ನೂರು ವರುಷದ ಮೇಲೆ ಆ ನನ್ನ ಕವಿತೆಗಳ-
ನೋಡುತಿಹ ಓದುಗನೆ ನೀನು ಯಾರು?
ಈ ವಸಂತದ ವಿಪುಲ ವೈಭವದ ಸಿರಿಯಿಂದ
ಕಳುಹಲಾರೆನು ಹೂವನೊಂದಾದರೂ.
ಬಾನಿನಂಚಿಗೆ ತೇಲುತಿರುವ ಮೋಡಗಳಿಂದ
ಕಳಿಸಲಾರೆನು ಹೊನ್ನಿನೆಳೆಯೊಂದನು.
ನಿನ್ನ ಬಾಗಿಲುಗಳನು ತೆರೆದು ನೋಡು:
ಅರಳಿರುವ ನಿನ್ನ ಹೂದೋಟದಲಿ ಸಂಚಯಿಸು
ನೂರು ವರುಷದ ಮೊದಲು ಮರೆಯಾದ ಹೂವುಗಳ
ನರುಗಂಪು-ನೆನಹುಗಳನು.
ಆ ಹಿಂದೆ, ವಸಂತದೊಂದು ಮುಂಜಾವದಲಿ ಹಾಡಿ
ನೂರು ವರುಷಗಳಾಚೆ ಚಿಮ್ಮಿಸಿದ ಹರ್‍ಷಧ್ವನಿಯ
ಜೀವಂತ ಸಂತಸವನನುಭವಿಸಬಹುದು.
*****
ರವೀಂದ್ರರ ‘Gardener’: 55
