ದ.ಬಾ.ಕು. ಮೂರಕ್ಷರವೆ ಸಾಕು: ದಣಿವುದೋರದ
ಆ ಮುಖದ ಮುಗುಳುನಗೆ, ಸ್ನೇಹ ತುಂಬಿದ ಜೀಕು.
ಕಣ್ಣಕಾಂತಿಗೆ ಏಕೆ ಬೇರೆ ಬಣ್ಣದ ಮಾತು?
ಇರುವ ಕೊರಗೆಲ್ಲವನು ಸೋಸಿ ಕರಗಿಸಿ ತೆಗೆದ
ಮನಸಿನುಲ್ಲಾಸ, ಮಣಿದು ಬದುಕದ, ಇದ್ದುದಿನಿ-
ದಾಗಿಸುವ ಜೀವಹದ. ಓ ಅವಕಂಡ ಶತಪತ್ರ!
ನಾವು ಕಂಡೆವೆ ಇವನ ಹೃದಯ ರೇಖಾಚಿತ್ರ?
ಏನಿದು ವಿಚಿತ್ರ! ಕುಗ್ಗಿ-ಹಿಗ್ಗಿರುವ ಲೇಖನಿ
ಜಗ್ಗಿ ಕಸಿದವರಾರು? ಆರಿಲ್ಲ ಬರೆದ ಮಸಿ,
ತೀರಿಲ್ಲ ಬಿಳಿ ಹಾಳೆ, ಮೀರಿಲ್ಲ ಈ ಬಾಳ
ನಟ್ಟು ನಡುರಾತ್ರಿ. ಎಲ್ಲ ಕತ್ತಲೆಯೊಳಗೆ ತಳ
ಕಂಡು, ಕಣ್ಮುಚ್ಚಿ ಕಣ್ಣು ತೆರೆದಂತೆ ತೋರಿಸಿ
ಬತ್ತಲೆ ಬಯಲು; ಮತ್ತೆ ಸಾಗಿವೆ ಹೀಗೆ ಹಗಲು-
ಉತ್ತರವ ಹುಡುಕುವ ನೂರು ಪ್ರಶ್ನೆಗಳ ಸಾಲು.
*****
