ಉತ್ತಂಗಿ! ಜೀವನದ ಸತ್ಯದಿಂದೆತ್ತರಕೆ
ಬೆಳೆದು ಬಾಗಿದ ವೃಕ್ಷ; ಎಲ್ಲ ಋತುಮಾನಕ್ಕು
ಎದೆಗೊಟ್ಟು, ಎಂಥ ಕಾಲಕು ಚಿಗುರುನಗೆ ನಕ್ಕು
ಹೂಗೊಂಚಲವ ಹಿಡಿದು; ಎಲೆಯ ಮರೆಗಿವೆ ಹರಕೆ
ಹೊತ್ತ ಹಣ್ಣುಗಳೆಷ್ಟೊ [ಇಳಿಸಿಕೊಳ್ಳುವರಾರು?]
ಮನೆಯಿಂದ ಮನೆಗೆ ಸರ್‍ವಜ್ಞಮೂರ್‍ತಿಯ ನಿಲವ
ಕಂಡರಸಿ, ಪರ್‍ವಕಾಲದ ತಿರುಳುಗನ್ನಡದ
ತಿರುಕನಾಗಿಯೇ ಹೊರಟ ಮಹದಾನಿ, ಉತ್ತಮರು
ಸತ್ತರೆನಬೇಡ; ಇನ್ನಷ್ಟು ಹತ್ತಿರ ಬಂದು
ಭಾವದೊಡಗೂಡುವರು; ತಂಪು ಬೆಳಕಾಗುವರು.
ತನ್ನ ನೋವನು ತೋರಗೊಡದಂತೆ ದುಡಿದುಡಿದು
ಬೆಳ್ವಸವನಾಂತ ತಲೆ; ಬಾಗಿ ಮೆಲ್ಲನೆ ನಡೆದು
ನೆಲವ ದಿಟ್ಟಿಸಿ ನಿಧಿಯ ತೋಡಿದರು ಉತ್ತಂಗಿ
ಕನ್ನಡದ ಭಕ್ತಿಯಲಿ ಮುಕ್ತಿ ಪಡೆದಿಹ ಭಂಗಿ.
*****
