಈರವ್ವನೂ ತನ್ನ ಮಾವನ ಈ ಆರೋಗ್ಯಕರ ಚಟುವಟಿಕೆ ಯಿಂದ ಖುಷಿಗೊಂಡು ಕಸಕಸಿ ಹಾಕಿ ತುಪ್ಪದಲ್ಲಿ ಹೋಳಿಗೆ ಬೇಯಿಸಿದಳು. ಸುಂಟಿ, ಯಾಲಕ್ಕಿಯಂಥ ಸುವಾಸನಾಯುಕ್ತ ದ್ರವ್ಯ ಬೆರೆಸಿ ಸಕ್ಕರೆಯಿಂದ ಕಸಿಮಾವಿನ ಶೀಕರಣೆ ಮಾಡಿದಳು. ತನ್ನ ಹಾಗೂ ಮನೆಯ ಇಷ್ಟ ದೇವತೆಗಳನ್ನು ಪರಮಭಕ್ತಿಯಿಂದ ಪೂಜೆ ಮಾಡಿದ ಮಾವನನ್ನು ಅದೇ ದೇವರ ಜಗಲಿ ಮುಂದೆ ಕುಳ್ಳಿರಿಸಿ ಸಾಕವ್ವೋ ಸಾಕು ಎಂದರೂ ಕೇಳದೆ ಮತ್ತೊಂದು ಹೋಳಿಗೆ ನೀಡಿ ಅದನ್ನು ತುಪ್ಪದಲ್ಲಿ ಮುಳುಗಿಸಿ ಬಡಿಸಿದಳು. ಗಡದ್ದಾಗಿ ಹೊಡೆದು ಮೇಲೊಂದು ಕಪ್ಪು ತಿಳಿಸಾರು ಕುಡಿದು ಹೋಬ್ಬ ಅಂತ ಡೇಗಿದ. ಎಜ್ಜಾ ಕಟ್ಟಿ ಮ್ಯಾಲ ಹಾಸೀನಿ, ಮಕ್ಕಂಬಿಡು ಎಂದು ಸೊಸೆ ಪರಾಂಬರಿಸಿದ ಮೆತ್ತನೆಯ ಲೋಡಿಗಾತು ಉರುಳಿ ಕೊಂಡೊಡನೆ ಗೊರಕೆ ಬಾರಿಸತೊಡಗಿದ.

ತನ್ನ ಗುಡಾಣದಂಥ ಹೊಟ್ಟೆಯೊಳಗೆ ಎತ್ತಿನಗಾಡಿ ಓಡುತ್ತಿರುವಂಥ ಸದ್ದು ಕೇಳಿಸಿ ಎಚ್ಚರಾದನು. ದಢ ಬಡ ದಢ ಸದ್ದು. ಊರಮ್ಮನ ಮೆರವಣಿಗೆಯ ತಮಟೆಗಳು ಬಾರಿಸಿದಂತೆ, ಮುಂಗಾರು ಮೋಡಗಳು ಢೀ ಕೊಟ್ಟಂತೆ ಸದ್ದು ಕೇಳಿಸಿ ಹೊದ್ದಿದ್ದ ದುಪ್ಪಟಿಯೊಳಗೆ ಕಣ್ಣು ಬಿಟ್ಟು ನೋಡುತ್ತ ತನ್ನೊಡಲ ನೂಲಿನಿಂದ ನೇಯ್ದು ಗೂಡಿನೊಳಗೆ ಬಂಧಿತ ರೇಷ್ಮೆ ಹುಳುವಿಗೆ ಹೋಲಿಸಿಕೊಂಡನು. ಪಕ್ಕದ ಶೀಲವಂತರ ಸೇಕ್ರಯ್ಯನ ಹೆಂಡತಿ ಬಸವ್ವನೆದುರು ಸೊಸೆ ಈರವ್ವ ನಗುತ್ತಿರುವುದು ಕೇಳಿಸಿತು. ಅಲೆ ಅಲೆಯಾಗಿ ಮಾರ್‍ಧನಿಸಿದ ಆ ನಗೆಯ ಹಿಂದೆ ತನಗೆ ಅರ್‍ಥವಾಗದ ಸಂಚು ಇರಬಾರದೇಕೆ! ಹಾಗೆಯೇ ತಾನು ಸಂಪಾದಿಸಿದ ಸ್ಥಿರಾಸ್ತಿ ಚರಾಸ್ತಿಗಳು ಒಂದೊಂದಾಗಿ ಕಣ್ಣ ಮುಂದೆ ಹುಲಿ ವೇಷ ತೊಟ್ಟು ಕುಣಿಯುತ್ತ ಹೋದವು. ಒಂದೊಂದು ಆಸ್ತಿಯ ಸೊಗಸಿಗೂ ಹ್ಹಾ…! ಹ್ಹಾ…! ಎಂಬ ಉದ್ಗಾರ ಹೊರಟಿತು. ‘ಲೇ ಗುರುಸಾಂತ, ನಿನ್ ಮಗನ ಮೇಲೆ ರವ್ವಸ್ಟು ಕಣ್ಣಿಡು’ ಅಂತ ನಾಲಿಗೆ ಮೇಲೆ ಮಚ್ಚೆ ಇರುವ ಗಾದಿಲಿಂಗಪ್ಪ ತಾತ ನುಡಿದ ಮರುದಿನವೇ ತಾನು ಮೂಗನನ್ನು ಗುಟ್ಟಾಗಿ ಹಿಂಬಾಲಿಸಿದ್ದ. ಅವನು ತಾಲ್ಲೂಕಾಫೀಸಿಗೆ ಹೊಕ್ಕ ಕೂಡಲೆ ಬೇವಿನಮರದ ಹಿಂದೆ ಅವಿತು ಗಮನಿಸಿದ್ದ. ಹೊರನೋಟಕ್ಕೆ ಅಮಾಯಕನಂತೆ ಕಾಣುವ ಮೂಗ ಪ್ಯಾಂಟು ಹಾಕ್ಕೊಂಡಿದ್ದ ಕ್ಲಾರ್‍ಕ ನೀಲಕಂಠನೆದುರು ಅರ್‍ಧ ತಾಸು ಪಿಸಿಪಿಸಿ, ಗುಸುಗುಸು ಚರ್‍ಚಿಸಿದ್ದು ನೆನಪಾಯಿತು. ಈ ಸಂಗತಿಯನ್ನು ತನ್ನ ವಕೀಲ ವೆಂಕಟಪ್ಪನೆದುರು ಅರುಹಿಸಿದ್ದ. ಕಪ್ಪು ಕೋಟು ತೊಟ್ಟು ಥೇಟು ಯಮಧರ್‍ಮ ರಾಯನ ಖಾಸಾ ಚಿತ್ರಗುಪ್ತನಂತೆ ಕಾಣುವ ವೆಂಕಟಪ್ಪ ಇಂಡಿಯನ್ ಪೀನಲ್ ಕೋಡನ್ನು ಓತೋಪ್ರೋತವಾಗಿ ಉದಾಹರಿಸುತ್ತ ಸ್ಥಿರಾಸ್ತಿ ಆಗ್ಲಿ ಚರಾಸ್ತಿ ಆಗ್ಲಿ ಅದೆಲ್ಲ ನಿನ್ನ ಸ್ವಯಾರ್‍ಜಿತ, ಇಂಡಿಯನ್ ಪೀನಲ್‌ಡ್ ಪ್ರಕಾರ ನೀನು ಬದುಕಿರೋವರ್‍ಗೂ ನಿನ್ಮಗನಿಗಾಗ್ಲೀ, ನಿನ್ ಸ್ವಸಿಗಾಗ್ಲಿ ಅದ್ರ ಮ್ಯಾಲೆ ಅಧಿಕಾರ ಬರೋಲ್ಲ. ನೀನು ಸತ್ತ ಮರುಗಳಿಗೆ ಅವ್ರ ಆಸ್ತಿಗೆ ಅಧಿಕಾರಸ್ಥರು ಎಂದಿದ್ದು ನೆನಪಾಯಿತು. ತನಗೆ ಸೊಸೆ ಅಂಭೋಳು ಪ್ರೀತಿಯಿಂದ ಬಡಿಸಿದ್ದು ನೆನಪಾಯಿತು; ನೆನಪುಗಳಿಂದ ತತ್ತರಿಹೋದ ಗುರುಸಾಂತಪ್ಪ ‘ಎಲಾ ಬೋಸೂಡಿ ಹಿಂಗೂ ನಿನ್ ಸಮಾಚಾರ’ ಎಂದು ದಿಗ್ಗನೆ ಎದ್ದು ಕುಳಿತ ತಲೆ ಗರಗರ ತಿರುಗಿದಂತಾಯಿತು. ಹೊಟ್ಟೆ ತೊಳೆಸಿ ಬಂತು, ತಿಂದಿರೋ ಒಂದೊಂದು ಹೋಳಿಗೆ ಕಾಳಕೂಟಗಳಾಗಿ ಹೊಟ್ಟೆಯೊಳಗೆ ನರ್‍ತಿಸುತ್ತಿರುವಂತೆ ಭಾಸವಾಯಿತು. ಇನ್ನೊಂದು ಕ್ಷಣದಲ್ಲಿ ತಾನು ಸತ್ತೇ ಹೋಗಿಬಿಡಬಹುದೆಂಬ ಭಯದಿಂದ ಎಡಗೈ; ಬಲಗೈಗಳನ್ನು ಒಂದರ ಹಿಂದೆ ಒಂದರಂತೆ ಗಂಟಲವರೆಗೆ ಮೊಣಕಾಲೂರಿ ತೂರಿಸಿ ವಯ್ ಅಂದ, ಜಠರದಿಂದ ಗಂಟಲವರೆಗೆ ಬಂದು ವಾಪಾಸಾಯಿತು. ಎಲಾ ಇವ್ನಾ ಅಂತ ಗುರುಸಾಂತಪ್ಪ ಅಲ್ಲೇ ಇದ್ದ ಸೆಗಣಿಯನ್ನು ಜಗಲಿ ಮೇಲಿದ್ದ ತಾಮ್ರದ ಬಟ್ಟಲಿಗೆ ನೀರು ಸಹಿತ ಹಾಕಿ ಕಲಸಿ ರಾಡಿಯನ್ನು ಗಟಗಟನೆ ಕುಡಿದು ಬಿಟ್ಟ. ಜಠರದೊಳಗೆ ಸೆಗಣಿ ರಾಡಿಗೂ ಹೋಳಿಗೆ ಊಟ ಕುಪ್ಪಳಿಸಿತು ಗಂಟಲಿನಿಂದ ಹೊರಗೆ, ವಯ್ಕ್… ವಯ್ಕ್… ವಯ್ಕ್… ಅಂತ ಮೂರು ಬಾರಿ ವಾಂತಿ ಮಾಡಿಕೊಂಡು ಇಡೀ ಅಟವಾಳಿಗೆ ತುಂಬ ವಿಜೃಂಭಿಸಿದ ಇದನ್ನೆಲ್ಲ ನೋಡುತ್ತ ಎದೆ‌ಎದೆ ಬಡಿದುಕೊಂಡು ಸೊಸೆ ಮೇಲೆ “ಎಲೆ ಬೋಸುಡಿ ಹೋಳಿಗೇಲಿ ಇಸಾ ಇಟ್ಟು ಕೊಲ್ಲಾಕೆ ಅದೆಷ್ಟು ದಿನ್ದಿಂದ ಪಿಲಾನು ಹಾಕಿದ್ದೆಲೇ” ಎಂದು ಅಬ್ಬರಿಸಿದ್ದು ಓಣಿ ಜನಕ್ಕೆ ಸೋಜಿಗವೆನಿಸಿತು. ತಲೆಗೆ ಕೈ ಹೊತ್ತು ‘ಅಯ್ಯೋ ನನ್ನ ಕರ್‍ಮವೇ’ ಅಂತ ಕೂತಿದ್ದ ಮೂಗ ಬಸವನೆದುರು ಅಜ್ಜ ಮೊಮ್ಮಗಳ ನಡುವೆ ನಡೆದ ವಾದದ ದ್ವಂದ್ವ ಯುದ್ಧವನ್ನು ಓಣಿ ಜನ ಹಾ… ಹಾ… ಭಲೆ ಭಲೆ ಅಂತ ಸವಿದರು. “ಎಲೇ ದುರುಗಿ… ನೀನು ನನ್ ಮೊಮ್ಮಗ್ಳಲ್ಲ. ನನ್ ಮಗ್ನ ಹೆಂಡ್ತಿ ರೂಪದಲ್ಲಿ ನನಗೆ ಮೃತ್ಯವಾಗಿ ಬಂದಿದೀ ಏನೇ… ಇನ್ನು ಮ್ಯಾಲೇ ಇದು ಸಾದ್ದಿಲ್ಲ. ಈ ಮನೇಲಿ ನೀನಿರಬೇಕೂ… ಇಲ್ಲಾ ನಾನಿರಬೇಕು” ಎಂದು ದುರ್‍ದಾನ ತೆಗೆದುಕೊಂಡವನಂತೆ ಗದ್ದಿ ಕಲ್ಲೇಶನ ಗುಡಿಕಡೆ ಬಿರುಗಾಳಿಯಂತೆ ನಡೆದುಹೋದ ಗುರುಸಾಂತಪ್ಪಗೆ ಹುಚ್ಚು ಹಿಡಿದಿದೆ ಎಂದು ಊರೆಲ್ಲಾ ಸುದ್ದಿ.

ಗುರುಸಾಂತಪ್ಪಗೆ ತನ್ನ ನಾಲಗೆಯ ಬಗ್ಗೆ ತುಂಬ ಗೌರವ ಹಾಗೂ ಅಭಿಮಾನ ಆಡಿದ್ದೊಂದು ಮಾತ್ರ ಆತನಿಂದ ಸಾಧ್ಯವೇ ಇಲ್ಲ. ಒಂದು ಸಾರಿ ಎರಡು ಸಾವಿರಕ್ಕೆ ಬಾಳುವ ಆಸ್ತಿಯನ್ನು ಬಾಯ್ತಪ್ಪಿ ನಾಕು ಸಾವ್ರಕ್ಕೆ ಕೇಳಿಬಿಟ್ಟ. ಇಡೀ ಊರೇ ಬೇಡಾಂದರೂ ನಾಕು ಸಾವಿರಕ್ಕೆ ಕೊಂಡನು. ಇಂಥ ಎಷ್ಟೋ ಉದಾಹರಣೆಗಳನ್ನು ಆತನ ನಾಲಿಗೆ ನಿಯತ್ತಿನ ಬಗ್ಗೆ ಕೊಡಬಹುದು. ಇಂಥ ಗುರುಸಾಂತಪ್ಪ ಕಾಡು ಕಣಗಿಲೆ ಗಿಡಗಳಿಂದಾವೃತ ಗದ್ದಿ ಕಲ್ಲೇಶನ ಗುಡಿ ಸೇರಿಕೊಂಡಾಗ ಮತ್ತೆ ಮಗ-ಸೊಸೆಯ ಕಡೆ ಸುಳಿಯಲಿಲ್ಲ. ಹೊಸಮನಿ ಕೊಟ್ರಜ್ಜ: ಗಿಡ್ಡ ಬಸಣ್ಣ; ದಿಬ್ಬದ ಸೋಮಣ್ಣ; ಕೋರಿ ಚನ್ನೀರಜ್ಜ ಇವೆಲ್ಲ ಎಷ್ಟೇ ಹೇಳಿ ನೋಡಿದರು. ಆದರೆ ಅಜ್ಜ ತನ್ನ ನಿರ್‍ಧಾರವನ್ನು ಬಿಲ್‌ಕುಲ್ ಬದಲಿಸಲಿಲ್ಲ ಎಂದ ಮಾತ್ರಕ್ಕೆ ಗುರುಸಾಂತಜ್ಜ ಚರಾಸ್ತಿ ಸ್ಥಿರಾಸ್ತಿಯ ದ್ವಂದ್ವದಿಂದ ಮುಕ್ತನಾಗಿ ಸನ್ಯಾಸ ಸ್ವೀಕರಿಸಿದನೆಂದು ಅರ್‍ಥವಲ್ಲ. ತನ್ನ ದೇಹಕ್ಕೆ ತಾನು ಹೇಗೆ ಒಡೆಯನೋ ಹಾಗೆಯೇ ತನ್ನ ಸ್ವಯಾರ್‍ಜಿತ ಆಸ್ತಿಗೆ ತಾನೊಬ್ಬನೇ ಒಡೆಯ ಎಂಬ ಘೋಷಣೆ ಪ್ರಕಟಿಸಿ ಅದಕ್ಕೆ ಟೊಂಕ ಕಟ್ಟಿದ. “ಈ ಭೂಮಿ ಮ್ಯಾಲ ಯಾರು ಸಾಸ್ವತ ಹೇಳು… ಒಂದಿಲ್ಲಾ ಒಂದಿನ ಎಲ್ಲಾರು ಹೋಗೋರೆ… ಬರುದಾಗೇನೂ ತರ್‍ಲಿಲ್ಲ… ಹೋಗ್ವಾಗೇನು ಒಯ್ಯಲ್ಲ… ಸುಮ್ಮೆ ಇರೋವಸ್ಟು ದಿನ ಮಗನತ್ರ ಇದ್ದು ಸೊಸೆ ಮಾಡಿಟ್ಟಿದ್ದು ಉಂಡು ಶಿವನಾಮಸ್ಮರಣೆ ಮಾಡ್ತಾ ಮುಂದೊಂದು ದಿನ ಇಹಲೋಕದ ಯಾಪಾರ ಮುಗಿಸಬಾರ್‍ದೆ” ಎಂದು ದಮ್ಮಡಿ ಈಸೂರಜ್ಜ ಬುದ್ಧಿ ಹೇಳಲು ಪ್ರಯತ್ನಿಸಿದಾಗ ಗುರುಸಾಂತಪ್ಪ ಕನಲಿ ಕೆಂಡವಾದ. “ನನ್ ಆಸಾಮಿಯಾದ ನೀನು ನನಗೆ ಬುದ್ದಿ ಹೇಳ್ತಿಯಾ… ಓಗ್ ಓಗ್, ನೀನ್ ಹೇಳ್ತಿರೋದು ಸೊಸೆ ಪಿತೂರಿಗೆ ಹಾಳಾಗಿ ಹೋಗು ಅಂತ ತಾನೆ… ಸಾಧ್ಯವೇ ಇಲ್ಲ. ನೋಡು ನನ್ ಮನೇಲಿ ಅವ್ಳಿರೋವರ್‍ಗೂ, ನಾ ಮನಿ ತಲಬಾಕ್ಲು ದಾಟ್ಟಲ್ಲ… ಬೀಗದ ಕೈಗೊಂಚ್ಲು ನನ್ ಸೇರಿದ ಮ್ಯಾಕೇ ಈ ಗಡ್ಡ ಬೋಳಿಸ್ತೀನಿ… ಇದೇ ನನ್ ಸಪಥ!” ಎಂದು ಗುರುಸಾಂತಪ್ಪ ಅದ್ಯಾವ ಗಳಿಗೆಯಲ್ಲಿ ಸಪಥ ಮಾಡಿದನೋ ಏನೋ; ಆವತ್ತಿನಿಂದ ಅವನ ನಡೆ ನುಡಿ ಮತ್ತಷ್ಟು ಹೋರಾಟ ರೂಪ ತಾಳಿದವು. ದೇಹದ ಅಗತ್ಯಗಳನ್ನು ಅಲಕ್ಷಿಸಿ ಕೋರ್‍ಟಿನ ಸುತ್ತ ಪರದಕ್ಷಿಣೆ ಹಾಕತೊಡಗಿದ. ವೆಂಕಟಪ್ಪ ವಕೀಲರಂತೂ ಇಂಡಿಯನ್ ಪೀನಲ್‌ಕೋಡಿನ ಬಗ್ಗೆ ಹೇಳಿದಾಗ ರೋಮಾಂಚನಗೊಂಡು ಹೊಸ ಹುಮ್ಮಸ್ಸಿನಿಂದ ಕಂಗೊಳಿಸಿಬಿಡುತ್ತಿದ್ದ. ಆತನನ್ನು ತಮಗೆ ಬೇಕಾದ ಹಾಗೆ ಬಗ್ಗಿಸಿಕೊಂಡು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಅವರಾರು ಇಲ್ಲದಾಗ ತಾನೊಬ್ಬನೇ ಕೋರ್‍ಟ್ ಮುಂದಿನ ಗುಲ್‌ಮೊಹರ್ ಮರದಡಿ ನಿಂತು ಜೈಮಿನಿ ಭಾರತದ ಪದ್ಯಗಳನ್ನೂ, ಭಗವದ್ಗೀತೆಯ ಶ್ಲೋಕಗಳನ್ನೂ ನಾಕು ಮಂದಿಗೆ ಕೇಳಿಸುವಂತೆ ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದ. ಹಾಗೆ ಹೇಳಿ ಹೇಳಿ ಆತನ ಭಾಷೆಯ ಉಚ್ಚಾರಣೆಯಲ್ಲಿ ಅನೇಕ ಐತಿಹಾಸಿಕ ಬದಲಾವಣೆಗಳಾಗಿದ್ದವು. ಮಾತಾಡುವಾಗ ಮಾತಿನ ವ್ಯಾಕರಣವೇ ಬದಲಾಗಿ ಬಿಡುತ್ತಿತ್ತಷ್ಟೇ ಅಲ್ಲದೆ, ಪುಲ್ಲಿಂಗ ವಾಚಕ ಸ್ತ್ರೀಲಿಂಗ ವಾಚಕಾವಾಗಿಯೂ; ಸ್ತ್ರೀಲಿಂಗ ವಾಚಕವು ಪುರುಷ ಲಿಂಗ ವಾಚಕವಾಗಿಯೂ ಮಾರ್‍ಪಟ್ಟು ಶೋತೃಗಳಿಗೆ ಸಿಕ್ಕಾಪಟ್ಟೆ ಮುದ ನೀಡುತ್ತಿದ್ದವು. ಆಗ ಅವರು “ದೇವರು ನಮಗೆ ಇಷ್ಟೊಂದು ಉಚಿತ ಮನರಂಜನೆ ನೀಡುತ್ತಿರುವ ಗುರುಸಾಂತಪ್ಪನನ್ನು ನೂರುವರ್‍ಷದವರೆಗೆ ಸಾಯಿಸಬೇಡ” ಎಂದು ಒಳಗೊಳಗೆ ಬೇಡಿಕೊಳ್ಳುತ್ತಿದ್ದುದಂತೂ ನಿಜ. ಆದರೆ ಇಂಥ ಗುರುಸಾಂತಪ್ಪ ಇದ್ದಕ್ಕಿದ್ದಂತೆ ಕಾಣದಾದಾಗ ಊರ ಜನರ ಮನೋಭೂಮಿಕೆ ಹೇಗಾಗಬೇಡ! ಊರ ಜನ ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೋರ್‍ಟಿನ ಆವರಣವನ್ನು ಹೊಕ್ಕೊಡನೆ ಓಹೋ ಇಲ್ಲಿ ಗುರುಸಾಂತಪ್ಪ ಅಡ್ಡಾಡುತ್ತಿದ್ದ. ಅದೇ ಮರದಡಿ ಆತ ನಿಂದಿರುತ್ತಿದ್ದ… ಅದೇ ವೆಂಕಟಪ್ಪ ವಕೀಲರನ್ನು ನೋಡಿ ಇವರು ಬೇರೆ ಅಲ್ಲ. ಆತ ಬೇರೆ ಅಲ್ಲ ಎಂದು ನೆನಪು ಮಾಡಿಕೊಳ್ಳುತ್ತಾರೆ.

ಶೆಟ್ರು ಗುರುಸಾಂತಪ್ಪ ಹೀಗೇ ಇದ್ದ, ಆತನಿಗೆ ಹೀಗೆ ಹುಚ್ಚು ಹಿಡಿತು ಎಂಬ ಅನೇಕ ವಿವರಗಳನ್ನು ತಮ್ಮ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ನೀಡುವ ದಿಸೆಯಲ್ಲಿ ಈಗಲೂ ನಮ್ಮೂರಿನ ಜನರು ಶ್ರಮಿಸುತ್ತಿರುವುದಂತು ನಿಜ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ