ಮಿಂಚು-ಹುಳ

ಸಂದಿಹ ಸೂರ್‍ಯನ ನೆನಪಿಗೆ ಬಾನು
ಎಣಿಸುವದಿರುಳೆಲ್ಲವು ತಾನು
ಅಗಣಿತ ತಾರಾ ಜಪಮಾಲೆಯನು:
* * *

ದೇವ ತನ್ನಯ ತಾರೆ-ದೇಗುಲದಿ ಕಾಯುವನು.
ತನ್ನ ಹಣತೆಯ ತನಗೆ ತರಲು ಮಾನವನು.
* * *

ಗಾಳಿಯಲಿ ರೆಕ್ಕೆಗಳ ಗುರುತನಿರಿಸಿಲ್ಲ
ಆದರೂ ಎಂಥ ಸುಖಿ, ಹಾರಿಬಂದಿಹೆನಲ್ಲ!
* * *

ಎಲೆಯಲಿ ಮಿನುಗುವ ಮಿಂಚು -ಹುಳ
ಸೋಜಿಗ ಪಡಿಸಿವೆ ತಾರಗಳ.
* * *

ಭೂಮಿಯ ಕೊನೆಯಿಲ್ಲದ ಸಾಹಸವೀ ಗಿಡಗಳು
ಕಿವಿಗೊಡುತಿಹ ಸಗ್ಗದೊಡನೆ ಎದ್ದಿವೆ ಮಾತಾಡಲು.
* * *

ನಸುಕು-ನಾನಾಬಣ್ಣದೊಂದು ಹೂ-ಬಾಡುವದು
ಆಮೇಲೆ ಬರಿಯ ಬೆಳಕಿನ ಹಣ್ಣು,-
ಸೂರ್‍ಯ ಮೂಡುವನು.
* * *

ದೂರದ ಸಮುದ್ರವನು ಬೆಟ್ಟ ಮುಟ್ಟುವದೆಂತೊ
ತನ್ನ ಜಲಪಾತದಿಂದ,
ಅಂತು ದೇವನ ಹಿಡಿವೆ ಹಾಡಿನಿಂದ.
*****
ರವೀಂದ್ರರ ‘Fire flies’ ದಿಂದ