ಸವತಿ ಮಕ್ಕಳ ಹಾಗೆ ಕಾಣಬೇಡವ್ವ
ಸವತಿ ಮಕ್ಕಳ ಹಾಗೆ ಕಾಣಬೇಡ.
– ೧ –
ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ
ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ
ಮರುಧರೆಯ ಮರುಳರ ಕಡು ನೆಂಟರೆಂಬೆ
ಪಕ್ಕದ ಖೂಳನ ಏಜೆಂಟರೆಂಬೆ,
ಹಳೆ ಹೇಳಿಗೆಯ ನಂಜೆದೆಯ ತಳಿಗಳ ಜೊತೆಯಲ್ಲೆ,
ಹೊಸ ಪೀಳಿಗೆಯ ನಿರಪಾಯ ಏಳಿಗೆಯ ಸುಳಿಗಳನು
ದೂಡುವೆ ಸಂಶಯದ ಖೆಡ್ಡಕ್ಕೆ ತಾಯಿ
ಲೇಬಲ್ಲನಂಟಿಸುವೆ ಗಡ್ಡಕ್ಕೆ ತಾಯಿ,
ಸವತಿ ಮಕ್ಕಳ ಹಾಗೆ…..
– ೨ –
ಧರ್ಮಾಂಧ ಧೂರ್ತರ ಎಡಗೈಯ ತುತ್ತಿಗೆ
ಕೊಬ್ಬಿರುವ ಮನೆಮುರುಕ ಮಂದಿಯ ಕತ್ತಿಗೆ
ಒರೆಯಾಗಿ ಇಹರಿವರು ಒಳಗೊಳಗೆ ಮೆತ್ತಗೆ,
ಕೊಯ್ಯಲು ಕುತ್ತಿಗೆ ಸರಿಯಾದ ಹೊತ್ತಿಗೆ
ಹೊಂಚಿಹರು ಎಂಬಂತೆ, ತಲೆ ಹೊಯ್ದು ಇಟರೂ
ಸೋರೆ ಬುರುಡೆಯ ಎಂದು ಶಂಕಿಸುವೆ ನಮ್ಮವ್ವ-
ಚಲ್ಲಣರ ಎದೆಯಲ್ಲು ತಲ್ಲಣದ ದೆವ್ವ
ಕುಣಿಸುತ್ತ, ತಿರುಚುವೆ ಹೊಂಗನಸ ಹುವ್ವ,
ಸವತಿ ಮಕ್ಕಳ ಹಾಗೆ…..
– ೩ –
ಹೆಚ್ಚು ಕಡಿಮೆಗಳಿಲ್ಲ ಇಂಡಿಯನ್ನರು ಒಂದೆ
ಹಲವು ಬಣ್ಣದ ಕುರಿಗಳಿಂದಾದ ಮಂದೆ
ಎಂದು ಲೋಕಕೆ ಸಾರಿ, ಪಶ್ಚಿಮರ ಮುಂದೆ
ಮೆರೆಸುವೆ ರಾಷ್ಟ್ರಪತಿ ದಾಡಿಗನ ಮಂಡೆ.
ಬಾಡಿಗೆಯ ಮನೆಗಿಲ್ಲಿ ಅಲೆದಿರಲು, ಮನೆಯೊಡೆಯ
ಹೆಸರಿಂದ ಕುಲವರಿತು, ಅಟ್ಟಲು ಕಾರಣ-
ಮುದಿ ತಾಯ ಮಡಿತನವನೊಡ್ಡುವೆ ಅಮ್ಮ,
ಬೇವರ್ಸಿಗಳ ಹಾಗೆ ಅಲೆಸುವೆ ಅಮ್ಮ,
ಸವತಿ ಮಕ್ಕಳ ಹಾಗೆ…..
– ೪ –
ನಾವೂನು ಭಾರತಿಯ ಬಸಿರವರೆ ಎನ್ನುತ್ತ
ತಾಯೆಂಬ ಬಾಯಲ್ಲೆ ನಾಯುಣಿಸು ತಿನ್ನುತ್ತ
ಮೀರ್ ಸಾದಖರು ಮತ್ತೆ ನಮ್ಮಕ್ ಹರಾಮರು
ಮೊಘಲಾಯಿ ದೌಲತ್ತು ಮೆರೆವ ಅನಾಮರು-
ಇದ್ದಾರು ಕೋಮಿನ ಕಂತ್ರಾಟುದಾರರು
ಮಾಸೂಮು ಮಂದಿಯ ನೆಮ್ಮದಿ ಚೋರರು;
ಮಾಡವ್ವ ಅಂಥವರ ಸುಳಿಯ ಸಘಾಯಿ;
ನಿಷ್ಪಾಪಿಗಳಿಗಾಗು ನಿರ್ಭಯದಾಯಿ,
ಸವತಿ ಮಕ್ಕಳ ಹಾಗೆ…..
– ೫ –
ಬೆಳಕ ಕಂಡೆವು ಇಲ್ಲೆ, ಬಾಡಿ ಬೀಳುವೆವಿಲ್ಲೆ,
ಏನಾಟ ನಡೆದರೂ ನಿನ್ನಡಿಯ ಗಡಿಯಲ್ಲೆ.
ಮರಳಂತೆ ಸಣ್ಣಾಗಿ ಬಾಳ್ದೊರೆಯ ತಡಿಯಲ್ಲೆ
ಸುಡು ಬಿಸಿಲನುಂಡರೂ, ಕೈನೀಡಿನೆಡೆಯಲ್ಲೆ
ಹರಿವ ನೀರನು ಕಂಡು, ನೀರಡಿಕೆ ಉಲ್ಬಣಿಸಿ,
ನಿನ್ನ ಹಳಿಯುವ ಖೋಡಿ ತಿಳಿಗೇಡಿಗಳ ಹರಸಿ-
ತೆಗೆದುಕೊ ಇವರನ್ನೂ ಲೆಕ್ಕಕ್ಕೆ ತಾಯೆ
ಪರದೆಯೆಳಿ ಇವರೆದೆಯ ದುಃಖಕ್ಕೆ ತಾಯೆ
ಸವತಿ ಮಕ್ಕಳ ಹಾಗೆ…..
*****
ಕೀಲಿಕರಣ: ಶ್ರೀನಿವಾಸ