ಜೀವರಸಾಯನಶಾಸ್ತ್ರವನ್ನು
ನಾನೀಗ ಅಭ್ಯಸಿಸುತ್ತಿದ್ದೇನೆ…..
ಜೀವರಸಾಯನಶಾಸ್ತ್ರಕ್ಕೆ ಜೀವವಿಲ್ಲ
ಭವಿಷ್ಯದ ಹೊಳಹು ಮತ್ತೆ ಅವಶೇಷದ ಅರಿವು
ಹೀಗೆ ಯಾವ ಅವಿರ್‍ಭಾವವೂ ಇಲ್ಲ
ಇದಕ್ಕೆ ಪುರಸೊತ್ತಿಲ್ಲದೆ ಮರೆಯಲ್ಲಿದ್ದುದನ್ನ ಸರಸರ
ತೆರೆಯಮೇಲೆ ತಂದುಬಿಟ್ಟು ಹೋಗುವದೊಂದೇ ಗೊತ್ತು.
ಪ್ರಯೋಗಕ್ಕೆ ಸಿಕ್ಕಿ ನರಳಿ ಮತ್ತೆ ನಳನಳಿಸುವ
ಕ್ಷಣಿಕ ಹೋಲಿಕೆಯೊಂದೇ ಗೊತ್ತು
ಎಲ್ಲೆಲ್ಲೋ ಆಳ ಒಳಗಿಳಿದು ಇಳಿದ ರೀತಿ
ಮರೆತು ಇಳಿದ ದಾರಿ ಮರೆತು ಕೇವಲ ಕಂಡದ್ದೇ ಕೃತಿ
ಯಾಗುವ ಬೆರಗೊಂದೇ ಗೊತ್ತು-ಹೊರತು-
ತಾ ಕಂಡ ಅಕ್ಷ ಅಕ್ಷ ತಾ ನುಡಿದ ಶಬ್ದ ಶಬ್ದಗಳಲ್ಲಿ
ಹೊಕ್ಕು ಹೊರಬರುವ ಈ ತನಕ
ಮೆಟ್ಟಿದ್ದ ಮೂಲಗಳನ್ನೇ
ಸಟ್ಟನೆ ಕಂಡು ಅನಾಮತ್ತು ತೆಕ್ಕೆ ಬಿಡಿಸಿ
ಸರಳ ಹೊತ್ತು ತರುವ-ತಂದೆ-ತರುತ್ತಿರುವ-
ಹಾ ತಂದೆನಲ್ಲಾ ಎಂಬ ರೋಮಾಂಚನವಿಲ್ಲ
ನಾನಿಲ್ಲಿ ಆನಂದವನ್ನು ಟೆಸ್ಟ್ಯೂಬಿನಲ್ಲಿಟ್ಟು
ಬಣ್ಣ ಎರೆದು ಅಲಲಾ ಬೆಂಕಿ ಹಿಡಿದು ಅಂಕಿ
ಸಂಖ್ಯೆಗಳಲ್ಲಿ ಗ್ರಾಫೆಳೆಯುತ್ತೇನೆ
ದುಃಖವನ್ನು ರಾತ್ರಿಯಿಡೀ ಕೂತು ಕಣ್ಣು ಸವೆಸಿ
ಸವೆಸಿ ಓದಿ ನೋಟ್ಸ ಮಾಡುತ್ತೇನೆ
ನಾನಾ ಭಾವ ಭಯ ನೋವು ಸಾವುಗಳನ್ನು ಪುಸ್ತಕ
ಸಿಲೆಬಸ್ ಲೆಕ್ಚರು ಸೋಗು ಶೈಲಿಗಳಲ್ಲಿ ಪಟಪಟ ಮುಚ್ಚಿಟ್ಟು
ವರ್ಷದ ಕೊನೆಗೆ
ಚೆಂದದ ಮಾರ್‍ಕ್ಸ್ ಕಾರ್‍ಡ್
ದೊರಕಿಸಿಕೊಳ್ಳುತ್ತೇನೆ
ಹೌದು, ಪೃಥ್ವಿಯ ಬಾಯಿಂದುಕ್ಕಿದ ಸತ್ಯ ತತ್ವಗಳು
ಜಿಗಿ ಜಿಗಿದು ತಲೆಯಲ್ಲಿ
ಲಾಗವುರುಳುವ ಮೊದಲೇ
ನಾನೂ ಉರುಳಿರುತ್ತೇನೆ
ಬೇಕಪ್ಪ ಬೇಕು
ದೇಹಕ್ಕೆ ಕೊಬ್ಬು ಆಹಾರ
ಸೊಕ್ಕುವ ಜೀವನ ಸತ್ವಗಳು
ಮಾಂಸ ಮಜ್ಜೆ ಮಿದುಳಲ್ಲಿ ಅಸಂಖ್ಯ ತೋಡಿದ
ಕಾಲುವೆ ರಕ್ತ ರಸ್ತೆ ದಿಕ್ಕೆಟ್ಟ ಬೀದಿ ಗಲ್ಲಿಗಳಿಗೆ ಬೇಕು
ಸರಾಗ ಸಂಪರ್‍ಕ ವ್ಯವಸ್ಥೆ
ನೆನಪಿನ ಗುಣದ ಹಿಂದೆ ರುಚಿಯ ಅವಗುಣದ ಹಿಂದೆ
ತಾಳೆಗೆಟ್ಟು ಕಸಬುಗೈವ ಕಾರಣಗಳ ಹುಬೇಹೂಬು ಕರೆದು
ಜೀವಕೋಶದೆದೆ ಝಲ್ಲನೆ ಕದ ತೆರೆದು
ಹೌದೋ ಅಲ್ಲೋ
ಕೈಯೋ ಕಾಲೋ
ನೀಲಿಪ್ರತಿಯ ಕೊಂಬೊ ಸಾಲೋ
ಮುಂದೇನು ಹಿಂದೇನು ನಡುವೆ
ಇಂದೇನು-
ಬೀಜ ಗೊಬ್ಬರಕ್ಕೂ ಬೇಕು ತಕ್ಕ ಆಸ್ಥೆ
ವಿನಾದರೇನು?
ಶಾಸ್ತ್ರವೋ ಅಳುವಿಲ್ಲ ನಗುವಿಲ್ಲ
ಊಹೆ ತರ್‍ಕದ ನೇರ ಅರ್‍ಕದಲ್ಲಿ ಹುಟ್ಟಿದ್ದು
ನಾವೋ-ಆಗಾಗ ಬೇರೆಯಾಗಬೇಕಲ್ಲ
ಅಂತ ಅದರ ಮೊರೆ ಹೊಕ್ಕಿದ್ದು – ಇಷ್ಟೆ
ನಾನೀಗ ಅಖಂಡ ಓದುತ್ತೇನೆ
ಆದರೂ ಜೀವಕ್ಕೆ ರಸಾಯನವೋ
ರಸಾಯನಕ್ಕೆ ಜೀವವೋ- ನನಗೆ ದಕ್ಕಿಲ್ಲ
ನನ್ನೀ ದೋಷಪೂರಿತ ಕಣ್ಣುಗಳು ಮಸೂರಗಳಾಗಲಿಲ್ಲ
ವಾಂತಿ ಭೇದಿ ಮಗು ಮದುವೆ ಹೂವು ಹೆರಿಗೆ ಮತ್ತೆ….
….ಹಾಸ್ಟೆಲ್ಲು ಊಟ ಮೊಸರು ಕಲ್ಲು ನೆನಪು ಕವಿತೆ…. ಹೀಗೆ
ಘಟನೆಗಳೂ ಕಥೆಯಾಗುತ್ತ ಬೆಳೆದು
ಕೊನೆಗೂ ಯಾವುದೂ ಜೀವ ತಳೆಯಲಿಲ್ಲ
*****
