ಒಂದು ಚಂದ್ರ

ಕವಿಗಳ ಮನೆಯಂಕಣದ
ಬಣ್ಣದ ಬೀಸಣಿಗೆ
ನಡುವಿಂದ ತತ್ತರಿಸುತ್ತ ಹೊರ
ಬಿದ್ದ ಚಂದ್ರ

ಮೆಲ್ಲನಂಗಾಲನೂರಿ
ಬೀದಿಗಿಳಿದ

ಅತ್ತಾ ಇತ್ತಾ ನೋಡುತ್ತ
ನೆರಳ ಚಿಂದಿಗಳ ಚಂದಾ ಎತ್ತುತ್ತ ಚಂದಾನೆ
ಚಂದ್ರಾಮ
ಕಂಪೌಂಡುಗಳೊಳಗೆ ಹಣುಕುತ್ತ ನಡೆದ
ಎತ್ತಿದ ಹೂಗಳ ಗದ್ದ ಹಿಡಿದು ಚುಂಬಿಸುತ್ತ
ದೇಟು ಸವರುತ್ತ ಕಲೆ ತುಂಬ ಆ
ಕಳಿಸುತ್ತ ನಡೆದಂತೆ
ಭೂ ಇಲಾಖೆ ಮಂತ್ರಿ
ಮನೆ ನಾಯಿ ಗೌ ಗೌ ಬೊಗಳಿತು
ಹೌ ಹಾರಿ ಕಂಬಿ ಕಿತ್ತವನೇ
ಮಲ್ಲಿಗೆ ಮಂಟಪದ ಗುಂಟಾ ತುಂಟಾಗಿಳಿದು
ಸರ ಭರ ಓಡಿ ಎಲ್ ಐ ಸಿ ಕಾಲನಿ ಕಡೇ ಮನೆ
ಸೆಪ್ಟಿಕ್ ಸಂಡಾಸಿನ ಮುಚ್ಚಿದ ಬಾಗಿಲೆದುರು
ತಟ್ಟುತ್ತ ನಿಂತ ನಿಂತು ಶಪಿಸಿದ ಶಪಿ
ಸುತ್ತ ಬಿರಿಬಿರಿ ಎಡಬಲ ಎಡಬಲ
ನಡೆಯತೊಡಗಿದ
ಅಡ್ಡಾದಿಡ್ಡಿ ಪಿಡಬ್ಲೂಡಿ ರೋಡಿಗುಂಟಾ

ದೂರ ದೂರದ ಗೋರಿ ಗುಹೆ ಗಹ್ವರಗಳೊಳಗಿಂದ
ಪರ್‍ವಗಳಾಚೆಗೆಂದೋ ಕೂಗಿದ ಕೂಗು
ಇಂದು ತಲುಪಿದಂತೆ
ಕೊಟ್ಟ ಶಾಪಗಳು ಇಂದು ಮೈಮೇಲೆ ಮುಳ್ಳೆದ್ದಂತೆ
ಹೆದರುತ್ತ
ಹಾಸಿದ ರಸ್ತೆಯ ಮೈ ಮೇಲೆ ದಾಮರು ತೇಗುತ್ತ
ತಂಗಳು ದೀಪಗಳಲ್ಲಿ ಬೆಳಕು ಹಸಿಯುತ್ತ
ವಿದ್ಯುತ್‌ ತಂತಿಗಳಲ್ಲಿ ಬತ್ತಿ ಹೊಸೆಯುತ್ತ
ಹರಕು ಕಿಸೆಯೊಳಗೆ ಕೈ ಮುಚ್ಚಿ
ಬೆಚ್ಚಗಾಗುತ್ತ ಬಂದ

ಹೀಗೆಷ್ಟೋ ನಡೆದ ಮೇಲೆ
ಆಕಾಶ ಗೂಡುಗಳೊಳಗಣ ಹಣತೆ ಆರಿದ ಮೇಲೆ
ಹಸಿ ಹಸಿ ಪದ್ಯಗಳ ಮಸಿಗಳಾರಿದ ಮೇಲೆ
ಬತ್ತಲ ತೆಕ್ಕೆಯೊಳಗೇ ನಿದ್ರೆ ಕಣ್ತೆರೆದ ಮೇಲೆ
ಮಣ್ಗುಂಟ ಬೇರುಗಳು ಮಾತು ಬರೆದ ಮೇಲೆ

ಓ ಅಲ್ಲಿ ದೂರದ ಮುರ್‍ಕಿ
ಯಲ್ಲಿ ನಿಂತ
ಕತ್ತು ನೀಳ ಚಾಚಿ ಆಚೀಚೆ ನೋಡಿದ
ಯಾರಿಲ್ಲ ಎಂದು ಖಾತ್ರಿ
ಆದದ್ದೇ
ಕಪ್ಪು ಕನ್ನಡಕ ಬಿಗಿದುಕೊಂಡು
ಗಪ್ ಚಿಪ್ ಕಾಮಿನಿಯರ ಕೇರಿ
ಹೊಕ್ಕುಬಿಟ್ಟ

ಇಕಾ ಇಲ್ಲಿ ನನ್ನೆದೆ
ಯೊಳಗೆ ನಿನ್ನೆದೆಯೊಳಗೆ
ಅವ ಸುಲಿದಿಟ್ಟು
ಹೋದ ಬೆಳಕು
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ