ಭಾವಕೇಂದ್ರ

ನೂರು ಹೂಗಳ ಕಂಪು ತೇಲುತಿದೆ ಗಾಳಿಯಲಿ
ಹೀರಿಕೋ; ಅಲ್ಲಿಳಿದ ಮಳೆಯ ನೀರು
ಇಲ್ಲಿ ಬಾವಿಗೆ ಸೋಸಿ ಬಂದಿಹುದು, ಸೇದಿಕೋ:
ಕಾಣುವುದೆ ಈ ಗಿಡದ ಬುಡದ ಬೇರು?

ಸುತ್ತು ಭೂಮಿಯ ಸಾರ ಇದರ ಆಹಾರ; ಹೂ
ಕಾಯಿ, ಹಣ್ಣಿನಲಿ ಬಗೆ ಒಗರು, ತಿಗುರು.
ಬಯಲ ಬಣ್ಣಿಸಿ, ಮುಗಿಲ ಹಣ್ಣಿಸುವ ಈ ಕೊರಡು
ಗಾಲಿಯಾಗಲು ಹೊರಟು ಬಂತು ತೇರು.

ಅವರವರ ತಾಯಿ-ನುಡಿ ಮೊಲೆವಾಲಿನಿಂಗಡಲು
ಬೆಳೆದಾಗ ಬೇರೆಡೆಯ ಧಾನ್ಯ-ದವಸ.
“ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ
ನ ಭವತಿ”-ಸರಸತಿಗೆ ಏಕೆ ವಿರಸ?

ಎಲ್ಲೆಲ್ಲಿ ಏನು ಕಸುವಿನಲಿ ಬೆಳೆವುದೊ ಬೆಳೆದು
ಆ ಬದುಕು ಹಸಗೊಂಡು ರಸವಾಗಲಿ,
ಹತ್ತು ತರಹದ ಪಲ್ಲೆ ಕೂಡಿ ಕುದಿಸಿದ ಅಡಿಗೆ
ರುಚಿಯೆಂದು ಹೇಳುವರು ಅಟ್ಟುಣ್ಣಲಿ.

ಹಬ್ಬಿ ಹರಡಿದೆ ತೋಟ; ಇದೊ ಪುರಾತನ ಬಾವಿ
ನೂರು ಮಡಿಗಳ ತಣಿಸಿ ಹರಿವ ನೀರು.
ಎಂಥ ಬೀಜಕು ಇಲ್ಲಿ ಮೊಳಕೆ ನಾಟುವ ಭಾಗ್ಯ
ಕಾಡ ಮಿಕ, ನರಿ ನುಸುಳಿ ಆರು-ಪಾರು.

ಕಟ್ಟು ಬೇಲಿಯ ಭದ್ರ, ಮೊಟ್ಟೆಹೊಡೆ ದಿನದಿನವು,
ಒಟ್ಟಿರುವ ಕಸಕಳೆಯ ಕಿತ್ತು ಬಿಸುಡು;
ಹಾಕು ಗೊಬ್ಬರ ಬೆಳೆಗೆ ಕ್ರಿಮಿನಾಶಕವ ತೊಡೆದು;
ಎಲ್ಲರನು ಕರೆಕರೆದು ಹಬ್ಬಮಾಡು.

ನಿನ್ನ ತೋಟದಿ ನವಿಲು ಗರಿಗೆದರಿ ಕುಣಿಯುವದು
ತೋಪಿನಲಿ ಕೋಗಿಲೆಯು ಕೂಜಿಸುವದು;
ನೋಯಿಸದೆ ಅಳಿ ಬಂದು ಹೂವ ರಸ ಹೀರುವದು
ಗಿಳಿ ಹಣ್ಣಕದುಕಿ ನುಡಿ ಹದಗೊಡುವದು.

ಮನಮನವು ಮುಸುಕಿನೊಳಗಿನ ದೊಣ್ಣೆ, ಮಾತಿನಲಿ
ಜಾತಿ ಮಲ್ಲಿಗೆ, ಕೃತಿಯು ತೂತು ಮಡಕೆ-
ಇದರಪಶ್ರುತಿ ತಿದ್ದಿ ಅಪರಾಧಿ ಎನಿಸಿದರು-
ತಪವ ಕೆಡಿಸಲು ಸಿದ್ಧ ರತಿ, ಮೇನಕೆ.

ಹರಿದು ಚೆಲ್ಲಾಪಿಲ್ಲಿ ಎದೆಯ ಮುತ್ತಿನ ಸರವು
ದೊರೆಯಲೊಲ್ಲದು ಎಲ್ಲು ಮೊದಲ ಸೂತ್ರ;
ಕಣ್ಣಿದ್ದವರು ಮುತ್ತು ಹುಡುಕಿ, ಹಸುವಿದ್ದವರು
ಹೊಸ ಎಳೆಯ ಹುರಿಗೊಳಿಸಿ, ನೋಡಿ ಗಾತ್ರ.

ಮಧ್ಯಬಿಂದುವ ಮರೆತು ತಿರುಗದಿರಲೀ ಚಕ್ರ
ಕುರುಡಾಗಿ ಕಂಡಕಡೆ ಉರುಳದಿರಲಿ;
ಶಿಶುಪಾಲವಧೆಗಿರಲಿ; ಸೂರ್‍ಯಾಸ್ತ ಒದಗಿರಲಿ-
ಪಾರ್‍ಥಪ್ರತಿಜ್ಞೆಗಿದು ಮರುಗದಿರಲಿ.

ಪಂಚಶೀಲದ ಮರೆಗೆ ಹಂಚಿಕೊಳ್ಳುವರುಂಟು
ಹಾಲು ಬಟ್ಟಲವಿಲ್ಲ ಬರಿಯ ಗುಟುಕು.
ಶೀಲವಂತರ ಓಣಿಯಲ್ಲಿ ಕಣ್ಮರೆ ಕೋಳಿ-
ಮಗ್ಗ ಹೂಡುವ ಮುನ್ನ ತೊಡಕು ಬಿಡಿಸು.

ಎಂಟಿಲ್ಲ, ಹದಿನೆಂಟು ಸ್ಥಾಯಿಭಾವಗಳುಂಟು
ಇದರೊಳಗೆ, ನೂರೆಂಟು ಉದ್ದೀಪನೆ-
ಸಂಚಾರಿ, ನಿನ್ನ ರಸಸಿದ್ಧಿಯೆಡೆ ಹೆಜ್ಜೆಯಿಡು
ಅನುಭಾವದಂಚಿನಲಿ ಮಿಂಚಿನ ಗೊನೆ.
*****