ಇರುವ ಅಲ್ಪದರಲ್ಲಿ ತೃಪ್ತಿಯು, ಅಧಿಕವಿದ್ದರೆ ಮೋದವು.
ಚಿಂತೆ ಕಾಳಜಿಯಿಂದ ಕೂಡಿಡುವಂತೆ ಬಂದರೆ ಸಮಯವು
ನುಸುಳಿ ನನ್ನೆಡೆ ಬರುವ ಹೊತ್ತಿಗೆ ಅವಕೆ ರುಚಿ ತೋರಿಸುವೆನು:
ಬುಂಡೆಯಲಿ ನೊರೆ ಹೆಂಡವೀಯುತ ಹಳೆಯ ಹಳ್ಳಿಯ ಹಾಡನು.
ಪೀಡಿಸುವ ಯೋಚನೆಯ ಮೊಳಕ್ಕೆ ಪರಚುವೆನು ಒಮ್ಮೊಮ್ಮೆಗೆ;
ಆದರೀ ಮಾನವನು ಯೋಧನು, ಜೀವನವ ಹೋರಾಟವು.
ನನ್ನ ಉಲ್ಲಸ ನಡೆ, ವಿನೋದವೆ ನನ್ನ ಚೀಲದ ನಾಣ್ಯವು
ನನ್ನ ಬಿಡುಗಡೆಯೆನ್ನ ಒಡೆತನ, – ಮುಟ್ಟಲಾರಿಗೆ ಧೈರ್‍ಯವು?
ತೊಂದರೆಯೆ ಹನ್ನೆರಡು ತಿಂಗಳು ನನ್ನ ಭಾಗಕೆ ಬಂದರೆ
ಒಂದಿರುಳು ಒಳಿತಾದ ಗೆಳೆತನ ಬೆಸಿಗೆ ಹಾಕುವದೆಲ್ಲಕ:
ಒಮ್ಮೆ ಯಾತ್ರೆಯು ಮುಗಿದು ಹೋಗುವ ಸಂತಸದಿ ನಾವಿರುತಿರೆ
ಯಾವನಾದರು ಚಿಂತೆ ಪಡುವನೆ ಗತಿಸಿ ಹೋಗಿಹ ದಾರಿಗೆ?
ಕುರುಡು ದೈವವು ಬರಲಿ ಎಡವುತ ಹಾದಿಯಲಿ ತನ್ನಷ್ಟಕೆ;
ಒಳಿತು ಮಾಡಲಿ, ಕೇಡು ಬಗೆಯಲಿ, ಅದರುಸಾಬರಿ ಯಾರಿಗೆ?
ಸುಖವೆ ಬರಲಿ, ಕಷ್ಟ ಬರಲಿ, ಬರಲಿ ಇಷ್ಟಾನಿಷ್ಟವು;
ಬರುವುದೆಲ್ಲಾ ಬಂದು ಹೋಗಲಿ ಯಾರಿಗಿದರೊಳು ನಷ್ಟವು!
*****
ರಾಬರ್‍ಟ್ ಬರ್‍ನ್ಸ್ : ‘Contented with Little’
